ಸಪ್ತರಾತ್ರಮ್ ಕೃಷ್ಣವೇಣ್ಯೌಮ್ ಉಶಿತ್ವ
ಪುನರುತ್ಥಿತಂ ! ಜಿತಾಮಿತ್ರ ಗುರುಂ ವಂದೇ ವಿಭುದೇಂದ್ರ ಕರೋದ್ಭವಂ
ಶ್ರೀ ಜಿತಾಮಿತ್ರತೀರ್ಥರು ದಕ್ಷಿಣಾದಿ ಕವೀಂದ್ರ ಮಠದ, ಶ್ರೀ ಮಧ್ವಾಚಾರ್ಯರ ಮೂಲ ಸಂಸ್ಥಾನದ 12 ನೇಯ ಪೀಠಾಧಿಪತಿಗಳಾಗಿದ್ದರು. ರುದ್ರಾಂಶ ಸಂಭೂತರಾದ ಅವರು ಮಹಾನ್ ಸಿದ್ಧಿಗಳನ್ನು ಮತ್ತು ಅವಧೂತ ಲಕ್ಷಣಗಳನ್ನು ಹೊಂದಿದವರಾಗಿದ್ದರು.
ಅನಂತಪ್ಪ ಎಂಬುದು ಶ್ರೀಗಳ ಪೂರ್ವ ನಾಮವಾಗಿದ್ದು, ಅವರು ಪ್ರಸ್ತುತ ಗುಲ್ಬರ್ಗ ಜಿಲ್ಲೆಯ ಶಹಾಪುರ ತಾಲೂಕಿನವರಾಗಿದ್ದರು. ವಿಶ್ವಾಮಿತ್ರ ಗೋತ್ರಕ್ಕೆ ಸೇರಿದ ಅವರು ತಮ್ಮ ಆರಂಭಿಕ ದಿನಗಳಲ್ಲಿ ಅಕ್ಕನ ಆರೈಕೆಯಲ್ಲಿ ಬೆಳೆದರು ಮತ್ತು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೀಗೆ ಅನಂತಪ್ಪನವರು ತಮ್ಮ ಸಂಸಾರಿಕ ಕಷ್ಟ ಪರಿಹಾರಕ್ಕಾಗಿ ಪ್ರಾಪಂಚಿಕ ವಿಷಯಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ ಶ್ರೀ ವಿಬುಧೇಂದ್ರತೀರ್ಥರು ದಿಗ್ವಿಜಯ ಮಾಡುತ್ತ 'ಅಗ್ನಿಹಾಲು'ವಿನಲ್ಲಿ ತಂಗಿದ್ದರು. ತಮ್ಮ ಕುಲಗುರುಗಳ ದರ್ಶನ ಮಾಡಲೆಂದು ಬಂದ ಅನಂತಪ್ಪನವರು ಗುರುಗಳ ಅಪಾರ ಪಾಂಡಿತ್ಯದಿಂದ ಪ್ರಭಾವಿತರಾದರು ಮತ್ತು ಗುರುಗಳ ಸೇವೆಯನ್ನು ಮಾಡುತ್ತ ತಮಗೆ ಸರಿಯಾದ ಜ್ಞಾನವನ್ನು ಕರುಣಿಸುವಂತೆ ಪ್ರಾರ್ಥಿಸಿದರು.
ಅನಂತಪ್ಪನ ಸೇವೆಯನ್ನು ಮೆಚ್ಚುವ ಶ್ರೀ ವಿಬುಧೇಂದ್ರತೀರ್ಥರು ತಮ್ಮ ಬಳಿಯಿದ್ದ ಶ್ರೀ ನರಸಿಂಹ ಸಾಲಿಗ್ರಾಮವನ್ನು ನೀಡಿ, ಅದನ್ನು ಸರಿಯಾದ ರೀತಿಯಲ್ಲಿ ಪೂಜಿಸುವಂತೆ ಸೂಚಿಸಿದರು. ಶ್ರೀ ವಿಬುಧೇಂದ್ರತೀರ್ಥರು ತಮ್ಮ ಪ್ರವಾಸ ಮುಂದುವರಿಸಿದ ತರುವಾಯ ಅನಂತಪ್ಪನವರು ಶ್ರೀ ನರಸಿಂಹ ಸಾಲಿಗ್ರಾಮವನ್ನು ಪ್ರತಿನಿತ್ಯ ಅತ್ಯಂತ ಭಕ್ತಿಯಿಂದ ಪೂಜಿಸತೊಡಗಿದರು ಮತ್ತು ಸಮಯ ಕಳೆದಂತೆ ಅವರಲ್ಲಿ ಬಹಳಷ್ಟು ರೂಪಾಂತರದ ಬದಲಾವಣೆಯಾಯಿತು. ಅವರು ಅದ್ಭುತ ರೀತಿಯಲ್ಲಿ ಸಾಲಿಗ್ರಾಮದೊಂದಿಗೆ ಸಂವಹನವನ್ನು ನಡೆಸಿ, ಪ್ರತಿನಿತ್ಯ ನೈವೇದ್ಯವನ್ನು ಸ್ವೀಕರಿಸುತ್ತಿದ್ದರು.
ಹೀಗೆ ಹಲವು ವರ್ಷಗಳು ಕಳೆದಂತೆ ಶ್ರೀ ವಿಬುಧೇಂದ್ರತೀರ್ಥರು ಶ್ರೀಮದಾಚಾರ್ಯರ ತತ್ವಜ್ಞಾನದ ಪ್ರಸಾರಕಾರ್ಯನಿಮಿತ್ತ ಶಿವಪುರಕ್ಕೆ ಬಂದಾಗ ಮತ್ತೆ ಅನಂತಪ್ಪನವರ ಭೇಟಿಯಾದಾಗ, ಶಿಷ್ಯನಲ್ಲಿ ಆದ ರೂಪಾಂತರವನ್ನು ತಕ್ಷಣವೇ ಗುರುತಿಸಿದರು. ಅನಂತಪ್ಪನವರು ಸಾಲಿಗ್ರಾಮವನ್ನು ಪ್ರತಿನಿತ್ಯ ಭಕ್ತಿಯಿಂದ ಪೂಜಿಸುವ, ನೈವೇದ್ಯವನ್ನು ಸ್ವೀಕರಿಸುವುದನ್ನು ತಿಳಿದು, ಕಣ್ಣಾರೆ ಕಂಡು ತಮ್ಮ ನಂತರ ದಕ್ಷಿಣಾಧಿ ಕವೀಂದ್ರ ಮಠಕ್ಕೆ ಉತ್ತರಾಧಿಕಾರಿಯಾಗಲು ಅತ್ಯಂತ ಸೂಕ್ತ ವ್ಯಕ್ತಿಯೆಂದು ನಿರ್ಧರಿಸಿದರು. ಅಂತೆಯೇ ಅನಂತಪ್ಪನವರಿಗೆ ಸನ್ಯಾಸ ದೀಕ್ಷೆ ನೀಡಿ ಶ್ರೀ ಜಿತಾಮಿತ್ರ ತೀರ್ಥರೆಂದು ಕರೆದು, ತಮ್ಮೊಂದಿಗೆ ಕರೆದೊಯ್ದರು ಮತ್ತು ತಮ್ಮ ಇತರ ಪ್ರಖ್ಯಾತ ವಿದ್ಯಾರ್ಥಿಗಳ ಜೊತೆಯಲ್ಲಿ ಔಪಚಾರಿಕ ಶಿಕ್ಷಣವನ್ನು ಆರಂಭ ಮಾಡಿದರು. ಹೀಗೆ ಶ್ರೀಪಾದರಾಜರು (ಶ್ರೀ ಲಕ್ಷ್ಮೀನಾರಾಯಣ ತೀರ್ಥರು), ಶ್ರೀ ಪುರುಷೋತ್ತಮತೀರ್ಥರು, ಶ್ರೀ ಬ್ರಹ್ಮಣ್ಯತೀರ್ಥರು ಮತ್ತಿತರರು, ಶ್ರೀ ಜಿತಾಮಿತ್ರ ತೀರ್ಥರು ಶ್ರೀಮದಾಚಾರ್ಯರ ತತ್ವಜ್ಞಾನವನ್ನು, ವೇದಾಂತ ಶಾಸ್ತ್ರವನ್ನು ತ್ವರಿತವಾಗಿ ಕಲಿತರು, ಕರಗತ ಮಾಡಿಕೊಂಡ ಆ ಕಾಲದ ಶ್ರೇಷ್ಠ ವಿದ್ವಾಂಸರಾಗಿದ್ದರು. ಶ್ರೀಪಾದರಾಜರು ಶ್ರೀ ಜಿತಾಮಿತ್ರ ತೀರ್ಥರ ಮತ್ತು ಅವರ ಕೊಡುಗೆಗಳನ್ನು ಸ್ತುತಿಸಿ ಹಾಡನ್ನು ರಚಿಸಿದ್ದಾರೆ.
ಶ್ರೀ ಜಿತಾಮಿತ್ರತೀರ್ಥರು ತಮ್ಮ ಗುರುಗಳು ನೀಡಿದ ದಕ್ಷಿಣಾಧಿ ಕವೀಂದ್ರ ಮಠದ ಮಹಾಸಂಸ್ಥಾನವನ್ನು ಬಹಳ ಸಮರ್ಥ ರೀತಿಯಲ್ಲಿ ನಡೆಸುವ, ಅಭಿವೃದ್ಧಿಪಡಿಸುವಲ್ಲಿ ಯಶಸ್ಸನ್ನ ಕಂಡರು.
ಸ್ವಾಮಿಗಳು ತಮ್ಮ ಪ್ರವಾಸದ ಸಮಯದಲ್ಲಿ ಅವರು ತಂಗುತ್ತಿದ್ದ ಸ್ಥಳಗಳಲ್ಲಿನ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತಿದ್ದರು.ಅದೇ ರೀತಿಯಲ್ಲಿ ಬಿಚ್ಚಾಲಿ ಮತ್ತಿತರ ಸ್ಥಳಗಳಲ್ಲಿ ಪ್ರಾಣದೇವರ ಪ್ರತಿಷ್ಠಾಪನೆಯನ್ನು ಮಾಡಿ ಆ ಪ್ರದೇಶದಲ್ಲಿನ ದುರ್ಘಟನೆಗಳಿಂದ ಆಗುವ ಪ್ರಾಣಹಾನಿಗಳನ್ನು ತಡೆಯುವ ಕಾರ್ಯ ಮಾಡಿದರು.
ಶ್ರೀ ಜಿತಾಮಿತ್ರ ತೀರ್ಥರು ವಿಜಯನಗರದ ವಿದ್ವಾಂಸರಾಗಿದ್ದ ಶ್ರೀ ರಾಮಚಂದ್ರಾಚಾರ್ಯರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ,ಅವರಿಗೆ ರಘುನಂದನ ತೀರ್ಥರೆಂದು ನಾಮಕರಣ ಮಾಡಿ ತಮ್ಮ ಉತ್ತರಾಧಿಕಾರಿಯಾಗಿಸಿದರು. ಹೀಗೆ ಅವರು ಶ್ರೀ ವಿಬುಧೇಂದ್ರ ತೀರ್ಥರಿಂದ ಮತ್ತು ಶ್ರೀ ರಾಮಚಂದ್ರ ತೀರ್ಥರಿಂದ ಪಡೆದ ಪರಂಪರೆಯನ್ನು ಶ್ರೀ ರಘುನಂದನ ತೀರ್ಥರಿಗೆ ಹಸ್ತಾಂತರ ಮಾಡಿದರು. ಶ್ರೀ ಜಿತಾಮಿತ್ರ ತೀರ್ಥರು ಶ್ರೀ ರಘುನಂದನ ತೀರ್ಥರಿಗೆ ಶ್ರೀ ಮೂಲರಾಮರ ಮೂರ್ತಿಯನ್ನು ಮರಳಿ ತರಲು ಶ್ರೀ ವಿಬುಧೇಂದ್ರ ತೀರ್ಥರ ಸೂಚನೆಯನ್ನು ನೆನಪಿಸಿ, ರವಾನಿಸಿ ಮತ್ತು ತಮ್ಮ ಬದ್ಧತೆಯನ್ನು ಪಡೆದರು.
ನಂತರದ ದಿನಗಳಲ್ಲಿ ಶ್ರೀಗಳು ಕೃಷ್ಣಾ ಮತ್ತು ಭೀಮಾ ನದಿಗಳ ದಡದಲ್ಲಿ ತಮ್ಮ ದಿನಗಳನ್ನು ಕಳೆದರು. ತಮ್ಮ ಜೀವಿತಾವಧಿಯಲ್ಲಿ ಹಲವಾರು ಪವಾಡಗಳನ್ನ ಮಾಡುತ್ತ ಬಂದ ಶ್ರೀ ಜಿತಾಮಿತ್ರ ತೀರ್ಥರ ಅಂತ್ಯವೂ ಕೂಡ ಬಹಳ ವಿಶೇಷವಾಗಿದೆ. ಮಾಧ್ವ ಸಂಪ್ರದಾಯದಲ್ಲಿ ಬರುವ ಕೇವಲ ಮೂರು ಪ್ರಸಂಗಗಳಲ್ಲಿ ಓರ್ವ ಸನ್ಯಾಸಿಯು ಸಾಮಾನ್ಯ ಜನರ ಕಣ್ಣುಗಳಿಂದ ಕಣ್ಮರೆಯಾದ ಉಲ್ಲೇಖಗಳಿವೆ. ಮೊದಲು ಶ್ರೀಮದಾಚಾರ್ಯರು ಉಡುಪಿಯಲ್ಲಿ ಅನಂತೇಶ್ವರನ ಸಾನಿಧ್ಯದಲ್ಲಿ ಅಂತರ್ಧಾನರಾದರೆ, ಶ್ರೀ ಜಿತಾಮಿತ್ರರ ಸಮಕಾಲೀನರಾಗಿದ್ದ ಶ್ರೀ ಪುರುಷೋತ್ತಮ ತೀರ್ಥರು ಅಬ್ಬೂರಿನ ಬಳಿಯ ಗುಹೆಯಲ್ಲಿ ಕಣ್ಮರೆಯಾದರು. ಮೂರನೆಯವರಾದ ಶ್ರೀ ಜಿತಾಮಿತ್ರ ತೀರ್ಥರು ಮಾರ್ಗಶಿರ ಮಾಸದ ಅಷ್ಟಮಿ ತಿಥಿಯ ದಿನದಂದು ಎಂದಿನಂತೆ ಕೃಷ್ಣ ನದಿಯ ಹರಿವಿನ ನೀರಿನಲ್ಲಿ ಮುಳುಗಿ ಕುಳಿತರು.
ಹಿಂದಿನಂತೆಯೇ ನದಿಯ ಹರಿವು ಕಡಿಮೆಯಾಗಿ ಗುರುಗಳು ಹೊರಬರುವ ನಿರೀಕ್ಷೆಯಲ್ಲಿದ್ದ ಶಿಷ್ಯರಿಗೆ ಈ ಬಾರಿ ಅಚ್ಚರಿಯೊಂದು ಕಾದಿತ್ತು. ಅಮವಾಸ್ಯೆಯ ದಿನ ಹರಿವು ಕಡಿಮೆಯಾದಾಗ, ದ್ವೀಪದಮಧ್ಯದಲ್ಲಿ ಕಪ್ಪುಮಣ್ಣಿನ ಸಣ್ಣ ಗುಡ್ಡವನ್ನು ಮಾತ್ರ ಕಂಡರು.
ಅಂದೇ ರಾತ್ರಿ ಕನಸಿನಲ್ಲಿ ಗುರುಗಳನ್ನು ಹುಡುಕುವ ಪ್ರಯತ್ನಗಳು ಬೇಡ, ಅವರು ತಮ್ಮ ಅವತಾರವನ್ನು ಮುಗಿಸಿದ್ದಾರೆ ಮತ್ತು ಅವರು ಗೊನಡ ಮರದಲ್ಲಿ ಇದ್ದು, ಅಲ್ಲಿಯೇ ಚಿಗುರೊಡೆಯುತ್ತಾರೆ ಎಂಬ ವಿಷಯ ತಿಳಿದ ಶ್ರೀ ರಘುನಂದನ ತೀರ್ಥರು ಅಲ್ಲಿಯೇ ಎಲ್ಲ ಸಾಂಪ್ರದಾಯಿಕ ಹಕ್ಕುಗಳು, ಸಮಾರಾಧನೆಯನ್ನು ನೆರವೇರಿಸಿದರು. ಅಂದಿನಿಂದ ಶ್ರೀ ಜಿತಾಮಿತ್ರ ಅಂಶವಿರುವುದರಿಂದ ಆ ಗೊನೆಯ ಮರವನ್ನು ಪೂಜಿಸುವ, ಆರಾಧನೆಯನ್ನು ಮಾಡುತ್ತ ಬಂದಿರುವರು. ಶ್ರೀ ಜಿತಾಮಿತ್ರ ತೀರ್ಥರು ಕಣ್ಮರೆಯಾದ ಸ್ಥಳವನ್ನು ಜಿತಾಮಿತ್ರ ದ್ವೀಪ/ ಜಿತಾಮಿತ್ರ ಗಡ್ಡಿ ಎಂದು ಕರೆಯಲಾಗುತ್ತದೆ. ಈ ವರ್ಷ ಡಿಸೆಂಬರ 19, ಮಾರ್ಗಶಿಷ್ಯ ಅಮಾವಾಸ್ಯೆಯಂದು ಶ್ರೀ ಜಿತಾಮಿತ್ರತೀರ್ಥರ ಆರಾಧನೆಯು ಜರಗುತ್ತದೆ.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


