ಉಡುಪಿ: ಪರಸ್ತ್ರೀ ಅಪಹರಣ ಭೂಷಣವಲ್ಲ. ಅಂಥವರಿಂದ ವಿನಾಶ ಕಂಡ ಅನೇಕ ಉದಾಹರಣೆಗಳಿವೆ. ಯುದ್ಧಕ್ಕೆ ಭುಜಬಲ ಒಂದೇ ಸಾಲದು ಧರ್ಮದ ಬಲವೂ ಬೇಕು. ಶ್ರೀರಾಮನು ಸಾಮಾನ್ಯ ಮನುಷ್ಯನಲ್ಲ ಆತನಲ್ಲಿ ದೈವಬಲದ ಶಕ್ತಿ ಇರುವುದರಿಂದ ನೀನು ವಿವೇಚನೆಯನ್ನು ಕಳೆದುಕೊಳ್ಳದೆ ಸೀತೆಯನ್ನು ರಾಮನಿಗೆ ಒಪ್ಪಿಸು ಎಂಬ ತಮ್ಮ ವಿಭೀಷಣದ ಮಾತಿಗೆ ಕುಪಿತನಾದ ರಾವಣ ವಿಭೀಷಣನನ್ನೂ ಹೊರಗೆ ಹಾಕಿದ. ಹಾಗೆ ಅಲ್ಲಿಂದ ಹೊರಬಿದ್ದ ವಿಭೀಷಣ ಶ್ರೀರಾಮನ ರಕ್ಷಣೆಯನ್ನು ಪಡೆಯುತ್ತಾನೆ ಎಂಬುದಾಗಿ ಪ್ರಸಿದ್ಧ ವಿದ್ವಾಂಸರಾದ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ 2025ರ ವರ್ಷ ಪ್ರತೀ ತಿಂಗಳು ರಾಮಸಾಗರಗಾಮಿನೀ ಎಂಬ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ ಉಪನ್ಯಾಸವನ್ನು ಹಮ್ಮಿಕೊಂಡಿದ್ದು ಈ ಮಾಲೆಯ ಕೊನೆಯ ಕಾರ್ಯಕ್ರಮ ದ್ವಾದಶ ಸೋಪಾನ ‘ಮಂಗಲಂ ಕೋಸಲೇಂದ್ರಾಯ’ ಎಂಬ ವಿಷಯದ ಕುರಿತು ಡಿಸೆಂಬರ್ 13ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ಅವರು ಉಪನ್ಯಾಸ ನೀಡಿದರು.
ಯುದ್ಧದಿಂದಾಗುವ ಹಾನಿಗಳನ್ನು ತಪ್ಪಿಸುವುದಕ್ಕಾಗಿ ರಾವಣನ ಜೊತೆ ಸಂಧಾನಕ್ಕಾಗಿ ಅಂಗಧನನ್ನು ಕಳಿಸಿದರೂ ಆತನ ವಿವೇಕದ ಮಾತುಗಳನ್ನು ರಾವಣ ಕೇಳಲೇ ಇಲ್ಲ. ಯುದ್ಧ ಅನಿವಾರ್ಯವಾಗಿ ರಾವಣನ ವಧೆಯಾಗಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿ ಶ್ರೀರಾಮ ಸೀತೆಯೊಂದಿಗೆ ಮತ್ತೆ ಅಯೋಧ್ಯೆಗೆ ಮರಳಿದ ಎಂದು ಉಪನ್ಯಾಸಕ್ಕೆ ಮಂಗಲವನ್ನು ಹಾಡಿದರು.
2025ರ ಇಡೀ ವರ್ಷ ರಾಮಾಯಣ ಉಪನ್ಯಾಸ ಮಾಲೆಯನ್ನು ನಡೆಸಿಕೊಟ್ಟ ಡಾ. ರಾಘವೇಂದ್ರ ರಾವ್ ಪಡುಬಿದ್ರಿ ಹಾಗೂ ಪ್ರತೀ ತಿಂಗಳು ಪ್ರಾರ್ಥನೆಯನ್ನು ನೆರವೇರಿಸಿದ ಕು. ಶಾರ್ವರಿ ಶ್ಯಾನುಭೋಗ್ ಅವರನ್ನು ಗೌರವಿಸಲಾಯಿತು. ಡಾ.ನಾ.ಮೊಗಸಾಲೆ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರ್ವರಿ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ನಿತ್ಯಾನಂದ ಪೈ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


