- ಡಾ. ಉದಯ್ ನಾಗೇಶ್ ಶಿವಾಜಿ,
ಸೀನಿಯರ್ ಕನ್ಸಲ್ಟೆಂಟ್, ಕ್ಲಿನಿಕಲ್ ಲೀಡ್, ಮೆಡಿಕಲ್ ಗ್ಯಾಸ್ಟ್ರೋಎಂಟರಾಲಜಿ,
ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು
ವರ್ಷಾಂತ್ಯ ಸಮೀಪಿಸುತ್ತಿದೆ. ಬಹುತೇಕರು ರಜಾ ದಿನಗಳಿಗೆ ಎದುರು ನೋಡುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಔತಣಕೂಟ ನಡೆಸುವ ಸಾಧ್ಯತೆಗಳಿದೆ. ಇಂಥಾ ವಿಶೇಷ ಸಮಯದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ಅತಿಯಾಗಿ ಕೆಲಸ ಮಾಡಬೇಕಾಗಿ ಬರಬಹುದು. ಸಂಭ್ರಮಾಚರಣೆಗಳು ಮತ್ತು ಔತಣಕೂಟಗಳ ನಡುವೆ, ಅತಿಯಾದ ಆಹಾರದಿಂದ ಕರುಳಿಗೆ ಉರಿಯೂತ ಒತ್ತಡ ಉಂಟಾಗಬಹುದು ಮತ್ತು ಗಂಭೀರ ಜೀರ್ಣ ಸಮಸ್ಯೆ ಆಗಬಹುದು. ಆದರೆ ಸಾಮಾನ್ಯವಾಗಿ ನಾವು ಇಂತಹ ಸಮಸ್ಯೆಯನ್ನು ಕಡೆಗಣಿಸುವುದೇ ಜಾಸ್ತಿ.
ಆರೋಗ್ಯಕರ ಕರುಳು ಆಹಾರವನ್ನು ತಕ್ಷಣ ಯಾವುದೇ ಅಡೆತಡೆಯಿಲ್ಲದೆ ಜೀರ್ಣ ಮಾಡುವುದ ಕ್ಕಿಂತಲೂ ಮಿಗಿಲಾದ ಪಾತ್ರ ವಹಿಸುತ್ತದೆ. ಜೀರ್ಣಾಂಗವ್ಯೂಹದ ಕರುಳಿನೊಳಗೆ ಸಂಕೀರ್ಣ ವ್ಯವಸ್ಥೆ ಇದ್ದು, ಈ ವ್ಯವಸ್ಥೆ ಒಟ್ಟಾರೆ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಹಾಗಾಗಿ ನಿಮ್ಮ ಕರುಳಿನ ಆರೋಗ್ಯವು ನೇರವಾಗಿ ನಿಮ್ಮ ರೋಗನಿರೋಧಕ ಶಕ್ತಿಗೆ ಸಂಬಂಧಿಸಿದೆ. ಸುಮಾರು ಶೇ.70ರಷ್ಟು ರೋಗನಿರೋಧಕ ವ್ಯವಸ್ಥೆಯು ಕರುಳು ಸಂಬಂಧಿತ ಲಿಂಫಾಯ್ಡ್ ಟಿಶ್ಯೂ (ಜಿ ಎ ಎಲ್ ಟಿ)ದಲ್ಲಿ ಇರುತ್ತದೆ. ಸಂಸ್ಕರಿತ ಸಕ್ಕರೆಗಳು ಮತ್ತು ಅನಿಯಮಿತ ಊಟದ ಸಮಯದಿಂದ ಜೀರ್ಣಾಂಗದಲ್ಲಿ ಅತಿಯಾದ ಒತ್ತಡವುಂಟಾದರೆ, ಅದರಿಂದ ಋತುಮಾನದ ಸೀಸನಲ್ ಸೋಂಕುಗಳನ್ನು ತಡೆಗಟ್ಟುವ ದೇಹದ ಸಾಮರ್ಥ್ಯ ಕಡಿಮೆಯಾಗಬಹುದು.
ಕರುಳಿನ ಆರೋಗ್ಯದ ಹೃದಯ ಎಂದು ಕರೆಯಲ್ಪಡುವ ಆಪ್ಟಿಮಲ್ ಮೈಕ್ರೋಬಯೋಮ್ ಬ್ಯಾಲೆನ್ಸ್, ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪ್ರೋತ್ಸಾಹ ಒದಗಿಸಿ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುವ ಮೂಲಕ ಕರುಳಿನ ಮೈಕ್ರೋಬಯೋಮ್ ಅನ್ನು ಸಮತೋಲನದಲ್ಲಿ ಇರಿಸುತ್ತದೆ. ಆರೋಗ್ಯಕರ ಕರುಳಿನಲ್ಲಿ ಟ್ರಿಲಿಯನ್‌ಗಳಷ್ಟು ಪ್ರಮಾಣದ ವೈವಿಧ್ಯಮಯ ಮತ್ತು ಸಮತೋಲಿತ ಸೂಕ್ಷ್ಮಾಣುಗಳ ಸಮುದಾಯ (ಗಟ್ ಮೈಕ್ರೋಬಯೋಟಾ) ಇರುತ್ತದೆ. ಗಟ್ ಮೈಕ್ರೋಬಯೋಮ್ ಸಮತೋಲನವನ್ನು ಯೂಬಯೋಸಿಸ್ ಎಂದು ಕರೆಯುತ್ತಾರೆ. ಇದರರ್ಥ ಲ್ಯಾಕ್ಟೋಬ್ಯಾಸಿಲಸ್ ಮತ್ತು ಬೈಫಿಡೋಬ್ಯಾಕ್ಟೀರಿಯಂದಂತಹ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚು ಪ್ರಮಾಣದಲ್ಲಿ ಇರುತ್ತವೆ. ಇವು ಕೆಟ್ಟ (ಪ್ಯಾಥೋಜೆನಿಕ್) ಸೂಕ್ಷ್ಮಾಣುಗಳನ್ನು ನಿಯಂತ್ರಣದಲ್ಲಿ ಇರಿಸುತ್ತವೆ. ಪೌಷ್ಟಿಕ ಆಹಾರಗಳ ಸೇವನೆ ಮತ್ತು ಉತ್ತಮ ಜೀವನಶೈಲಿ ಪಾಲಿಸುವುದರಿಂದ ಇದು ಸಾಧ್ಯವಾಗುತ್ತದೆ.
ಕರುಳಿನ ಆರೋಗ್ಯಕ್ಕೆ ಒಳಿತಾಗುವಂತಹ ಸುರಕ್ಷಿತ ಸಂಭ್ರಮಾಚರಣೆ ಮಾಡುವುದರಿಂದ ನಿಮಗೆ ಈ ರಜಾದಿನಗಳಲ್ಲಿ ರುಚಿಕರ ಆಹಾರವನ್ನು ಊತ, ಆಸಿಡಿಟಿ ಅಥವಾ ಊಟದ ನಂತರದ ಆಲಸ್ಯ ಇಲ್ಲದೆ ಆನಂದಿಸಬಹುದಾಗಿದೆ.
ಕರುಳಿನ ಪ್ರೋಟೋಕಾಲ್ ಪಾಲಿಸಿ
ಉತ್ತಮ ಜೀರ್ಣಕ್ರಿಯೆಯ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು, ಊಟವನ್ನು ಬಿಟ್ಟುಬಿಡುವುದು ಅಥವಾ ಕ್ಯಾಲೊರಿಗಳನ್ನು ಉಳಿಸುವಂತಹ ಸಾಮಾನ್ಯ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ನೀವು ಪಾರ್ಟಿಗೆ ಹಸಿದುಕೊಂಡು ಹೋಗಿದ್ದರೆ ನೀವು ವೇಗವಾಗಿ ತಿನ್ನುತ್ತೀರಿ ಮತ್ತು ಕ್ಯಾಲೊರಿ ಹೆಚ್ಚಿರುವ ಪಾರ್ಟಿ ಆಹಾರಗಳನ್ನು ಅತಿಯಾಗಿ ಸೇವಿಸುತ್ತೀರಿ. ಇದು ಜೀರ್ಣ ವ್ಯವಸ್ಥೆಗೆ ಒತ್ತಡ ಉಂಟು ಮಾಡುತ್ತದೆ. ಅದರ ಬದಲಿಗೆ, ಪ್ರೀ-ಲೋಡ್ ತಂತ್ರವನ್ನು ಅನುಸರಿಸಿ. ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲು ಸಣ್ಣ ಪ್ರಮಾಣದ ಪ್ರೋಟೀನ್ ಯುಕ್ತ ತಿಂಡಿ ತಿನ್ನಿ.
ಉದಾಹರಣೆಗೆ, ಒಂದು ಹಿಡಿ ಬಾದಾಮಿ, ಬೇಯಿಸಿದ ಮೊಟ್ಟೆ ಅಥವಾ ಸಾದಾ ಮೊಸರು ತಿನ್ನಿರಿ. ಈ ಮೂಲಕ ಹಸಿವನ್ನು ನಿಯಂತ್ರಿಸಬಹುದು. ಒಂದು ವೇಳೆ ತಿಂದರೂ ನಿಧಾನಗತಿಯಲ್ಲಿ ತಿನ್ನುವಂತೆ ಮಾಡುತ್ತದೆ ಮತ್ತು ಕರುಳಿಗೆ ಒತ್ತಡ ಬೀಳದಂತೆ ತಡೆಯುತ್ತದೆ.
ಆರೋಗ್ಯಕರ ಆಹಾರದ ಜೊತೆಗೆ, ಮಲಬದ್ಧತೆ ಮತ್ತು ಊತವನ್ನು ತಡೆಗಟ್ಟಲು ಕರುಳಿಗೆ ಸಾಕಷ್ಟು ನೀರಿನ ಅಗತ್ಯ ಬೀಳುತ್ತದೆ. ಪಾರ್ಟಿಗೆ ಮೊದಲ ದಿನವೇ ಸೋಂಪ್ ಅಥವಾ ಪುದೀನಾ ನೀರನ್ನು ಕುಡಿಯಿರಿ. ಇವು ನೈಸರ್ಗಿಕ ಕಾರ್ಮಿನೇಟಿವ್‌ಗಳಾಗಿದ್ದು, ಅತಿಯಾಗಿ ತಿನ್ನಬೇಕಾದ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮದ್ಯ ಸೇವನೆಯಿಂದ ಡಿಹೈಡ್ರೇಷನ್ ಆಗಬಹುದು. ಇದನ್ನು ತಡೆಗಟ್ಟಲು ಒನ್-ಫಾರ್-ಒನ್; ನಿಯಮವನ್ನು ಪಾಲಿಸಿ. ಅಂದರೆ ಪ್ರತೀ ಗ್ಲಾಸ್ ಮದ್ಯಕ್ಕೆ ಒಂದು ಗ್ಲಾಸ್ ಸಾದಾ ನೀರು ಕುಡಿಯಿರಿ.
ಸಮತೋಲನದ ಕಲೆ:
ಪ್ರತಿದಿನ ಸಮತೋಲಿತ ಊಟ ಸೇವನೆ ಒಳ್ಳೆಯದು. ಅದರಲ್ಲೂ ಉತ್ಸವ ಸಂದರ್ಭಗಳಲ್ಲಿ, ರಜಾ ದಿನಗಳಲ್ಲಿ ಇದು ಬಹಳ ಮುಖ್ಯ. ಆಹಾರವನ್ನು ಸಮತೋಲನ ಮಾಡಿ ತಿನ್ನಬೇಕು. ಕರಿದ ತಿಂಡಿಗಳು ಅಥವಾ ಸಿಹಿ ಸಿರಪ್‌ಯುಕ್ತ ಸಿಹಿ ಖಾದ್ಯಗಳಿಗೆ ಕೈ ಹಾಕುವ ಮೊದಲು, ತಟ್ಟೆಯ ಅರ್ಧದಷ್ಟು ಜಾಸ್ತಿ ಫೈಬರ್ ಇರುವ ಆಹಾರಗಳಿಂದ ತುಂಬಿಸಿ. ಅದರಲ್ಲಿ ಸಲಾಡ್, ತಾಜಾ ತರಕಾರಿಗಳು ಮತ್ತು ಸಣ್ಣ ಪ್ರಮಾಣದ ಲೀನ್ ಪ್ರೋಟೀನ್ ಇರಲಿ. ಫೈಬರ್ ಕೊಬ್ಬು ಮತ್ತು ಸಕ್ಕರೆಗಳನ್ನು ಹೀರಿಕೊಳ್ಳುವ ವೇಗವನ್ನು ನಿಧಾನಗೊಳಿಸುವ ಬಫರ್ ಆಗಿ ಕೆಲಸ ಮಾಡುತ್ತದೆ ಮತ್ತು ಸುಗಮ ವಿಸರ್ಜನೆಗೆ ಸಹಾಯ ಮಾಡುತ್ತದೆ. ಇದು ಮಲಕ್ಕೆ ಬಲ್ಕ್ ಅನ್ನು ಸೇರಿಸಿ ಜೀರ್ಣಾಂಗದಲ್ಲಿ ತ್ಯಾಜ್ಯದ ಚಲನೆಯನ್ನು ವೇಗಗೊಳಿಸುತ್ತದೆ. ಇದರಿಂದ ಮಲಬದ್ಧತೆ ತಡೆಗಟ್ಟುತ್ತದೆ ಮತ್ತು ವಿಷಕಾರಿ ಪದಾರ್ಥಗಳು ಮತ್ತು ಮೆಟಾಬಾಲಿಕ್ ತ್ಯಾಜ್ಯಗಳನ್ನು ಸಮರ್ಥವಾಗಿ ಹೊರಹಾಕುತ್ತದೆ. ಇವು ಕೋಲನ್‌ನಲ್ಲಿ ಹೆಚ್ಚು ಕಾಲ ಉಳಿಯದಂತೆ ಮಾಡುತ್ತದೆ.
ನಿಧಾನವಾಗಿ ತಿನ್ನುವುದೇ ಉತ್ತಮ:
ಕೊನೆಯದಾಗಿ, ನಿಧಾನವಾಗಿ ಮತ್ತು ಗಮನ ಕೊಟ್ಟು ತಿನ್ನುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಧಾನವಾಗಿ ತಿನ್ನುವವರು ಸ್ಥೂಲಕಾಯ ಹೊಂದುವ ಅಪಾಯವನ್ನು ಶೇ.42ರಷ್ಟು ಕಡಿಮೆ ಹೊಂದಿರುತ್ತಾರೆ. ಜೀರ್ಣಕ್ರಿಯೆಯು ಬಾಯಿಯಲ್ಲಿ ಆರಂಭವಾಗುವುದರಿಂದ, ಬಹಳ ವೇಗವಾಗಿ ತಿನ್ನುವುದು ತೃಪ್ತಿಯ ಭಾವವನ್ನು (ಪೂರ್ಣತೆಯ ಭಾವ) ಮೆದುಳಿಗೆ ತಡವಾಗಿ ತಲುಪಿಸುತ್ತದೆ.
ಊಟದ ಕಡೆಗೆ ಪೂರ್ಣ ಗಮನ ಕೊಡಿ. ಪ್ರತಿ ತುತ್ತಿನ ನಡುವೆ ಕೈ, ಚಮಚ ಅಥವಾ ಫೋರ್ಕ್ ಸಂಪೂರ್ಣ ಇಳಿಸಿ ಮತ್ತು ಪ್ರತೀ ತುತ್ತನ್ನು ಚೆನ್ನಾಗಿ ಅಗಿದು ತಿನ್ನಿ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರೆ, ಮಾತಿನ ಸಮಯದಲ್ಲಿ ತಿನ್ನುವುದನ್ನು ನಿಲ್ಲಿಸಿ. ಹೀಗೆ ಗಮನ ಕೊಡುವುದರಿಂದ ಒಟ್ಟು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ ಮತ್ತು ಊಟದ ನಂತರದ ಅಸ್ವಸ್ಥತೆಯನ್ನು ತಗ್ಗಿಸುತ್ತದೆ. ಚೆನ್ನಾಗಿ ಕೆಲಸ ಮಾಡುವ ಕರುಳು, ಊತ, ವಾಯು, ಆಸಿಡಿಟಿ ಅಥವಾ ಮಲಬದ್ಧತೆ ಇಲ್ಲದೆ ನಿಯಮಿತ ಮತ್ತು ಸುಲಭ ಮಲವಿಸರ್ಜನೆಗೆ ನೆರವಾಗುತ್ತದೆ.
ರೋಗನಿರೋಧಕ ಶಕ್ತಿಯ ಭದ್ರ ಕೋಟೆ:
ಆಹಾರ ಸೇವನೆ ಮುಖ್ಯವಾದರೂ, ರೋಗನಿರೋಧಕ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಋತುಮಾನದ ಮತ್ತು ಸಾಮಾಜಿಕ ಒತ್ತಡಕ್ಕೆ ವಿರೋಧವಾಗಿ ಹಲವು ಜೀವನಶೈಲಿ ಬದಲಾವಣೆಗಳನ್ನು ಮಾಡಬೇಕಾದುದು ಅತ್ಯಗತ್ಯ. ಎಲ್ಲಕ್ಕಿಂತ ಮೊದಲು, ನಿದ್ರೆ ಮತ್ತು ರೋಗನಿರೋಧಕ ಶಕ್ತಿಯ ಮಧ್ಯ ಸಂಬಂಧವನ್ನು ಅರ್ಥಮಾಡಿಕೊಳ್ಳಿ. ಹಬ್ಬದ ಸಂದರ್ಭ ತಡರಾತ್ರಿ ಆಗಬಹುದಾದ್ದರಿಂದ ಆ ವೇಳೆ ರೋಗನಿರೋಧಕ ಕಾರ್ಯವನ್ನು ಗಂಭೀರವಾಗಿ ಹಾನಿಗೊಳಿಸಬಹುದು. ಗುಣಮಟ್ಟದ ನಿದ್ರೆ ಮಾಡಿದಾಗ ದೇಹವು ಸೈಟೋಕೈನ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಬಿಡುಗಡೆ ಮಾಡುತ್ತದೆ. ಇವು ಸೋಂಕುಗಳೊಂದಿಗೆ ಹೋರಾಡಲು ಅಗತ್ಯ ಪ್ರೋಟೀನ್‌ಗಳು. ಇದಕ್ಕಾಗಿಯೇ 7-8 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಮಾಡಲು ಸಲಹೆ ನೀಡಲಾಗುತ್ತದೆ. ಇದು ನಿಮ್ಮ ರೋಗನಿರೋಧಕ ಔಷಧಿಯಂತೆ ಕೆಲಸ ಮಾಡುತ್ತದೆ. ತಡರಾತ್ರಿ ಹೊರಗೆ ಹೋಗುವುದರಿಂದ ಮುಂದಿನ ವಾರ ಅದರ ಬಾಕಿ ಪಾವತಿ ಮಾಡಬೇಕಾಗಿ ಬರಬಹುದು. ಅದೇ ರೀತಿ ಒತ್ತಡವನ್ನು ನಿಯಂತ್ರಿಸುವುದು ಕೂಡ ಮುಖ್ಯ.
ರಜಾದಿನಗಳು ಎಂದರೆ ಸಮಾಜಿಕ ಒತ್ತಡ ಮತ್ತು ದೈಹಿಕ ಒತ್ತಡಕ್ಕೆ ಸಮಾನಾರ್ಥಕ. ಈ ವೇಳೆ ಕಾರ್ಟಿಸಾಲ್ ಹಾರ್ಮೋನ್ ಹೆಚ್ಚಬಹುದಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ದಮನ ಮಾಡುವ ಹಾರ್ಮೋನ್ ಆಗಿದೆ. ಒತ್ತಡವನ್ನು ಕಡಿಮೆ ಮಾಡಲು ಪ್ರತಿದಿನ ಸರಳವಾಗಿ 10 ನಿಮಿಷದ ಧ್ಯಾನ ವ್ಯಾಯಾಮಗಳು ಅಥವಾ ದೀರ್ಘ ಉಸಿರಾಟ ಅಭ್ಯಾಸ ಮಾಡಿ.
ಕೊನೆಯದಾಗಿ, ಊಟದ ನಂತರ ಕಡ್ಡಾಯವಾಗಿ ಓಡಾಟ ನಡೆಸಿ. ದೊಡ್ಡ ಪ್ರಮಾಣದ ಊಟದ ನಂತರ ಸೋಫಾದ ಮೇಲೆ ಬೀಳುವ ಆಸೆಯನ್ನು ತಡೆದುಕೊಳ್ಳಿ. ಬದಲಿಗೆ, ಹಬ್ಬದ ಊಟದ ನಂತರ 15 ನಿಮಿಷಗಳ ಕಾಲ ಸೌಮ್ಯವಾದ ನಡಿಗೆ ಮಾಡಿ. ಇದು ಕರುಳಿನ ಕಾರ್ಯವನ್ನು ವೇಗಗೊಳಿಸುತ್ತದೆ (ಆಲಸ್ಯವನ್ನು ತಡೆಯುತ್ತದೆ) ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಈ ಮೂಲಕ ರೋಗನಿರೋಧಕ ಕೋಶಗಳನ್ನು ದೇಹದಾದ್ಯಂತ ಹರಡಲು ನೆರವಾಗುತ್ತದೆ.
ಪ್ರತೀ ಹಬ್ಬವೂ ಆನಂದಿಸಲೆಂದೇ ವಿನ್ಯಾಸಗೊಂಡಿದೆ. ಹಾಗಂತ ಕರುಳಿನ ಆರೋಗ್ಯ ಕಳೆದುಕೊಳ್ಳಬೇಕು ಅಂತೇನೂ ಇಲ್ಲ. ಆರೋಗ್ಯಕರ ಕರುಳು ಶಾಂತ, ಸಮರ್ಥ ಮತ್ತು ಬಲವಾದ ಒಳಗಿನ ರಕ್ಷಣಾ ಗೋಡೆಯಂತಿರುತ್ತದೆ. ಇದು ಮೂಡ್ ನಿಯಂತ್ರಣಕ್ಕೆ, ಉತ್ತಮ ಶಕ್ತಿಯ ಮಟ್ಟ ಕಾಪಾಡಿಕೊಳ್ಳಲು ಮತ್ತು ರೋಗ ತಡೆಗಟ್ಟುವಿಕೆಗೆ ಮೌನವಾಗಿ ಕೊಡುಗೆ ನೀಡುತ್ತದೆ. ನಿಮ್ಮ ಕರುಳು ಮತ್ತು ರೋಗನಿರೋಧಕ ವ್ಯವಸ್ಥೆಯ ನಡುವಿನ ಗಾಢ ಸಂಬಂಧವನ್ನು ಗೌರವಿಸುತ್ತಲೇ ರಜಾ ದಿನಗಳ ಔತಣಕೂಟ ಮತ್ತು ತಡರಾತ್ರಿ ಸಂಭ್ರಮಗಳನ್ನು ಕರುಳಿಗೆ ಹಾನಿಯಾಗದಂತೆ ಸಂಭ್ರಮಿಸಿದರೆ ಆನಂದದಿಂದ ರಜಾವನ್ನು ಕಳೆಯಬಹುದು ಎಂಬುದನ್ನು ಮರೆಯದಿರಿ.


