ಬೆಳ್ತಂಗಡಿ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ), ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಒಂದು ವರ್ಷ ಕಾಲ ನಡೆದ ‘ಗೀತೆ ಜತೆ ಸಾಹಿತ್ಯ ಸಾಂಗತ್ಯ’ ಸಾಹಿತ್ಯ ಪರ್ವ ಉಪನ್ಯಾಸ ಮಾಲಿಕೆಯ ಸಮಾರೋಪ ಸಮಾರಂಭವು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ ದಿನಾಂಕ 19-01-2025ರಿಂದ 18-01-2026ರ ವರೆಗೆ ನಿರಂತರವಾಗಿ ನಡೆದ ಈ ಸಾಹಿತ್ಯ ಪರ್ವವು ಭಗವದ್ಗೀತೆಯ ತತ್ತ್ವವನ್ನು ಸಾಹಿತ್ಯದೊಂದಿಗೆ ಜೋಡಿಸಿ ಸಮಾಜಕ್ಕೆ ತಲುಪಿಸುವ ಉದ್ದೇಶ ಹೊಂದಿತ್ತು.
ಸಮಾರಂಭದಲ್ಲಿ ಅಭಾಸಾಪ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ನಾರಾಯಣ ಶೇವಿರೆ, ತಾಲೂಕು ಸಮಿತಿಯ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ಹಾಗೂ ‘ಶ್ರವಣದೀಪ್ತಿ’ ಕೃತಿಯ ಕೃತಿಕಾರರಾದ ಶ್ರೀಮತಿ ಅಶ್ವಿಜ ಶ್ರೀಧರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅತಿಥಿಗಳು ಶಾರದಾ ಮಾತೆ ಮತ್ತು ಭಾರತ ಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು.
ಶ್ರೀಮತಿ ಆಶಾ ಅಡೂರು ಮತ್ತು ಅಕ್ಷತಾ ಅಡೂರು ಅವರ ಶಾರದಾ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ದೊರಕಿತು. ಸಮಿತಿಯ ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ರಚಿಸಿದ ಹಾಗೂ ಶ್ರೀಮತಿ ಅಶ್ವಿಜ ಶ್ರೀಧರ್ ರಾಗ ಸಂಯೋಜಿಸಿದ ಆಶಯಗೀತೆಯನ್ನು ಶ್ರೀಮತಿ ಇಂದುಮತಿ ಸುಶ್ರಾವ್ಯವಾಗಿ ಹಾಡಿದರು. ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅತಿಥಿಗಳನ್ನು ತಾಂಬೂಲ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲ ಅಧ್ಯಾಯದಲ್ಲಿ ‘ಶ್ರವಣದೀಪ್ತಿ’ ಕೃತಿ ಬಿಡುಗಡೆ ನಡೆಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ನಾರಾಯಣ ಶೇವಿರೆ ಅವರು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಭಗವದ್ಗೀತೆಯ ಶ್ರವಣದಿಂದ ಮೂಡಿಬಂದ ಈ ಕವನ ಸಂಕಲನವು ಕೇವಲ ಅಕ್ಷರಗಳ ಸಂಗ್ರಹವಲ್ಲ; ಅದು ಅನುಭವ ಮತ್ತು ಭಾವದ ಅಭಿವ್ಯಕ್ತಿ ಎಂದರು. ಗೀತೆಗೆ ಸಾಹಿತ್ಯದ ಸಾಂಗತ್ಯ ಅಗತ್ಯವಿಲ್ಲ, ಆದರೆ ಸಾಹಿತ್ಯಕ್ಕೆ ಗೀತೆಯ ಸಾಂಗತ್ಯ ಅಗತ್ಯ. ಮಹಾಭಾರತ ಮಹಾಕಾವ್ಯದೊಳಗಿನ ಗೀತೆಯೇ ಸಾಹಿತ್ಯಕ್ಕೆ ದಿಕ್ಕು ತೋರಿಸಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕೃತಿಕಾರರಾದ ಶ್ರೀಮತಿ ಅಶ್ವಿಜ ಶ್ರೀಧರ್ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ನಂತರ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರ ಅಧ್ಯಕ್ಷೀಯ ಭಾಷಣ ನಡೆಯಿತು.
ಎರಡನೇ ಅಧ್ಯಾಯದಲ್ಲಿ ಯಕ್ಷಗಾನ ಕವಿ ಶ್ರೀ ದಿವಾಕರ ಹೆಗಡೆ ಕೆರಹೊಂಡ, ಭಾಗವತ ಶ್ರೀ ಮಹೇಶ್ ಕನ್ಯಾಡಿ ಹಾಗೂ ಶ್ರೀ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ ಇವರ ಸಾರಥ್ಯದಲ್ಲಿ ‘ಪ್ರಭಾವತಿ ಜೀವಪ್ರೀತಿ’ ಎಂಬ ಏಕವ್ಯಕ್ತಿ ತಾಳಮದ್ದಳೆ ಕಾರ್ಯಕ್ರಮವನ್ನು ಮನೋಜ್ಞವಾಗಿ ಪ್ರದರ್ಶಿಸಲಾಯಿತು. ಬದುಕನ್ನು ರೂಪಿಸುವ ಕೃಷ್ಣನ ಪ್ರೀತಿಯ ಸಂದೇಶವನ್ನು ಈ ಕಲಾ ಪ್ರದರ್ಶನ ಸ್ಪಷ್ಟವಾಗಿ ಸಾರಿತು.
ಕೊನೆಯ ಅಧ್ಯಾಯವಾಗಿ ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಪ್ರಾಂಶುಪಾಲರಾದ ಶ್ರೀ ವಿಷ್ಣುಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಅವರು ಮಾತನಾಡಿ, ಭಗವದ್ಗೀತೆಯೇ ಮಾನವನ ಬದುಕಿಗೆ ದೃಢವಾದ ಆಧಾರವಾಗಿದ್ದು, ವೈಜ್ಞಾನಿಕ ದೃಷ್ಟಿಕೋನಕ್ಕೂ ಅದು ಸಮ್ಮತವಾಗಿದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. ಎಲ್ಲ ಸಮಸ್ಯೆಗಳ ನಡುವೆಯೂ ಬದುಕಬೇಕೆಂಬ ಶ್ರದ್ಧೆಯೇ ಗೀತೆಯ ಸಾರ ಎಂದು ಅವರು ತಿಳಿಸಿದರು.
ಸಮಾರೋಪದ ಭಾಗದಲ್ಲಿ ಶ್ರೀಮತಿ ಅಶ್ವಿಜ ಶ್ರೀಧರ್ ಅವರು ಮತ್ತೊಮ್ಮೆ ಆಶಯಗೀತೆಯನ್ನು ಹಾಡಿದರು. ಹೀಗೆ ಮೂರು ಅಧ್ಯಾಯಗಳಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ಮೂಡಿಬಂತು.
ಅತಿಥಿಗಳನ್ನು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಸುಂದರ ಶೆಟ್ಟಿ ಇಳಂತಿಲ, ಡಾ. ಶ್ರೀಧರ ಭಟ್, ಪ್ರಕಾಶ್ ನಾರಾಯಣ, ಶ್ರೀ ರಮೇಶ್ ಮಯ್ಯ, ರವೀಂದ್ರ ಶೆಟ್ಟಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಣಿ ಕಾಲೇಜಿನ ವಿದ್ಯಾರ್ಥಿಗಳು ಜವಾಬ್ದಾರಿಯುತ ಸ್ವಯಂಸೇವಕರಾಗಿ ಸಹಕರಿಸಿದರು.
‘ಮನೆಗೊಂದು ಭಗವದ್ಗೀತೆ’ ಎಂಬ ಆಶಯದಡಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಭಗವದ್ಗೀತೆಯ ಪುಸ್ತಕ ವಿತರಿಸಲಾಯಿತು.
ಶ್ರೀ ಮಹಾಬಲ ಗೌಡ ಹಾಗೂ ಶ್ರೀಮತಿ ವಸಂತಿ ಕುಳಮರ್ವ ಕಾರ್ಯಕ್ರಮವನ್ನು ನಿರೂಪಿಸಿದರು. ಅಭಾಸಾಪ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಶ್ರೀಮತಿ ಸುಭಾಷಿಣಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

