ದೇಶ ಬೆಳೆದಂತೆ ನಾವು ಬೆಳೆಯುತ್ತೇವೆ: ಕೆ. ಉಲ್ಲಾಸ್ ಕಾಮತ್
ಮಂಗಳೂರು: ದೇಶ ಬೆಳವಣಿಗೆಯ ಏರುಹಾದಿಯಲ್ಲಿದೆ. ದೇಶ ಬೆಳೆದಂತೆ ನಾವು ಬೆಳೆಯುತ್ತೇವೆ. ತಾಯ್ನಾಡು ದೇಶದಲ್ಲೇ ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಬೆಂಗಳೂರಿನ ಯುಕೆ ಆಂಡ್ ಕೋ ಇದರ ಸಂಸ್ಥಾಪಕ ಕೆ. ಉಲ್ಲಾಸ್ ಕಾಮತ್ ಅವರು ಅಭಿಪ್ರಾಯಪಟ್ಟರು.
ವಳಚ್ಚಿಲ್ ಕ್ಯಾಂಪಸ್ಸಿನಲ್ಲಿ 40ನೇ ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆಯ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವೇ ಅತ್ತ್ಯುತ್ತಮ ಜೀವನ. ಗುರುಗಳು ಉಪದೇಶದಂತೆ ಮುನ್ನಡೆದರೆ ಯಶಸ್ಸು ಖಚಿತ. ಜ್ಞಾನ, ಬುದ್ಧಿವಂತಿಕೆ ಮತ್ತು ಸಾಮಾನ್ಯ ಜ್ಞಾನದೊಂದಿಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಹೊಂದಿರುವ ವ್ಯಕ್ತಿಗೆ ಜೀವನದಲ್ಲಿ ಸೋಲಿಲ್ಲ. ಧೈರ್ಯ, ಗುಣ, ಬದ್ಧತೆ, ಸಾಮರ್ಥ್ಯದಿಂದ ಬದುಕಿನಲ್ಲಿ ಯಶಸ್ಸು ಗಳಿಸಬಹುದು ಎಂದವರು ವಿವರಿಸಿದರು.
ಲಾಂಛನ ಅನಾವರಣ:
40ನೇ ಎಕ್ಸ್‌ಪರ್ಟ್ ಕಾಲೇಜು ದಿನಾಚರಣೆಯ ಸ್ಮರಣಾರ್ಥ ರೂಪಿಸಿದ ಲಾಂಛನವನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಮಾತನಾಡಿ, ಕಠಿಣ ಪರಿಶ್ರಮಪಟ್ಟವರು ದೇಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ದೇಶದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ 605 ವಿದ್ಯಾರ್ಥಿಗಳು ಮೆಡಿಕಲ್ ಸೀಟು ಗಳಿಸಿರುವುದು ಅಸಾಮಾನ್ಯ ಸಾಧನೆಯಾಗಿದೆ. ಈ ಮೂಲಕ ದೇಶದ ಬೆಳವಣಿಗೆಗೆ ಎಕ್ಸ್‌ಪರ್ಟ್ ತನ್ನದೇ ಕೊಡುಗೆ ನೀಡಿದೆ ಎಂದು ತಮ್ಮ ಹೆಮ್ಮೆ ವ್ಯಕ್ತಪಡಿಸಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ದೇಶದ ಉದ್ದಗಲ ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಅಮೂಲ್ಯ ಕೊಡುಗೆ ಗಮನಿಸಿದಾಗ ಕಳೆದ ನಾಲ್ಕು ದಶಕಗಳ ನಮ್ಮ ಅವಿರತ ಶ್ರಮಕ್ಕೆ ಫಲ ಲಭಿಸಿದೆ ಎಂದು ಅಭಿಮಾನ ಮತ್ತು ಸಂತಸವಾಗುತ್ತದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಎಕ್ಸ್‌ಪರ್ಟ್ ಸಾಧನ ಪುರಸ್ಕಾರ ವಿಜೇತರು:
ಎಕ್ಸ್‌ಪರ್ಟ್ ಶೈಕ್ಷಣಿಕ ಸಾಧನ ಪುರಸ್ಕಾರಕ್ಕೆ ಅಂಕಿತ್ ಅಶೋಕ್ ದೊಡವಾಡ್, ಎಕ್ಸ್‌ಪರ್ಟ್ ಶೈಕ್ಷಣಿಕೇತರ ಸಾಧನ ಪುರಸ್ಕಾರಕ್ಕೆ ಗೌತಮ್ ಜಿ. ಮತ್ತು ಎಕ್ಸ್‌ಪರ್ಟ್ ಸ್ಟಾರ್ ಪುರಸ್ಕಾರಕ್ಕೆ ಉಜ್ವಲ್ ಶಿವಾನಂದ್ ಬೂದಿಹಾಳ್ ಪಾತ್ರರಾದರು.
ಬಳಿಕ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆದವು. ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್, ಸಿಎ. ಎಸ್.ಎಸ್. ನಾಯಕ್, ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್, ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಅಮೀನ್, ಕಾರ್ಯದರ್ಶಿ, ಭವಿಶ್ ಬೆನಕ, ಎಚ್ ಕೆ ಭವ್ಯತಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಕೆ.ವಿಜಯನ್ ಕರಿಪ್ಪಾಲ್ ಸ್ವಾಗತಿಸಿದರು. ಉಪಪ್ರಾಂಶುಪಾಲ ಹಾಗೂ ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಉಡುಪ ವಂದಿಸಿದರು. ಧ್ಯಾನ್, ಬಿಪಿನ್ ರಮೇಶ್, ಸ್ತುತಿ ಕುಲಕರ್ಣಿ, ಮೋಕ್ಷಿತ ಸಾಯಿ ಎಸ್, ಕೆ, ಮೊಹಮ್ಮದ್ ಸಾದ್, ಸುಮುಖ್ ಎಂ, ಚಾರ್ವಿ ಪಿ.ಎ. ಕಾರ್ಯಕ್ರಮ ನಿರೂಪಿಸಿದರು.
ಯೋಗ್ಯತೆಗೆ ತಕ್ಕ ಪರಿಶ್ರಮ-ಜವಾಬ್ದಾರಿ:
ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞರಾದ ದಾವಣಗೆರೆಯ ಡಾ.ಎ.ಎಚ್. ಶಿವಬಸವ ಸ್ವಾಮಿ ಧ್ವಜಾರೋಹಣ ಮಾಡಿ ಮಾತನಾಡಿದರು.
ನಮ್ಮ ಯೋಗ್ಯತೆಗೆ ಪೂರಕವಾಗಿ ಪರಿಶ್ರಮ ಹಾಕುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ಅಮ್ಮ-ಅಪ್ಪ-ಗುರು-ದೇವರ ಭಿಕ್ಷೆಯು ನಮ್ಮ ಉದ್ಧಾರಕ್ಕೆ ಕಾರಣ ಎಂದವರು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ತ್ರೀ ರೋಗ ತಜ್ಞರಾದ ಡಾ. ದಿವಾಕರ್ ಬಹುಮಾನಗಳನ್ನು ವಿತರಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

