- * ರಂಗಾರೋಹಣಕ್ಕೆ ಅಣಿಯಾಗಿರುವ ಶ್ರೇಯಾ
- * ಸಂಜೆ 5ಕ್ಕೆ ರಾಜಧಾನಿಯ ಚೌಡಯ್ಯ ಭವನದಲ್ಲಿ ಕಾರ್ಯಕ್ರಮ
ವಿಶೇಷ ಲೇಖನ: ಶಿವಮೊಗ್ಗ ರಘುರಾಮ
ಹೊಸ ಹೊಸ ವಿಚಾರಗಳನ್ನು ವರ್ತಮಾನಕ್ಕೆ ಅನ್ವಯವಾಗುವಂತೆ ಸದಾ ತಿಳಿಯುತ್ತಲೇ ಇರಬೇಕು. ಇದರೊಂದಿಗೆ ಇದಕ್ಕೆ ಪುಷ್ಟಿ ನೀಡುವ ಕಲೆಯನ್ನು ಸದಾ ಅಭ್ಯಾಸ ಮಾಡುತ್ತಲೇ ಇರಬೇಕು. ಇವೆರಡು ವ್ಯಕ್ತಿತ್ವ ವಿಕಸನಕ್ಕೆ ದೃಢತೆಯನ್ನೂ, ಸಮಗ್ರತೆಯನ್ನೂ ತಂದುಕೊಡುತ್ತವೆ ಎಂಬ ನಿಟ್ಟಿನಲ್ಲಿ ಸಾಧನೆಯ ಪಥದಲ್ಲಿ ಸಾಗುತ್ತಿರುವ ಯುವ ಕಲಾವಿದಯೊಬ್ಬಳು ಇದೀಗ ರಂಗಾರೋಹಣಕ್ಕೆ ಅಣಿ ಆಗಿದ್ದಾಳೆ.
ಹಿರಿಯ ವಿದುಷಿ ಸುಪರ್ಣಾ ವೆಂಕಟೇಶ್ ಅವರ ಶಿಷ್ಯೆ ಶ್ರೇಯಾ ಮಹೇಶ್ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಭವನದಲ್ಲಿ ಜನವರಿ 31ರಂದು ಸಂಜೆ 5ಕ್ಕೆ ವಿದ್ವಜ್ಜನರ ಸಮ್ಮುಖದಲ್ಲಿ ನಡೆಸಲಿರುವ ರಂಗ ಪ್ರವೇಶ ಒಂದು ಕಲಾ ಮೇಳವಾಗಿ ರಂಜಿಸಲಿದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಹೈಕೋರ್ಟ್ ನ್ಯಾಯಾಧೀಶ ಕೃಷ್ಣಕುಮಾರ್, ಅಡಿಷನಲ್ ಅಡ್ವಕೇಟ್ ಜನರಲ್ ಕೃಷ್ಣ ವಿ. ರಾವ್, ಯೋಗ ತಜ್ಞ ಡಾ. ಎ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್, ಮಹೇಶ್ ಮತ್ತು ಆಶಾ ಸೇರಿದಂತೆ ವಿವಿಧ ರಂಗದ ಗಣ್ಯಾತಿ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಹಿಮ್ಮೇಳ ಕಲಾವಿದರು:
ಹಿಮ್ಮೇಳದಲ್ಲಿ ನಟುವಾಂಗದಲ್ಲಿ ವಿದುಷಿ ಸುಪರ್ಣಾ ವೆಂಕಟೇಶ್, ಪಿಟೀಲಿನಲ್ಲಿ ಭಾರತಿ ವೇಣುಗೋಪಾಲ್, ಮೃದಂಗದಲ್ಲಿ ವಿದ್ಯಾಶಂಕರ್, ಕೊಳಲಿನಲ್ಲಿ ಶಶಾಂಕ ಜೋಡಿದಾರ್ ಮತ್ತು ವೀಣೆಯಲ್ಲಿ ಶಂಕರ್ ವಿ. ರಾಮನ್ ವಿಶೇಷ ಸಹಕಾರ ನೀಡಲಿದ್ದಾರೆ. ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಗುರು ಸುಪರ್ಣಾ ಅವರ ಶಿಷ್ಯೆ ಶ್ರೇಯಾ ತನ್ನ 5ನೇ ವಯಸ್ಸಿನಿಂದಲೇ ನೃತ್ಯ ಕಲಿಕೆಯನ್ನು ಆರಂಭಿಸಿದ್ದು. ಪ್ರಖ್ಯಾತ ಹೈಕೋರ್ಟ್ ವಕೀಲ ಮಹೇಶ್ ಮತ್ತು ಆಶಾ ಅವರ ಪುತ್ರಿಯಾದ ಈ ಕಲಾವಿದೆ ಗುರುವಿನ ಮಾರ್ಗದರ್ಶನದಲ್ಲಿ ಈವರೆಗೆ ಹತ್ತು ಹಲವು ವೇದಿಕೆಗಳಲ್ಲಿ ತಮ್ಮ ಕಲಾವಂತಿಕೆಯನ್ನು ಪ್ರದರ್ಶನ ಮಾಡಿದ್ದು ಹೆಗ್ಗಳಿಕೆ.
ಕಾನೂನು ಅಧ್ಯಯನ, ನೃತ್ಯ ಕಲಿಕೆ:
ಕಾನೂನು ಕ್ಷೇತ್ರದಲ್ಲಿ ಹಿಡಿತ ಸಾಧಿಸಬೇಕು ಎಂದರೆ ಪದವಿ ಮುಗಿಸಿ ಕರಿ ಕೋಟ್ ಹಾಕಿದರೆ ಅದು ಅಷ್ಟಕ್ಕೇ ಮುಗಿಯುವುದಿಲ್ಲ. ಸದಾ ಅಧ್ಯಯನ ಮಾಡುತ್ತಲೇ ಇರಬೇಕು. ಹತ್ತಾರು ವರ್ಷ ನೃತ್ಯ ಕಲಿತು ರಂಗ ಪ್ರವೇಶ ಮಾಡಿದರೆ ಕಲೆ ಇಷ್ಟಕ್ಕೇ ಸಿದ್ಧಿಸಲಾಗದು. ಸದಾ ಅಭ್ಯಾಸ ಮಾಡುತ್ತಲೇ ಇರಬೇಕು. ಸಾಧನೆಯ ಮೈಲಿಗಲ್ಲುಗಳನ್ನು ಏರುತ್ತಲೇ ಇರಬೇಕು. ಆಗ ಮಾತ್ರ ಕಲಾವಿದ ಕ್ರಿಯಾಶೀಲನಾಗಿ ಇರುತ್ತಾನೆ. ಕಾನೂನು- ನೃತ್ಯ; ಈ ಎರಡೂ ರಂಗದಲ್ಲಿ ಪ್ರಾಕ್ಟೀಸ್ ಎಂಬುದು ನಿತ್ಯ ನಿರಂತರ. ಇದಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳಲು ಸಂಕಲ್ಪ ಮಾಡಿರುವುದು ಶ್ರೇಯಾಳ ಹೆಚ್ಚುಗಾರಿಕೆ.
ಬಹುಮುಖ ಪ್ರತಿಭೆ
ಅಂದಹಾಗೆ ಬೆಂಗಳೂರಿನ ಪಿಇಎಸ್ ವಿವಿಯಲ್ಲಿ ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ಈಕೆ ಭರತನಾಟ್ಯದಲ್ಲಿ ಗುರು ಸುಪರ್ಣಾ ಅವರ ಬಳಿ ಸೀನಿಯರ್ ಹಂತದ ಕಲಿಕೆಯನ್ನು ನಡೆಸುತ್ತಿದ್ದಾಳೆ. ಶ್ವೇತಾ ವೆಂಕಟೇಶ್ ಬಳಿ ಕಥಕ್ ಜೂನಿಯರ್ ಪಾಠ ಕಲಿತು, ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವ ಈಕೆ ಕ್ರಿಯಾಶೀಲ ಯೋಗ ಪಟುವೂ ಹೌದು. ಶಾಲಾ ಕಲಿಕೆ ಹಂತದಲ್ಲಿ ಸ್ಕೇಟಿಂಗ್‌ನಲ್ಲೂ ಬಹುಮಾನ ದೊರಕಿದೆ. ಶಾಲಾ ಶಿಕ್ಷಣದಲ್ಲೂ ಟಾಪರ್. ಒಟ್ಟಾರೆ ಈಕೆ ಬಹುಮುಖ ಪ್ರತಿಭೆ. ಪಿಇಎಸ್ ವಿವಿ ‘ಸಂಸ್ಕೃತಿ’ ತಂಡದ ಕ್ರಿಯಾಶೀಲ ಸದಸ್ಯೆ ಆಗಿರುವ ಶ್ರೇಯಾ, ತನ್ನ ಅಭಿರುಚಿ ಮತ್ತು ಹವ್ಯಾಸಗಳಿಗೆ ತಕ್ಕನಾದ ಸ್ನೇಹಿತರ ತಂಡವನ್ನೇ ಹೊಂದಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ಸಮಕಾಲೀನ ಮಿತ್ರರನ್ನು ಕಂಡು ಪರಸ್ಪರ ಸ್ಫೂರ್ತಿ ಪಡೆಯುವ ಈಕೆ, ಸದಾ ಕಲೆ, ಸಾಹಿತ್ಯ, ಸಂಗೀತ, ನೃತ್ಯದ ಬಗ್ಗೆಯೇ ಚಿಂತನ- ಮಂಥನ ನಡೆಸುವುದು ಗಮನೀಯವಾಗಿದೆ.
ಈ ಉದಯೋನ್ಮುಖ ಕಲಾವಿದೆ ಈವರೆಗೆ ಗುರುವಿನ ಮಾರ್ಗದರ್ಶನದಲ್ಲಿ ತುಮಕೂರು ಕೋಲಾರ ರಾಯಚೂರು, ಬೆಂಗಳೂರು ನಗರದ ಕಲಾ ಉತ್ಸವದ ವೇದಿಕೆ, ಸಾಯಿ ಇಂಟರ್‌ನ್ಯಾಷನಲ್ ಸಂಸ್ಥೆ ಉತ್ಸವಗಳು ಸೇರಿದಂತೆ ನ್ಯಾಯಾಂಗ ಇಲಾಖೆಯ ಅನೇಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರೌಢಿಮೆಯನ್ನು ಪ್ರದರ್ಶನ ಮಾಡಿರುವುದು ಬೆಳವಣಿಗೆಯ ಸಂಕೇತವಾಗಿದೆ.
ಡೈಲಾಗ್ ಹೇಳದ ಸಂದರ್ಭವೇ ನೃತ್ಯ ಶಾಲೆ ಪ್ರವೇಶಕ್ಕೆ ಕಾರಣ:
ವೇದಿಕೆಯಲ್ಲಿ ಪುಟ್ಟ ಮಗಳು ಕೃಷ್ಣ ವೇಷ ಸ್ಪರ್ಧೆ ಯಲ್ಲಿ ಸೂಕ್ತವಾಗಿ ಡೈಲಾಗ್ ಹೇಳಲು ಹಿಂಜರಿದಳು. ಈ ಸಂದರ್ಭದಲ್ಲಿಯೇ ತಾಯಿ ನಿರ್ಧರಿಸಿದ್ದು. ‘ಈಕೆಯನ್ನು ಕಲಾವಿದೆಯನ್ನಾಗಿ ಮಾಡಿದರೆ ‘ ಸ್ಟೇಜ್ ಫಿಯರ್’ ದೂರವಾಗುತ್ತದೆ ಎಂದು. ಆ ನಿಟ್ಟಿನಲ್ಲಿ ಶ್ರೇಯಾಳ ತಾಯಿ ಆಶಾ ಅವರಿಗೆ ಪ್ರಪ್ರಥಮವಾಗಿ ಕಂಡುಬಂದ ಗುರು ಸುಪರ್ಣಾ. ಒಂದು ದಶಕದ ಅಭ್ಯಾಸದಿಂದ ಗುರುವಿನ ಗರಡಿಯಲ್ಲಿ ಪಳಗಿದ ಶ್ರೇಯಾ ಇದೀಗ ರಂಗಪ್ರವೇಶ ಹಂತಕ್ಕೆ ಬಂದು ತಲುಪಿರುವುದರ ಹಿಂದೆ ಈಕೆಯ ತಾಯಿ ಆಶಾ ಅವರ ಪರಿಶ್ರಮ ಸಾಕಷ್ಟು ಇದೆ. ಏನೇ ಬೆವರು ಸುರಿಸಿದ್ದರೂ, ತನ್ನ ತನವನ್ನು ತ್ಯಾಗ ಮಾಡಿದ್ದರೂ ಆಶಾ ಅವರ ಅಂತರಂಗದ ‘ಆಸೆ’ ದಶಕದ ನಂತರ ಈಡೇರಿದೆ. ಅವರ ಆಕಾಂಕ್ಷೆಗಳನ್ನು ಪುತ್ರಿ ಈಡೇರಿಸುತ್ತಿರುವುದು, ಇದಕ್ಕೆ ತಂದೆ ಮಹೇಶ್ ಪೋಷಣೆ ನೀಡಿರುವುದು ಬೆಳೆಯುವ ಸಿರಿಗೆ ಒಂದು ಯೋಗಾಯೋಗವೇ ಆಗಿದೆ.
ನೃತ್ಯ ಕಲಿಕೆಯಿಂದ ಸಾಮರ್ಥ್ಯ ಹೆಚ್ಚಳ:
ಕಾನೂನು ಅಧ್ಯಯನ ಮತ್ತು ಭರತನಾಟ್ಯವನ್ನು ಸಮಾನ ಗೌರವದಿಂದ ಸ್ವೀಕರಿಸಿರುವ ಈ ಕಲಾವಿದೆ ಈಗಾಗಲೇ ತನ್ನ ತಂದೆಯ ಹೈಕೋರ್ಟ್ ಕಲಾಪಗಳಿಗೆ ಅನೇಕ ತಯಾರಿಗಳನ್ನು ಮಾಡಿಕೊಡುವಷ್ಟು ಸಮರ್ಥವಾಗಿದ್ದಾಳೆ. ನೃತ್ಯ ಕಲಿಕೆಯಿಂದ ಕಾನೂನು ಅಧ್ಯಯನಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಭರತನಾಟ್ಯ ಇಮ್ಮಡಿಸುತ್ತದೆ. ಯಾವುದೇ ರಂಗದ ಉನ್ನತ ಅಧ್ಯಯನಕ್ಕೆ ಶಕ್ತಿ ನೀಡುತ್ತದೆ ಎಂದು ಪ್ರತಿಪಾದಿಸುತ್ತಾಳೆ. ಕಲಾ ರಂಗದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಲು ಶ್ರೇಯಾ ನಿರಂತರ ಅಭ್ಯಾಸವನ್ನು ಮಾಡುವ ಸಂಕಲ್ಪ ಮಾಡಿರುವುದು ರಂಗಾರೋಹಣ ಸಂದರ್ಭದಲ್ಲಿ ಶ್ಲಾಘನೀಯವಾಗಿದೆ.
ವಂಶದ ಬಳುವಳಿ:
ಶ್ರೇಯಾಳ ತಂದೆ ಮತ್ತು ತಾಯಿಯ ವಂಶದಲ್ಲಿ ಯಾರೂ ಸಂಗೀತ- ನೃತ್ಯ ಕಲಾವಿದರು ಇಲ್ಲ. ಆದರೆ ಎರಡೂ ಕಡೆಯ ಹಿರಿಯರಿಗೆ ರಂಗಭೂಮಿ ಬಗ್ಗೆ ಅಪಾರವಾದ ಒಲವು, ಕಾಳಜಿ ಇತ್ತು. ಈಕೆಯ ತಾಯಿಯ ತಂದೆ ಮತ್ತು ತಂದೆಯವರ ತಂದೆ ನಾಟಕಗಳನ್ನು ನಿರ್ದೇಶಿಸುವ, ಅಭಿನಯಿಸುವ ಅಭಿರುಚಿ ಇಟ್ಟುಕೊಂಡಿದ್ದರು. ಇದೇ ಆಕೆಗೆ ಅನುವಂಶೀಯ ಬಳುವಳಿಯಾಗಿ ನೃತ್ಯ ಕಲೆ ಒಲಿಯುವಂತೆ ಮಾಡಿದೆ. ಹಿರಿಯರ ಅನುಗ್ರಹವೇ ಸಾಧನೆಗೆ ಶ್ರೇಯಸ್ಸು ಎನ್ನುತ್ತಾರೆ ಶ್ರೇಯಾ ಅವರ ತಾಯಿ ಆಶಾ. ನಾನು ಬಾಲ್ಯದಲ್ಲಿ ಏನೇನು ಕಲಿಯಬೇಕು ಎಂದು ಸಂಕಲ್ಪ ಮಾಡಿದ್ದು ಸಾಧ್ಯವಾಗಿರಲಿಲ್ಲ. ಅದನ್ನು ನನ್ನ ಮಗಳ ಚಿಕ್ಕ ಚಿಕ್ಕ ಸಾಧನೆಗಳಲ್ಲಿ ಕಂಡು ದೊಡ್ಡ ದೊಡ್ಡ ಖುಷಿಯನ್ನು ಅನುಭವಿಸಿದ್ದೇನೆ. ಅದನ್ನು ಪದಗಳಲ್ಲಿ ಹೇಳಲಾಗದು ಎನ್ನುವಾಗ ಆಶಾ ಅವರ ಕಣ್ಣಾಲಿಗಳಿ ನೀರಾಗಿದ್ದವು.
ಈ ಬಾಲಕಿಯಲ್ಲಿ ಏನೋ ಒಂದು ವಿಶೇಷತೆ ಇದೆ. ಇವಳನ್ನು ಚನ್ನಾಗಿ ಪಳಗಿಸಿ ಎಂದು ಹಿರಿಯ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಒಮ್ಮೆ ನನಗೆ ಹೇಳಿದ್ದರು. ಅಂಥವರೇ ಹೇಳಿದಮೇಲೆ ಡಾನ್ಸ್ ಬಿಡಬೇಡ ಎಂದು ನಾನೂ ತಿಳಿಸಿದ್ದೆ. ಶ್ರೇಯಾ ಬದ್ಧತೆಯ ಕಲಾವಿದೆ. ಅವಳಲ್ಲಿ ಪಕ್ವತೆ ಕಂಡಿದ್ದೇನೆ. ಭರತನಾಟ್ಯದಲ್ಲಿ ಇವಳಿಗೆ ಶ್ರೇಯಸ್ಸು ಇದೆ.
- ಡಾ. ಸುಪರ್ಣಾ ವೆಂಕಟೇಶ್
ಗುರು, ಹಿರಿಯ ನೃತ್ಯ ವಿದುಷಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

