ಸ್ಟೂಡೆಂಟ್ ಕಾರ್ನರ್: ಅಮ್ಮ ಮೆಚ್ಚಿದ ಹತ್ತು ಸಿನಿಮಾಗಳು

Upayuktha
0


2020ರಲ್ಲಿ ನಮ್ಮದು ಅಂತ ಒಂದು ಸಣ್ಣ ಮನೆ ಕಟ್ಟಿಕೊಂಡ ಖುಷಿಯಲ್ಲಿ ಅಪ್ಪ ಅಮ್ಮ ಮನೆಯವರೆಲ್ಲ ಇದ್ದರೂ ಆ ಖುಷಿ ಪೂರ್ಣಗೊಳ್ಳಲು ಟಿವಿ ಒಂದರ ಅವಶ್ಯಕತೆ ಇತ್ತು. ಸಂಜೆ 6 ಗಂಟೆಯವರೆಗೆ ಹೇಗೂ ಸಮಯ ಕಳೆಯಬಹುದು ಆದರೆ ಆರು ಗಂಟೆಯ ನಂತರ ಹೊತ್ತು ದೂಡುವುದು ಹೇಗೆ ಎಲ್ಲರೂ ಒಬ್ಬರ ಮುಖವನ್ನು ಒಬ್ಬರು ನೋಡುವಂತಹ ಪರಿಸ್ಥಿತಿ. ನಾನು ಅಣ್ಣ ಹೇಗೂ ಫೋನ್ ಹಿಡಿದು ಕಾಲ ಕಳೆಯುತ್ತೇವೆ ಅಮ್ಮ ಅಡುಗೆ ಮನೆ ಸೇರಿದರೆ ಹೊರಬರುವುದು 8 ಗಂಟೆಯ ಮೇಲೆ. ಅಜ್ಜ ಅಜ್ಜಿ ಅಪ್ಪ ಹಾಗೊಂದು ಈಗೊಂದು ಮಾತನಾಡುವರು ನಾಲ್ಕು ದಿನಕ್ಕೆ ಹೊಸ ಮನೆ ಸಾಕಾಯಿತು. ಯಾಕೆಂದರೆ ಹಳೆ ಮನೆಯಲ್ಲಿ ಇದ್ದ ಎಲ್‌ಜಿ ಟಿವಿ ಕೆಟ್ಟಿತ್ತು. ಅದನ್ನು ಗುಜರಿಗೆ ಹಾಕಿ ತಿಂಗಳುಗಳ ಕಳೆದಿದ್ದವು. ಟಿವಿ ಇದ್ದರೆ ಎಲ್ಲರೂ ನೋಡಬಹುದು ಸಮಯ ಕಳೆಯುವುದು ಗೊತ್ತಾಗಲ್ಲ ಅದಕ್ಕೆ ಒಂದು ಟಿವಿ ತಗೊಂಡು ಬನ್ರೀ ಎಂದು ಅಮ್ಮನ ಸಲಹೆಗೆ ಅಜ್ಜಿಯು ದನಿಗೂಡಿಸಿದಳು. ಆದರೆ ಗೃಹಪ್ರವೇಶ ಖರ್ಚು, ಮನೆ ಕಟ್ಟಲು ಮಾಡಿದ ಸಾಲ ಎಲ್ಲದರ ಲೆಕ್ಕವೇ ಇನ್ನೂ ಪಕ್ಕವಾಗಿರಲಿಲ್ಲ ಆದರೂ ಮನೆಯವರೆಲ್ಲರೂ ಆಸೆಯ ಮೇರೆಗೆ ಸೆಪ್ಟೆಂಬರ್ 29ಕ್ಕೆ ನನ್ನ ಬರ್ತಡೇ ನೆನಪಿಗಾಗಿ ಟಿಸಿಎಲ್ ಟಿವಿಯನ್ನು ಇನ್ಸ್ಟಾಲ್ಮೆಂಟ್ ನಲ್ಲಿ ಮನೆಗೆ ತಂದರು ನಮ್ಮಪ್ಪ.


ಟಿವಿ ತಂದ ಮೊದಲೆರಡು ದಿನ ನನ್ನಯ ಫೋನ್‌ಗೆ ಫುಲ್ ರೆಸ್ಟ್, ಎಲ್ಲರೂ ಟಿವಿ ಮುಂದೆ ಕುಂತು ದಿನವಿಡಿ ನೋಡಿದ್ದೇ ನೋಡಿದ್ದು ನಾಲ್ಕು ದಿನಕ್ಕೆ ಬೇಜಾರಾಯ್ತು. ಅಮ್ಮ ಆಗೊಮ್ಮೆ ಈಗೊಮ್ಮೆ ಟಿವಿಯ ಮುಂದಕ್ಕೆ ಬಂದು ನಿಂತರೆ ಅಡುಗೆ ಮನೆಯಲ್ಲಿ ಗ್ಯಾಸ್ ಮೇಲಿನ ಹಾಲು, ರಾಗಿ ಅಂಬಲಿ, ಅಕ್ಕಿಯಗಂಜಿ ಹುಕ್ಕಿ ಕರೆದರೆ ಕುಕ್ಕರ್ ಮಾತ್ರ ಕಾಲೇಜು ಹುಡುಗರಂತೆ ವಿಷಲ್ ಹೊಡೆದೆ ಕರೆಯುತ್ತಿತ್ತು.


ಒಂದು ವಾರದ ನಂತರ ಮಟ_ಮಟ ಮಧ್ಯಾಹ್ನ ಅಮ್ಮ ಅಟ್ಟದ ಮೇಲಿಂದ ಹಳೆ ಡಿವಿಡಿಯನ್ನು ತಂದು ಇದನ್ನು ಸೇರಿಸಿ ಕೊಡು ಎಂದಳು. ನಾನು ಇದ್ಯಾಕೆ ಅದು ಸ್ಮಾರ್ಟ್ ಟಿವಿ ಫೋನ್ನಲ್ಲಿ ಕನೆಕ್ಟ್ ಮಾಡಬಹುದು, ಏನ್ ಬೇಕ್ ಹೇಳು ನಾನೇ ವೈಫೈ ಕನೆಕ್ಟ್ ಮಾಡ್ತೀನಿ. ಇದನ್ನೆಲ್ಲ ಈಗ ಯಾರ್ ಆಕಂಡು ನೋಡ್ತಾರೆ ಹಳೆ ಕಾಲ್ದವರಂಗೆ ಎಂದು ರೇಗಿದೆ. ಅಮ್ಮ ಕೋಪದಲ್ಲಿ ತಾನೇ ಸೇರಿಸಲು ಹೋದಾಗ ಹೆಚ್ಚು ಕಮ್ಮಿ ಆದಿತು ಎಂದು ಸೇರಿಸಿ ಕೊಟ್ಟೆ. ನಂಗೆ ಹೇಳಿಕೊಡು ಎಂದು ರಿಮೋಟ್ ನಲ್ಲಿ ಹೇಗೆ ಹಾಕುವುದು ಅಂತನು ಸಹ ಹೇಳಿಸಿಕೊಂಡಳು.


ಆ ಡಿವಿಡಿ ನಾನು ಚಡ್ಡಿ ಹಾಕಲು ಕಲಿತಾಗಿನಿಂದಲೂ ಮನೆಯಲ್ಲಿಯೇ ಇದೆ. ಅಷ್ಟಕ್ಕೂ ಅದು ನಮ್ಮಮ್ಮನ ತವರು ಮನೆಯ ಉಡುಗೊರೆ. ನಮ್ಮ ಮಾವ ಬೆಂಗಳೂರಿನಿಂದ ತಂದಿದ್ದಂತಹ ಪ್ಯಾನಸೋನಿಕ್ ಡಿವಿಡಿ ಅದು. ಅದರ ಜೊತೆಗೆ ಹಾಲುಂಡ ತವರು, ಬೆಳ್ಳಿ ಕಾಲುಂಗುರ, ಜನುಮದ ಜೋಡಿ, ಹಳ್ಳಿ ಮೇಷ್ಟ್ರು, ಕರ್ಪೂರದ ಗೊಂಬೆ, ಶೃಂಗಾರ ಕಾವ್ಯ, ಮನೆದೇವರು, ಯಜಮಾನ, ಸಿಪಾಯಿ, ಅಣ್ಣಯ್ಯ- ಹೀಗೆ ತೊಂಬತ್ತರ ದಶಕ ಮತ್ತು ನಂತರದ ಎವರ್ಗ್ರೀನ್ ಸಿನಿಮಾಗಳ ಸಿಡಿಗಳು ಇದ್ದವು.


ರಾತ್ರಿ ಅಜ್ಜಿಗೆ ಧಾರಾವಾಹಿ 9 ಗಂಟೆಯ ನಂತರ ವಾರ್ತೆ ಬಿಟ್ಟರೆ ಅಷ್ಟೇನು ಟಿವಿಗೆ ಯಾರು ಅಂಟಿರಲಿಲ್ಲ. ಅಮ್ಮನು ಅಷ್ಟೇ ಆದರೆ ಆಕೆಗೆ ಸಮಯ ಸಿಕ್ಕಾಗಲಿಲ್ಲ ಕ್ಯಾಸೆಟ್‌ಗಳು ಸ್ಕ್ರಾಚ್ ಆಗಿದೆ ಮಧ್ಯ ಮಧ್ಯ ಕೆಟ್ಟು ನಿಲ್ಲುತ್ತದೆ ಎಂದು ತಿಳಿದರು ಸಹ ಅವುಗಳನ್ನು ಡಿವಿಡಿಗೆ ಹಾಕಿ ಸಿನಿಮಾ ನೋಡುತ ತನಕ ಸಮಯ ಕಳೆಯುತ್ತಾಳೆ. ಉದಯ ಮ್ಯೂಸಿಕ್, ಪಬ್ಲಿಕ್ ಮ್ಯೂಸಿಕ್‌ನಲ್ಲಿ 'ಹಸಿರು ಗಾಜಿನ ಬಳೆಗಳೆ' 'ಕೇಳಿಸದೆ ಕಲ್ಲು ಕಲ್ಲಿನಲಿ' 'ನೀನೆ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು'. ಹೀಗೆ ಶೃತಿ, ಮಾಲಾಶ್ರೀ, ಸುಧಾರಾಣಿ, ರವಿಚಂದ್ರನ್ ಅವರ ಹಾಡುಗಳು ಬಂದರೆ ವಾಲ್ಯೂಮ್ ಬಟನ್ ಹೆಚ್ಚು ಮಾಡಿ ಅಡುಗೆ ಮನೆಯಲ್ಲಿ ಅಥವಾ ಮನೆಯ ಯಾವುದೋ ಮೂಲೆಯಲ್ಲೂ ಕೆಲಸ ಮಾಡುತ್ತಾ ಹಾಡಿಗೆ ತನ್ನ ದನಿ ಸೇರಿಸಿ ಖುಷಿ ಪಡುತ್ತಾಳೆ. 


ಇದನ್ನೆಲ್ಲ ಹತ್ತಿರದಿಂದ ಕಂಡ ನನಗೆ ಅನಿಸಿದ್ದು ಇಷ್ಟೇ, ನನ್ನ ಮೊದಲ ಸಂಬಳದಲ್ಲಿ ಅಮ್ಮನಿಗೊಂದು ಒಳ್ಳೆ ಆಂಡ್ರಾಯ್ಡ್ ಮೊಬೈಲ್ ತೆಗೆದುಕೊಟ್ಟು ಅದರಲ್ಲಿ ಅವಳಿಗೆ ಇಷ್ಟವಾದ ಸಿನಿಮಾ ಮತ್ತು ಹಾಡುಗಳನ್ನು ಹೆಡ್ ಸೆಟ್ ಹಾಕಿ ಕೇಳಿಸುವುದು ಮಾತ್ರ ಮತ್ತೇನಿಲ್ಲ.


- ತರುಣ್ ಕುಮಾರ್ ಡಿ. 

SDM PG college ujire


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top