ಸೌರಮಾನ ಪದ್ಧತಿಯಲ್ಲಿ ಮುಖ್ಯವಾಗಿ “ನಿರಯನ ಪದ್ಧತಿ” (Sidereal System) ಮತ್ತು “ಸಾಯನ ಪದ್ಧತಿ” (Tropical System) ಗಳೆಂಬ ಎರಡು ವಿಧಗಳಿವೆ.
ನಿರಯನ ಪದ್ಧತಿಯು ವೇದಗಳ ಕಾಲದಿಂದಲೂ ನಾವು ಭಾರತೀಯರು ಅನುಸರಿಸುತ್ತಿರುವ, ಜ್ಯೋತಿಷ ಶಾಸ್ತ್ರದ ತಳಹದಿ ಇರುವ ಪದ್ಧತಿಯಾಗಿದೆ. ಈ ನಿರಯನ ಪದ್ಧತಿಯು ಅಂತರಿಕ್ಷದಲ್ಲಿ ಸ್ಥಿರವಾಗಿರುವ ನಕ್ಷತ್ರಗಳು ಮತ್ತು ನಕ್ಷತ್ರಪುಂಜಗಳ ಸ್ಥಾನಗಳನ್ನು ಆಧರಿಸಿ ರಚಿತವಾಗಿದೆ. ನಕ್ಷತ್ರಗಳು ಎಂದೂ ಕೂಡಾ ತಮ್ಮ ಸ್ಥಾನ ಬಿಟ್ಟು ಕದಲದೇ ಸ್ಥಿರವಾಗಿ ಇರುವುದರಿಂದ ಈ ನಿರಯನ ಪದ್ಧತಿಯಲ್ಲಿಯೂ ಕೂಡಾ ದಿನಾಂಕಗಳು ಸ್ಥಿರವಾಗಿಯೇ ಇರುತ್ತದೆ, ಅವು ಎಂದೂ ಬದಲಾಗುವುದಿಲ್ಲ.
ಭೂಮಿಯಿಂದ ನೋಡುವಾಗ ಸೂರ್ಯನೇ ಭೂಮಿಯ ಸುತ್ತ ಸುತ್ತುತ್ತಿದ್ದಾನೆ ಎಂಬ ಭ್ರಮೆಯಾಗುತ್ತದೆ. ಅಂತರಿಕ್ಷದಲ್ಲಿ ಭೂಮಿಯ ಸುತ್ತ ಸುತ್ತುತ್ತಿರುವ ಸೂರ್ಯನ ಆ ಕಾಲ್ಪನಿಕ ಕಕ್ಷೆಯನ್ನು “ಕ್ರಾಂತಿವೃತ್ತ” (Ecliptic) ಎನ್ನುತ್ತಾರೆ. ಆ ಕ್ರಾಂತಿವೃತ್ತವನ್ನು ಒಟ್ಟು 12 ಸಮ ಭಾಗಗಳಾಗಿ ವಿಭಾಗಿಸಿದರೆ ಪ್ರತಿಯೊಂದು ಭಾಗಕ್ಕೂ 30 ಡಿಗ್ರಿ ವ್ಯಾಪ್ತಿ ಸಿಗುತ್ತದೆ. ಭೂಮಿಯಿಂದ ನೋಡುವಾಗ ಈ ಪ್ರತಿಯೊಂದು 30 ಡಿಗ್ರಿ ವ್ಯಾಪ್ತಿಯ ಭಾಗಕ್ಕೂ ಹಿನ್ನೆಲೆಯಲ್ಲಿ ಒಂದೊಂದರಂತೆ ಒಟ್ಟು 12 ನಕ್ಷತ್ರಪುಂಜಗಳು ಕಾಣಿಸುತ್ತವೆ. ಅವುಗಳಿಗೆ “ರಾಶಿ”ಗಳು ಎನ್ನುತ್ತಾರೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಇವೇ ಆ 12 ರಾಶಿಗಳು. ಭೂಮಿಯ ಸುತ್ತಲೂ ಇರುವ ಈ 12 ರಾಶಿಗಳ ವೃತ್ತಾಕಾರದ ಚಕ್ರಕ್ಕೆ “ರಾಶಿಚಕ್ರ” ಎನ್ನುತ್ತಾರೆ. ರಾಶಿಚಕ್ರದಲ್ಲಿ ಧನುರಾಶಿಯು ಅತ್ಯಂತ ದಕ್ಷಿಣದಲ್ಲಿದ್ದು, ಮಿಥುನರಾಶಿಯು ಅತ್ಯಂತ ಉತ್ತರದಲ್ಲಿದೆ.
ರಾಶಿಚಕ್ರದ ಪ್ರತಿಯೊಂದು ರಾಶಿಯಲ್ಲಿಯೂ ಸೂರ್ಯನು ಒಂದೊಂದು ತಿಂಗಳು ಇರುತ್ತಾನೆ. ಸೂರ್ಯನು ಒಂದು ರಾಶಿಯನ್ನು ಬಿಟ್ಟು ಇನ್ನೊಂದು ರಾಶಿಯನ್ನು ಪ್ರವೇಶಿಸುವ ದಿನವನ್ನು “ಸಂಕ್ರಾಂತಿ” ಎನ್ನುತ್ತಾರೆ. ಒಂದು ವರ್ಷಕ್ಕೆ ಒಟ್ಟು 12 ಸಂಕ್ರಾಂತಿಗಳು. ಪ್ರತಿಯೊಂದು ಸಂಕ್ರಾಂತಿಯನ್ನೂ ಅದರ ಮುಂದಿನ ರಾಶಿಯ ಹೆಸರಿನಿಂದ ಕರೆಯುತ್ತಾರೆ. ಒಂದು ಸಂಕ್ರಾಂತಿಯಿಂದ ಇನ್ನೊಂದು ಸಂಕ್ರಾಂತಿಯವರೆಗಿನ ಆ ಒಂದು ತಿಂಗಳನ್ನು ಆ ರಾಶಿಯ ಹೆಸರಿನಿಂದಲೇ ಕರೆಯಲಾಗುತ್ತದೆ. ಹೀಗೆ ಒಂದು ನಿರಯನ ವರ್ಷಕ್ಕೆ ಮೇಷ (ಪಗ್ಗು), ವೃಷಭ (ಬೇಸಗೆ), ಮಿಥುನ (ಕಾರ್), ಕರ್ಕಾಟಕ (ಆಸಾಡಿ), ಸಿಂಹ (ಸೋಣೆ), ಕನ್ಯಾ (ಕನ್ನೆ), ತುಲಾ (ದಿವಾಳಿ), ವೃಶ್ಚಿಕ (ಕೊಡಿ), ಧನು (ಹಂಚೇಸಿ), ಮಕರ (ಬಾರಾತ್), ಕುಂಭ (ಶಿವರಾತ್ರಿ) ಮತ್ತು ಮೀನ (ಸುಗ್ಗಿ) ಮಾಸಗಳೆಂಬ ಹನ್ನೆರಡು ತಿಂಗಳುಗಳು ಇರುತ್ತವೆ. ಮತ್ತು ಮೇಷ ತಿಂಗಳು ನಿರಯನ ವರ್ಷದ ಮೊದಲ ತಿಂಗಳಾಗಿದ್ದು, ಮೇಷ ಸಂಕ್ರಾಂತಿಯ ಮರುದಿನವು ಹೊಸ ವರ್ಷದ ಯುಗಾದಿಯ ದಿನವಾಗಿರುತ್ತದೆ. ಇದನ್ನು ಎಲ್ಲರೂ ಸೌರಮಾನ ಯುಗಾದಿ ಎಂದೇ ಕರೆಯುತ್ತಾರೆ.
6 ತಿಂಗಳ ಸಮಯವನ್ನು ಒಂದು “ಅಯನ” ಎನ್ನುತ್ತಾರೆ. ಹೀಗಾಗಿ ಒಂದು ವರ್ಷಕ್ಕೆ 2 ಅಯನಗಳಾಗುತ್ತವೆ. ಮಕರ ಸಂಕ್ರಾಂತಿಯಿಂದ ಅಂದರೆ ಅಂದಾಜು ಜನವರಿ 14 ರಿಂದ ಕರ್ಕಾಟಕ ಸಂಕ್ರಾಂತಿಯವರೆಗಿನ ಅಂದರೆ ಅಂದಾಜು ಜುಲಾಯಿ 16 ರವರೆಗಿನ 6 ತಿಂಗಳ ಅವಧಿಯು ಒಂದು ಅಯನವಾಗಿರುತ್ತದೆ. ಈ ಅಯನದಲ್ಲಿ ಅತ್ಯಂತ ದಕ್ಷಿಣದ ಧನುರಾಶಿಯಲ್ಲಿದ್ದ ಸೂರ್ಯನು ಉತ್ತರದ ಕಡೆಗೆ ಚಲಿಸುವುದರಿಂದ ಇದನ್ನು “ಉತ್ತರಾಯನ” ಅಥವಾ “ಉತ್ತರಾಯಣ” ಎನ್ನುತ್ತಾರೆ. ಈ ಮಕರ ಸಂಕ್ರಾಂತಿಯ ದಿನದಿಂದಲೇ ಸೂರ್ಯನು ತನ್ನ ಚಲನೆಯ ದಿಕ್ಕನ್ನು ಬದಲಾಯಿಸಿ, ಉತ್ತರದ ಕಡೆಗೆ ಪಯಣ ಆರಂಭಿಸುತ್ತಾನೆ. ಹೀಗಾಗಿ ಮಕರಸಂಕ್ರಾಂತಿಯ ದಿನವನ್ನು ನಾವು “ಉತ್ತರಾಯಣ ಪುಣ್ಯಕಾಲ” ಎಂದು ಆಚರಿಸುತ್ತೇವೆ.
ಕರ್ಕಾಟಕ ಸಂಕ್ರಾಂತಿಯಿಂದ ಅಂದರೆ ಅಂದಾಜು ಜುಲಾಯಿ 16 ರಿಂದ ಮಕರ ಸಂಕ್ರಾಂತಿಯವರೆಗಿನ ಅಂದರೆ ಅಂದಾಜು ಜನವರಿ 14 ರವರೆಗಿನ ಆರು ತಿಂಗಳ ಅವಧಿಯು ಇನ್ನೊಂದು ಅಯನವಾಗಿರುತ್ತದೆ. ಈ ಅಯನದಲ್ಲಿ ಅತ್ಯಂತ ಉತ್ತರದ ಮಿಥುನರಾಶಿಯಲ್ಲಿದ್ದ ಸೂರ್ಯನು ದಕ್ಷಿಣದ ಕಡೆಗೆ ಚಲಿಸುವುದರಿಂದ ಇದನ್ನು “ದಕ್ಷಿಣಾಯನ” ಎನ್ನುತ್ತಾರೆ. ಈ ಕರ್ಕಾಟಕ ಸಂಕ್ರಾಂತಿಯ ದಿನದಿಂದಲೇ ಸೂರ್ಯನು ತನ್ನ ಚಲನೆಯ ದಿಕ್ಕನ್ನು ಬದಲಾಯಿಸಿ, ದಕ್ಷಿಣದ ಕಡೆಗೆ ಪಯಣ ಆರಂಭಿಸುತ್ತಾನೆ. ಹೀಗಾಗಿ ಕರ್ಕಾಟಕ ಸಂಕ್ರಾಂತಿಯ ದಿನವನ್ನು ನಾವು “ದಕ್ಷಿಣಾಯನ ಪುಣ್ಯಕಾಲ” ಎಂದು ಆಚರಿಸುತ್ತೇವೆ.
ಹೀಗೆ ಒಂದು ನಿರಯನ ವರ್ಷ (Sidereal Year) ದಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯನಗಳೆಂಬ 2 ಅಯನಗಳು ಇರುತ್ತವೆಯಾದರೂ , ಅವು ವರ್ಷದ ಮೊದಲ 6 ತಿಂಗಳು ಮತ್ತು ನಂತರದ 6 ತಿಂಗಳುಗಳಲ್ಲ ಎಂಬುದನ್ನು ಗಮನಿಸಿಕೊಳ್ಳಬೇಕು. ಅದೇರೀತಿ ಇಲ್ಲಿ ಅಯನಗಳೆಂದರೆ ದಿಗಂತದಲ್ಲಿ ಸೂರ್ಯನು ಲೋಲಕದ ಹಾಗೆ ಉತ್ತರದಿಂದ ದಕ್ಷಿಣಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಚಲಿಸಲು ತೆಗೆದುಕೊಳ್ಳುವ ಅವಧಿ ಅಲ್ಲ ಎಂಬುದನ್ನು ಕೂಡಾ ಗಮನಿಸಿಕೊಳ್ಳಬೇಕು. ಒಂದು ಅಯನವೆಂದರೆ ಸೂರ್ಯನು ಕ್ರಾಂತಿವೃತ್ತದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಚಲಿಸಲು ತೆಗೆದುಕೊಳ್ಳುವ ಅವಧಿಯಾಗಿರುತ್ತದೆ. ಒಂದು ನಿರಯನ ಸೌರ ವರ್ಷವೆಂದರೆ ಕ್ರಾಂತಿವೃತ್ತದಲ್ಲಿ ಮೇಷರಾಶಿಯ ಅಶ್ವಿನೀ ನಕ್ಷತ್ರದಿಂದ ಹೊರಟ ಸೂರ್ಯನು ಒಂದು ಸುತ್ತು ಬಂದು ಮರಳಿ ಅಶ್ವಿನೀ ನಕ್ಷತ್ರಕ್ಕೆ ಬಂದು ಸೇರುವವರೆಗಿನ ಅವಧಿಯಾಗಿರುತ್ತದೆ. ಅದು ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಸಮಯಕ್ಕೆ ಸಮವಾಗಿರುತ್ತದೆ. ಅದು 365.258 ದಿನಗಳಿಗೆ ಸಮವಾಗಿರುತ್ತದೆ.
- ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


