ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್‌ರವರಿಂದ ಉದ್ಘಾಟನೆ
ಮಂಗಳೂರು: “ವೈದ್ಯಕೀಯ ಸೇವಾ ವೃತ್ತಿಯು ಶ್ರೇಷ್ಠ ಮತ್ತು ಗೌರವಾನ್ವಿತ ವೃತ್ತಿಯಾಗಿದ್ದು, ಅವರ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆ ಅಮೂಲ್ಯವಾಗಿದ್ದು, ಅವರು ಸಮಾಜದಲ್ಲಿ ಶ್ರೇಷ್ಠ ಸ್ಥಾನ-ಮಾನವನ್ನು ಅಲಂಕರಿಸಿದ್ದಾರೆ. ಸೇವಾಕಾರ್ಯದ ಒತ್ತಡವಿದ್ದರೂ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಉಲ್ಲಾಸದಿಂದ ಭಾಗವಹಿಸುವ ಕಾರ್ಯ ಪ್ರಶಂಸನೀಯ” ಎಂದು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ “ಮೈಸೂರು ಎಲ್ಸ್‌ಪ್ರೆಸ್” ಖ್ಯಾತಿಯ ಜಾವಗಲ್ ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಮತ್ತು ವೈದ್ಯಕೀಯ ತಜ್ಞರ ಸಂಘ ಮಂಗಳೂರು ಶಾಖೆಯ ಜಂಟಿ ಆಶ್ರಯದಲ್ಲಿ ತಾ. 04.01.2026ರಂದು ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಜರಗಿದ ಡಾ| ಎಂ.ವಿ. ಶೆಟ್ಟಿ ಮತ್ತು ಡಾ| ಚೌಡಯ್ಯ ಸ್ಮಾರಕ ವಾರ್ಷಿಕ ಐ.ಎಂ.ಎ.-ಎ.ಎಂ.ಸಿ. ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ಡಾ| ಶಾಂತಾರಾಮ್ ಶೆಟ್ಟಿ ಮತ್ತು ಡಾ| ಮಂಜುನಾಥ್ ಭಂಡಾರಿಯವರಿಗೆ ಚೆಂಡನ್ನು ಎಸೆದು ಸ್ಪರ್ಧಾಕೂಟವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿದರು.
ಗೆಳೆಯರ ಮತ್ತು ಮಿತ್ರವೃಂದದವರೊAದಿಗೆ ಒಡನಾಟಕ್ಕೆ ಇದೊಂದು ಉತ್ತಮ ವೇದಿಕೆ ಎಂದು ನುಡಿದ ಶ್ರೀನಾಥ್‌ರವರು ಆಟದ ಮೈದಾನದಲ್ಲಿ ಒದಗಿಸಿದ ಕ್ರೀಡಾ ಸೌಕರ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿ ಶ್ರೀಘದಲ್ಲಿಯೇ ಮಂಗಳೂರಿನಲ್ಲಿ ರಾಜ್ಯ ಮಟ್ಟದ ರಣಜಿ ಪಂದ್ಯಾಟವನ್ನು ಆಯೋಜಿಸಲಾಗುವುದೆಂದು ಆಶ್ವಾಸನೆ ನೀಡಿದರು. ಈ ಸಂದರ್ಭದಲ್ಲಿ ಅವರ ಜೀವಮಾನ ಕ್ರೀಡಾ ಸಾಧನೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಅಂತೆಯೇ ಇತ್ತೀಚೆಗೆ ನಿಧನರಾದ ನಿಟ್ಟೆ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ| ವಿನಯ್ ಹೆಗ್ಡೆಯವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಡಾ| ಮಂಜುನಾಥ್ ಭಂಡಾರಿ, ನಿಟ್ಟೆ ವಿಶ್ವವಿದ್ಯಾನಿಲಯದ ಪ್ರೊ ಚಾನ್ಸೆಲರ್ ಡಾ| ಶಾಂತಾರಾಂ ಶೆಟ್ಟಿ, ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ| ವೀರಭದ್ರಯ್ಯ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತಂಡಗಳಿಗೆ ಯಶಸ್ಸು ಕೋರಿದರು. ವೇದಿಕೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ| ಶಿವಪ್ರಕಾಶ್, ವೈದ್ಯಕೀಯ ತಜ್ಞರ ಸಂಘದ ಅಧ್ಯಕ್ಷ ಡಾ| ಆನಂದ ಬಂಗೇರ, ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ| ಪ್ರಕಾಶ್ ಹರಿಶ್ಚಂದ್ರ, ಕೋಶಾಧಿಕಾರಿ ಡಾ| ಜ್ಯೂಲಿಯನ್ ಸಲ್ಡಾನ್ಹಾ ಮತ್ತು 6 ಸ್ಪರ್ಧಾ ಕ್ರಿಕೆಟ್ ತಂಡಗಳ ಮಾಲಕರು ಉಪಸ್ಥಿತರಿದ್ದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಸದಾನಂದ ಪೂಜಾರಿ ಸ್ವಾಗತಿಸಿದರು. ವೈದ್ಯಕೀಯ ತಜ್ಞರ ಸಂಘದ ಕಾರ್ಯದರ್ಶಿ ಡಾ| ಉಲ್ಲಾಸ್ ಶೆಟ್ಟಿ ವಂದಿಸಿದರು. ಡಾ| ಮಧುರಾ ಭಟ್ ಕಾರ್ಯಕ್ರಮ ನಿರೂಪಿಸಿದರು.
ಅಂತಿಮ ಕ್ರಿಕೆಟ್ ಪಂದ್ಯಾಟದಲ್ಲಿ ಡಾ| ಸಚ್ಚಿದಾನಂದ ರೈ ಮಾಲಕತ್ವದ “ಸಚ್ಚಿ ಸ್ಟ್ರೈಕರ್ಸ್” ತಂಡವು ಪ್ರಥಮ ಸ್ಥಾನ ಗಳಿಸಿ ಆಕರ್ಷಕ ಪ್ರಶಸ್ತಿ ಮತ್ತು ನಗದು ಬಹುಮಾನ ರೂ. 1,00,000/- ಪಡೆಯಿತು. ದ್ವಿತೀಯ ಸ್ಥಾನವನ್ನು ಡಾ| ವಿಕ್ರಮ್ ಶೆಟ್ಟಿ ಮಾಲಕತ್ವದ “ವಿಕ್ಕಿ ವೀಕಿಂಗ್ಸ್” ತಂಡ ಪಡೆದು ಪ್ರಶಸ್ತಿ ಮತ್ತು ರೂ. 50,000/- ಪಡೆಯಿತು.
ಡಾ| ವಿನೋದ್ ನಾಯಕ್- ಪಂದ್ಯ ಪುರುಷೋತ್ತಮ, ಸರಣಿ ಶ್ರೇಷ್ಠ, ಡಾ| ನವನೀತ್- ಅತ್ಯುತ್ತಮ ಸವ್ಯಸಾಚಿ, ಡಾ| ಅಭಯ್ - ಶ್ರೇಷ್ಠ ಕ್ಷೇತ್ರ ರಕ್ಷಕ, ಡಾ| ಮಂಜುನಾಥ್- ಶ್ರೇಷ್ಠ ಬೌಲರ್, ಡಾ| ಪವನ್ ವಿನಯ್ - ಶ್ರೇಷ್ಠ ದಾಂಡಿಗ ವೈಯಕ್ತಿಕ ಪ್ರಶಸ್ತಿಗೆ ಪುರಸ್ಕೃತರಾದರು. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಸದಾನಂದ ಪೂಜಾರಿ ಮತ್ತು ವೈದ್ಯಕೀಯ ತಜ್ಞರ ಸಂಘದ ಅಧ್ಯಕ್ಷ ಡಾ| ಆನಂದ ಬಂಗೇರ ಪ್ರಶಸ್ತಿ ಪ್ರಧಾನ ಮಾಡಿ ವೈಯಕ್ತಿಕ ಪದಕ ಮತ್ತು ಬಹುಮಾನಗಳನ್ನು ವಿತರಿಸಿದರು. ಈ ಪಂದ್ಯಾಟದ ನೇರಪ್ರಸಾರವು “ನಮ್ಮ ಕುಡ್ಲ” ಟಿವಿ ವಾಹಿನಿಯಲ್ಲಿ ಪ್ರಸಾರವಾಯಿತು.

