ಕುಡಿದು ವಾಹನ ಚಲಾಯಿಸಿ ಸಾಯಿಸಿದರೆ ಅಪರಾಧಿಕ ಮಾನವಹತ್ಯೆ ಪ್ರಕರಣ ದಾಖಲು: ಪೊಲೀಸ್ ಆಯುಕ್ತರ ಎಚ್ಚರಿಕೆ

Upayuktha
0

  • ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
  • ಮಂಗಳೂರು ನಗರ ಪೊಲೀಸ್ ವತಿಯಿಂದ ಪುರಭವನದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಮಾರಂಭ




ಮಂಗಳೂರು: 2026ನೇ ಸಾಲಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಮಂಗಳೂರು ನಗರ ಪೊಲೀಸ್ ವತಿಯಿಂದ ನಗರದ ಪುರಭವನದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಬಸ್ ಹಾಗೂ ಆಟೋ ಚಾಲಕರ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು.


ಕಾರ್ಯಕ್ರಮದ ಅಂಗವಾಗಿ ಜೆಪ್ಪಿನಮೊಗೆರು ಯೆನೆಪೋಯಾ ಶಾಲೆಯ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಕುರಿತು ಬೀದಿನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು. ಅಲ್ಲದೆ ಮಂಗಳೂರು ನಗರದಲ್ಲಿ ಸಂಭವಿಸಿದ ನೈಜ ರಸ್ತೆ ಅಪಘಾತಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರದರ್ಶಿಸುವ ಮೂಲಕ ರಸ್ತೆ ಸುರಕ್ಷತೆಯ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು.


ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ, ಐ.ಪಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ತುಳು ಚಲನಚಿತ್ರ ನಟ ತೆಲಿಕೆದ ಬೊಳ್ಳಿ ಡಾ. ಶ್ರೀ ದೇವದಾಸ್ ಕಾಪಿಕಾಡ್, ಮುಖ್ಯ ಅತಿಥಿಗಳಾಗಿ ಶ್ರೀಮತಿ ಜೈಬುನಿಸ್ಸಾ, ಮಾನ್ಯ ನ್ಯಾಯಾಧೀಶರು, ಡಿ.ಎಲ್.ಎಸ್.ಎ., ಮಂಗಳೂರು, ಹಾಗೂ ವಿಶೇಷ ಅತಿಥಿಗಳಾಗಿ ಡಾ. ಶ್ರೀ ಅರ್ಜುನ್ ಶೆಟ್ಟಿ (ಪ್ರೊಫೆಸರ್ ಮತ್ತು ಮುಖ್ಯಸ್ಥರು, ನ್ಯೂರೋಸರ್ಜರಿ ವಿಭಾಗ, ಕೆ.ಎಂ.ಸಿ.) ಅವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.


ಕಾರ್ಯಕ್ರಮದಲ್ಲಿ ನಗರದ ಸಂಚಾರ ಸುವ್ಯವಸ್ಥೆಗೆ ಶ್ಲಾಘನೀಯ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ಸಂಚಾರ ವಿಷಯಗಳ ಕುರಿತು ರಸಪ್ರಶ್ನೆ ಆಯೋಜಿಸಿ ಬಹುಮಾನಗಳನ್ನು ವಿತರಿಸಲಾಯಿತು.


ಕರ್ನಾಟಕ ರಾಜ್ಯದಲ್ಲಿ 2025ನೇ ಸಾಲಿನ ರಸ್ತೆ ಅಪಘಾತಗಳ ಅಂಕಿಅಂಶ


ರಾಜ್ಯದಲ್ಲಿ 2025ನೇ ಸಾಲಿನಲ್ಲಿ ಒಟ್ಟು 43,130 ರಸ್ತೆ ಅಪಘಾತಗಳು ವರದಿಯಾಗಿದ್ದು, ಇದರಲ್ಲಿ 10,410 ಮಾರಣಾಂತಿಕ ಹಾಗೂ 32,720 ಅಮಾರಣಾಂತಿಕ ಅಪಘಾತಗಳು ಸೇರಿವೆ. ಈ ಅಪಘಾತಗಳಿಂದ 10,626 ಮಂದಿ ಮೃತಪಟ್ಟಿದ್ದು, 57,017 ಮಂದಿ ಗಾಯಗೊಂಡಿರುತ್ತಾರೆ.


ಮಂಗಳೂರು ನಗರದಲ್ಲಿ ರಸ್ತೆ ಅಪಘಾತಗಳ ಸ್ಥಿತಿ

ಮಂಗಳೂರು ನಗರದಲ್ಲಿ 2023ರಿಂದ 2025ರವರೆಗೆ ಪ್ರತಿವರ್ಷ ಸರಾಸರಿ ಸಾವಿರಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳ ಸಾವು–ಗಾಯಗಳ ಪ್ರಮಾಣ ಆತಂಕಕಾರಿ ಮಟ್ಟದಲ್ಲಿದೆ.


ದಂಡದ ಮೂಲಕ ದಾಖಲಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು


2023ರಲ್ಲಿ 1,36,493 ಪ್ರಕರಣಗಳು ದಾಖಲಾಗಿದ್ದು ₹5.41 ಕೋಟಿ ದಂಡ ಸಂಗ್ರಹಿಸಲಾಗಿದೆ.

2024ರಲ್ಲಿ 1,44,859 ಪ್ರಕರಣಗಳು ದಾಖಲಾಗಿದ್ದು ₹6.65 ಕೋಟಿ ದಂಡ ವಸೂಲಾಗಿದೆ.

2025ರಲ್ಲಿ ಈ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು 2,43,548 ಪ್ರಕರಣಗಳ ಮೂಲಕ ₹9.49 ಕೋಟಿ ದಂಡ ವಸೂಲಾಗಿದೆ.


ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸಿದ 16 ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳಾಗಿ ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಒಟ್ಟು 315 ಅಪಘಾತಗಳು ಸಂಭವಿಸಿ 77 ಮಂದಿ ಮೃತಪಟ್ಟಿದ್ದಾರೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಈ ಪ್ರದೇಶಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


ಪೊಲೀಸ್ ಆಯುಕ್ತರು ತಮ್ಮ ಭಾಷಣದಲ್ಲಿ, ಯಾವುದೇ ಚಾಲಕ ಅಥವಾ ಸವಾರನು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತದಿಂದ ಸಾವು ಉಂಟು ಮಾಡಿದರೆ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 105ರ ಅಡಿಯಲ್ಲಿ ಅಪರಾಧಿಕ ಮಾನವ ಹತ್ಯೆ ಪ್ರಕರಣ ದಾಖಲಿಸಿ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.


ಅಪಘಾತದಲ್ಲಿ ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿ ಮೃತಪಟ್ಟರೆ, ಆ ಕುಟುಂಬವು ಭಾರೀ ಮಾನಸಿಕ, ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಅವರು ಹೇಳಿದರು. ಪಾದಚಾರಿಗಳ ಸುರಕ್ಷತೆಗಾಗಿ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಸೆಂಟರ್ ಮೀಡಿಯನ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ನಟ ಡಾ. ಶ್ರೀ ದೇವದಾಸ್ ಕಾಪಿಕಾಡ್ ಅವರು, ವಾಹನ ಚಾಲಕರು, ಸವಾರರು ಹಾಗೂ ಪಾದಚಾರಿಗಳು ಎಚ್ಚರಿಕೆಯಿಂದ ಸಂಚರಿಸಿ, ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಹಾಗೂ ಇತರರ ಜೀವವನ್ನು ರಕ್ಷಿಸಿಕೊಳ್ಳಬೇಕೆಂದು ಮನವಿ ಮಾಡಿದರು.


ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ ರಸ್ತೆಗಳಲ್ಲಿ 28 ಸ್ಥಳಗಳಲ್ಲಿ ಒಟ್ಟು 169 ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 




Post a Comment

0 Comments
Post a Comment (0)
To Top