ಹೊಸದಿಲ್ಲಿ: ಮಂಗಳವಾರ ದೇಶದ ಹಲವೆಡೆ ಇರುವ ಶ್ರೀ ಪೇಜಾವರ ಮಠದ ಶಾಖೆಗಳು ಮತ್ತು ಅಧೀನ ಸಂಸ್ಥೆಗಳಲ್ಲಿ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರಾಧನೋತ್ಸವವು ವೈಭವದಿಂದ ವಿವಿಧ ಧಾರ್ಮಿಕ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಜ್ಞಾನ ಸತ್ರಗಳೊಂದಿಗೆ ನೆರವೇರಿತು.
ನವದೆಹಲಿಯ ವಸಂತ್ ಕುಂಜ್ ನಲ್ಲಿರುವ ಶ್ರೀ ಮಠದ ಶಾಖೆಯಲ್ಲಿ ನಡೆದ ಗುರು ಸಂಸ್ಮರಣ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವರೂ ಶ್ರೀ ವಿಶ್ವೇಶತೀರ್ಥರ ಸುದೀರ್ಘ ಕಾಲದ ಒಡನಾಡಿಗಳೂ ರಾಮಜನ್ಮಭೂಮಿ ಆಂದೋಲನದಲ್ಲಿ ಶ್ರೀಗಳೊಂದಿಗೆ ಮಹತ್ವದ ಭೂಮಿಕೆ ನಿರ್ವಹಿಸಿದ್ದ ಡಾ ಮುರಳಿ ಮನೋಹರ ಜೋಶಿಯವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಸಂಸ್ಮರಣಾ ಮಾತುಗಳ ಮೂಲಕ ನಮನ ಸಲ್ಲಿಸಿದರು.
ಶ್ರೀ ವಿಶ್ವೇಶತೀರ್ಥರು ಶ್ರೇಷ್ಠ ಸಂತರ ವಿಭೂತಿ ಸ್ವರೂಪರಾಗಿದ್ದರು. ವಿಶ್ವಹಿಂದು ಪರಿಷತ್ತಿನ ಸ್ಥಾಪನೆ ದೇಶ ವಿದೆಶಗಳಲ್ಲಿ ಅದರ ಕಾರ್ಯವ್ಯಾಪ್ತಿ ಯ ವಿಸ್ತರಣೆಗಳಲ್ಲಿ ಅವರ ಮಾರ್ಗದರ್ಶನ ಪ್ರೇರಣೆಗಳು ಅಮೂಲ್ಯವಾದವುಗಳು. ರಾಮಜನ್ಮಭೂಮಿ ಆಂದೋಲನದಲ್ಲಿ ಸಮಸ್ತ ಹಿಂದು ಸಮಾಜಕ್ಕೆ ಅವರು ನೀಡಿದ ಪ್ರೋತ್ಸಾಹ ನೇತೃತ್ವಗಳು ಅವಿಸ್ಮರಣೀಯ. ವಿವಾದಿತ ಕಟ್ಟಡ ಬಿದ್ದ ಬಳಿಕ ಅದೇ ಸ್ಥಳದಲ್ಲಿ ಬಾಲರಾಮನ ವಿಗ್ರಹವನ್ನು ಕೂಡಲೇ ಸ್ಥಾಪಿಸಲೇ ಬೇಕೆಂದು ನಮಗೆಲ್ಲ ತಿಳಿಯಪಡಿಸಿ ರಾತೋರಾತ್ರಿ ತಾತ್ಕಾಲಿಕ ಶೆಡ್ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪನೆಗೈದವರೂ ಶ್ರೀಗಳೇ ಆಗಿದ್ದರು. ಆ ವಿಗ್ರಹವೂ ನಮಗೆ 1949 ರಲ್ಲಿ ತೀರಾ ಆಕಸ್ಮಿಕವೆಂಬಂತೆ ಆ ಸ್ಥಳದಲ್ಲಿ ದೊರೆತಿತ್ತು. ಅದು ರಾಮನೇ ನಮಗೆ ಒದಗಿಸಿದ್ದು. ಅದು ದೊರಕಿದ ಬಗೆಯೂ ಅತ್ಯಂತ ವಿಸ್ಮಯಕಾರಿಯಾದುದು. ಅಂಥ ವಿಗ್ರಹವನ್ನು ಸ್ಥಾಪಿಸಿ ಮುಂದಿನ ಹೋರಾಟಗಳಿಗೆ ಸ್ಫೂರ್ತಿ ನೀಡಿದ ಶ್ರೀಗಳನ್ನು ಹಿಂದು ಸಮಾಜ ಮರೆಯಲು ಸಾಧ್ಯವಿಲ್ಲ. ಅವರು ಕೃಶಕಾಯರಾಗಿದ್ದರೂ ವೈಶ್ವಿಕ ಸ್ವರೂಪ ಹೊಂದಿದ್ದರು ಎಂದು ಅವರೊಂದಿಗಿನ ಸುದೀರ್ಘ ಒಡನಾಟವನ್ನು ಭಾವುಕರಾಗಿ ಸ್ಮರಿಸಿಕೊಂಡರು.
ವಿಶ್ವ ಹಿಂದು ಪರಿಷತ್ತಿನ ದೆಹಲಿ ರಾಜ್ಯದ ಕಾರ್ಯದರ್ಶಿ ಸುರೇಂದ್ರ ಕುಮಾರ ಗುಪ್ತಾ, ಮಾಜಿ ಕುಲಪತಿ ಶಿಕ್ಷಣ ತಜ್ಞ ಡಾ ರಮೇಶ ಕುಮಾರ್ ಪಾಂಡೆ, ಕರ್ನಾಟಕ ಮೂಲಕ ಐಎ ಎಸ್ ಅಧಿಕಾರಿ ಸುಹಾಸ್ ನವದೆಹಲಿಯ ಶ್ರೀ ವೇದವ್ಯಾಸ ಗುರುಕುಲದ ಪ್ರಾಚಾರ್ಯರೂ ಆಗಿರುವ ಡಾ ವಿಠೋಬಾಚಾರ್ಯ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಶ್ರೀಮಠದ ವ್ಯವಸ್ಥಾಪಕರೂ ಮತ್ತು ವಿದ್ವಾನ್ ದೇವಿಪ್ರಸಾದ ಭಟ್ ಪ್ರಸ್ತಾವನೆಗಳೊಂದಿಗೆ ಸ್ವಾಗತಿಸಿದರು. ಶ್ರೀಮಠದ ಕಾರ್ಯದರ್ಶಿ ಅರವಿಂದ ಮೆಟ್ಟಿಮನಿ ವಂದನಾರ್ಪಣೆಗೈದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳವರ ಪಾದುಕೆ ಮತ್ತು ಭಾವಚಿತ್ರಕ್ಕೆ ಡಾ ಜೋಶಿ ದೀಪಬೆಳಗಿ ಪುಷ್ಪಾರ್ಚನೆಗೈದು ಮಂಗಳಾರತಿ ಬೆಳಗಿ ಉದ್ಘಾಟಿಸಿದರು. ಗುರುಕುಲದ ವಿದ್ಯಾರ್ಥಿಗಳಿಂದ ಮಂತ್ರಘೋಷ ನೆರವೇರಿತು. ಸುರೇಂದ್ರ ಗುಪ್ತಾ ಮತ್ತು ಡಾ ಪಾಂಡೆಯವರು ಗುರುಗಳನ್ನು ಸ್ಮರಿಸಿ ಮಾತಾಡಿದರು. ಡಾ ಜೋಶಿಯವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ವಿದ್ವಾನ್ ದೇವಿಪ್ರಸಾದ ಭಟ್ರು ವಂದಿಸಿದರು.
ಗುರುಕುಲದ ಪ್ರಾಧ್ಯಾಪಕರುಗಳಾದ ಶ್ರೀಕರ ಕುಲಕರ್ಣಿ, ಶ್ರೀನಿಧಿ ಆಚಾರ್ಯ, ಕೃಷ್ಣ ತೇಜ ಆಚಾರ್ಯ, ಸೌರಭ್ ಶರ್ಮಾ ಮೊದಲಾದವರು ಸಂಯೋಜನೆಯಲ್ಲಿ ಸಹಕರಿಸಿದರು. ಮುಂಜಾನೆ ಧಾರ್ಮಿಕವಿಧಿಗಳು, ವಿಶೇಷ ಪೂಜೆ ಪ್ರಸಾದ ವಿತರಣೆ ನೆರವೇರಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

