ಪಂಡಿತಾ ಕ್ಷಮಾರಾವ್ ಸಂಸ್ಕೃತದಲ್ಲಿ ಬರೆದ ಕಾವ್ಯ 'ಉತ್ತರ ಸತ್ಯಾಗ್ರಹ ಕಾವ್ಯ'ದ ಇಂಗ್ಲೀಷ್ ಗದ್ಯ ಅನುವಾದವನ್ನು ಹಿರಿಯ ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಶ್ರೀ ಉದಯ್ ಕುಮಾರ್ ಹಬ್ಬು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಪಂಡಿತಾ ಕ್ಷಮಾ ರಾವ್ (1890-1954) ಮಹಾರಾಷ್ಟ್ರದ ಕವಯಿತ್ರಿ. ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಈಕೆ 12 ಕೃತಿಗಳನ್ನು ರಚಿಸಿದ್ದಾರೆ. ಕ್ಷಮಾ ರಾವ್ ಸ್ವಾತಂತ್ರ್ಯ ಹೋರಾಟದ ಮಹತ್ವ ಸಾರುವ 'ಸತ್ಯಾಗ್ರಹ ಗೀತಾ' ಮತ್ತು 'ಉತ್ತರ ಸತ್ಯಾಗ್ರಹ ಗೀತಾ' ಎಂಬ ಎರಡು ಕೃತಿಗಳನ್ನು ಸಂಸ್ಕೃತ ಭಾಷೆಯಲ್ಲಿ ಬರೆಯುವ ಮೂಲಕ ಸಂಸ್ಕೃತ ಭಾಷೆಯ ಕುರಿತು ತನ್ನ ಅಭಿಮಾನವನ್ನು ತೋರಿಸಿದ್ದಾರೆ.
ಸತ್ಯಾಗ್ರಹ ಗೀತಾವು 1932ರಲ್ಲಿ ಪ್ರಕಟಗೊಂಡಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶಭಕ್ತಿಯನ್ನು ಸಾರುವ ಈ ಕೃತಿಯಲ್ಲಿ ಉಪ್ಪಿನ ಸತ್ಯಾಗ್ರಹ ದಾಂಡಿ ಯಾತ್ರೆಯ ಕಥನವಿದೆ. 1930ರ ಅಂತ್ಯದ ವರೆಗಿನ ಇತಿಹಾಸವನ್ನು ಈ ಕೃತಿ ಒಳಗೊಂಡಿದೆ.
ಉತ್ತರ ಸತ್ಯಾಗ್ರಹ ಗೀತಾ ಕೃತಿಯು 47 ಸರ್ಗಗಳನ್ನು ಒಳಗೊಂಡಿದ್ದು ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿದೆ. ದಕ್ಷಿಣ ಭಾರತದ ನಲ್ಲೂರಿನಲ್ಲಿರುವ ಗಾಂಧಿ ಮಿಷನ್‌ನ ಪ್ರೇರಣೆಯಿಂದ ಈ ಕೃತಿ 1948ರಲ್ಲಿ ಹೊರಬಂದಿದೆ. 1931 ರಿಂದ 1944ರ ವರೆಗಿನ ಸತ್ಯಾಗ್ರಹದ ಕಥನ ಇಲ್ಲಿ ಚಿತ್ರಣಗೊಂಡಿದೆ.
ಗಾಂಧೀಜಿ ಯವರು 1931 ರಲ್ಲಿ ಯರವಾಡಾ ಕಾರಾಗೃಹದಿಂದ ಬಿಡುಗಡೆಗೊಂಡ ನಂತರ ಸಾಬರಮತಿ ಆಶ್ರಮಕ್ಕೆ ತೆರಳುವ ಮೊದಲು ಮುಂಬೈಯಲ್ಲಿ ಕೆಲವು ದಿನ ಉಳಿದುಕೊಳ್ಳುವಲ್ಲಿಂದ ಕಥನ ಆರಂಭಗೊಳ್ಳುತ್ತದೆ. ಆಶ್ರಮ ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುವ ಸನ್ನಿವೇಶ ಸೊಗಸಾಗಿದೆ. ಶ್ರೀ ಕೃಷ್ಣನಿಗೆ ದ್ರೌಪದಿಯು ಸೇವೆ ಸಲ್ಲಿಸುವಂತೆ ಶ್ರೀಮತಿ ಅಮೃತ್ ಕೌರ್ ಗಾಂಧೀಜಿಯವರ ಸೇವೆ ಮಾಡುತ್ತಿದ್ದಾರೆ.
ವೈಸರಾಯ್ ಲಾರ್ಡ್ ಇರ್ವಿನ್ ಜೊತೆಗೆ ಸಂಧಾನದ ಮಾತುಕತೆಗೆ ಆಗಮಿಸುತ್ತಾರೆ. ಇದನ್ನು ಕವಿಯತ್ರಿ ದುರ್ಯೋಧನನು ಶ್ರೀ ಕೃಷ್ಣನನ್ನು ಸ್ವಾಗತಿಸಿದಂತೆ ಸ್ವಾಗತಿಸಿದನು ಎಂದು ವರ್ಣಿಸುತ್ತಾರೆ.
ಉಪ್ಪಿನ ತೆರಿಗೆ ತೆಗೆದು ಹಾಕುವ ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸುವ ಬೇಡಿಕೆಗಳನ್ನು ಮಂಡಿಸುತ್ತಾರೆ. ಕವಯಿತ್ರಿ ಕೃಷ್ಣ ಸಂಧಾನದ ಸಂದರ್ಭಕ್ಕೆ ಹೋಲಿಸಿ ಆ ಸಂದರ್ಭದಲ್ಲಿ ಸಂಧಾನ ವಿಫಲವಾಗಿತ್ತು. ಆದರೆ ಇಂದಿನ ಭೂ ಲೋಕದ ಋಷಿ ಸ್ವಲ್ಪ ಮಟ್ಟಿಗೆ ತೃಪ್ತಿ ಹೊಂದಿದರು ಎನ್ನುತ್ತಾರೆ. ಹೀಗೆ ಕಾವ್ಯ ವಿಶಿಷ್ಟ ರೀತಿಯಲ್ಲಿ ಆರಂಭವಾಗುತ್ತದೆ.
1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಎರಡನೇ ದುಂಡು ಮೇಜಿನ ಸಮ್ಮೇಳನಕ್ಕೆ ಕಾಂಗ್ರೆಸ್‌ನ ಪ್ರತಿನಿಧಿಯಾಗಿ ಗಾಂಧೀಜಿ ಆಯ್ಕೆಯಾಗುತ್ತಾರೆ. ಭಾರತದ ಸಂಪೂರ್ಣ ಸ್ವಾತಂತ್ರ್ಯದ ಸಾಧನೆಯನ್ನು ಧ್ಯೇಯವನ್ನಾಗಿ ಘೋಷಿಸಲಾಗುತ್ತದೆ. ಗಾಂಧೀಜಿಯವರ ಹಡಗಿನ ಪ್ರಯಾಣದ ಚಿತ್ರಣ ಕಾವ್ಯಮಯವಾಗಿ ಚಿತ್ರಿತವಾಗಿದೆ. ಎರಡನೇ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ತಮ್ಮ ನಿಲುವುಗಳನ್ನು ಸಮರ್ಥವಾಗಿ ಪ್ರತಿ ಪಾದಿಸುತ್ತಾರೆ. ಸಭೆ ವಿಫಲವಾದರೂ ಗಾಂಧೀಜಿ ಹತಾಶೆ ಗೊಳ್ಳಲಿಲ್ಲ. ಕವಿಯತ್ರಿ ಅದನ್ನು ಹೀಗೆ ಹೇಳುತ್ತಾರೆ. "ಪರಾಕ್ರಮಿಗಳು ತಮ್ಮ ಗುರಿಯನ್ನು ತಲುಪುವವರೆಗೆ ಶ್ರಮಿಸುವುದನ್ನು ನಿಲ್ಲಿಸುವುದಿಲ್ಲ".
ಭಾರತಕ್ಕೆ ಬಂದ ನಂತರದಲ್ಲಿ ಇಲ್ಲಿ ನಡೆದ ಕೆಲವು ಘಟನೆಗಳ ನಂತರ ನಾಗರಿಕ ಅಸಹಕಾರ ಸತ್ಯಾಗ್ರಹ ಘೋಷಣೆ ಮಾಡುತ್ತಾರೆ. ಗಾಂಧೀಜಿ ಸೇರಿದಂತೆ ಅನೇಕ ನಾಯಕರ ಬಂಧನವಾಗುತ್ತದೆ.
ಭಾರತದ ಹೊಸ ವೈಸ್‌ರಾಯ್ ಲಾರ್ಡ್ ವೆಲ್ಲಿಂಗ್ಟನ್ ಸತ್ಯಾಗ್ರಹದ ಶಕ್ತಿಯನ್ನು ಅರಿಯದೆ ಹೋದನು. ಸೂರ್ಯನ ಉಗ್ರ ಕಿರಣಗಳು ಸಹ ರಾತ್ರಿ ಕಮಲದ ದಳಗಳನ್ನು ಬಿಚ್ಚಲು ಸಾಧ್ಯವಿಲ್ಲ. ಹಾಗೆಯೇ ಸತ್ಯಾಗ್ರಹದ ಹೋರಾಟ ಇತ್ತು.
ಇತ್ತ ಕಡೆ ಸರಕಾರದ ದಬ್ಬಾಳಿಕೆ ತೀವ್ರಗೊಂಡಿತು. ಪ್ರತ್ಯೇಕ ಮತದಾರರ ಸಮುದಾಯದ ರಚನೆಯ ಘೋಷಣೆ ಮಾಡಿದಾಗ ಗಾಂಧೀಜಿ ಆಮರಣಾಂತ ಉಪವಾಸದ ನಿರ್ಧಾರ ಮಾಡುತ್ತಾರೆ. ಈ ಸುದ್ದಿ ಭಾರತದ ಜನರ ಹೃದಯವನ್ನು ಆತಂಕದಿಂದ ಸುಟ್ಟು ಹಾಕಿತು.
ಅಸ್ಪೃಶ್ಯತೆಯ ನಿವಾರಣೆಯ ಕುರಿತು ಚರ್ಚೆಗಳು ನಡೆದು ಅದನ್ನು ನಿಷೇಧಿಸಲು ನಿರ್ಧಾರ ಮಾಡಲಾಯಿತು. ಗಾಂಧೀಜಿ ಉಪವಾಸವನ್ನು ಕೊನೆಗೊಳಿಸಿದರು. ಒಂದೊಂದು ಘಟನೆಯೂ ಇಲ್ಲಿನ ಅಧ್ಯಾಯಗಳಲ್ಲಿ ಚರ್ಚಿಸಲ್ಪಟ್ಟಿದೆ. ಮುಂದೆ ಗಾಂಧೀಜಿ ಯವರನ್ನು ಭೇಟಿ ಆಗುವ ವಿದೇಶಿ ನಾಯಕರು ಅವರೊಡನೆ ನಡೆಸುವ ಚರ್ಚೆಗಳ ಮೂಲಕ ಹಾಗೂ ಹರಿಜನ ಪತ್ರಿಕೆಯ ಬರಹಗಳ ಮೂಲಕ ಗಾಂಧೀಜಿಯವರ ಚಿಂತನೆಗಳು ಪ್ರಕಟವಾಗುತ್ತಾ ಹೋಗುತ್ತದೆ. ವಿಶ್ವ ಯುದ್ಧದ ಸಂದರ್ಭದಲ್ಲಿ ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಪ್ರಕಟಿಸುತ್ತಾರೆ.
1942 ರ ಆಗಸ್ಟ್ 8 ರಂದು ಐದೂವರೆ ದಶಕಗಳ ಹೋರಾಟದ ತಾತ್ಪರ್ಯವಾಗಿ 'ಕ್ವಿಟ್ ಇಂಡಿಯಾ' ಚಳುವಳಿ ಆರಂಭವಾಗುತ್ತದೆ. ಗಾಂಧೀಜಿ ಯವರನ್ನು ಪೊಲೀಸರು ಸೂರ್ಯಗ್ರಹಣದಿಂದ ಆವರಿಸಿದಂತೆ ಬಂಧಿಸುತ್ತಾರೆ. ಮುಂದೆ ಬಲಗೈಯಂತೆ ಇದ್ದ ಮಹಾದೇವ ದೇಸಾಯಿ ನಿಧನರಾಗುತ್ತಾರೆ. ಕಸ್ತೂರ ಬಾ ಅವರ ಅಗಲಿಕೆ ಉಂಟಾಗುತ್ತದೆ.
1944ನೇ ಮೇ 5 ರಂದು ಬಿಡುಗಡೆ ಹೊಂದುತ್ತಾರೆ. ಗಾಂಧೀಜಿ ಮತ್ತು ಜಿನ್ನಾ ನಡುವಿನ ಮಾತುಕತೆಗಳು ವಿಫಲವಾಗುತ್ತದೆ. ಮಹಾತ್ಮಾ ಗಾಂಧೀಜಿ ಸೇವಾಗ್ರಾಮ ಕ್ಕೆ ತೆರಳುತ್ತಾರೆ. ಕಸ್ತೂರ್ ಬಾ ಹೆಸರಿನಲ್ಲಿ ಸಂಗ್ರಹಣೆ ಆದ ಮೊತ್ತವನ್ನು ಸ್ವೀಕರಿಸಿ ಹಳ್ಳಿಯ ಮಹಿಳೆಯರು ಮತ್ತು ಮಕ್ಕಳ ಶಿಕ್ಷಣ ಕ್ಕಾಗಿ ಬಳಸುವ ನಿರ್ಧಾರ ತಿಳಿಸುತ್ತಾರೆ.
ಸತ್ಯಾಗ್ರಹಕ್ಕೆ ಕೀರ್ತಿ ಬರಲಿ ಅದು ಶಿವನ ಅವತಾರ. ಅಹಿಂಸಾ, ಸತ್ಯ ಮತ್ತು ಶಾಂತಿ ಮೂರು ಕಣ್ಣುಗಳು. ಅವಮಾನದ ಗಾಯವನ್ನು ನಿವಾರಿಸಲು ಕೇವಲ ಒಂದು ನೋಟ ಸಾಕು ಎಂಬ ಸ್ವಾತಂತ್ರ್ಯದ ಮಹಾನ್ ದೇವತೆಗೆ ನಮನ ಎಂಬ ಆಶಯದಿಂದ ಕಾವ್ಯ ಮುಕ್ತಾಯಗೊಳ್ಳುತ್ತದೆ.
ಸತ್ಯಾಗ್ರಹದ ಕಥೆ ಇಲ್ಲಿ ಅನಾವರಣಗೊಳ್ಳುವುದರೊಂದಿಗೆ ಗಾಂಧೀಜಿಯವರ ವ್ಯಕ್ತಿತ್ವ ತಿಳಿದು ಬರುತ್ತದೆ. ಅಂದಿನ ರಾಜಕೀಯ ವ್ಯವಸ್ಥೆಗಳು, ರಾಜರುಗಳ ಒಳ ತಂತ್ರಗಳು, ಆರ್ಥಿಕ ದುಸ್ಥಿತಿ, ಸಮಾಜದ ಅಸಮಾನತೆಯ ವ್ಯವಸ್ಥೆ ಇವೆಲ್ಲವನ್ನು ಮೆಟ್ಟಿ ನಿಂತು ಹೋರಾಟಕ್ಕೆ ನಾಯಕತ್ವ ನೀಡಿದ ಗಾಂಧೀಜಿ ಮುಖ್ಯರಾಗುತ್ತಾರೆ.
ಕಾವ್ಯದ ಸಹಜ ಗುಣಗಳನ್ನು ಒಳಗೊಂಡು ಈ ಅನುವಾದಿತ ಕಥನ ಕನ್ನಡದ ಸಹಜ ಕೃತಿ ಎಂಬಂತೆ ಓದಿಸಿಕೊಂಡು ಹೋಗುತ್ತದೆ. ಇಂದಿನ ಸಂದರ್ಭದಲ್ಲಿ ಗಾಂಧೀಜಿಯವರನ್ನು ತಿಳಿದುಕೊಳ್ಳಲು ಈ ಕೃತಿಯು ಬಲು ಸಹಕಾರಿ ಎನ್ನಬಹುದು. ಅಪರೂಪದ ಉತ್ತರ ಸತ್ಯಾಗ್ರಹ ಗೀತಾವನ್ನು ಕನ್ನಡಕ್ಕೆ ತಂದಿರುವ ಉದಯ ಕುಮಾರ್ ಹಬ್ಬು ಅವರಿಗೆ ವಂದನೆಗಳು.
ಗಾಂಧೀಜಿಯವರ ಚಿಂತನೆಗಳ ಕುರಿತು ನಾವು ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಚಿಂತನೆ ನಡೆಸಲು ಈ ಕೃತಿ ದಾರಿ ದೀವಿಗೆ.
- ಕೃಷ್ಣಮೂರ್ತಿ ಕುಳಾಯಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


