ಮಲೆನಾಡು, ಅಡಿಕೆ ತೋಟ ಮತ್ತು ನಮ್ಮ 'ನೆಮ್ಮದಿ'ಯ ಪವರ್!

Upayuktha
0

 ಇದ್ರೆ ನೆಮ್ಮದಿಯಾಗಿ ಇರಬೇಕು





​ಜೀವನ ಅನ್ನೋದು ಒಂದು ಅಡಿಕೆ ಮರದ ತರಹ; ನೇರವಾಗಿ ಮೇಲೆ ನೋಡಿದರೆ ಆಕಾಶ ಕಾಣುತ್ತೆ, ಕೆಳಗೆ ನೋಡಿದರೆ ನಾವು ಹಾಕಿದ ಗೊಬ್ಬರ ಕಾಣುತ್ತೆ! ಇತ್ತೀಚಿನ ದಿನಗಳಲ್ಲಿ ಈ ನೆಮ್ಮದಿ ಅನ್ನೋದು ದೊಡ್ಡ ಸಿಟಿಯ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ, ಅದು ನಮ್ಮ ಮಲೆನಾಡಿನ ಅಡಿಕೆ ತೋಟದ ಹಸಿರು ಮಡಿಲಲ್ಲಿ ಅಡಗಿ ಕುಳಿತಿದೆ. ಮಲೆನಾಡಿನಲ್ಲಿ ಹುಟ್ಟಿ, ಅಡಿಕೆ ತೋಟದ ಮಧ್ಯೆ ಬೆಳೆದವರಿಗೆ ಸಿಗುವ ಸಮಾಧಾನವಿದೆಯಲ್ಲ, ಅದು ಇಡೀ ಬ್ರಹ್ಮಾಂಡ ಹುಡುಕಿದರೂ ಬೇರೆಲ್ಲೂ ಸಿಗಲಿಕ್ಕಿಲ್ಲ.


​ನಮ್ಮ ಮಲೆನಾಡಿಗನ ಅಸಲಿ ನೆಮ್ಮದಿ ಇರುವುದೇ ಅಡಿಕೆ ತೋಟದಲ್ಲಿ. ಮುಂಜಾನೆ ಮಂಜಿನ ಮುಸುಕಿನಲ್ಲಿ, ಕೈಯಲ್ಲೊಂದು ಬಿಸಿ ಕಾಫಿ ಲೋಟ ಹಿಡಿದು ತೋಟಕ್ಕೆ ಒಂದು ರೌಂಡ್ ಹಾಕದಿದ್ದರೆ ನಮಗೆ ದಿನವೇ ಶುರುವಾಗುವುದಿಲ್ಲ. ಆದರೆ ಇತ್ತೀಚೆಗೆ ಈ 'ಎಲೆ ಚುಕ್ಕಿ ರೋಗ' ಅನ್ನೋ ಹೊಸ ಅತಿಥಿ ತೋಟಕ್ಕೆ ಕರೆ ಇಲ್ಲದೆ ಎಂಟ್ರಿ ಕೊಟ್ಟಾಗಿನಿಂದ ಸ್ವಲ್ಪ ತಳಮಳ ಶುರುವಾಗಿರುವುದು ನಿಜ. ಆದರೆ ಮಲೆನಾಡಿನ ರೈತ ಮಾತ್ರ ಅದಕ್ಕೆ ಅಷ್ಟು ಸುಲಭವಾಗಿ ಎದೆಗುಂದುವವನಲ್ಲ. ಸಿಟಿಯವರು ಮುಖದ ಮೇಲೆ ಒಂದು ಸಣ್ಣ ಮೊಡವೆ ಬಂದರೆ ದೊಡ್ಡ ಬ್ಯೂಟಿ ಪಾರ್ಲರ್ ಗೆ ಓಡುತ್ತಾರೆ. ಆದರೆ ನಮ್ಮ ರೈತ ಅಡಿಕೆ ಗರಿಯ ಮೇಲೆ ಚುಕ್ಕಿ ಕಂಡರೆ, "ಬಂದ ರೋಗ ಬಂದ ಹಾಗೆ ಹೋಗುತ್ತೆ ಬಿಡು ಮಾರಾಯ" ಎಂದು ಸುಣ್ಣ-ಮೈಲುತುತ್ತದ ಬಕೆಟ್ ಹಿಡಿದು ತೋಟಕ್ಕಿಳಿಯುತ್ತಾನೆ. ಆ ಚುಕ್ಕಿಗಳನ್ನು ನೋಡುತ್ತಾ ಚಿಂತೆ ಮಾಡುವುದಕ್ಕಿಂತ, ಅದಕ್ಕೆ ಮದ್ದು ಅರೆದು "ನೋಡೋಣ ಯಾರಿಗೆ ತಾಕತ್ತು ಜಾಸ್ತಿ ಇದೆ ಅಂತ" ಎಂದು ಸವಾಲು ಹಾಕುವ ಮಲೆನಾಡಿಗನ ಎದೆಗಾರಿಕೆಯೇ ಒಂದು ದೊಡ್ಡ ನೆಮ್ಮದಿ!


​ಮಲೆನಾಡಿನ ರೈತನ ಬುದ್ಧಿವಂತಿಕೆ ಇರುವುದೇ ಈ 'ಮಿಶ್ರ ಬೆಳೆ' ಅಂದರೆ ಉಪ ಬೆಳೆಗಳಲ್ಲಿ. ಅಡಿಕೆ ಮರಕ್ಕೆ ಎಲೆ ಚುಕ್ಕಿ ಕಾಟ ಕೊಟ್ಟರೆ, ಅಕ್ಕಪಕ್ಕದಲ್ಲಿ ಅಡಿಕೆ ಮರವನ್ನೇ ತಬ್ಬಿಕೊಂಡು ಹಬ್ಬಿದ ಕಾಳುಮೆಣಸಿನ ಬಳ್ಳಿ "ನಾನಿದ್ದೇನಲ್ಲಾ ಚಿಂತೆ ಯಾಕೆ?" ಎಂದು ಕಣ್ಣು ಮಿಟುಕಿಸುತ್ತಿರುತ್ತದೆ. ಒಂದು ವೇಳೆ ಅಡಿಕೆ ಸ್ವಲ್ಪ ಕೈಕೊಟ್ಟರೂ, ಈ ಕಪ್ಪು ಬಂಗಾರ (ಕಾಳುಮೆಣಸು) ನಮ್ಮ ಕೈ ಹಿಡಿಯುತ್ತದೆ ಎಂಬ ಧೈರ್ಯವೇ ರೈತನಿಗೆ ಶ್ರೀರಕ್ಷೆ. ಅಡಿಕೆ ಮರದ ಕೆಳಗೆ ರಾಜನಂತೆ ಬೆಳೆದು ನಿಂತ ಬಾಳೆ, ಕಾಫಿ ಗಿಡಗಳು ಮತ್ತು ಏಲಕ್ಕಿಯ ಘಮಲು ರೈತನ ತಲೆಯಲ್ಲಿರುವ ಅರ್ಧ ಚಿಂತೆಯನ್ನು ದೂರ ಮಾಡುತ್ತವೆ. ಅಡಿಕೆಗೆ ರೋಗ ಬಂತು ಅಂತ ಮನೆಯ ಜಗುಲಿಯಲ್ಲಿ ಮುಖ ಸಣ್ಣಗೆ ಮಾಡಿಕೊಂಡು ಕೂರುವ ಬದಲು, ತೋಟಕ್ಕೆ ಹೋಗಿ ಉಪ ಬೆಳೆಗಳ ಯೋಗಕ್ಷೇಮ ವಿಚಾರಿಸುವುದರಲ್ಲೇ ರೈತನ ದಿನ ಕಳೆಯುತ್ತದೆ. ಈ 'ಬ್ಯುಸಿ'ಯಾಗಿರುವ ಗುಣವೇ ಅವನನ್ನು ಡಿಪ್ರೆಶನ್‌ನಿಂದ ಹತ್ತು ಹರಿದಾರಿ ದೂರ ಇಟ್ಟಿರುತ್ತದೆ.


​ಮಳೆಗಾಲ ಬಂತೋ, ಮಲೆನಾಡಿನ ನೆಮ್ಮದಿ ಮಗದೊಂದು ಎತ್ತರಕ್ಕೆ ಏರುತ್ತದೆ. ಸುರಿಯುವ ಮಳೆಯಲ್ಲಿ ಅಡಿಕೆ ಪಟ್ಟೆ ಕೊಡವಿಕೊಂಡು ಬರುವಾಗ, ಕಾಲಿಗೆ ಅಂಟಿಕೊಳ್ಳುವ ಆ ಇಂಬಳಗಳು (ಲೀಚ್) ಕೊಡೋ ಕಿರಿಕಿರಿ ಅಷ್ಟಿಷ್ಟಲ್ಲ. ಆದರೂ, ಆ ಇಂಬಳ ಬಿಡಿಸಲು ನಾವು ಸುಣ್ಣದ ಡಬ್ಬಿ ಹಿಡಿದು ಓಡುವ ಆ ದೃಶ್ಯಗಳು ಯಾವ ಸರ್ಕಸ್‌ಗಿಂತಲೂ ಕಮ್ಮಿ ಇರುವುದಿಲ್ಲ. ಅಟ್ಟೆ ಕಚ್ಚಿದಾಗ ರಕ್ತ ಬಂದರೆ, "ನೋಡು, ನನ್ನ ರಕ್ತ ಎಷ್ಟು ಪ್ಯೂರ್ ಇದೆ ಅದಕ್ಕೇ ಇಂಬಳಗಳು ಸಾಲುಗಟ್ಟಿ ಬರ್ತಿವೆ" ಎಂದು ನಗುವ ಆ ಪಾಸಿಟಿವ್ ಆಟಿಟ್ಯೂಡ್ ಇದೆಯಲ್ಲ, ಅದೇ ನಮ್ಮ ಶಕ್ತಿ! ಅಡಿಕೆ ಸುಲಿಯುವ ಸಂದರ್ಭ ಬಂದರಂತೂ ಹಬ್ಬವೋ ಹಬ್ಬ. ಮನೆ ಮಂದಿಯೆಲ್ಲಾ ಕೂತು ಅಡಿಕೆ ಸುಲಿಯುತ್ತಾ, ಊರಿನ ಅಷ್ಟೂ ಸುದ್ದಿಗಳನ್ನ ಪೋಸ್ಟ್ ಮಾರ್ಟಂ ಮಾಡುವುದರಲ್ಲಿ ಸಿಗುವ ಮಜಾವೇ ಬೇರೆ.


​ನಿಜ ಹೇಳಬೇಕೆಂದರೆ, ಜೀವನದಲ್ಲಿ ಎಲೆಗೆ ಚುಕ್ಕಿ ಬರಬಹುದು, ಮಳೆಗೆ ತೋಟ ಸ್ವಲ್ಪ ಸೊರಗಬಹುದು, ಆದರೆ ಮಲೆನಾಡಿಗನ ಜೀವನಕ್ಕೆ ಚುಕ್ಕಿ ಇಡಲು ಯಾರಿಂದಲೂ ಸಾಧ್ಯವಿಲ್ಲ. ಹಣದ ಕಂತೆಗಳಿಗಿಂತ ಹೆಚ್ಚಾಗಿ, ಅಡಿಕೆ ತೋಟದ ಮಣ್ಣಿನ ವಾಸನೆ, ಮಳೆ ಬಿಟ್ಟಾಗ ಬರುವ ತಂಪು ಗಾಳಿ, ಮತ್ತು "ಯಾಕೆ ಮಾರಾಯ್ರೆ ಇಷ್ಟು ಚಿಂತೆ ಮಾಡ್ತೀರಾ, ನೋಡೋಣ ಬಿಡಿ" ಎನ್ನುವ ಗೆಳೆಯರ ಮಾತುಗಳಲ್ಲೇ ಅಸಲಿ ನೆಮ್ಮದಿ ಇರುವುದು. ಸಾಗರದಷ್ಟು ಕಷ್ಟ ಬಂದರೂ ಅದನ್ನ ಅಡಿಕೆ ಚೂರನ್ನ ಜಗಿದಂತೆ ಸಲೀಸಾಗಿ ಜಗಿದು ಉಗಿಯುವ ಮಲೆನಾಡಿಗನ ಈ ಚಾಣಾಕ್ಷತನವೇ ಇಂದಿನ ದಿನಕ್ಕೆ ಬೇಕಾದ ದೊಡ್ಡ ಮೆಡಿಸಿನ್.


​ಕೊನೆಯದಾಗಿ, ಬದುಕಿದ್ರೆ ನೆಮ್ಮದಿಯಾಗಿರಬೇಕು, ಆ ನೆಮ್ಮದಿ ನಮ್ಮ ಅಡಿಕೆ ತೋಟದ ಹಸಿರಿನಲ್ಲಿ, ಉಪ ಬೆಳೆಗಳ ಭರವಸೆಯಲ್ಲಿ ಮತ್ತು ನಾವು ಹಂಚುವ ನಗುವಿನಲ್ಲಿದೆ.


- ಪ್ರಸನ್ನ ಹೊಳ್ಳ, ತೀರ್ಥಹಳ್ಳಿ

8277251635


Post a Comment

0 Comments
Post a Comment (0)
To Top