ಬಹುಬೇಗನೆ ಓಡುತ್ತಿರುವ ದಿನಗಳು, ಎಲ್ಲವನ್ನೂ ತಕ್ಷಣಕ್ಕೆ ಪಡೆಯುವ ಧಾವಂತ, ಕ್ಷೀಣಿಸುತ್ತಿರುವ ಬದುಕು, ಕ್ಷಯವಾಗುತ್ತಿರುವ ಆಯಸ್ಸು, ನಮ್ಮ ವರ್ತಮಾನದ ಸ್ಥಿತಿಗತಿ ಇದು. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪರದಾಟ. ಸತ್ಯವೇ... ನಮ್ಮ ಹಿರಿಯರು ನೂರು ವರ್ಷಗಳಷ್ಟು ಬದುಕುತ್ತಿದ್ದರು ಆದರೆ ಈಗಿನ ನಮ್ಮ ಜೀವಾವಧಿ ಅರವತ್ತು ವರ್ಷಕ್ಕೆ ಸೀಮಿತವಾಗುತ್ತಿದೆ ಅಲ್ಲದೆ ಈ ಕ್ಷಣ ನೋಡಿದವನು ಮರು ಕ್ಷಣದಲ್ಲೇ ಇಲ್ಲವಾಗಿ ಹೋಗುವ ಕಾಲಘಟ್ಟದಲ್ಲಿದ್ದೇವೆ. ಕ್ಷಣಿಕ ಬದುಕು ಅಮಿತ ಬಯಕೆ. ನಿಲ್ಲದ ಪ್ರಯತ್ನ ಯಾರಿಗಾಗಿ ಗೊತ್ತಿಲ್ಲ. ನಾಳೆ ಇಲ್ಲವಾಗುವ ಈ ಕಾಯದೊಳಗೆ ನೂರಾರು ಜಂಜಾಟ. ಆದರೂ ಹಾಗೊಮ್ಮೆ ಈಗೊಮ್ಮೆ ಎಲ್ಲದಕ್ಕೂ ವಿರಾಮವಿತ್ತು ಸುತ್ತ ನೋಡುವಾಗ ಒಂದಷ್ಟು ಮನಕ್ಕೆ ಮುದ ನೀಡುವ, ಮುಖದಲ್ಲಿ ನಗು ಅರಳಿಸುವ ಚಿತ್ರಣಗಳು ಕಣ್ಣಿಗೆ ಬೀಳುತ್ತವೆ. ಒತ್ತಡದ ಬದುಕಿಗೊಂದು ಸಿಹಿ ಸಿಂಚನವಾದಂತೆ ಅರೆಕ್ಷಣ ನಿಧಾನಿಸಿ ಪೂರ್ಣ ಲಾಭ ಪಡೆಯಲಿಚ್ಛಿಸುವ ಮನಗಳಿಗೆ ಮೃಷ್ಟಾನ್ನ ಬಡಿಸಿದಷ್ಟು ಖುಷಿನೀಡುತ್ತದೆ.
ಇಂತಹದೇ ಒಂದು ಸುಂದರ ಚಿತ್ರಣ ದಿನಾಂಕ 19 ಶುಕ್ರವಾರದಂದು ಮಂಗಳೂರಿನ ಪುರಭವನದಲ್ಲಿ ನಡೆದ ಸೇವಾಭಾರತಿಯ ಅಂಗಸಂಸ್ಧೆಯಾದ ಚೇತನಾ ಬಾಲ ವಿಕಾಸ ಕೇಂದ್ರದ ವಾರ್ಷಿಕೋತ್ಸವದಲ್ಲಿ ಕಾಣಲು ಸಿಕ್ಕಿತು. ಚೇತನಾ ಶಾಲೆ ದಿವ್ಯಾಂಗ ಮಕ್ಕಳ ಅಭ್ಯುದಯಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಸಂಸ್ಥೆ. ಇದು ಸುಮಾರು ನೂರಕ್ಕೂ ಅಧಿಕ ದಿವ್ಯಾಂಗರಿಗೆ ಕಲ್ಪವೃಕ್ಷವಿದ್ದಂತೆ. ಸೇವಾಭಾರತಿಯ ಹಿರಿಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಹಾಯಕ ಸಿಬ್ಬಂದಿಗಳು, ಪ್ರತಿಫಲಾಪೇಕ್ಷೆ ಇಲ್ಲದೆ ಶ್ರಮಿಸುತ್ತಿರುವ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಸಂಸ್ಥೆಯು ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಿಕೊಂಡಿರುವುದು ಹೆಮ್ಮೆ ಪಡುವಂತಹ ವಿಚಾರ.
ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಡೆಯುವ ವಾರ್ಷಿಕೋತ್ಸವದಂತೆ ಇಲ್ಲಿ ಉದ್ಘಾಟನೆ, ಪ್ರಶಸ್ತಿ ವಿತರಣೆ, ಭಾಷಣ ಎಲ್ಲವೂ ಇತ್ತು ಆದರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತ್ರ ವಿಶೇಷತೆ ಇತ್ತು. ದಿವ್ಯಾಂಗರು ಎಲ್ಲಿ ಇರುತ್ತಾರೋ ಅಲ್ಲೆಲ್ಲಾ ದಿವ್ಯತೆ ಇರುತ್ತದೆ. ಕಾರ್ಯಕ್ರಮದ ಉದ್ದಕ್ಕೂ ಆ ದಿವ್ಯತೆಯನ್ನು ಅನುಭವಿಸುವ ಭಾಗ್ಯ ನೋಡುಗರಿಗಾಯಿತು. ಹಾಡು, ನೃತ್ಯ, ಕಿರು ನಾಟಕ ಎಲ್ಲವೂ ಮನಸ್ಸಿಗೆ ಮುದ ನೀಡಿತು. ಅವರ ನಿಷ್ಕಲ್ಮಶ ನಗು, ಬತ್ತದ ಉತ್ಸಾಹ, ತರಬೇತುದಾರರು ಹೆಗಲಿಗೇರಿಸಿದ ಜವಾಬ್ದಾರಿಯನ್ನು ಪೂರ್ಣತೆಯಿಂದ ನಿಭಾಯಿಸಿದ ರೀತಿ, ವೇದಿಕೆಯ ಮೇಲೆ ಅವರ ಪ್ರೌಢಿಮೆ, ತರಬೇತಿ ನೀಡಿದವರ ಮುಖದಲ್ಲಿ ಮಿನುಗಿದ ಸಾರ್ಥಕ ಭಾವ ಎಲ್ಲವೂ ಸೇರಿ ಆ ಕ್ಷಣ ಅದ್ಭುತವೂ, ಅಮೋಘವೂ ಅನಿಸಿತು. ಆ ಮಕ್ಕಳನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ. ಅದೆಷ್ಟೋ ವೇದಿಕೆ ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದರೂ ವೇದಿಕೆ ಹತ್ತುವಾಗ ನನಗಾಗುವ ಆತಂಕಕ್ಕೆ ಈಗಲೂ ನನಗೆ ಕಡಿವಾಣ ಹಾಕಲಾಗುತ್ತಿಲ್ಲ.
ವೇದಿಕೆ ನೋಡಿದ ತಕ್ಷಣ ಸಭಾಕಂಪನ ಶುರುವಾಗಿ ಬಿಡುತ್ತದೆ. ಅಷ್ಟು ಕಾರ್ಯಕ್ರಮಕ್ಕೆ ಹೋಗ್ತೀರಿ ಮತ್ತೆ ಯಾಕೆ ಇಷ್ಟು ನರ್ವಸ್ ಆಗ್ತೀರಿ ಅಂತ ಕೆಲವರು ಕೇಳಿದ್ದೂ ಇದೆ. ಆದರೂ ತಣ್ಣಗಾಗುವ ಶರೀರ, ನನಗೆ ಕೇಳಿಸುವ ಹಾಗೆ ಹೊಡೆದುಕೊಳ್ಳುವ ಹೃದಯ, ಹೊಟ್ಟೆಯಲ್ಲಿ ಹಾರಾಡುವ ಚಿಟ್ಟೆ, ಬೆನ್ನ ಹುರಿಯಲ್ಲಿ ಶುರುವಾಗುವ ನೋವು, ಗುಂಡಿಗೆಯನ್ನು ನಡುಗಿಸುವ ಶೀತಲತೆ ಇದೆಲ್ಲವೂ ಮದ್ದಿಲ್ಲದ ರೋಗದಂತೆ ನನ್ನನ್ನು ಯಾವತ್ತೂ ಕಾಡುತ್ತದೆ ಆದರೆ ಈ ಮಕ್ಕಳು ರಂಗದಲ್ಲಿ ಲೀಲಾಜಾಲವಾಗಿ ಸಂಚರಿಸಿಬಿಟ್ಟರು. ಅಷ್ಟು ಮಂದಿ ನಮ್ಮನ್ನು ನೋಡುತ್ತಿದ್ದಾರೆ ಎಂಬ ಅಳುಕಿಲ್ಲ, ಮುಖದಲ್ಲಿ ಒಂದಿಷ್ಟೂ ದುಗುಡವಿಲ್ಲ, ಮರೆತು ಬಿಡುವೆನೆಂಬ ಆತಂಕವಿಲ್ಲ ಇದು ನಿತ್ಯದ ಕಾರ್ಯ ಎನ್ನುವಷ್ಟು ಸುಲಲಿತವಾಗಿ ವೇದಿಕೆಯಲ್ಲಿ ಮೆರೆದು ಬಿಟ್ಟರು. ಅದೆಷ್ಟು ಸುಂದರವಾಗಿತ್ತು ಈ ಕಾರ್ಯಕ್ರಮ ಮಕ್ಕಳೂ ಕೂಡ ಮುದ್ದಾಗಿ ಕಾಣುತ್ತಿದ್ದರು. ಹಾಡು ಲಯ ತಪ್ಪಲಿಲ್ಲ, ಹೆಜ್ಜೆ ಗೆಜ್ಜೆಯ ಮರೆಯಲಿಲ್ಲ, ಅಭಿನಯ ಕೊರತೆಯಾಗಲಿಲ್ಲ, ಲಿಪ್ ಸಿಂಕ್ ಮಿಸ್ಸ್ ಹೊಡೆಯಲಿಲ್ಲ ಹಾಗಾಗಿ ಸಭಿಕರಿಂದ ಚಪ್ಪಾಳೆಯೂ ಕುಂಠಿತವಾಗಲಿಲ್ಲ.
ಕಾರ್ಯಕ್ರಮದ ಯಶಸ್ಸಿಗೆ ಮಕ್ಕಳೆಷ್ಟು ಅಭಿನಂದನೆಗೆ ಅರ್ಹರೋ ಅಷ್ಟೇ ಅರ್ಹರು ಅವರನ್ನು ತರಬೇತಿ ಗೊಳಿಸಿದ ತರಬೇತುದಾರರು. ವಿಶೇಷ ಚೇತನ ಮಕ್ಕಳನ್ನು ಕಾರ್ಯಕ್ರಮಕ್ಕೆ ಅಣಿಗೊಳಿಸುವುದು ಸಾಮಾನ್ಯ ವಿಷಯ ಅಲ್ಲವೇ ಅಲ್ಲ. ಕ್ಷಣ ಕ್ಷಣಕ್ಕೆ ಬದಲಾಗುವ ಅವರ ಭಾವ ತೀವ್ರತೆಯ ಒತ್ತಡವನ್ನು ತಾಳ್ಮೆಯಿಂದ ಸಹಿಸುತ್ತಾ ಶ್ರದ್ಧೆಯಿಂದ ಕಲಿಸುವುದು ಯಾವ ತಪ್ಪಸ್ಸಿಗೂ ಕಮ್ಮಿಯಲ್ಲದ ಸಾಧನೆ ಅದ್ಕಕಾಗಿ ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ ಹಾಗೂ ಸಹಭಾಗಿಗಳಿಗೆ ಹೃತ್ಪೂರ್ವಕ ನಮನವನ್ನು ಸಲ್ಲಿಸಲೇ ಬೇಕು. ಏರಿಳಿತದ ಈ ಬದುಕಿನಲ್ಲಿ ಕನಸುಗಳ ಮಹಡಿಯೊಳಗೆ ಎಲ್ಲೋ ಕಳೆದುಹೋಗುವುದಕ್ಕಿಂತ ಕ್ಷಣಿಕವಾಗಿ ಸಿಗುವ ನಗುವಲ್ಲಿ ಆತ್ಮ ತೃಪ್ತಿಯನ್ನು ಕಾಣಬಹುದು. ನಶ್ವರ ಬದುಕಿನ ಗೊಂದಲದ ನಡುವೆಯೂ ಸೂರ್ಯ ರಶ್ಮಿಯಂತೆ ಹೊಳೆಯುವ ಆ ಮುಗ್ಧ ಮಕ್ಕಳ ನಗುವಿನಲ್ಲಿ ಅರೆಕ್ಷಣ ನಿಂತು ಸವಾರಿಸಿಕೊಂಡು ಮುಂದಡಿಯಿಡಬಹುದು.
- ಗೀತಾ ಲಕ್ಷ್ಮೀಶ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


