ಎದ್ದೇಳು ಗ್ರಾಹಕ ಎಚ್ಚರ!

Upayuktha
0


“ರೀ ರಾಧಾ  ಸ್ವಲ್ಪ ಇಲ್ಲಿ ಕೇಳಿಸಿಕೊಳ್ರಿ. ಮಾರ್ಕೆಟಲ್ಲಿ ನಮ್ಮ ಆ ಅಂಗಡೀಲಿ ಡಿಸ್‍ಕೌಂಟ್ ಸೇಲ್ ಇದೆಯಂತೆ. ಬನ್ರಿ 3 ಸೀರೆ ತಗೊಂಡ್ರೆ ಅದೇನೋ ಫ್ರೀ ಅಂತೆ” ಉತ್ಸಾಹದಿಂದ ಕೂಗಿದಳು ಲಕ್ಷ್ಮಿ. ಒಳಗಿನಿಂದ ಗಂಡ ನಾರಾಯಣ ಗೊಣಗಿದ. “ಅಯ್ಯೋ ಮಾರಾಯ್ತಿ. ಹೋದಸಲ ತಂದಿದ್ಯಲ್ಲ - ಒಂದು ಸೀರೆಗೆ ಒಂದು ಕರ್ಚೀಫ್ ಫ್ರೀ ಅಂತ. ಮೊದಲ ಸಲ ನೀರು ತಾಕಿಸಿದ ಕೂಡಲೇ, ಬಣ್ಣ ಬಣ್ಣದ ಸೀರೆ ಬಣ್ಣ ಕಳಕೊಂಡು, ಇತ್ಲಾಗೆ ಬಿಳಿ ಸೀರೇನೂ ಅಲ್ಲ, ಬಣ್ಣದ್ದೂ ಅಲ್ಲ, ಹರಕು-ಬರಕು ಬಣ್ಣದ್ದು ಸೀರೆ ಆಯ್ತು. ಇಷ್ಟು ಬೇಗ ಮರೆತುಬಿಟ್ಯಾ.” ಪ್ರಿಯ ಓದುಗರೇ, ಇದು ನಗರದ ಒಂದು ಮನೆಯ ಕಥೆ. ಬನ್ನಿ ಇನ್ನೊಂದು ಮನೆಗೆ ಇಣುಕೋಣ. ಇಲ್ಲಿ ತಾಜಾ ಬೆಣ್ಣೆ ಅಂತ, ಗಂಡ ತಂದ ಬೆಣ್ಣೆ ಕಲಬೆರಕೇದು. ಇನ್ನೊಂದು ಮನೆಯಲ್ಲಿ ಗಂಡ ಪೇಚಾಡ್ತಿದಾನೆ. ತಂದಿರೋ ಅರಿಶಿನಪುಡಿ, ಟೀ ಪುಡಿ ನೀರಲ್ಲಿ ಹಾಕಿದ ಕೂಡಲೇ ಬಣ್ಣ ಬಿಟ್ಟುಕೊಂಡು ವಿಚಿತ್ರ ಬಣ್ಣ ವಾಸನೆ ಕೊಟ್ತು. ಮಗದೊಂದು ಮನೆಯಲ್ಲಿ, ಪ್ರತಿ ತಿಂಗಳೂ ಕೇಬಲ್‍ನವನು ಬಂದು ಸೆಟಪ್ ಬಾಕ್ಸ್ ಮೂಲಕ ಕೊಡ್ತಿರೋ ಟಿ.ವಿ ಕಾರ್ಯಕ್ರಮಗಳಿಗೆ ತಿಂಗಳ ಚಾರ್ಜ್ ತಪ್ಪದೇ ವಸೂಲಿ ಮಾಡ್ತಾನೆ. ಆದರೆ ಪ್ರತಿನಿತ್ಯ ಬೇಕಾದ ಚಾನೆಲ್ ಬರೋಲ್ಲ, ಸ್ವಷ್ಟತೆ ಇರೋಲ್ಲ ಸೌಂಡ್ ಕ್ಲಿಯರ್ ಇರೋಲ್ಲ, ಗೊಣಕ್ತಿದಾನೆ ಶೀನ. ಸರಕಾರಿ ಆಸ್ವತ್ರೆ. ಹೊರಗಡೆಯಿಂದ ಔಷಧಿ ತಗೋಳ್ಳೋ ಹಾಗೆ ಚೀಟಿ ಬರೆದು ಕೊಡ್ತಿದ್ದಾರೆ ಡಾಕ್ಟರ್. 


ಈ ಅಂಗಡೀಲಿ ಬೆಣ್ಣೆಗೆ ಮೈದಾಹಿಟ್ಟು, ಮಾರ್ಗರಿನ್, ಸೇರಿಸಿದಾರೆ. ಬೆಣ್ಣೆ ಕಾಸಿದರೆ ತುಪ್ಪ ಗಮ್ ಅನ್ನೋದೇ ಇಲ್ಲ. ರಮಾ ಗೊಣಗ್ತಿದಾಳೆ “ಈಗೀಗ ಅಂಗಡಿಯಿಂದ ತಂದ ಮೆಣಸು ಖಾರವೇ ಇಲ್ಲ”. ಅವಳಿಗೆ ಹ್ಯಾಗೆ ಗೊತ್ತಾಗಬೇಕು, ಮೆಣಸಿನಲ್ಲಿ ಏನೇನೋ ಬೀಜ ಬೆರಸಿರ್ತಾಂತ. ಎಣ್ಣೇಲೂ ಕಲಬೆರಕೆ. ಟೀ ಪುಡಿ ತಂದ್ರೆ ಅದರಲ್ಲಿ ಕಟ್ಟಿಗೆ ಪುಡಿ ಬೆರೆಸಿರ್ತಾರೆ. ತರಕಾರೀಲಿ ತೂಕದ ಮೋಸ. ಬಸ್ಸಲ್ಲಿ ಚಿಲ್ಲರೆ ಕೊಡದೆ ಕಂಡಕ್ಟರಿಂದ ಮೋಸ. ರೇಶನ್ ಅಂಗಡೀಲಿ ಕೊಟ್ಟ ಅಕ್ಕಿ ಮುಗ್ಗುಲು. ಅಕ್ಕೀಲಿ  ಬಿಳಿ ಕಲ್ಲು, ಗೋಧೀಲಿ ಮಣ್ಣು ಹೆಂಟೆ, ಸಕ್ಕರೆ ಪುಡಿ. ಹೀಗೇ ಪಟ್ಟಿ ಮಾಡುತ್ತಾ, ಪ್ರತಿನಿತ್ಯ ಗ್ರಾಹಕರಾದ ನಾವು ಕೊಳ್ಳೋ ವಸ್ತುಗಳು ಹಾಗೂ ಸೇವೆಗಳಲ್ಲಿ ಅಪಾರ ಮೋಸ ಅನುಭವಿಸ್ತೀವಿ. ಆದರೆ ಗ್ರಾಹಕರಾದ ನಾವು ಬಹಳಷ್ಟು ಸಲ ನಮ್ಮ ಪಾಡಿಗೆ ನಾವು ಗೊಣಗಿಕೊಂಡು, ಅಂಗಡಿಯವನ್ನ ಅಥವಾ ಸಂಬಂಧಿಸಿದವನ್ನ ಬೈಕೊಂಡು ಸುಮ್ಮನಾಗಿಬಿಡ್ತೀವಿ. ನಮ್ಮ ರಕ್ಷಣೆಗಾಗಿ ಗ್ರಾಹಕ ರಕ್ಷಣಾ ಕಾಯ್ದೆ,  ಸಾರ್ವಜನಿಕ ವಿತರಣಾ ವ್ಯವಸ್ಥೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ತೂಕ ಮತ್ತು ಅಳತೆ ಇಲಾಖೆ, ಕಲಬೆರಕೆ ವಿರುದ್ಧ 1954ರಲ್ಲಿಯೇ ಆಗಿರುವ ಕಾನೂನು ಇವೆಲ್ಲ, ಗ್ರಾಹಕರಾದ ನಮ್ಮಲ್ಲಿ ಎಷ್ಟೋ ಜನಕ್ಕೆ  ಗೊತ್ತಿಲ್ಲ, ಗೊತ್ತಿದ್ದರೂ ಅವರಿಂದ ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕೆಂಬ ಕಾಳಜಿ ಇಲ್ಲ. ಈ ಹಿನ್ನೆಲೆಯಲ್ಲಿ  ಗ್ರಾಹಕ ರಕ್ಷಣೆಯ ಬಗ್ಗೆ ಕೆಲವು ವಿಚಾರಗಳನ್ನು ಈಗ ಗಮನಿಸೋಣವೇ.! 


1983ರಲ್ಲಿ ಮೊಟ್ಟಮೊದಲ ಬಾರಿ ವಿಶ್ವ ಗ್ರಾಹಕ ಹಕ್ಕುಗಳ ದಿನಾಚರಣೆ ಆಚರಿಸಲಾಯಿತು. ಈ ದಿನಕ್ಕೆ ಸಂಬಂಧಿಸಿದಂತೆ, ನಾವು ತಿನ್ನುವ ಆಹಾರ, ನಾವು ತೆಗೆದುಕೊಳ್ಳುವ ಔಷಧಿ, ನಮ್ಮ ಮನೆಗಳಲ್ಲಿ ಬಳಸುವ ಉತ್ಪನ್ನಗಳು, ಒಟ್ಟಿನಲ್ಲಿ ನಾವು ಪ್ರತಿನಿತ್ಯ ಬಳಸುವ ವಸ್ತುಗಳನ್ನು ಗಮನಿಸಿ. ಗ್ರಾಹಕರ ಆವಶ್ಯಕತೆಗಳನ್ನು ಪೂರೈಸುವಾಗ, ಈ ಎಲ್ಲ ವಸ್ತುಗಳೂ ನೈತಿಕವಾಗಿ ಹಾಗೂ ಪ್ರಾಮಾಣಿಕವಾಗಿ ಸಿದ್ಧವಾಗಬೇಕಾಗಿದೆ. ವಿಶ್ವದಾದ್ಯಂತ ಮರಣದ 10 ಮುಖ್ಯ ಕಾರಣಗಳಲ್ಲಿ, 4 ಕಾರಣಗಳು ಅನಾರೋಗ್ಯಕರ ಆಹಾರ ಬಳಕೆಗೆ ಸಂಬಂಧಿಸಿವೆ. ಅವು ಹೆಚ್ಚು ತೂಕ ಹಾಗೂ ಸ್ಥೂಲಕಾಯತೆ, ಹೆಚ್ಚಿನ ರಕ್ತದೊತ್ತಡ, ರಕ್ತದಲ್ಲಿ ಹೆಚ್ಚಿನ ಗ್ಲುಕೋಸ್ ಹಾಗೂ ಕೊಲೆಸ್ಟರಾಲ್. ಎಲ್ಲ ಗ್ರಾಹಕರ ಹಕ್ಕು ಕೇವಲ ಆಹಾರವಲ್ಲ, ಆರೋಗ್ಯಕರ ಆಹಾರ. ಮಧುಮೇಹ ಹೃದಯರೋಗ ಹಾಗೂ ಕೆಲವು ತರಹದ ಕ್ಯಾನ್ಸರ್‍ಗಳು, ವಿಶ್ವ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸವಾಲುಗಳಾಗಿವೆ. 


ಈ ದೇಶದಲ್ಲಿ ಗ್ರಾಹಕರ ಶೋಷಣೆ ವಿರುದ್ಧ ಹೋರಾಟ ಕೌಟಿಲ್ಯ ಹಾಗೂ ನಾರದರ ಕಾಲದಿಂದ ಗ್ರಾಹಕ ಚಳುವಳಿ ಅರಂಭವಾಗಿದೆ ನಮ್ಮ ದೇಶದಲ್ಲಿ  ಪ್ರತೀ ವರ್ಷ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ದಿನಾಚರಣೆ  ಆಚರಿಸುತ್ತೇವೆ. ಈ ದಿನ  ಗ್ರಾಹಕ ರಕ್ಷಣಾ ಕಾಯಿದೆ 1986ರಲ್ಲಿ ರಾಷ್ಟ್ರಾಧ್ಯಕ್ಷರಿಂದ ಅಂಗೀಕಾರವಾದ ದಿನ. ಗ್ರಾಹಕ ಚಳುವಳಿಯ ಮಹತ್ವ ಹಾಗೂ ಎಲ್ಲ ಗ್ರಾಹಕರ ಮೂಲಭೂತ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ, ಎಲ್ಲ ವ್ಯಕ್ತಿಗಳಿಗೂ ಅರಿವು ನೀಡುವ ಉದ್ದೇಶ ಈ ದಿನಾಚರಣೆಯದ್ದು. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವಾಲಯದಡಿ, ಗ್ರಾಹಕ ವ್ಯವಹಾರಗಳ ಇಲಾಖೆ ಈ ದಿನಾಚರಣೆ ಆಯೋಜಿಸುತ್ತದೆ. 1986ರ ಗ್ರಾಹಕ ರಕ್ಷಣಾ ಕಾಯಿದೆ ವಿವಿಧ ರೀತಿಯ ಶೋಷಣೆಗಳಾದ ಕಲುಷಿತ ಆಹಾರ, ಅತೃಪ್ತಿಕರ ಸೇವೆಗಳು, ಹಾಗೂ ಅನ್ಯಾಯದ ವ್ಯಾಪಾರ ರೂಢಿಗಳ ವಿರುದ್ಧ, ನಾಗರಿಕರಿಗೆ ಪರಿಣಾಮಕಾರಿ ಸುರಕ್ಷತೆ  ನೀಡುತ್ತದೆ. ಇದು ಗ್ರಾಹಕರಿಗೆ ಅತ್ಯಂತ ವೇಗದಲ್ಲಿ, ಕಡಿಮೆ ಖರ್ಚಿನಲ್ಲಿ ತೊಂದರೆಯ ನಿವಾರಣಾ ಯಾಂತ್ರಿಕ ವ್ಯವಸ್ಥೆಯಾಗಿದ್ದು, ನಿಗದಿತ ಪರಿಹಾರ ಅಥವಾ ನಷ್ಟ ಪರಿಹಾರ ಒದಗಿಸುತ್ತದೆ. 


ಈ ಕಾಯಿದೆ ವಿಶ್ವಸಂಸ್ಥೆಯ ಸನ್ನದಿನ 8 ಹಕ್ಕುಗಳಲ್ಲಿ ಗ್ರಾಹಕರ 6 ಹಕ್ಕುಗಳನ್ನು ಮಾನ್ಯ ಮಾಡಿದೆ. ಅವು ರಕ್ಷಣಾ ಹಕ್ಕು, ಮಾಹಿತಿಯ ಹಕ್ಕು, ಆಯ್ಕೆಯ ಹಕ್ಕು, ಆಲಿಸುವಿಕೆ ಹಕ್ಕು, ಪರಿಹಾರದ ಹಕ್ಕು ಹಾಗೂ ಶಿಕ್ಷಣದ ಹಕ್ಕು. ಗ್ರಾಹಕ ರಕ್ಷಣೆ ಬಗೆಗಿನ ಇತ್ತೀಚಿನ ಅಂತರ್‍ರಾಷ್ಟ್ರೀಯ ಸಮಾವೇಷದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದು “ಹೊಸ ಗ್ರಾಹಕ ರಕ್ಷಣಾ ಕಾನೂನು ಬರಲಿದ್ದು, ಅದು ದಿಕ್ಕು ತಪ್ಪಿಸುವ ಜಾಹೀರಾತುಗಳನ್ನು ಉರುಳಿಸಿ, ಪರಿಹಾರ ವ್ಯವಸ್ಥೆಯನ್ನು ಸರಳೀಕರಿಸಲಿದೆ. ವೈದಿಕ ಕಾಲದಲ್ಲೂ 2500 ವರ್ಷಗಳ ಕೆಳಗೆ, ಗ್ರಾಹಕ ಶಿಕ್ಷಣ ಸಂಪ್ರದಾಯಗಳು, ಅನೈತಿಕ ವ್ಯಾಪಾರ ಪದ್ಧತಿಗಳು ಹಾಗೂ ಕಲುಷಿತ ವಸ್ತುಗಳ ಬಗ್ಗೆ ಕಾನೂನುಗಳಂತಿದ್ದವು. ದೀರ್ಘ ಕಾಲದಲ್ಲಿ ಜಿ.ಎಸ್.ಟಿ ಗ್ರಾಹಕರಿಗೆ ಲಾಭ ತರಲಿದೆ. ಮನೆ ಕೊಳ್ಳುವವರನ್ನು ಕಟ್ಟಡ ಕಟ್ಟುವವರ ಏಕಸ್ವಾಮ್ಯತೆಯಿಂದ ಸ್ಥಿರಾಸ್ತಿ ನಿಯಂತ್ರಣಾ ಕಾಯಿದೆ ರಕ್ಷಿಸಲಿದೆ”. 


ಗ್ರಾಹಕ ಹಕ್ಕುಗಳ ರಕ್ಷಣೆಯಲ್ಲಿ ನಮ್ಮ ಅನುಭವ:- ನನ್ನ ಪತಿ ಎನ್.ವ್ಹಿ.ರಮೇಶ್ ಅವರು ಆಕಾಶವಾಣಿಯಲ್ಲಿ  ಕಾರ್ಯಕ್ರಮ ನಿರ್ವಾಹಕರಾಗಿದ್ದಾಗ, ಗ್ರಾಹಕ ರಕ್ಷಣೆ, ಗ್ರಾಹಕ ರಕ್ಷಣಾ ಕಾಯಿದೆ ಬಗ್ಗೆ, ನೂರಾರು ಭಾಷಣ, ಸಂದರ್ಶನ, ರೂಪಕ, ನಾಟಕಗಳನ್ನು ಬಾನುಲಿ ಮಾಲಿಕೆ ಮೂಲಕ  ಪ್ರಸ್ತುತಪಡಿಸಿದ್ದರು. ಭದ್ರಾವತಿ, ಶಿವಮೊಗ್ಗ, ರಾಯಚೂರು ಹಾಗೂ ವಿಜಯಪುರಗಳಲ್ಲಿ ರಂಗಭೂಮಿಗಾಗಿ ಎಚ್ಚರ ಗ್ರಾಹಕ ಎಚ್ಚರ! ನಾಟಕ ರಚಿಸಿ, ಅದರ 50 ಪ್ರಯೋಗ ಮಾಡಿದ್ದರು. ಅವುಗಳಲ್ಲಿ ಅನೇಕ ಬಾರಿ ನಾನು ಅಭಿನಯಿಸಿದ್ದ ಹಿನ್ನೆಲೆಯಲ್ಲಿ ಸ್ಮರಿಸುವುದಾದರೆ. ಕಂತುಗಳಲ್ಲಿ ಸಿಗುವ ಬಟ್ಟೆ, ಒಂದಕ್ಕೆ ಒಂದು ಉಚಿತ ಎಂಬ ಜಾಹೀರಾತು, ದರದಲ್ಲಿ ಕಡಿತ, ಸೋವಿ ಮಾರಾಟ ಎಂಬ ಫಲಕಗಳು, ಬೆಲೆ ಕಡಿಮೆ, ರಶೀದಿ ಬೇಡವೆಂದರೆ ಕರವಿಲ್ಲ, ಸ್ವಲ್ಪ ಕಡಿಮೆ ದರ... ಈ ರೀತಿಯ ಮರುಳು ಮಾಡುವಿಕೆಯಿಂದ, ನೂರಾರು ಗ್ರಾಹಕರು, ಪ್ರತಿನಿತ್ಯ ಮೋಸ ಹೋಗುತ್ತಿದ್ದಾರೆ. ಕಾಣಿಕೆ ಅಂತ ಕೊಡುವ ಚಮಚಾ, ಕರವಸ್ತ್ರ, ಪೆನ್‍ಗಳು, ಒಂದನ್ನು ಕೊಂಡರೆ ಇನ್ನೊಂದು ಉಚಿತ ಎಂಬ ತಳ್ಳುವರಿ ಮಾರಾಟ, ಗ್ರಾಹಕರನ್ನು, ವಿಶೇಷವಾಗಿ ಮಹಿಳೆಯರನ್ನು, ಬಡವರನ್ನು, ಆಕರ್ಷಿಸುವ ತಂತ್ರಗಳಷ್ಟೇ. ಯಾರಾದರೂ ಲಾಭವಿಲ್ಲದೇ, ನಷ್ಟ ಮಾಡಿಕೊಂದು ಮಾರಾಟ ಮಾಡುತ್ತಾರೆಯೇ, ಯೋಚಿಸಿ. ಭಾವನೆಗಳನ್ನು ಜಾಗೃತಗೊಳಿಸಿ ಕರೆವ ಚುಂಬಕತತ್ವವನ್ನು, ಯಾಕೆ? ಏನು? ಎಷ್ಟು? ಹೇಗೆ? ಎಂಬ ಪ್ರಶ್ನೆ ಕೇಳುವ ವೈಚಾರಿಕತೆ, ದೂರ ಮಾಡುತ್ತದೆ. ಯಾವುದೇ ವಸ್ತು ಕೊಳ್ಳುವಾಗ ಅದರ ಎಮ್.ಆರ್.ಪಿ, ತೂಕ, ಗುಣಮಟ್ಟ, ಬಳಸಲು ಕೊನೆಯ ದಿನಾಂಕ, ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷಿಸಿ. ಏನೇ ಕೊಂಡರೂ ಸರಿಯಾದ ಮುದ್ರಿತ ರಸೀದಿ ಪಡೆಯಲು ಮರೆಯಬೇಡಿ. ಸರಕಾರಕ್ಕೆ ಕರತಪ್ಪಿಸಿ, ನಿಮಗೆ ಬೆಲೆ ಸ್ವಲ್ಪ ಕಡಿಮೆ ಯಾಯಿತೆಂದು ಹಿಗ್ಗಬೇಡಿ. ವಸ್ತು, ಸೇವೆ, ದೋಷಪೂರಿತವಾಗಿದ್ದಲ್ಲಿ, ಮುಂದೆ ನೀವು ಯಾವುದೇ ರೀತಿ ಕಾನೂನಿನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿ ಗ್ರಾಹಕರೇ. ಗ್ರಾಹಕ ಹಾಗೂ ಆಹಾರ ಕಲುಷಿತತನ - ಕಲಬೆರಕೆ: ಹಿಂದೆಲ್ಲಾ ಜನರು ಮನೆಯಲ್ಲೇ ವೈವಿಧ್ಯಮಯ ಅಡುಗೆಗಳನ್ನು ಮಾಡುತ್ತಿದ್ದುದರಿಂದ ಅವು ತಾಜಾ, ಸ್ವಚ್ಛ ಹಾಗೂ ಆರೋಗ್ಯಕರ ವಾಗಿದ್ದವು. ಈಗ ಪ್ರತಿಯೊಬ್ಬರೂ ಅವರವರ ಕಾರ್ಯಗಳಲ್ಲಿ ಸತತ ಮಗ್ನವಾಗಿರುವುದರಿಂದ, ಮನೆಯಲ್ಲೇ ಅಡುಗೆ ಮಾಡಲು ಸಮಯದ ಕೊರತೆ ಇದ್ದು, ಹೊರಗಡೆ ಸಿದ್ಧವಾದ ಆಹಾರ ಪದಾರ್ಥಗಳ ಮೇಲೆ ಅವಲಂಬಿಸಬೇಕಾಗುತ್ತದೆ. 


ಈ ಆಹಾರ ಪದಾರ್ಥಗಳನ್ನು ದೀರ್ಘಕಾಲ ಒಳ್ಳೆಯ ಸ್ಥಿತಿಯಲ್ಲಿ ಇಡಬೇಕಾದುದರಿಂದ ಅವುಗಳಿಗೆ ಸಂರಕ್ಷಕಗಳನ್ನು ಬಳಸುತ್ತಿದ್ದಾರೆ. ಇವು ನಿಜವಾಗಿಯೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಮಾಡುವ ಹಾನಿಕಾರಕಗಳಾಗಿವೆ. ಸಧ್ಯ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಆಹಾರ ಪದಾರ್ಥಗಳಲ್ಲೂ ಒಂದಲ್ಲ ಒಂದು ತರಹದ ಕಲುಷಿತತೆ ಇದ್ದು, ಆಹಾರದ ಪೌಷ್ಠಿಕ ಮೌಲ್ಯ ಕಡಿಮೆಯಾಗಿ ವಿವಿಧ ತರಹದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಆಹಾರ ಪದಾರ್ಥಗಳಿಗೆ ಅನೇಕ ಖನಿಜ ತೈಲಗಳನ್ನೂ ಬೆರೆಸಿದರೆ ಇದರಿಂದ ಪಾಶ್ರ್ವವಾಯು ಹಾಗೂ ಕ್ಯಾನ್ಸರ್ ಬರುತ್ತವೆ. ಗರ್ಭಿಣಿಯರು ಇಂಥ ಆಹಾರ ಪದಾರ್ಥಗಳನ್ನು ತಿಂದರೆ ಗರ್ಭಪಾತ ಅಥವಾ ಮಗುವಿನ ಮೆದುಳಿನ ನಾಶ ಆಗುತ್ತದೆ. ಕೆಲವೊಮ್ಮೆ ಸತುವಿನ ಉಳಿಕೆಗಳಿಂದ ವಾಂತಿ ಪ್ರಾರಂಭವಾಗಿ ಅತಿಸಾರಕ್ಕೆ ಅದು ಮುಂದುವರೆಯಬಹುದು. ಆಹಾರ ಪದಾರ್ಥಗಳಿಗೆ ಸೇರಿಸುವ ಬಣ್ಣಗಳು ಯಕೃತ್ ಹಾಳಾಗಲು, ಅಲರ್ಜಿ ಹಾಗಲು ಕಾರಣೀ ಭೂತವಾಗುತ್ತವೆ. ಸಿದ್ಧವಸ್ತುಗಳನ್ನು ಅಥವಾ ಡಬ್ಬಿಗಳಲ್ಲಿ ತುಂಬಿರುವ ಆಹಾರ ಪದಾರ್ಥಗಳಿಗೆ ಬಳಸಿದ ಕಚ್ಚಾವಸ್ತುಗಳು ಕಡಿಮೆ ಗುಣಮಟ್ಟದ್ದಾಗಿದ್ದು ಅವು ಕ್ರಮೇಣ ಪೌಷ್ಠಿಕತೆ, ರುಚಿ ಕಳೆದುಕೊಳ್ಳುತ್ತವೆ. ಸರಿಯಾಗಿ ಪುಡಿಕೆ ಕಟ್ಟದಿದ್ದರೆ ಆಹಾರದಲ್ಲಿ ಕೀಟ ನಾಶಕ ಅಥವಾ ಕ್ರಿಮಿನಾಶಕಗಳು ಸೇರಿದರೆ ಕಲುಷಿತತೆ ಹೆಚ್ಚುತ್ತವೆ. 


ಹೀಗಾಗಿ ಅಡುಗೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಬೇಕು. ಮೀನುಗಳು, ಹಣ್ಣುಗಳು, ಮಾಂಸ ಹಾಗೂ ಹಾಲು ಇವುಗಳ ಮೇಲೆ ಹಚ್ಚುವ ಫಾರ್ಮಾಲಿನ್ ಎಂಬ ರಾಸಾಯನಿಕವು ವಿಷಪೂರಿತವಾದುದು. ಇದರಿಂದ ವಿವಿಧ ರೀತಿಯ ಕ್ಯಾನ್ಸರ್‍ಗಳು, ಅಸ್ಥಮಾ ಹಾಗೂ ಚರ್ಮ ಕಾಹಿಲೆಗಳು ಬರುತ್ತವೆ. ಬಳಸಿದ ಬಣ್ಣಗಳು, ಕ್ಯಾಲ್ಸಿಯಂ ಕಾರ್ಬೈಡ್, ಯೂರಿಯಾ, ಬ್ರಂಟ್ ಇಂಜಿನ್ ತೈಲ ಹಾಗೂ ಕೆಲವು ಸಂರಕ್ಷಕಗಳನ್ನು ಹೆಚ್ಚಾಗಿ ಬಳಸಿದರೆ ಮಾನವ ದೇಹದ ಬಹು ಅಂಗಗಳ ಮೇಲೆ ಇವು ಪರಿಣಾಮ ಬೀರುತ್ತವೆ. ಇದರಿಂದ ದೊಡ್ಡ ಕರುಳಿನ ಹಿಂಭಾಗದ ಜೀವಕಣದ ಕ್ಯಾನ್ಸರ್, ಜಠರ ಅಥವಾ ಕಿಬ್ಬೊಟ್ಟೆಯ ಹುಣ್ಣು, ಭೀಕರ ಯಕೃತ್ತಿನ ಕಾಹಿಲೆಗಳಾದ ಸಿರ್ಹೋಸಿಸ್ ಅಥವಾ ಯಕೃತ್ತಿನ ನಾಶ, ಎಲೆಕ್ಟ್ರೋಲೈಟ್ ಅಸಮತೋಲನ ಹಾಗೂ ಮೂತ್ರಪಿಂಡ ನಾಶ ಸಂಭವಿಸುತ್ತದೆ. ಹೃದಯ ಬೇನೆಗಳು, ರಕ್ತದ ಅವ್ಯವಸ್ಥೆ ಹಾಗೂ ಅಸ್ತಿಮಜ್ಜೆಯ ಅಸಾಮಾನ್ಯ ಸ್ಥಿತಿಗಳನ್ನೂ ಪತ್ತೆ ಹಚ್ಚಲಾಗಿದೆ. ಪ್ರಾಣಾಪಾಯ ಹೆಚ್ಚುತ್ತವೆ. ನರ ವ್ಯವಸ್ಥೆಯ ನಾಶ ಅಥವಾ ಮೆದುಳಿನ ಕಾರ್ಯದ ಅವ್ಯವಸ್ಥೆ ಇವುಗಳ ಸಂಭವವಿರುತ್ತದೆ. ಈ ಪರಿಸ್ಥಿತಿಯಲ್ಲಿ ನಾವೆಲ್ಲ ಒಟ್ಟಾಗಿ ಕಲಬೆರಕೆಯ ಕೆಟ್ಟ ಪರಿಣಾಮಗಳ ಬಗ್ಗೆ ಹೋರಾಡಬೇಕಿದೆ. 


ವ್ಯಾಪಾರ ಹಾಗೂ ವಾಣಿಜ್ಯಗಳಲ್ಲಿ ಕಲಬೆರಕೆ ಆಹಾರ ಮಾರುವಾಗ ಮಾರಾಟಗಾರರಿಗೆ ಹೆಚ್ಚಿನ ಲಾಭದ ಕಡೆಗೆ ಮಾತ್ರ ಗಮನವಿರುತ್ತದೆ. ಸೇಬು ಹಣ್ಣು ಹೊಳೆಯಲು ಅದಕ್ಕೆ ಮೇಣದ ಲೇಪನ ಮಾಡುತ್ತಾರೆ. ಹಣ್ಣಿನೊಳಗೆ ಪೌಷ್ಠಿಕತೆ ಇದ್ದರೂ ಮೇಲಿನ ಲೇಪನ ಆರೋಗ್ಯ ಹಾಳು ಮಾಡುತ್ತವೆ. ಆಹಾರ ಕಲಬೆರಕೆ ದೇಹದ ಮೇಲೆ ವಿವಿಧ ರೀತಿಯ ರೋಗಗಳ ಮೂಲಕ ನಿಧಾನ ಪರಿಣಾಮ ಬೀರುತ್ತದೆ. ಪ್ರತಿಬಾರಿ ಆಹಾರ ನೈರ್ಮಲ್ಯ ಕಾಪಾಡುವಲ್ಲಿ ನಾವು ಸೋಲುತ್ತೇವೆ. ಇಂದು ಜನರಿಗೆ ಸಮಯಾಭಾವ ಇರುವುದರಿಂದ ಕಚ್ಚಾ ಪದಾರ್ಥಗಳನ್ನು ಸ್ವಚ್ಛ ಮಾಡಿ ಅಡುಗೆ ಮಾಡಲು ಸಾಕಷ್ಟು ಪ್ರಯತ್ನ ಜನ ಮಾಡುವುದಿಲ್ಲ. ಸುಲಭವಾಗಿ ದಿಢೀರ್ ಆಹಾರ ಸಿಗುವುದರಿಂದ, ವೈದ್ಯರ ಬಳಿ ಓಡಬೇಕಾಗುತ್ತದೆ. ಆಹಾರ ಸರಪಳಿಯಲ್ಲಿ ಇರುವ ಪ್ರತಿಯೊಬ್ಬರಿಂದ ಆಹಾರ ಸುರಕ್ಷಕತೆ ರಕ್ಷಿಸಲ್ಪಡಬೇಕಾಗುತ್ತದೆ. ಹಾಲಿಗೆ ನೀರು ಬೆರಸುವುದು, ಮಸಾಲೆ ಪದಾರ್ಥಗಳಿಗೆ ಏನೇನೋ ಕಣ ಬೆರಸುವುದು, ಇವುಗಳನ್ನು ಬೇಕುಬೇಕೆಂದೇ ಮಾರಾಟಗಾರರು ಮಾಡುತ್ತಾರೆ. ಸ್ವಾಭಾವಿಕ ಹಾಲಿನಿಂದ ಅದರ ಗಟ್ಟಿ ಭಾಗವನ್ನು ತೆಗೆದುಬಿಡುವುದು, ಅರಿಶಿನ ಪುಡಿ ಹಾಗೂ ಮಸಾಲೆ ಪದಾರ್ಥಗಳಲ್ಲಿ ಬೆರಸುವ ಸೀಸದ ಕ್ರೋಮೇಟ್, ರಕ್ತಹೀನತೆ, ಪಾಶ್ರ್ವವಾಯು, ಮೆದುಳು ನಾಶ ಹಾಗೂ ಗರ್ಭಪಾತ ಉಂಟು ಮಾಡಬಹುದು. 


ನೀರಿಗೆ ಸೀಸ ಬೆರೆತರೆ ಸ್ವಾಭಾವಿಕ ಹಾಗೂ ಸಂಸ್ಕರಿಸಿದ ಆಹಾರದಲ್ಲಿ ಸೀಸ ವಿಷ ಬೆರಕೆಯಾಗುತ್ತದೆ. ಇದರಿಂದ ಪಾದ ಕುಸಿತ, ನಿದ್ರಾಹೀನತೆ, ಮಲಬದ್ಧತೆ, ರಕ್ತಹೀನತೆ ಹಾಗೂ ಮಾನಸಿಕ ತೊಂದರೆ ಉಂಟಾಗುತ್ತದೆ. ನೀರು ಹಾಗೂ ಮಧ್ಯದಲ್ಲಿ ಬೆರಸಲಾಗುವ ಕೋಬಾಲ್ಟ್‍ನಿಂದ ಹೃದಯ ಹಾಳಾಗಬಹುದು. ತಾಮ್ರ, ತವರ ಹಾಗೂ ಸತುವು ವಾಂತಿ ಹಾಗ ಭೇದಿ ಉಂಟು ಮಾಡುತ್ತವೆ. ಪಾದರಸ ಸೇವೆ ದೊರೆತ ಧಾನ್ಯಗಳು ಹಾಗೂ ಮೀನು, ಮೆದುಳು ನಾಶ, ಪಾಶ್ರ್ವವಾಯು ಹಾಗೂ ಮರಣ ತರಬಹುದು. ಪರವಾನಿಗೆ ಇಲ್ಲದ ಬಣ್ಣಗಳು ಅಥವಾ ಪರವಾನಿಗೆ ಇದ್ದರೂ ಸುರಕ್ಷಿತ ಮಿತಿ ದಾಟಿದ ಮೆಟಾನಿಲ್ ಹಳದಿ ಬಣ್ಣ, ಅಲರ್ಜಿ, ರಕ್ತಹೀನತೆ, ಭಂಜೆತನ, ಯಕೃತ್ತಿನ ನಾಶ, ಜನನ ದೋಷ ಉಂಟುಮಾಡುತ್ತವೆ.  


1954ರಿಂದ ಕಲಬೆರಕೆಯ ವಿರುದ್ಧ ಭಾರತ ಸರಕಾರ ಅನೇಕ ಕಾನೂನುಗಳನ್ನು ಮಾಡಿದ್ದರೂ ಗ್ರಾಹಕರ ಸಂಪೂರ್ಣ ರಕ್ಷಣೆ ಇನ್ನೂ ಸಾಧ್ಯವಾಗಿಲ್ಲ. ಇರುವ ಕಾನೂನುಗಳನ್ನು ಬಲಪಡಿಸಲು 2006ರಲ್ಲಿ ಆಹಾರ ಸುರಕ್ಷತೆ ಹಾಗೂ ಪ್ರಮಾಣಿತ ಕಾಯ್ದೆ ತರಲಾಯಿತು. ಇದರಿಂದ ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಪ್ರಮಾಣಗಳನ್ನು ನಿಗದಿಪಡಿಸಲಾಗಿದೆ. ಉತ್ಪಾದನೆ, ಸಂಗ್ರಹ, ಹಂಚಿಕೆ, ಮಾರಾಟ ಹಾಗೂ ಆಮದುಗಳಲ್ಲಿ ನಿಯಮಗಳನ್ನು ಹಾಕಲಾಗಿವೆ. ಮಾನವ ಬಳಕೆಗೆ ಲಭ್ಯವಿರುವ ಸುರಕ್ಷಿತ ಆಹಾರದ ಪ್ರಮಾಣದ ಬಗ್ಗೆ ವಿವರ ಕೊಡಲೇಬೇಕಾಗಿದೆ. 48ರಿಂದ 67ನೇ ಸೆಕ್ಷನ್‍ಗಳು, ಅಪರಾಧಗಳಿಗೆ ವಿಧಿಸುವ ದಂಡವನ್ನು 5 ಲಕ್ಷ ರೂಪಾಯಿಗಳವರೆಗೆ ಏರಿಸಿದೆ. ಬ್ರ್ಯಾಂಡ್ ಅಲ್ಲದ, ಅವುಗಳನ್ನು ನಕಲು ಮಾಡುವವರಿಗೆ 3 ಲಕ್ಷ ಹಾಗೂ ತಪ್ಪು ದಾರಿ ಹಿಡಿಸುವ ಜಾಹೀರಾತುಗಳಿಗೆ 10 ಲಕ್ಷ ವಿಧಿಸಲಾಗಿದೆ. ಆಹಾರದ ಕಲಬೆರಕೆಯ ಜೊತೆಗೆ ತೂಕ ಹಾಗೂ ಅಳತೆಯ ಮೋಸವಂತೂ ಸರ್ವವ್ಯಾಪಕವಾಗಿದೆ. ನಮಗೆ ಸಮಯವಿಲ್ಲ ಹಾಗೂ ಕಾನೂನಿನ ಅರಿವಿಲ್ಲ. ನಮ್ಮ ಅಜ್ಞಾನವೇ ವ್ಯಾಪಾರಿಗಳ ವ್ಯವಹಾರದ ಮೂಲಧನ. ಇವುಗಳ ಬಗ್ಗೆ ನಮ್ಮ ಗ್ರಾಹಕರು ಎಲ್ಲಿಯವರೆಗೆ ತಿಳಿದುಕೊಂಡು, ನಮ್ಮ ನಮ್ಮ ರಕ್ಷಣೆ ನಮ್ಮದೇ ಜವಾಬ್ದಾರಿ ಎಂದು ನಿರ್ಧರಿಸುವುದಿಲ್ಲವೋ ಅದುವರೆಗೆ ನಾವು ಕುರಿಗಳಂತೆ ಗುಂಪಾಗಿ ಹಳ್ಳಕ್ಕೆ ಬೀಳುವುದು ತಪ್ಪದು.


-ಎನ್.ವಿ. ರಮೇಶ್ 

ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು

ಆಕಾಶವಾಣಿ

ಮೊ: 98455 65238


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top