ಕಾರ್ಯಾಗಾರದಲ್ಲಿ ನಾಯಕರ ಆಕ್ರೋಶ
ಮಂಗಳೂರು, ಜ.24: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗ್ರಾಮೀಣಾಭಿವೃದ್ಧಿ ಯೋಜನೆಯಾದ “ವಿಬಿ–ಜಿ ರಾಮ್ ಜಿ” (ವಿಕಸಿತ ಭಾರತ ಗ್ಯಾರಂಟಿ ರೋಜಗಾರ್ ಆಜೀವಿಕಾ ಮಿಷನ್–ಗ್ರಾಮೀಣ) ಕುರಿತು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಈ ಯೋಜನೆಯ ಯಶಸ್ಸನ್ನು ಸಹಿಸಲಾಗದೆ ಕಾಂಗ್ರೆಸ್ ಪಕ್ಷ ಜನರ ಮಧ್ಯೆ ಸುಳ್ಳು ಮಾಹಿತಿ ಪಸರಿಸಲು ಹೊರಟಿದೆ ಎಂದು ಆರೋಪಿಸಿದರು. ಗ್ರಾಮೀಣ ಬಡವರ ಬದುಕಿಗೆ ಭದ್ರತೆ ನೀಡುವ ಯೋಜನೆಯಿಂದಾಗಿ ಕಾಂಗ್ರೆಸ್ ಭ್ರಮನಿರಸನಕ್ಕೆ ಒಳಗಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು, “ವಿಬಿ–ಜಿ ರಾಮ್ ಜಿ” ಯೋಜನೆ ಹಳೆಯ ಗ್ರಾಮೀಣ ಉದ್ಯೋಗ ಯೋಜನೆಗಳಿಗಿಂತ ಹೆಚ್ಚಿನ ಸುಧಾರಣೆಗಳನ್ನು ಒಳಗೊಂಡಿದ್ದು, ಜನರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಲಿದೆ ಎಂದರು. ಈ ಯೋಜನೆಯಿಂದ ಬಿಜೆಪಿ ಪರವಾಗಿ ಜನಮನ್ನಣೆ ಹೆಚ್ಚುವುದು ಖಚಿತವಾಗಿರುವುದರಿಂದ, ಅದನ್ನು ತಡೆಯುವ ಪ್ರಯತ್ನವಾಗಿ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್‌ನ ಸುಳ್ಳಿನ ಕೋಟೆಯನ್ನು ಬಿಜೆಪಿ ಒಡೆದು ಹಾಕಲಿದೆ ಎಂದು ಅವರು ಎಚ್ಚರಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಡಾ. ಲಕ್ಷ್ಮೀ ಅಶ್ವಿನ್ ಗೌಡ ಮಾತನಾಡಿ, ಹಳೆಯ ನರೇಗಾ ಯೋಜನೆ ಮತ್ತು “ವಿಬಿ–ಜಿ ರಾಮ್ ಜಿ” ಯೋಜನೆಯ ನಡುವಿನ ವ್ಯತ್ಯಾಸವನ್ನು ವಿವರಿಸಿದರು. ನರೇಗಾ ಯೋಜನೆ ಭ್ರಷ್ಟಾಚಾರ ಮತ್ತು ಸೋರಿಕೆಗಳಿಗೆ ಒಳಗಾಗಿದ್ದರೆ, ಹೊಸ ಯೋಜನೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ನೇರವಾಗಿ ಫಲಾನುಭವಿಗಳಿಗೆ ಲಾಭ ತಲುಪುವಂತೆ ರೂಪಿಸಲಾಗಿದೆ ಎಂದರು. 100 ದಿನಗಳ ಬದಲಾಗಿ 125 ದಿನಗಳ ಉದ್ಯೋಗಾವಕಾಶ, ಕನಿಷ್ಠ ದಿನಗೂಲಿ ಹೆಚ್ಚಳ ಹಾಗೂ ಗ್ರಾಮ ಪಂಚಾಯತ್‌ಗಳಿಗೆ ವಿಕಸಿತ ಭಾರತ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ನೀಡಿರುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾಂಗ್ರೆಸ್ ಹಲವಾರು ಯೋಜನೆಗಳಿಗೆ ಕೇವಲ ಹೆಸರು ಬದಲಾಯಿಸಿರುವುದಾಗಿ ಆರೋಪಿಸಿದರು. “ವಿಬಿ–ಜಿ ರಾಮ್ ಜಿ” ಯೋಜನೆ ಗ್ರಾಮಗಳನ್ನು ಬಲಪಡಿಸಿ ಬಡ ಜನರಿಗೆ ಶಕ್ತಿ ತುಂಬುವ ಯೋಜನೆಯಾಗಿದ್ದು, ಜಿಲ್ಲೆಯಾದ್ಯಂತ ಇದರ ಬಗ್ಗೆ ವ್ಯಾಪಕ ಪ್ರಚಾರ ನಡೆಸಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಪಿ, ಮಾಜಿ ಶಾಸಕ ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ ಸೇರಿದಂತೆ ಪಕ್ಷದ ಪ್ರಮುಖರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಧವ ಮಾವೆ ಕಾರ್ಯಕ್ರಮ ನಿರ್ವಹಿಸಿ, ದೇವಪ್ಪ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


