ಸುರತ್ಕಲ್: ಕನ್ನಡ ಮಾಧ್ಯಮ ಶಾಲೆಗಳು ಇಂದು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗಿಳಿವಿಂಡು ಸಂಸ್ಥೆಯು 'ಸಿರಿಗನ್ನಡಂ ಗೆಲ್ಗೆ' ಆರ್ಥಿಕ ನೆರವಿನ ಕಾರ್ಯಕ್ರಮವನ್ನು ರೂಪಿಸಿದೆ. ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾಭಿಮಾನಿಗಳು ಆರ್ಥಿಕವಾಗಿ ನೆರವು ನೀಡಬೇಕಾಗಿದೆ ಎಂದು ಗಿಳಿವಿಂಡಿನ ಅಧ್ಯಕ್ಷ ಹಾಗೂ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಶಿವರಾಮ ಶೆಟ್ಟಿ ನುಡಿದರು.
ಸುರತ್ಕಲ್ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಳಿವಿಂಡು (ರಿ.) ಆಯೋಜಿಸಿದ್ದ 'ಸಿರಿಗನ್ನಡಂ ಗೆಲ್ಗೆ' ಕನ್ನಡ ಮಾಧ್ಯಮ ಶಾಲೆಗಳಿಗೆ ಆರ್ಥಿಕ ನೆರವು ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿಂದೂ ವಿದ್ಯಾದಾಯಿನೀ ಸಂಘದ ಆಡಳಿತಕ್ಕೊಳಪಟ್ಟ ವಿದ್ಯಾದಾಯಿನೀ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ವೆಂಕಟರಮಣ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾದಾಯಿನೀ ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಡಳಿತ ಮಂಡಳಿ ಯಿಂದ ನಿಯೋಜಿತವಾಗಿರುವ 15 ಶಿಕ್ಷಕರಿಗೆ ಒಂದು ವರ್ಷ ಕಾಲ ಮಾಸಿಕವಾಗಿ ರೂ. 1000ದಂತೆ ಹೆಚ್ಚುವರಿ ವೇತನ ನೀಡಲು ಗಿಳಿವಿಂಡಿನ ಹಳೆ ವಿದ್ಯಾರ್ಥಿಗಳು ವಿದ್ಯಾಭಿಮಾನಿಗಳಿಂದ ಸಂಗ್ರಹಿಸಿರುವ ರೂ. 1,80,000 ಮೊತ್ತವನ್ನು ದೇಣಿಗೆಯಾಗಿ ವಿದ್ಯಾದಾಯಿನೀ ಸಂಘದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ತ್ವಾರ್ ಹೆಚ್. ವಹಿಸಿ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಹಾಗೂ ಸಮಾಜದ ಸಹಕಾರ ಅಗತ್ಯ ಎಂದರು.
ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಮತ್ತು ಗಿಳಿವಿಂಡಿನ ಕಾರ್ಯದರ್ಶಿ ಡಾ. ನಾಗಪ್ಪ ಗೌಡ. ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಿಳಿವಿಂಡಿನ ಉದ್ದೇಶಗಳನ್ನು ತಿಳಿಸಿ ಖಾಸಗಿ ಕನ್ನಡ ಶಾಲೆಗಳ ಸೇವಾ ಕಾರ್ಯ ವಿಶಿಷ್ಟವಾದುದು. ತಾವು ಓದಿದ ಕನ್ನಡ ಮಾಧ್ಯಮದ ಶಾಲೆಗಳಿಗೆ ನೆರವು ನೀಡುವ ಕಾರ್ಯ ಇಂದು ನಡೆಯಬೇಕಾಗಿದೆ ಎಂದರು.
ಗಿಳಿವಿಂಡಿನ ಜೊತೆ ಕಾರ್ಯದರ್ಶಿಗಳಾದ ಡಾ. ಆರ್. ನರಸಿಂಹ ಮೂರ್ತಿ, ಡಾ. ವಾಸುದೇವ ಬೆಳ್ಳೆ, ಸದಸ್ಯರಾದ ಪ್ರೊ. ರಮೇಶ್ ಭಟ್. ಎಸ್. ಜೆ., ಡಾ. ವಿಶ್ವನಾಥ ಬದಿಕಾನ, ಲಕ್ಷ್ಮಿ ಪಿ., ಡಾ. ಜ್ಯೋತಿ ಚೇಲೈರು, ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್. ಜೊತೆ ಕಾರ್ಯದರ್ಶಿ ಎಂ.ಜಿ. ರಾಮಚಂದ್ರ, ಸದಸ್ಯ ಪ್ರಸಿದ್ಧ ಪಿ. ಮಾಜಿ ಕಾರ್ಯದರ್ಶಿ ಉಮಾದೇವಿ, ಐ. ಆಡಳಿತ ಅಧಿಕಾರಿ ಮೃದುಲಾ, ವಿದ್ಯಾದಾಯಿನೀ ಹಿರಿಯ ಪ್ರಾಥ ಮಿಕ ಶಾಲೆಯ ಸಂಚಾಲಕಿ ಕಸ್ತೂರಿ. ಪಿ. ಮುಖ್ಯ ಶಿಕ್ಷಕಿ ಶಾಂತ, ವಿದ್ಯಾದಾಯಿನೀ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಸಂತ್, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಡಾ. ಶಶಿಕುಮಾರ್, ವಿದ್ಯಾದಾಯಿನೀ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನಯ ಆಚಾರ್, ಪತ್ರಿಕೋದ್ಯಮಿ ಜಯರಾಮ್ ಶ್ರೀಯಾನ್, ಡಾ. ಗುರುರಾಜ್, ಹರೀಶ್ ಪೇಜಾವರ, ಶ್ರೀನಿವಾಸ್ ರಾವ್ ಮತ್ತು ವಿವಿಧ ಶಾಲೆಗಳ ಶಿಕ್ಷಕರುಗಳು ಉಪಸ್ಥಿತರಿದ್ದರು. ಯೋಜನೆಯ ಸಂಯೋಜಕ ಶ್ರೀಧರ್ ಟಿ. ಎನ್.ಸ್ವಾಗತಿಸಿದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


