9 ವರ್ಷಗಳ ಬಳಿಕ ಮಂಗಳೂರಿನ “ಮಹಾವೀರ ವೃತ್ತ”ದಲ್ಲಿ ಕಲಶದ ಮರುಸ್ಥಾಪನೆ

Upayuktha
0

ಕರಾವಳಿಯ ಸಾಂಸ್ಕೃತಿಕ ವೈಭವದ ದರ್ಶನ




ಮಂಗಳೂರು: ಮಂಗಳೂರಿನ ಮುಕುಟದಂತಿರುವ ಪಂಪ್‌ವೆಲ್‌ನ ಮಹಾವೀರ ವೃತ್ತಇಂದು ಹೊಸ ಕಾಂತಿಯೊಂದಿಗೆ ಕಂಗೊಳಿಸುತ್ತಿದೆ. ಬರೋಬ್ಬರಿ 9 ವರ್ಷಗಳ ದೀರ್ಘ ನಿರೀಕ್ಷೆಗೆ ತೆರೆ ಎಳೆದಂತೆ, ವೃತ್ತದಲ್ಲಿ ಪುನಃ ಕಲಶ ಪುನರ್ನಿರ್ಮಾಣಗೊಂಡಿದ್ದು, ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯಕ್ಕೆ ನವ ಚೈತನ್ಯವನ್ನು ತುಂಬಿದೆ. ಬಹುನಿರೀಕ್ಷಿತ ನವೀಕೃತ ಮಹಾವೀರ ವೃತ್ತದ ಲೋಕಾರ್ಪಣೆ ಜ. 24ರಂದು ನೆರವೇರಲಿದೆ.


ಮಂಗಳೂರು ಜೈನ ಸೊಸೈಟಿ (ರಿ) ಅವರ ಮುಂದಾಳತ್ವದಲ್ಲಿ ರೂಪುಗೊಂಡ ಈ ಅಭಿವೃದ್ಧಿ ಕಾರ್ಯಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಲೋಕಾರ್ಪಣೆ ನೆರವೇರಿಸಲಿದ್ದು, ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನಸಭಾಧ್ಯಕ್ಷ ಡಾ. ಯು.ಟಿ. ಖಾದರ್ ಅವರು ನಾಮಫಲಕ ಅನಾವರಣಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್‌ಚೌಟ, ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೂಡಾ ಮಾಜಿ ಅಧ್ಯಕ್ಷ ಕೆ. ಸುರೇಶ್ ಬಲ್ಲಾಳ್ ಹಾಗೂ ಸ್ಥಳೀಯ ಮಾಜಿ ಕಾರ್ಪೊರೇಟರ್ ಸಂದೀಪ್ ಗರೋಡಿ ಭಾಗವಹಿಸಲಿದ್ದಾರೆ.


ವೃತ್ತದ ಉದ್ಘಾಟನೆಯನ್ನು ಅತ್ಯಂತ ಅದ್ಧೂರಿಯಾಗಿ ನೆರವೇರಿಸುವ ಉದ್ದೇಶದಿಂದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಮಂಗಳೂರು ನಗರ ಪ್ರವೇಶದ ಹೆಬ್ಬಾಗಿಲಿನಂತಿರುವ ಮಹಾವೀರ ವೃತ್ತದಲ್ಲಿ ಕರಾವಳಿಯ ಸಾಂಸ್ಕೃತಿಕ ಪರಂಪರೆಯ ಸುವಾಸನೆ ಅಡಗಿದ್ದು, ಪೂರ್ಣಕುಂಭದೊAದಿಗೆ ಸ್ವಾಗತ ಕೋರುವಂತೆ ರೂಪುಗೊಂಡ ಕಲಶದ ವಿನ್ಯಾಸ ಎಲ್ಲರ ಗಮನ ಸೆಳೆಯುವಂತಿದೆ. 2016ರಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಯ ಹಿನ್ನೆಲೆಯಲ್ಲಿ ಸ್ಥಳಾಂತರಿಸಲ್ಪಟ್ಟಿದ್ದ ಈ ಕಲಶ ಇದೀಗ ವಿಶಿಷ್ಟ ವೈಭವದೊಂದಿಗೆ ಮರುನಿರ್ಮಾಣಗೊಂಡಿದೆ.


ಕೇರಳ, ಕಾಸರಗೋಡು, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಧರ್ಮಸ್ಥಳ ಸೇರಿದಂತೆ ವಿವಿಧ ದಿಕ್ಕುಗಳಿಂದ ಮಂಗಳೂರು ಪ್ರವೇಶಿಸುವವರು ಅನಿವಾರ್ಯವಾಗಿದಾಟುವ ಈ ಮಹಾವೀರ ವೃತ್ತ, ನಗರಕ್ಕೆ ಕಾಲಿಟ್ಟ ಕ್ಷಣದಲ್ಲೇ ಪ್ರವಾಸಿಗರ ಮನದಲ್ಲಿ ‘ಮಂಗಳೂರು ಬಂದಿದೆ’ ಎಂಬ ಅನುಭವ ಮೂಡಿಸುವ ಗುರುತಾಗಿದೆ. ಕಲಶದ ದರ್ಶನವೇ ಪ್ರವಾಸಿಗರನ್ನು ಬಸ್ಸಿನಿಂದ ಇಳಿಯುವಂತೆ ಮಾಡುವಷ್ಟು ಅದರ ಆಕರ್ಷಣೆ ಅಪಾರವಾಗಿದೆ.

ಮಹಾವೀರ ವೃತ್ತವನ್ನು ಮತ್ತಷ್ಟು ಅಂದಗೊಳಿಸಿ ಕಲಶಕ್ಕೆ ಕಳೆಯನ್ನು ತರುವಲ್ಲಿ ಮಂಗಳೂರು ಜೈನ ಸೊಸೈಟಿ ಹಾಗೂ ಜೈನ ಸಮುದಾಯದ ಅವಿರತ ಶ್ರಮ ಮಹತ್ತರವಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ವಿನ್ಯಾಸ ಪೂರ್ಣಗೊಂಡಿದ್ದರೂ, ವೃತ್ತ ನಿರ್ಮಾಣಕ್ಕೆ ಅನುಮತಿ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಜೈನ ಸೊಸೈಟಿ ಹಾಗೂ ಸಮುದಾಯದ ಪ್ರಮುಖರು ಜಿಲ್ಲಾಡಳಿತ ಮತ್ತು ಪಾಲಿಕೆಯನ್ನು ಸತತವಾಗಿ ಸಂಪರ್ಕಿಸಿ, ಸೂಚಿಸಲಾದ ಮಾರ್ಗಸೂಚಿಗಳಂತೆ ವೃತ್ತದ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ವೃತ್ತಕ್ಕೆ ಅಲಂಕಾರಿಕ ದೀಪಗಳು ಹಾಗೂ ಗ್ರಾನೈಟ್ ಅಳವಡಿಕೆ ಕಾರ್ಯಗಳು ಮುಗಿದಿದೆ.


ಕರಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಹೊತ್ತು ಎದ್ದು ನಿಂತಿರುವ ಈ ಬೃಹತ್ ಕಲಶ ಮತ್ತು ವೃತ್ತ ನಿರ್ಮಾಣಕ್ಕೆ ಸುಮಾರು 25 ಲಕ್ಷರೂಪಾಯಿ ವೆಚ್ಚವಾಗಿದೆ. ವೃತ್ತದ ಅಭಿವೃದ್ಧಿ ಕಾರ್ಯ ಇದೀಗ ಅಂತಿಮರೂಪ ಪಡೆದುಕೊಂಡಿದ್ದು, ವೃತ್ತದ ಸುತ್ತ ರೇಲಿಂಗ್ ಅಳವಡಿಸಲಾಗಿದೆ. ಹೀಗೆ, ಮಹಾವೀರ ವೃತ್ತ ಇಂದು ಮಂಗಳೂರಿನ ಹೆಮ್ಮೆಯ ಸಾಂಸ್ಕೃತಿಕ ಸಂಕೇತವಾಗಿ, ಎಲ್ಲರ ಕಣ್ಮನ ಸೆಳೆಯುವಂತೆ ವೈಭವದಿಂದ ನಿಂತಿದೆ.


ಕಾರ್ಯದರ್ಶಿ ಸಚಿನ್ ಕುಮಾರ್ ಜೈನ್, ಕೋಶಾಧಿಕಾರಿ ಕೆ. ವಿಜೇಶ್ ವಿದ್ಯಾಧರ್, ವೃತ್ತದ ಆರ್ಕಿಟಿಕ್ಟ್ ರಾಜ್ ಶೇಖರ್ ಬಲ್ಲಾಳ್, ಮಾಜಿ ಕಾರ್ಪೋರೇಟರ್ ಪ್ರಭಾಮಾಲಿನಿ ಜೈನ್ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top