ಸುದ್ದಿಗಿಂತ ಹೆಚ್ಚಾಗಿ ಅಭಿಪ್ರಾಯ ವ್ಯಕ್ತಪಡಿಸುವುದು ಜಾಸ್ತಿಯಾಗಿದೆ: ಸ್ಮಿತಾ ಪ್ರಕಾಶ್‌

Upayuktha
0

  • ಪಕ್ಷಪಾತ ಸಹಜ, ಪತ್ರಕರ್ತರು ಅದನ್ನು ಪಕ್ಕಕ್ಕಿಟ್ಟು ಸುದ್ದಿ ಕಡೆಗೆ ಗಮನ ಹರಿಸಬೇಕು
  • ಎಎನ್‌ಐ ಪ್ರಧಾನ ಸಂಪಾದಕಿ ಸ್ಮಿತಾ ಪ್ರಕಾಶ್‌ ಜೊತೆ ಮಾಧ್ಯಮದ ಕುರಿತ ಸಂವಾದ



ಮಂಗಳೂರು ಲಿಟ್ ಫೆಸ್ಟ್ ವೇದಿಕೆ, ಮಂಗಳೂರು: ‘ಎಲ್ಲಾ ಪತ್ರಕರ್ತರೂ ಪಕ್ಷಪಾತಿಯಾಗಿಯೇ ಇರುತ್ತಾರೆ. ಹಾಗಿಲ್ಲ ಎನ್ನುವ ಪತ್ರಕರ್ತ ನೇರವಾಗಿ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಎಲ್ಲರಿಗೂ ತಮಗಿಷ್ಟದ ಸುದ್ದಿ, ವ್ಯಕ್ತಿ ಅಥವಾ ಪಕ್ಷ ಇರುತ್ತದೆ. ಆದರೆ, ನಿಜವಾದ ಪತ್ರಕರ್ತ ಅವೆಲ್ಲವನ್ನೂ ಪಕ್ಕದಲ್ಲಿಟ್ಟು ಸುದ್ದಿಯ ಬಗ್ಗೆ ಮಾತ್ರ ಗಮನ ನೀಡಿ ಕೆಲಸ ಮಾಡುತ್ತಾರೆ. ನಮಗೆ ನಮ್ಮ ಯೋಚನೆಗಳನ್ನು ಪಕ್ಕಕ್ಕೆ ಇಟ್ಟು ಕೆಲಸ ಮಾಡಲು ತರಬೇತಿ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಬೆಳವಣಿಗೆ ಕಡಿಮೆ ಆಗುತ್ತಿದೆ. ಎಲ್ಲರೂ ಒಂದು ಕುತೂಹಲಕಾರಿ ಕಥೆಯನ್ನು ಹೇಳುವ ಪ್ರಯತ್ನದಲ್ಲಿ ಮುಳುಗಿದ್ದಾರೆ. ಈಗ ಎಲ್ಲೆಡೆ ಸ್ಪರ್ಧೆ ಹೆಚ್ಚಾಗಿರುವುದರಿಂದ ಸುದ್ದಿಗಿಂತ ಹೆಚ್ಚಾಗಿ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿ ಕಥೆ ಹೇಳುವುದು ಮುಖ್ಯವಾಗಿದೆʼ ಎಂದು ಎಎನ್‌ಐ ಪ್ರಧಾನ ಸಂಪಾದಕಿ ಸ್ಮಿತಾ ಪ್ರಕಾಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.


ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ ಅಲ್ಲಿ ನಡೆದ 8ನೇ ಆವೃತ್ತಿಯ ಲಿಟ್‌ ಫೆಸ್ಟ್‌ ನ ಎರಡನೇ ದಿನದ ‘ನ್ಯೂಸ್‌ ರೂಂ ಆಂಡ್‌ ನ್ಯೂಸ್‌ ಫೀಡ್‌ʼ ಗೊಷ್ಠಿಯಲ್ಲಿ ಸ್ಮಿತಾ ಮಾತನಾಡಿದರು. ಸುದ್ದಿಮನೆ ಬಿಟ್ಟು ಪಾಡ್‌ಕಾಸ್ಟ್‌ ಕಡೆಗೆ ಮುಖ ಮಾಡಿರುವ ಬಗ್ಗೆ ಮಾತನಾಡಿದ ಅವರು, ʼಇತ್ತೀಚೆಗೆ ಸುದ್ದಿ ಮನೆಗಳಲ್ಲಿ ತಕ್ಷಣ ವರದಿ ಕಡಿಮೆಯಾಗಿದೆ. ಎಲ್ಲರೂ ಸೋಷಿಯಲ್‌ ಮೀಡಿಯಾ ಕಡೆ ತಿರುಗಿದ್ದಾರೆ. ಹೀಗಾಗಿ ಹೊಸ ಪ್ರಯತ್ನ ಮಾಡುವುದು ಅನಿವಾರ್ಯ. ಕಾಲಕ್ಕೆ ತಕ್ಕಂತೆ ಬದಲಾಗದೆ ಹೊಸ ಪ್ರಯತ್ನ ಮಾಡದಿದ್ದರೆ ಸಮಾಜ ಅಂತ್ಯದತ್ತ ಸಾಗುತ್ತದೆ. ಇವೆಲ್ಲದರ ಜೊತೆಗೆ ಹೊಸದಾಗಿ ಕಲಿಯುವುದು ಖುಷಿಯ ವಿಷಯ. ಹೀಗಾಗಿ ಪಾಡ್‌ಕಾಸ್ಟ್‌ ಶುರು ಮಾಡಿದೆʼ ಎಂದರು.


ಪ್ರಧಾನ ಮಂತ್ರಿ, ಗೃಹ ಮಂತ್ರಿ, ವಿದೇಶಾಂಗ ಸಚಿವಾಲಯ ಹೀಗೆ ಅನೇಕರ ಸಂದರ್ಶನ ಮಾಡಿರುವ ಅವರು, ಪ್ರಶ್ನೆಗಳನ್ನು ಮೊದಲೆ ಕೊಡಲಾಗುತ್ತದೆಯೆ ಎಂಬ ಪ್ರಶ್ನೆಗೆ, ʼಪ್ರಶ್ನೆ ಮೊದಲೇ ಕೊಟ್ಟಿರುವುದಿಲ್ಲ. ಕೆಲವರು ಸಹಜವಾಗಿ ಮಾತನಾಡುತ್ತಾರೆ. ಹಾಗೆ ಮಾತನಾಡುವಾಗ ಹೊಸ ಸುದ್ದಿಗಳು ಅಲ್ಲೇ ಮೊದಲು ಪ್ರಕಟಗೊಂಡಿದ್ದೂ ಇದೆ. ಉದಾಹರಣೆಗೆ ಅರುಣಾ ಇರಾನಿ, ಕಳೆದ 15 ವರ್ಷದಿಂದ ಒಬ್ಬ ಮದುವೆ ಆಗಿರುವ ಪುರುಷನನ್ನು ಮದುವೆ ಆಗಿರುವ ವಿಷಯವನ್ನು ಮೊದಲ ಬಾರಿಗೆ ಪಾಡ್‌ಕಾಸ್ಟ್‌ ಅಲ್ಲಿ ಹೇಳಿದರು. ಕೆಲವೊಮ್ಮೆ ಸಂದರ್ಶನ ಮುಗಿದಾಗ ಅವರ ಕುಟುಂಬದವರಿಗೆ ಹಾನಿಯಾಗಬಹುದದಂತಹ ವಿಷಯಗಳಿದ್ದರೆ ಇದನ್ನು ಎಡಿಟ್‌ ಮಾಡಬಹುದೇ ಎಂದು ಮನವಿ ಮಾಡಿಕೊಳ್ಳುತ್ತಾರೆ. ಅಂತಹದನ್ನು ಮಾತ್ರ ಎಡಿಟ್‌ ಮಾಡಲಾಗುತ್ತದೆʼ ಎಂದರು.


ಇತ್ತೀಚೆಗೆ ಗೋಧಿ ಮೀಡಿಯಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತ ಮಾರಾಟವಾಗಿರುತ್ತಾರೆ ಎಂಬ ಮಾತಿಗೆ ಪ್ರತಿಕ್ರಯಿಸಿದ ಸ್ಮಿತಾ, ʼಹಿಂದಿನ ಕಾಲದಿಂದಲೂ ಈ ಮಾತಿದೆ. ʼಲಿಫಾಫ ಜರ್ನಲಿಸಂʼ ಎಂದು ಹೇಳಲಾಗಿತ್ತು. ಲಕೋಟೆಯಲ್ಲಿ ಎಷ್ಟು ಹಣ ಇದೆ ಎಂಬುದರ ಮೇಲೆ ವರದಿಯ ತೂಕವನ್ನು ನಿರ್ಣಯಿಸುವಂಥದ್ದು. ಕೆಲವು ಸಂಸ್ಥೆಗಳು ಬೇರೆ ರೀತಿಯಲ್ಲಿ ಉಡುಗೊರೆ ನೀಡುವುದು, ಕೆಲವು ಮೆಡಿಕಲ್‌ ಸಂಸ್ಥೆಗಳು ಮಾಲ್ದೀವ್ಸ್‌-ಥೈಲಾಂಡ್‌ ಪ್ರವಾಸ ಏರ್ಪಡಿಸುವುದು, ಇವೆಲ್ಲವೂ ಮೊದಲಿಂದ ನಡೆದುಕೊಂಡು ಬಂದಿದೆʼ ಎಂದರು.


ಮಾಧ್ಯಮದಲ್ಲಿ ಎಐ ಪಾತ್ರದ ಬಗ್ಗೆ ವಿವರಿಸದ ಸ್ಮಿತಾ, ʼಎಐ ಅನ್ನು ವಿಲನ್‌ ಆಗಿ ನೋಡುವುದಿಲ್ಲ. ಈ ಮೊದಲು ಯಾರಾದರೂ ಸರಿಯಾಗಿ ಇಂಗ್ಲಿಷ್‌ ಬರೆಯದಿದ್ದರೆ ಅವರನ್ನು ವ್ಯಂಗ್ಯ ಮಾಡಲಾಗುತ್ತಿತ್ತು. ಆದರೆ, ಈಗ ಅವರು ಕೂಡ ಎಐ ಸಹಾಯದಿಂದ ಸರಿಯಾದ ಇಂಗ್ಲಿಷ್‌ ಸುಲಭವಾಗಿ ಬರೆಯಬಹುದು. ಬ್ಯಾಕ್‌ ಎಂಡ್‌ ಅಲ್ಲಿ ಆಗುವ ಕೆಲಸ ಈಗ ಸುಲಭ ಹಾಗೂ ವೇಗವಾಗಿ ಆಗುತ್ತದೆ. ನಾವು ಎಐ ಕಲಿತು ಅದನ್ನು ಮಾಸ್ಟರ್‌ ಮಾಡಿಕೊಳ್ಳದಿದ್ದರೆ ಅದು ನಮ್ಮ ಮಾಸ್ಟರ್‌ ಆಗುತ್ತದೆ. ಅದಾಗದಂತೆ ನೋಡಿಕೊಳ್ಳಬೇಕುʼ ಎಂದರು.


ಪತ್ರಕರ್ತನ ಜವಾಬ್ದಾರಿ ಬಗ್ಗೆ ಸ್ಮಿತಾ, ʼಪತ್ರಕರ್ತರಿಗೆ ಮೊದಲು ಸರಿಯಾಗಿ ಕೇಳಿಸಿಕೊಳ್ಳುವ ತಾಳ್ಮೆ ಹಾಗೂ ಸಾಮರ್ಥ್ಯ ಇರಬೇಕು. ಬೀಟ್‌ ಜರ್ನಲಿಸಂ ಮಾಡುವಾಗ ಯಾವುದೇ ಪಕ್ಷದ ವಕ್ತಾರರಂತೆ ಕೆಲಸ ಮಾಡಬಾರದು. ಸಮಸ್ಯೆ ಕಂಡಲ್ಲಿ ಅದನ್ನು ಪ್ರಶ್ನೆ ಮಾಡುವ ಧೈರ್ಯ ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ನಾವು ಮಾಡುತ್ತಿರುವುದು ಸುದ್ದಿ ಮಾತ್ರ, ವರದಿ ಮಾತ್ರ ಎನ್ನುವುದು ಅರಿವಿರಬೇಕು. ಎಡ ಅಥವಾ ಬಲ ಯಾವುದೇ ಚಿಂತನೆಗಳಿಗೆ ವೇದಿಕೆಯಾಗಿರಬೇಕು. ಆ ಚಿಂತನೆಗಳಿಂದ ಅತಿ ಹೆಚ್ಚು ಜನರಿಗೆ ಸಹಾಯ ಆಗುತ್ತದೆ, ದೇಶದ ಅಭಿವೃದ್ಧಿಯಾಗುತ್ತದೆ ಎಂದರೆ ಅದಕ್ಕೆ ಧ್ವನಿಯಾಗಬೇಕುʼ ಎಂದರು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top