ಜನ ಜಾಗೃತಿ ಮೂಡಿಸಿದ ಆಯುರ್ವೇದ ಬೈಕ್ ರ್‍ಯಾಲಿ
* ಬೈಕ್ ರ್‍ಯಾಲಿಗೆ ಚಾಲನೆ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀ ವಿ. ಶ್ರೀಶಾನಂದ
* ನಾಳೆ ವಾಕಾಥಾನ್ ಹಾಗೂ Vintage Car Rally
ಬೆಂಗಳೂರು: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದೊಂದಿಗೆ ಡಿಸೆಂಬರ್ 25 ರಿಂದ ಡಿಸೆಂಬರ್ 28 ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ ಬೆಂಗಳೂರಿನ ಗಿರಿನಗರದಿಂದ- ಬಸವನಗುಡಿ- ಗಾಂಧಿ ಬಝಾರ್- ಗಿರಿನಗರದವರೆಗೆ ಬೃಹತ್ ಆಯುರ್ವೇದ ಬೈಕ್ ಜಾಥಾ ನಡೆಯಿತು.
ಬೈಕ್ ಜಾಥಾವನ್ನು ಉದ್ಘಾಟಿಸಿದ ಮಾತನಾಡಿದ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ಆಟ - ಪಾಠ ಹಾಗೂ ಚಿಂತನೆ ಸರಿಯಾದಾಗ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತೀಯರದ್ದು ವಸುಧೈವ ಕುಟುಂಬಕಂ ಎಂಬ ವಿಶ್ವಭ್ರಾತೃತ್ವದ ಚಿಂತನೆಯಾಗಿದೆ. ಕಾಯಿಲೆಗಳು ರಸ್ತೆಯ ಹಂಪ್ ಇದ್ದಂತೆ. ನಾವು ವೇಗವಾದ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಕಾಯಿಲೆಗಳು ಬರುತ್ತವೆ ಎಂದು ಅಭಿಪ್ರಾಯಪಟ್ಟರು.
ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದದಲ್ಲಿ ಗರ್ಭದ ಬಗ್ಗೆ ವೈಜ್ಞಾನಿಕ ಮಾಹಿತಿಗಳು ಇದೆ. ಆಗ ಯಾವ Ultrasound Scanning ಗಳು ಇರಲಿಲ್ಲ. ಆದರೂ ಅಂತಹ ಸೂಕ್ಷ್ಮ ಮಾಹಿತಿಗಳನ್ನು ನಮ್ಮ ಆಯುರ್ವೇದ ತಜ್ಞರು ಕಂಡುಕೊಂಡಿದ್ದರು. ಇದು ಆಯುರ್ವೇದದ ಹಿರಿಮೆಗೆ ಒಂದು ಕಿರು ಉದಾಹರಣೆ. ಈ ಹಿನ್ನೆಲೆಯಲ್ಲಿ ಆಯುರ್ವೇದದ ಮಹತಿಯನ್ನು ಸಾರಲು ವಿಶ್ವ ಸಮ್ಮೇಳನ ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಬಸವನಗುಡಿಯ ಶಾಸಕ ಎಲ್. ಎ. ರವಿ ಸುಬ್ರಹ್ಮಣ್ಯ, ಖ್ಯಾತ ನಟ ಅಜಯ್ ರಾವ್, ಅತ್ರಿಮೆಡ್ ಫಾರ್ಮಾಸ್ಯುಟಿಕಲ್'ನ CEO ಹೃಷಿಕೇಶ್ ದಾಮ್ಲೇ, ಹಿರಿಯ ಪತ್ರಕರ್ತ ವಿನಾಯಕ ಭಟ್ಟ ಮೂರೂರು ಮುಂತಾದವರು ಉಪಸ್ಥಿತರಿದ್ದು ಬೈಕ್ ಜಾಥಾಕ್ಕೆ ಚಾಲನೆ ನೀಡಿದರು.
ವಿಶ್ವ ಆಯುರ್ವೇದ ಸಮ್ಮೇಳನದ ರುವಾರಿ ಡಾ. ಗಿರಿಧರ ಕಜೆ ಮಾತನಾಡಿ, ಆಯುರ್ವೇದದ ಮಹತ್ವವನ್ನು ಜನತೆಯ ಮುಂದಿಡಲು ಬೃಹತ್ ರೂಪದಲ್ಲಿ ಸಮ್ಮೇಳನವನ್ನು ಸಂಘಟಿಸಲಾಗಿದೆ. ಆಯುರ್ವೇದ ವೈದ್ಯರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ, ಜನ ಸಾಮಾನ್ಯರಿಗೂ ಪ್ರಯೋಜನಕಾರಿಯಾಗುವಂತೆ ಸಮ್ಮೇಳನವನ್ನು ಆಯೋಜಿಸಲಾಗಿದೆ. ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ಆಹಾರ ಪ್ರದರ್ಶಿನಿ, ಆಯುರ್ವೇದ ಪಾಕೋತ್ಸವ, ಧನ್ವಂತರಿ ಮಹಾಯಜ್ಞ, ಆಯುರ್ವೇದ ಮೆಗಾ ಎಕ್ಸ್'ಪೋ, ಔಷಧೀಯ ಸಸ್ಯಗಳ ಉಚಿತ ವಿತರಣೆ, ಲೇಸರ್ ಶೋ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿದೆ.
ದಕ್ಷಿಣದ ಏಳು ರಾಜ್ಯಗಳ 137 ಆಯುರ್ವೇದ ವಿದ್ಯಾಲಯಗಳನ್ನು ಧನ್ವಂತರಿ ರಥಯಾತ್ರೆಯು ಈಗಾಗಲೇ ಸಂದರ್ಶಿಸಿದ್ದು, ನಾಡಿನಾದ್ಯಂತ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮ್ಮೇಳನಕ್ಕೆ 3-4 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
~~~~~~
ನಾಳೆ ಆಯುರ್ವೇದ ವಾಕಾಥಾನ್ ಹಾಗೂ Vintage Car Rally
ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನದ ಪ್ರಚಾರಾರ್ಥವಾಗಿ ನಾಳೆ ಆಯುರ್ವೇದ ವಾಕಾಥಾನ್ ಹಾಗೂ Vintage Car Rally ಯನ್ನು ಆಯೋಜಿಸಲಾಗಿದೆ.
ವಾಕಾಥಾನ್:
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಾಳೆ ಬೆಳಗ್ಗೆ 7.15 ಕ್ಕೆ ಆಯುರ್ವೇದ ವಾಕಾಥನ್ ನಡೆಯಲಿದ್ದು, ಶಾಸಕ ಎಸ್. ಸುರೇಶ್ ಕುಮಾರ್ ಜಾಥಕ್ಕೆ ಚಾಲನೆ ನೀಡಲಿದ್ದಾರೆ. ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಜೊತೆಯಾಗಲಿದ್ದಾರೆ.
* Vintage Car Rally
ನಾಳೆ ಬೆಳಗ್ಗೆ 8.15 ಕ್ಕೆ ಟೌನ್ ಹಾಲ್ ನಿಂದ ಅರಮನೆ ಮೈದಾನದ ವರೆಗೆ Vintage Car Rally ನಡೆಯಲಿದ್ದು, ಟೌನ್ ಹಾಲಿನ ಮುಂಭಾಗ ಖ್ಯಾತ ಚಿತ್ರನಟ ರಮೇಶ್ ಅರವಿಂದ್ ಚಾಲನೆ ನೀಡಲಿದ್ದು, ಅನೇಕ ಗಣ್ಯರು ಜೊತೆಯಾಗಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

