ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ, ಯಕ್ಷಗಾನ ಕಲಾವಿದ, ಕವಿ, ಲೇಖಕ , ನಾಟಕಕಾರ, ಸಂಘಟಕ ಯೋಗೀಶ್ ಕಾಂಚನ್ ಬೈಕಂಪಾಡಿ ಅವರು ಸೋಮವಾರ (ಡಿ.29) ನಮ್ಮನ್ನಗಲಿದ್ದಾರೆ.
ಡಾ. ಪಾಲ್ತಾಡಿಯವರು ತುಳು ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನಾವು ಸದಸ್ಯರಾಗಿ 3 ವರ್ಷ ಜತೆಗಿದ್ದೆವು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಯೋಗೀಶ್ ಕಳೆದ ಬಾರಿ ಆರ್ಯಭಟ ಪ್ರಶಸ್ತಿ ಪಡೆಯುವಲ್ಲಿ ನಾನೂ ಒಂದಷ್ಟು ಪ್ರಯತ್ನಿಸಿದ್ದೆ. ಮೈಸೂರಿನಲ್ಲಿ ಮೊನ್ನೆ ನಡೆದ ದಸರಾ ಕವಿಗೋಷ್ಠಿಯಲ್ಲಿ ಅವರು ತುಳು ಭಾಷೆಯನ್ನು ಪ್ರತಿನಿಧಿಸಿದ್ದರು. ಅದಾದ ಬಳಿಕ V4 ನ್ಯೂಸ್ ನ ದೀಪಾವಳಿ ಕಾವ್ಯಾಂಜಲಿಗೆ ಅವರನ್ನು ಕರೆದಿದ್ದೆ. ಆದರೆ ಅವರ ಅಕಾಲಿಕ ನಿಧನ ತೀರಾ ಅನಿರೀಕ್ಷಿತ. ಸಜ್ಜನ, ನಿಗರ್ವಿ, ಸ್ನೇಹಶೀಲ ಕಾಂಚನ್ ನಿಜಾರ್ಥದಲ್ಲಿ ಕಾಂಚನವೆ ಎಂದು ಹಿರಿಯ ಯಕ್ಷ ಸಂಘಟಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಸ್ಮರಿಸಿಕೊಂಡಿದ್ದಾರೆ.
ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2023-2024ರ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಯೋಗೀಶ್ ಕಾಂಚನ್ ಬೈಕಂಪಾಡಿ ಅವರು ದಿನಾಂಕ 23-06-2024ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದಿದ್ದಾರೆ.
ಬೈಕಂಪಾಡಿಯ ಮೀನಕಳಿಯದ ನಿವಾಸಿಯಾದ ಇವರೋರ್ವ ಹವ್ಯಾಸಿ ಯಕ್ಷಗಾನ ಕಲಾವಿದ. ತುಳುವಿನಲ್ಲಿ ‘ಮಣ್ಣ್ ದ ಮಗಳ್’, ‘ಸತ್ಯೋದ ಬಾಲೆಲ್’ ಮತ್ತು ಕೈಯಲ್ತ ಗುಳಿಗೆ’ ಹಾಗೂ ಕನ್ನಡದಲ್ಲಿ ‘ನಾಗ ಕನ್ನಿಕೆ’ ಎಂಬ ಯಕ್ಷಗಾನ ಪ್ರಸಂಗಗಳ ಕೃರ್ತ ಇವರಾಗಿದ್ದಾರೆ. ‘ಕಂಚಿಲ್’ (ತುಳು) ‘ವಾಸ್ತವತೆ’ ಮತ್ತು ‘ನಗ್ನ ಸತ್ಯ’ (ಕನ್ನಡ) ಇವು ಇವರ ಕವನ ಸಂಕಲನಗಳು. ‘ಚಿತ್ರಾಪುರೋತ ಸಿರಿದೇವಿ ಉಳ್ಳಾಲ್ದಿ’ (ತುಳು ನಾಟಕ), ‘ಪನ್ನಂಬರೋ’ (ತುಳು ಕಥಾ ಸಂಕಲನ), ತಂಞಣ ಬೊಲ್ಲಿ (ತುಳು ಕವನ ಸಂಕಲನ) ಇವೆಲ್ಲಾ ಪ್ರಕಟಿತ ಕೃತಿಗಳು. ಅಪ್ರಕಟಿತ ಅನೇಕ ತುಳು, ಕನ್ನಡ ಕಾದಂಬರಿಗಳು, ಯಕ್ಷಗಾನ ಪ್ರಸಂಗಗಳಿವೆ. ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವು ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗೆ ಸಂದ ಗೌರವ. ಅನೇಕ ಕವಿಗೋಷ್ಠಿಗಳಲ್ಲಿ ಅಧ್ಯಕ್ಷತೆ ವಹಿಸಿದ ಇವರ ಬರಹಗಳು ಆಕಾಶವಾಣಿಯಲ್ಲಿ ಬಿತ್ತರವಾಗಿದೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ತುಳು, ಕನ್ನಡಕ್ಕೆ ಸಂಬಂಧಪಟ್ಟ ಕಥೆ, ಕವನ, ಲೇಖನಗಳು ಮತ್ತು ಅಂಕಣ ಬರಹಗಳು ಪ್ರಕಟವಾಗಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

