ಇಂದಿನ ಕಾಲಘಟ್ಟದಲ್ಲಿ ನಮ್ಮ ಬದುಕು ಎಷ್ಟು ವಿಚಿತ್ರವಾಗಿದೆ ಎಂದರೆ, ನಮ್ಮ ಕೈಯಲ್ಲಿ ‘ಅನ್‌ಲಿಮಿಟೆಡ್ ಡೇಟಾ’ ಇದೆ ಎಂಬ ಕಾರಣಕ್ಕೆ ನಾವು ‘ಲಿಮಿಟೆಡ್ ಲೈಫು’ ಎನ್ನುವ ಕಟು ಸತ್ಯವನ್ನೇ ಮರೆತುಬಿಟ್ಟಿದ್ದೇವೆ. ಬೆಳಿಗ್ಗೆ ಕಣ್ಣು ಬಿಟ್ಟ ತಕ್ಷಣ ಕಿಟಕಿಯಿಂದ ಇಣುಕುವ ಸೂರ್ಯನ ಕಿರಣಗಳನ್ನು ಸವಿಯುವ ಬದಲು, ನಮ್ಮ ಬೆರಳುಗಳು ಮೊದಲು ಹುಡುಕುವುದು ಸ್ಮಾರ್ಟ್‌ಫೋನ್‌ನ ನೋಟಿಫಿಕೇಶನ್‌ಗಳನ್ನು. ಈ ಅಲ್ಪ ಅವಧಿಯ ಬದುಕಿನಲ್ಲಿ ನಾವು ಪ್ರದರ್ಶಿಸುವ ಬಿಲ್ಡಪ್‌ಗಳು, ತೋರಿಕೆಗಳು ಒಂದೆರಡಲ್ಲ. ಈ ಭೂಮಿಯ ಮೇಲೆ ನಾವು ಇರುವುದು ಕೆಲವೇ ದಿನಗಳ ಅತಿಥಿಗಳಾಗಿ ಮಾತ್ರ ಎಂಬ ಅರಿವಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ನಾವು ತೋರಿಸುವ ಹಮ್ಮು-ಗೆಮ್ಮುಗಳನ್ನು ನೋಡಿದರೆ ಸಾಕ್ಷಾತ್ ದೇವಲೋಕದ ಅಧಿಪತಿಗಳೇ ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತದೆ. ಈ ವರ್ಚುವಲ್ ಪ್ರಪಂಚ ನಮ್ಮನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ, ನೈಜ ಸಂಬಂಧಗಳಿಗಿಂತ ವರ್ಚುವಲ್ ಮೆಚ್ಚುಗೆಯೇ ನಮಗೆ ಬದುಕಿನ ಅತೀ ದೊಡ್ಡ ಸಾಧನೆಯಾಗಿ ಕಾಣಿಸುತ್ತಿದೆ.
ಈಗಿನ ಯುವಜನತೆಯನ್ನು ಕಾಡುತ್ತಿರುವ ಅತೀ ದೊಡ್ಡ ಮಾನಸಿಕ ಪಿಡುಗು ಎಂದರೆ ಅದು ‘ಫೋಮೋ’ (FOMO- Fear Of Missing Out). ಯಾರೋ ಒಬ್ಬರು ಪ್ರವಾಸಕ್ಕೆ ಹೋದರೆ ಅಥವಾ ಹೊಸ ವಸ್ತುವನ್ನು ಕೊಂಡರೆ, ಅದನ್ನು ನೋಡಿದ ತಕ್ಷಣ ಇಲ್ಲಿ ನಮಗೆ ಅತೃಪ್ತಿ ಶುರುವಾಗುತ್ತದೆ. "ನನ್ನ ಹತ್ತಿರ ಅದು ಯಾಕಿಲ್ಲ?" ಎನ್ನುವ ಪ್ರಶ್ನೆ ಮನಸ್ಸನ್ನು ಕೊರೆಯಲು ಆರಂಭಿಸುತ್ತದೆ. ಆದರೆ ನೆನಪಿರಲಿ, ಅಸೂಯೆ ಎನ್ನುವುದು ನಿಮ್ಮ ಫೋನಿನ ಬ್ಯಾಟರಿ ತರಹ; ಅದು ನಿಮ್ಮ ಒಳಗಿನ ಸೌಮ್ಯತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಪೂರ್ತಿ ಡ್ರೈನ್ ಮಾಡಿಬಿಡುತ್ತದೆ. ಅದರ ಬದಲು, ಬೇರೆಯವರ ಏಳಿಗೆಯನ್ನು ಕಂಡು "ಅದ್ಭುತವಾಗಿ ಕಾಣುತ್ತಿದ್ದೀಯಾ, ನಿನಗೆ ಒಳ್ಳೆಯದಾಗಲಿ" ಎಂದು ಮನಸಾರೆ ಹಾರೈಸಿ ನೋಡಿ, ನಿಮ್ಮ ಮನಸ್ಸಿನ ಒಳಗಿರುವ ದ್ವೇಷ ಕರಗಿ ಶಾಂತಿ ನೆಲೆಸುತ್ತದೆ. ಇನ್ನೊಬ್ಬರ ಸಂತೋಷದಲ್ಲಿ ನಮ್ಮ ಸುಖವನ್ನು ಕಂಡುಕೊಳ್ಳುವುದು ನಿಜವಾದ ಮನುಷ್ಯತ್ವ.
ಬದುಕು ಎಂಬುದು ಒಂದು ಸುಂದರವಾದ ‘ಬಫೆ ಸಿಸ್ಟಮ್’ ಇದ್ದ ಹಾಗೆ. ಇಲ್ಲಿ ನೂರಾರು ಬಗೆಯ ಅನುಭವಗಳಿವೆ, ಸಂಬಂಧಗಳಿವೆ. ನಮಗೆ ಸಿಕ್ಕಿರುವ ಪಾಲನ್ನು ಸವಿಯುವುದನ್ನು ಬಿಟ್ಟು, ಬೇರೆಯವರ ಪ್ಲೇಟಿನಲ್ಲಿ ಏನಿದೆ ಎಂದು ಇಣುಕಿ ನೋಡುತ್ತಾ ಕುಳಿತರೆ ನಮಗೆ ಸಿಗುವುದು ಕೇವಲ ಹತಾಶೆ ಮಾತ್ರ. ಸಿಕ್ಕಿರುವುದು ಒಂದೇ ಜೀವನ, ಇದರಲ್ಲಿ ಹಳೆಯ ಸೋಲುಗಳನ್ನು ಅಥವಾ ಯಾರೋ ಆಡಿದ ಕಟು ಮಾತುಗಳನ್ನು ನೆನಪಿಸಿಕೊಂಡು ಎಷ್ಟು ಕಾಲ ಮೌನಕ್ಕೆ ಶರಣಾಗುತ್ತೀರಿ? ನಿಮ್ಮ ಮುಖವನ್ನು ‘ಸೈಲೆಂಟ್ ಮೋಡ್’ನಲ್ಲಿ ಇಟ್ಟುಕೊಂಡು ಕುಳಿತರೆ ನಷ್ಟ ನಿಮಗೇ ಹೊರತು ಜಗತ್ತಿಗಲ್ಲ. ಖುಷಿ ಎಂಬುದು ಹಂಚಿದಷ್ಟೂ ಹೆಚ್ಚಾಗುವ ಹಾಟ್‌ಸ್ಪಾಟ್ ಇದ್ದಂತೆ. ನೀವು ಎಷ್ಟು ಜನರಿಗೆ ಪ್ರೀತಿಯನ್ನು ಹಂಚುತ್ತೀರೋ, ಅಷ್ಟೇ ಪ್ರೀತಿ ನಿಮ್ಮತ್ತ ಮರಳಿ ಬರುತ್ತದೆ.
ಪ್ರೀತಿ ಮತ್ತು ಸ್ನೇಹ ಎಂಬುದು ಕೇವಲ ವಾಟ್ಸಾಪ್ ಸ್ಟೇಟಸ್‌ಗಳಿಗೆ ಅಥವಾ ಕ್ಷಣಿಕವಾದ ಇಮೋಜಿಗಳಿಗೆ ಸೀಮಿತವಾಗಬಾರದು. ನಾವು ಈ ಲೋಕ ಬಿಟ್ಟು ಹೋದ ಮೇಲೆ ನಮ್ಮ ಪ್ರೊಫೈಲ್ ಚಿತ್ರಗಳು ಬದಲಾಗಬಹುದು ಅಥವಾ ಅಳಿಸಿ ಹೋಗಬಹುದು, ಆದರೆ ನಾವು ಕೊಟ್ಟ ಅಪ್ಪಟ ಪ್ರೀತಿ ಮತ್ತು ಕಷ್ಟದಲ್ಲಿ ಜನರ ಪಕ್ಕದಲ್ಲಿ ನಿಂತ ಕ್ಷಣಗಳು ಎಂದಿಗೂ ಮಾಸದ ನೆನಪಾಗಿ ಉಳಿಯುತ್ತವೆ. ಇಂದು ‘ಆತ್ಮೀಯತೆ’ ಎನ್ನುವುದು ಎಲ್ಲರಿಗೂ ಸಿಗದ ದುಬಾರಿ ವಸ್ತುವಾಗಿಬಿಟ್ಟಿದೆ. ಯಾರಿಗಾದರೂ ನೋವಾದಾಗ ಕೇವಲ ಸಂದೇಶ ಕಳುಹಿಸಿ ಸುಮ್ಮನಾಗುವ ಬದಲು, ಸಾಧ್ಯವಾದರೆ ಅವರ ಪಕ್ಕದಲ್ಲಿ ಕುಳಿತು "ನಾನಿದ್ದೇನೆ, ಗಾಬರಿ ಬೇಡ" ಎಂದು ಧೈರ್ಯ ತುಂಬಿ ನೋಡಿ. ಆ ಕ್ಷಣದಲ್ಲಿ ಅವರಿಗೆ ಸಿಗುವ ನೆಮ್ಮದಿ ಮತ್ತು ನಿಮಗೆ ಸಿಗುವ ಆತ್ಮತೃಪ್ತಿ ಯಾವ ಐಷಾರಾಮಿ ಪಾರ್ಟಿಯಲ್ಲೂ ದೊರೆಯುವುದಿಲ್ಲ.
ಮನುಷ್ಯ ಬದುಕಿರುವುದು ಅಲ್ಪಕಾಲ, ಅದನ್ನು ಬೇರೆಯವರ ಕಾಲು ಎಳೆಯುವುದರಲ್ಲಿ ಅಥವಾ ಇತರರನ್ನು ಟೀಕೆ ಮಾಡುವುದರಲ್ಲಿ ಕಳೆಯುವುದು ಅರ್ಥಹೀನ. ಈ ಭೂಮಿ ಮೇಲೆ ನಾವೆಲ್ಲರೂ ಕೇವಲ ‘ಗೆಸ್ಟ್ ಅಪಿಯರೆನ್ಸ್’ ನೀಡಲು ಬಂದ ನಟರು ಅಷ್ಟೇ. ನಮ್ಮ ನಟನೆಯ ಅವಧಿ ಮುಗಿದ ತಕ್ಷಣ ನಾವು ನಿರ್ಗಮಿಸಲೇಬೇಕು. ನಗು ಎಂಬುದು ನಿಮ್ಮ ಮುಖಕ್ಕೆ ಬರುವ ಅಸಲಿ ಮೆರುಗು. ಸೌಂದರ್ಯವರ್ಧಕಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು, ದಿನಕ್ಕೆ ನೂರು ಸಲ ಮನಬಿಚ್ಚಿ ನಕ್ಕು ನೋಡಿ, ಅದೇ ಅತ್ಯುತ್ತಮ ಸೌಂದರ್ಯ ರಹಸ್ಯ. ನಿಮ್ಮ ಬದುಕು ಒಂದು ಸುಂದರ ಕವಿತೆಯಂತಿರಲಿ, ಅದರಲ್ಲಿ ದ್ವೇಷಕ್ಕೆ ಜಾಗವಿರದಿರಲಿ. ಹಳೆಯ ಕಹಿ ನೆನಪುಗಳಿಗೆ ‘ಡಿಲೀಟ್’ ಬಟನ್ ಒತ್ತಿ, ಪ್ರೀತಿಗೆ ಮತ್ತು ಕ್ಷಮೆಗೆ ‘ಶೇರ್’ ಬಟನ್ ಒತ್ತಿ. ನೆನಪಿರಲಿ, ಕೊನೆಯ ಪಯಣದಲ್ಲಿ ನಾವು ತೆಗೆದುಕೊಂಡು ಹೋಗುವುದು ಮೆಮೊರಿ ಕಾರ್ಡ್‌ಗಳನ್ನಲ್ಲ, ಬದಲಿಗೆ ನಾವು ಹಂಚಿದ ಒಳ್ಳೆಯ ನೆನಪುಗಳನ್ನು ಮಾತ್ರ!
- ಪ್ರಸನ್ನ ಹೊಳ್ಳ ಪತ್ರಕರ್ತರು, ತೀರ್ಥಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


