ಉತ್ತಮ ಕ್ಯಾಪ್ಟನ್ ಜನ ಮಾನಸದಲ್ಲಿ ಉಳಿಯುವುದು ಉತ್ತಮ ಸಾಧನೆ ಮತ್ತು ನಿರ್ವಹಣೆಗಳಿಂದ

Upayuktha
0


ಹೆಚ್ಚು ಕಾಲ ಫೀಲ್ಡಲ್ಲಿದ್ದು, ಅತಿ ಹೆಚ್ಚು ರನ್‌ಗಳಿಸಿ, ಉತ್ತಮ ಬೌಲಿಂಗ್‌ ಮತ್ತು ಎಕ್ಸ್‌ಟ್ರಾಡಿನರಿ ಟೀಮ್ ನಿರ್ವಹಣೆ, ಅದ್ಭುತ ಪರ್ಫಾರ್ಮೆನ್ಸ್ ಆಟಗಳ ದಾಖಲೆ ಮಾಡದವರಿಗೂ....

ಸಮಯ ಮತ್ತು ಬಾಲ್‌ಗಳನ್ನು ವ್ಯರ್ಥಗೊಳಿಸಿ ಕಡಿಮೆ ರನ್ ಹೊಡೆದು, ಕಳಪೆ ಬೌಲಿಂಗ್ ಮಾಡಿ, ಟೀಮ್ ನಿರ್ವಹಣೆಯೂ ಇಲ್ಲದೆ, ತಂಡದ ಹೆಸರೂ ಕೆಡಿಸಿ, ಸಮಸ್ತ ಕ್ರಿಕೆಟ್ ಅಭಿಮಾನಿಗಳು ನಿರಾಸೆಗೊಳ್ಳುವಂತ ಕಳಪೆ ಪರ್ಫಾರ್ಮೆನ್ಸ್ ಆಡುವ ಕ್ಯಾಪ್ಟನ್‌ಗೂ... ಅಜಗಜಾಂತರ ಇರುತ್ತದೆ.



ಔಟಾಗದೆ, ಬ್ಯಾಟಿಂಗ್‌ಗೆ ಅಂಟಿಕೊಂಡು, ವಿರೋಧಿ ತಂಡವೂ ನಿರಾಸೆಯಾಗುವಷ್ಟು ಕಳಪೆ ಬ್ಯಾಟಿಂಗ್ ಮಾಡುತ್ತ, ಹೆಚ್ಚು ಸಮಯ  ಬ್ಯಾಟ್ ಹಿಡಿದು, ತಂಡದ ಮರ್ಯಾದೆಯನ್ನೂ ಕಳೆದು, ಸ್ಕೋರೂ ಮಾಡದೆ,  ಫೋರ್-ಸಿಕ್ಸರ್-ರನ್ ರೇಟ್ ಇಲ್ಲದೆ ವಿಕೇಟ್ ಬುಡದಲ್ಲಿ ನಿಂತಿದ್ದೇ ಕ್ಯಾಪ್ಟನ್‌ನ ದಾಖಲೆ ಆಗಬಾರದು.  


ಕ್ರಿಕೆಟ್ ಆಟದ ಮೈದಾನವು ದೊಡ್ಡ ಹುಲ್ಲಿನ ಮೈದಾನವಾಗಿರುತ್ತದೆ. ಕ್ಯಾಪ್ಟನ್ ಆದವನು ತನ್ನ ಆಟದ ಸಮಯದಲ್ಲಿ ಆ ಹುಲ್ಲಿನ ಮೈದಾನವನ್ನು ಕೇವಲ ಆಟ ಆಡುವುದಕ್ಕೆ ಬಳಸ ಬೇಕೇ ಹೊರೆತು, ಬೇರೆ ಉದ್ದೇಶಗಳಿಗಲ್ಲ.  


ಒಳ್ಳೆಯ ಆಟ ಆಡದಿರುವುದೇ ಕ್ಯಾಪ್ಟನ್‌ನ ದಾಖಲೆಯ ಗೇಮ್ ಆಗಬಾರದು.


ಕ್ಯಾಪ್ಟನ್ ಆದವನು ತನ್ನ ತಂಡವನ್ನು ಅಭಿಮಾನಿಸುವ ತನ್ನ ದೇಶದ ಅಥವಾ ರಣಜಿ ಆದರೆ ರಾಜ್ಯದ ಸಮಸ್ತರನ್ನೂ ಭೇದ ಭಾವ ಮಾಡಬಾರದು.  ಪ್ರೇಕ್ಷಕರ ಗ್ಯಾಲರಿಯಲ್ಲಿರುವ ಬಂಧುಗಳು, ಸ್ನೇಹಿತರು ಮಾತ್ರ ತಮ್ಮವರು ಅಂತ ತುಷ್ಟೀಕರಣ ಮಾಡಬಾರದು. ಆಟಗಾರನ ಆಟ "ನಮ್ಮವರ ಪ್ರೀತಿಗೆ ಮಾತ್ರ" ಎಂದು ಆಡುವ ಮನೋಭಾವ ಕ್ಯಾಪ್ಟನ್‌ಗೆ ಇರಬಾರದು. 


ಕ್ಯಾಪ್ಟನ್ ಆದವನ ದಾಖಲೆ ಉಳಿಯುವುದು ಕೇವಲ ಎಷ್ಟು ಸಮಯ ಕ್ಯಾಪ್ಟನ್ ಆಗಿದ್ದ ಅಂತಲ್ಲ, ಎಷ್ಟು ಉತ್ತಮ ನಿರ್ವಾಹಕ ಕ್ಯಾಪ್ಟನ್ ಆಗಿದ್ದ, ಕ್ಯಾಪ್ಟನ್‌ಶಿಪ್‌ನ್ನು ಎಷ್ಟು ಸಮಗ್ರವಾಗಿ ನಿರ್ವಹಿಸುತ್ತಿದ್ದ ಎನ್ನುವುದರ ಆಧಾರದ ಮೇಲೆ. ಕ್ಯಾಪ್ಟನ್ ಆದವನು ಧನಾತ್ಮಕ ಇತಿಹಾಸ ಆಗುವಂತಹ ಸಾಧನೆಗಳ ದಾಖಲೆಗಳನ್ನು ತಾನೂ ಮಾಡಬೇಕು, ತನ್ನ ತಂಡವೂ ಮಾಡುವಂತೆ ನಿರ್ವಹಣೆ ಮಾಡಬೇಕು!!


ಕ್ಯಾಪ್ಟನ್ ಆದವನು ಬ್ಯಾಟ್ ಹಿಡಿದು ಸ್ಟ್ರೈಕಿಂಗ್ ಕ್ರೀಸ್‌ನಲ್ಲಿ, ಕ್ರೀಸ್ ಹೊಂಡ ಗುಂಡಿ ಆಗುವಷ್ಟು ಬ್ಯಾಟ್ ಕುಟ್ಟುತ್ತಾ ಕಾಲ ಕಳೆದರೆ ಅದೂ ದಾಖಲೆಯಾಗಿ ಉಳಿಯಬಹುದು!! ಆದರೆ ಅದು ನೆಗೆಟಿವ್ ದಾಖಲೆಯಾಗಿ ಉಳಿಯುತ್ತದೆ.


ಕ್ಯಾಪ್ಟನ್ ಆದವನು ಫೀಲ್ಡಿಂಗ್ ಮಾಡುವಾಗ, ಸಮರ್ಥರನ್ನು ಅವರವರ ಸಾಮರ್ಥ್ಯ ಗುರುತಿಸಿ, ಫೀಲ್ಡ್‌ನ ಆಯಕಟ್ಟಿನ ಜಾಗಕ್ಕೆ ನಿಯೋಜಿಸಬೇಕು.  ಬಾಲ್ ಎಸೆಯುವ ಟೆಕ್ನಿಕ್ ಗೊತ್ತಿಲ್ಲದವನಿಗೆ ಬೋಲಿಂಗ್, ಕೀಪಿಂಗ್ ಶಿಕ್ಷಣ ಅಭ್ಯಾಸ ಮಾಡದವನಿಗೆ ವಿಕೇಟ್ ಕೀಪರ್ ಪೋಸ್ಟ್ ಕೊಟ್ಟರೆ, ಅದು ಕೇವಲ ತಂಡಕ್ಕೆ ಮಾತ್ರ ಅಲ್ಲ, ತಾನು ಪ್ರತಿನಿಧಿಸುವ ಜಿಲ್ಲೆಗೋ/ರಾಜ್ಯಕ್ಕೋ ಮಾಡಿದ ತೇಜೋವಧೆ. ಮತ್ತು ಇಂತಹ ಎಡಬಿಡಂಗಿತನದಿಂದಾದ ಸೋಲುಗಳು ಕ್ಯಾಪ್ಟನ್‌ಶಿಪ್‌ನ ಕಪ್ಪು ಚುಕ್ಕಿಯ ನೆಗೆಟಿವ್ ದಾಖಲೆಯಾಗಿ ಉಳಿಯಬಹುದು!!


ಇನ್ನು ಕ್ಯಾಪ್ಟನ್ ಆದವನು ಸಾಧಾರಣ ಕ್ಯಾಪ್ಟನ್‌ಶಿಪ್ ಮತ್ತು ಸಾಧಾರಣ ಬ್ಯಾಟಿಂಗ್‌ನ್ನು ಮೊದಲ ಇನಿಂಗ್ಸ್‌ನಲ್ಲಿ ಮಾಡಿ, ಎರಡನೇ ಇನಿಂಗ್ಸ್‌ನಲ್ಲಿ ಅತ್ಯಂತ ಹೀನಾಯ ಕ್ಯಾಪ್ಟನ್‌ಶಿಪ್ ಮತ್ತು ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರೆ, ಮೊದಲ ಇನಿಂಗ್ಸ್‌ನ ಸಾಧಾರಣ ಪರ್ಫಾರ್ಮೆನ್ಸ್ ಕೂಡ ಎರಡನೆಯ ಇನಿಂಗ್ಸ್‌ನ ಕಳಪೆಯ ದಾಖಲೆಯಲ್ಲಿ ತೊಳೆದು ಹೋಗಿರುತ್ತದೆ.


ಹಿಂದೆ ಅನೇಕ ಧನಾತ್ಮಕ ದಾಖಲೆಗಳನ್ನು ಮಾಡಿಟ್ಟ ಹಿಂದಿನ ಕ್ಯಾಫ್ಟನ್‌‌‌ನ ದಾಖಲೆಯನ್ನು ಮುರಿದು, ಇವತ್ತು ನಾನು ಹೊಸ ದಾಖಲೆ ಮಾಡುತ್ತೇನೆ ಎಂದು ಕಳಪೆ ಆಟ ಆಡುತ್ತ, ಕೆಟ್ಟ ಕ್ಯಾಪ್ಟನ್‌ಶಿಪ್ ಮಾಡುತ್ತ, ಕೇವಲ ಅಧಿಕ ಅವಧಿಗೆ ಕ್ರೀಡಾಂಗಣದಲ್ಲಿದ್ದಿದ್ದೇ ದಾಖಲೆಯಾಗಿಸಿದರೆ, ಅದೂ ನಿಷೇಧ ಮಾದರಿ ದಾಖಲೆಯಾಗಿ ಇತಿಹಾಸದಲ್ಲಿ ಉಳಿಯುತ್ತದೆ. "ಕ್ಯಾಪ್ಟನ್ ಆದವನು ಈ ರೀತಿ ಇರಬಾರದು" ಎನ್ನುವುದಕ್ಕೆ ನಿಷೇಧ ಮಾದರಿ ಆಗಬಹುದು.  ದಾಖಲೆ ಮಾಡಲು ಹೊರಟ ಕ್ರೀಡಾಪಟು ಕ್ಯಾಪ್ಟನ್ ಈ ರೀತಿ ಕೇವಲ ದಾಖಲೆಗಾರನಾಗಿ ಇತಿಹಾಸ ಸೇರದಂತೆ ಯೋಚಿಸಬೇಕು.


ಇನ್ನು ಒಬ್ಬ ಆಟಗಾರನು ಅಥವಾ ಕ್ಯಾಪ್ಟನ್‌ನು ಹಿಂದಿನ ಯಶಸ್ವೀ ಕ್ಯಾಪ್ಟನ್‌ನ ದಾಖಲೆಗಳನ್ನು ಸಮಗಟ್ಟಿಸಲು ಫೀಲ್ಡಿಗೆ ಇಳಿದಾಗ, ಹಿಂದಿನ ಯಶಸ್ವೀ ಕ್ಯಾಪ್ಟನ್‌ನ ಸಮಗ್ರ ಶ್ರೇಷ್ಟತೆಗಳ ಸಾಧನೆಗಳಲ್ಲಿ ಒಂದಿಷ್ಟನ್ನಾದರೂ ತಾನು ಮೈಗೂಡಿಸಿಕೊಂಡು ಅನುಷ್ಠಾನಕ್ಕೆ ತಂದಿರಬೇಕು. ಸಮಸ್ತ ಕ್ರೀಡಾಭಿಮಾನಿಗಳು ಸ್ವಯಂ ಮೆಚ್ಚಿ ಚಪ್ಪಾಳೆ, ಶಿಳ್ಳೆ ಹೊಡೆಯುವಂತಹ ಆಟ ಮತ್ತು ನಿರ್ವಹಣೆ ಮಾಡಿರಬೇಕು. ಪ್ರೇಕ್ಷಕರಾಗಿ ಬಂದ ಸ್ವಜನ ಬಂಧುಗಳು, ಸ್ನೇಹಿತರು, ಜೈಕಾರದ ಭಟ್ಟಂಗಿಗಳು, ಅಂಧಭಕ್ತ ಪಟಾಲಂ ಅಭಿಮಾನಿಗಳು ಮಾತ್ರ ಚಪ್ಪಾಳೆ, ಶಿಳ್ಳೆ ಹೊಡೆಯುವಂತಹ ಆಟ ಮತ್ತು ನಿರ್ವಹಣೆಗೆ ಸೀಮಿತ ಆಗಿರಬಾರದು. ಆ ಹಿನ್ನಲೆಯಲ್ಲಿ ಕೇವಲ ಸಮಯ ತಿನ್ನುತ್ತ ಆಡಿದ ಕಳಪೆ ದಾಖಲೆಗೆ ಮೌಲ್ಯ ಸಿಗುವುದಿಲ್ಲ.


ಕ್ಯಾಪ್ಟನ್ ಆಗಿ ಕ್ರೀಡಾಂಗಣದಲ್ಲಿದ್ದಾಗ ಆದ ಕಾಲ್ತುಳಿತ ಪ್ರಕರಣ, ಹತ್ತೋ ಹದಿನಾಲ್ಕೋ ಬಾರಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾನೆ ಎಂಬ ಆರೋಪ, ಕ್ಯಾಪ್ಟನ್ ಆಗಿದ್ದಾಗ ಸರ್ವಾಧಿಕಾರಿಯ ವರ್ತನೆ, ಕ್ರೀಡಾಂಗಣದಿಂದ ಪೆವಿಲಿಯನ್‌ಗೆ ಬಂದಾಗ ಪತ್ರಕರ್ತರ ಪ್ರಶ್ನೆಗೆ ಸುಳ್ಳುಗಳ ಉತ್ತರ, ಅಗೌರವ ಕೊಡುವ ಮಾತು-ನಡವಳಿಕೆ, "ಯಾವಾಗಲೂ ನಾನೇ ಕ್ಯಾಪ್ಟನ್, ಈಗಲೂ ನಾನೇ, ಮುಂದೆಯೂ ನಾನೇ, ನಾನು ಯಾವತ್ತೂ ಕ್ಯಾಪ್ಟನ್‌ಶಿಪ್‌ನಿಂದ ನಿವೃತ್ತಿ ಆಗುವುದಿಲ್ಲ" ಎನ್ನುವಂತೆ ಅಹಂಕಾರದ ಹೇಳಿಕೆಗಳು..... ಇವು ಕ್ಯಾಪ್ಟನ್‌ನಲ್ಲಿ ಇದ್ದಾಗ ಆಟದ ಸಾಧಾರಣ ಫರ್ಮಾರೆನ್ಸ್ ಕೂಡ ಕಳಪೆ ಆಟದಂತೆ ಅಭಿವ್ಯಕ್ತಿಸಲ್ಪಡುತ್ತದೆ. ಆರೋಪ, ಅವಗುಣಗಳೇ ದಾಖಲೆಗಳ ಜೊತೆ ಕ್ಯಾಫ್ಟನ್‌ನ ವ್ಯಕ್ತಿತ್ವಕ್ಕೆ ಅಂಟಿಕೊಂಡು ಉಳಿದು ಬಿಡಬಹುದು!!  ಮಾಡಿದ ಒಂದು ಸಾಧಾರಣ ದಾಖಲೆಯೂ ಮಾನ್ಯತೆ ಪಡೆಯದೇ ಹೋಗಬಹುದು.


ಇಷ್ಟಾದರೂ, ಕ್ಯಾಪ್ಟನ್‌ಶಿಪ್ ಮುಗಿಯುವ, ಅಥವಾ ಇನಿಂಗ್ಸ್ ಮುಗಿಯುವ ಹಂತದಲ್ಲಾದರೂ ಸಮಸ್ತ ಕ್ರೀಡಾಭಿಮಾನಿಗಳು ಮೆಚ್ಚುವಂತಹ ಆಟ ಅಥವಾ ಪರ್ಮಾರೆನ್ಸ್ ಅಥವಾ ಟೀಮ್‌ನ ಉತ್ತಮ ಆಡಳಿತ ನಿರ್ವಹಣೆ ಅಥವಾ ಸಮಸ್ತ ಕ್ರೀಡಾಭಿಮಾನಿಗಳು ಮೆಚ್ಚುವಂತಹ ಸದ್ಗುಣಗಳೊಂದಿಗೆ ಸಾಧನೆಗಳನ್ನು ಮಾಡಿದರೆ ಕ್ಯಾಫ್ಟನ್‌ನ ಅಥವಾ ಆಟಗಾರನ ಸಾಧಾರಣ  ದಾಖಲೆಯೂ ಮೌಲ್ಯ ಪಡೆಯಬಹುದು.


ಧನಾತ್ಮಕ ದೊಡ್ಡ ಸಾಧನೆಗಳು, ಸಾಧಾರಣ ದಾಖಲೆಗಳಿಗಿಂತ ಮೌಲ್ಯಯುತವಾದುದಾಗಿರುತ್ತವೆ.  


ಸಾಧನೆಗಳಿಲ್ಲದ ಸಾಧಾರಣ ದಾಖಲೆಗಳು ಇನ್ನೊಬ್ಬರಿಂದ ಮುರಿಯಲ್ಪಟ್ಟರೆ, ಮುರಿದವನ ದಾಖಲೆ ಮಾತ್ರ ಭವಿಷ್ಯದ ಇತಿಹಾಸದಲ್ಲಿ ಉಳಿಯುವುದು.  ಮೊದಲ ಸಾಧಾರಣ ದಾಖಲೆ ವೀರ ಭವಿಷ್ಯದ ಇತಿಹಾಸದಿಂದ ನೇಪಥ್ಯಕ್ಕೆ ಸರಿಯಬಹುದು.  


ಉತ್ತಮ ಕ್ಯಾಪ್ಟನ್ ಜನ ಮಾನಸದಲ್ಲಿ ಉಳಿಯುವುದು ಉತ್ತಮ ಸಾಧನೆಗಳಿಂದ, ಉತ್ತಮ ನಿರ್ವಹಣೆಗಳಿಂದ. ಉತ್ತಮ ಸಾಧನೆಗಳು ದಾಖಲೆಯೂ ಆಗುತ್ತವೆ, ಜನಮಾನಸದಲ್ಲಿ ಉಳಿಯುತ್ತವೆ, ಗ್ಯಾರಂಟಿಯಾಗಿ ಇತಿಹಾಸದಲ್ಲೂ ಇರುತ್ತವೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top