ಲೇಖಾ ಲೋಕ-60: ಪ್ರಖ್ಯಾತ ಪ್ರಭಾತ್ ಕಲಾವಿದರು ಟಿ ವಿ ಗೋಪಿನಾಥದಾಸರು

Upayuktha
0




ಟಿ ವಿ ಗೋಪಿನಾಥದಾಸರ ಜನ್ಮ ಶತಾಬ್ಧಿ ಆಚರಣೆಯ ಸಮಯದಲ್ಲಿ ಸತತ 9 ದಶಕಗಳಿಂದ ಪ್ರಭಾತ್ ಸಂಸ್ಥೆ ಜೀವಂತವಾಗಿ ಜನಮೆಚ್ಚುಗೆಗೆ ಪಾತ್ರವಾಗಿರುವುದು ನಾಡಿನ ಸೌಭಾಗ್ಯ. ಈ ಸಂಸ್ಥೆ ಹಲವಾರು ಪೀಳಿಗೆಗಳನ್ನು ದಾಟಿ ಮುಂದುವರೆದಿದೆ. 1930 ರಲ್ಲಿ ಈ ಸಂಸ್ಥೆಯನ್ನು ಟಿ ವಿ ಗೋಪಿನಾಥದಾಸರು ತಮ್ಮ ಸಹೋದರರೊಂದಿಗೆ ಪ್ರಭಾತ್ ಕಲಾ ಸಂಘ ಎಂಬ ಹೆಸರಿನಲ್ಲಿ ಸ್ಥಾಪಿಸಿ, ಪೌರಾಣಿಕ ನಾಟಕಗಳನ್ನು ಆಡಿದರು. ತದನಂತರ, ಪ್ರಭಾತ್ ಕಲಾ ಸಂಸ್ಥೆ ಪ್ರಭಾತ್ ಕಲಾವಿದರು ಎಂಬ ಹೆಸರನ್ನು ಪಡೆಯಿತು.


ಗೋಪಿನಾಥದಾಸರು ಹರಿಕಥಾ ದಾಸರ ವಂಶವೆಂದು ಹೆಸರು ಪಡೆದು, 20-6-1914 ರಂದು ವೆಂಕಣ್ಣ ದಾಸರ ಮತ್ತು ಭಾಗೀರಥಿ ದಂಪತಿಗಳಿಗೆ ದ್ವಿತೀಯ ಪುತ್ರನಾಗಿ ಜನಿಸಿದರು. ಎಲ್ಲರೂ ಇವರನ್ನು ಚಿಕ್ಕ ವಯಸ್ಸಿನಲ್ಲಿ ಗೋಪಣ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಗೋಪಣ್ಣ ಹರಿಕಥಾ ಕಲೆಯನ್ನೇ ರೂಢಿಸಿಕೊಂಡು ತಮ್ಮ ತಂದೆಯವರಂತೆ ನಾಟಕ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಇವರ ತಂದೆ ಮಗನ ಆಸಕ್ತಿ ಕಂಡು, ಮೈಸೂರಿನ ವೀಣೆ ಶೇಷಣ್ಣನವರ ನೇರ ಶಿಷ್ಯರಾಗಿದ್ದ ಲಕ್ಷ್ಮೀನಾರಾಯಣಪ್ಪ ನವರ ಪುತ್ರರಾದ ಪ್ರಸಿದ್ಧ ವೈಣಿಕರಾಗಿದ್ದ ಮಹಾನ್ ವಿದ್ವಾಂಸರು ಎಲ್ ರಾಜಾರಾಯರಲ್ಲಿ ವೀಣೆ ಮತ್ತು ಗಾಯನ ಶಿಕ್ಷಣವನ್ನು ಕೊಡಿಸಿದರು. ರಾಜಾರಾಯರ ಸಂಗೀತ ಪಾಠ ತುಂಬಾ ಶಿಸ್ತಿನಿಂದ ಕೂಡಿತ್ತು ಅವರ ಸುಶಿಕ್ಷಣ ಪಡೆದ  ಗೋಪಣ್ಣ ಪ್ರಸಿದ್ಧ ಗಾಯಕ ಮತ್ತು ವೈಣಿಕರಾಗಿ ರೂಪುಗೊಂಡರು.


ಇವರ ತಂದೆ ಮತ್ತು ಚಿಕ್ಕಪ್ಪ ವೇಣುಗೋಪಾಲದಾಸರು ಇವರಿಗೆ ಹರಿಕಥೆ ಮತ್ತು ಮಧ್ವಶಾಸ್ತ್ರ ಸಿದ್ದಾಂತ ಅಭ್ಯಾಸವನ್ನು ತಿಳಿಸಿದರು. ಗೋಪಣ್ಣ ಮುಂದೆ ಗೋಪಿನಾಥದಾಸರು ಎಂದು ಹೆಸರು ಪಡೆದು, ನಾಟಕ ಶಿರೋಮಣಿ ವರದಾಚಾರ್ಯರ ಗರಡಿಯಲ್ಲಿ ನಾಟಕರಂಗದಲ್ಲೂ ಪಳಗಿ ಬಾಲನಟರಾಗಿ ಅಭಿನಯಿಸಿದ್ದು ವಿಶೇಷ. ಆಕರ್ಷಕ ಮುಖ, ದೇಹ, ಸಂಗೀತ ಜ್ಞಾನ ಸೊಗಸಾಗಿ ರೂಢಿಸಿಕೊಂಡ ಗೋಪಿನಾಥದಾಸರು, ಬೆಂಗಳೂರಿನಲ್ಲಿ ಸುಲ್ತಾನ್ ಪೇಟೆಯ ಆರ್ಯಬಾಲಿಕಾ ಪಾಠ ಶಾಲೆಯಲ್ಲಿ ಸಂಗೀತ ಮೇಷ್ಟ್ರು ಎಂಬ ಕೆಲಸ ಪ್ರಾರಂಭಿಸಿದರು. ಇವರಿಗೆ 19 ವರ್ಷವಿದ್ದಾಗ ಆ ಶಾಲೆಯಲ್ಲಿ ಖ್ಯಾತ ಚಲನಚಿತ್ರ ನಟಿ, ಎಂ ವಿ ರಾಜಮ್ಮ ಮತ್ತು ಗಮಕ ಕಲಾ ವಿದುಷಿ ಶಕುಂತಲಾಬಾಯಿ ಪಾಂಡುರಂಗರಾವ್, ಟಿ ವಿ ಗೋಪಿನಾಥದಾಸರ ವಿದ್ಯಾರ್ಥಿನಿಯರಾಗಿ ಪ್ರಸಿದ್ಧರಾಗಿದ್ದು ವಿಶೇಷ.


ನಂತರ, ಗೋಪಿನಾಥದಾಸರು ಮಲ್ಲೇಶ್ವರದ ಶಾಲೆಗೆ ವರ್ಗವಾಗಿ, ಅಲ್ಲಿ ಸಂಗೀತದ ಬಗ್ಗೆ ಅನೇಕ ಸುಧಾರಣೆ ತಂದರು. ಆಗ ಕಲ್ಚರ್ಡ್ ಕಮೆಡಿಯನ್ ಹಿರಣ್ಣಯ್ಯನವರ ಸ್ನೇಹವಾಯಿತು. ಅಣ್ಣ ಕರಗಿರಿ, ಹಿರಣ್ಣಯ್ಯ, ಗೋಪಣ್ಣ ಆತ್ಮೀಯ ಸ್ನೇಹಿತರಾದರು. ಇವರ ತಂದೆ ನಿಧನರಾದಾಗ, ಗೋಪಿನಾಥದಾಸರು ತಮ್ಮ ಸಹೋದರರೊಂದಿಗೆ ಹರಿಕಥೆ ಕಾರ್ಯಕ್ರಮ ನಡೆಸುತ್ತಿದ್ದರು. ಅಂದಿನ ಕಾಲದಲ್ಲಿ ಧ್ವನಿವರ್ಧಕ ಬಳಕೆಗೆ ಬಂದಿದ್ದರಿಂದ ಲಭ್ಯವಿದ್ದ ವ್ಯವಸ್ಥೆಯನ್ನು ಸರಿಪಡಿಸಿಕೊಂಡರು. ಈ ವ್ಯವಸ್ಥೆ ಸರಿಪಡಿಸಲು, ತಾವೇ "ಪ್ರಭಾತ್ ಸೌಂಡ್ ಸಿಸ್ಟಮ್ "ಸ್ಥಾಪಿಸಿ ಮುಂದುವರೆಸಿದರು. ನಾಟಕ ಕ್ಷೇತ್ರದಲ್ಲಿ ಪಳಗಿ, ಗೋಪಿನಾಥದಾಸರು ರಂಗ ಭೂಮಿಯಲ್ಲಿ ಬಳಸುವ ಪರದೆಗಳು, ಸೈಡ್ ವಿಂಗ್ಸ್ ಸೀನರಿಗಳಲ್ಲದೇ, ತಮ್ಮ ಪ್ರಯತ್ನದಿಂದ ಪೌರಾಣಿಕ ನಾಟಕಗಳಿಗೆ ಬೇಕಾಗುವ ಕಿರೀಟ, ಆಯುಧಗಳು ಭುಜಕೀರ್ತಿಗಳು, ಪೋಷಾಕುಗಳು ಇತ್ಯಾದಿ ಸೌಲಭ್ಯಗಳನ್ನು ಹೊಂದಿಸಲು ಮುಂದಾದರು.


ಅನೇಕ ನಾಟಕಗಳನ್ನು ಪ್ರದರ್ಶನ ಮಾಡಿಸಿ, ಹಾಡುಗಳನ್ನು ನುರಿತ ಸಂಭಾಷಣೆಯನ್ನು, ನಟವರ್ಗವನ್ನು ತಾವೇ ಸೇರಿಸಿ, ನಾಟಕಗಳು ಯಶಸ್ವಿಯಾಗಿ ಪ್ರದರ್ಶನವಾಗಲು ಕಾರಣೀಭೂತರಾದರು. ಅನೇಕ ಕಿರಿಯ ನಟರಿಗೆ ಉತ್ತೇಜನ ನೀಡಿ, ಯಶಸ್ಸನ್ನು ಕಂಡರು. ಹೀಗಾಗಿ, ಕಿರಿಯರ ನಾಟಕ ತಂಡ ತಲೆಯೆತ್ತಿತು. ಗೋಪಿನಾಥದಾಸರ ನಾಟಕಗಳಾದ ಸಿಂಡ್ರೆಲಾ, ಪುಣ್ಯ ಕೋಟಿ, ಕರ್ನಾಟಕ ವೈಭವ ಮುಂತಾದ ನಾಟಕಗಳು ಭರ್ಜರಿಯಾಗಿ ಜನ ಮನಸೂರೆಗೊಂಡು, ಶತದಿನೋತ್ಸವಗಳನ್ನು ಆಚರಿಸಿದ್ದು ಅವಿಸ್ಮರಣೀಯ.



ಕರ್ನಾಟಕದಲ್ಲಿ, ರಾಷ್ಟ್ರದಲ್ಲಿ, ವಿಶ್ವ ಮಟ್ಟದಲ್ಲಿ ಇವರ ನಾಟಕಗಳು ಪ್ರಖ್ಯಾತಿ ಹೊಂದಿ, ನಾಡು ಹೆಮ್ಮೆ ಪಡುವಂತಾಯಿತು. ಗೋಪಿನಾಥದಾಸರು ನಂತರ ಬ್ಯಾಲೆ ಶೈಲಿಯ ನಾಟಕಗಳನ್ನು ಪ್ರದರ್ಶಿಸಿದರು. ಈ ನವವಿಧಾನದ ನಾಟಕ ಭಾರತೀಯ ನೃತ್ಯ ರೂಪಕಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅನೇಕ ಜಾನಪದ ನಾಟಕಗಳು, ಪೌರಾಣಿಕ ನಾಟಕಗಳು, ಪಾಶ್ಚಿಮಾತ್ಯ ನಾಟಕಗಳ ಹಿನ್ನಲೆಯಲ್ಲಿ ಪ್ರದರ್ಶಿಸಿದ ನಾಟಕಗಳು, ನೂರಾರು ಪ್ರಯೋಗಗಳನ್ನು ಕಂಡ ನಾಡಿನ ಜನರು ಪುಣ್ಯವಂತರು. 29-1-2007 ರಂದು ಸಾವಿರದ ಒಂದನೇ ಪ್ರದರ್ಶನ ಕಂಡಿತು. ಅಭಿಜ್ಞಾನ  ಯಶಸ್ವಿಯಾಗಿ ಹೊರಬಂದ ವಿಶೇಷ ಕಾರ್ಯಕ್ರಮ ವಿಶಿಷ್ಟವಾಗಿ ರೂಪಗೊಂಡಿತ್ತು. 1982ರಲ್ಲಿ ಗೋಪಿನಾಥ ದಾಸರು ನಿಧನರಾದ ಮೇಲೆ, ಇವರ ಪುತ್ರ ಟಿ ಜಿ ವೆಂಕಟೇಶಾಚಾರ್ ಅವರು ಅನೇಕ ನಾಟಕಗಳನ್ನು ಪ್ರದರ್ಶನ ಮಾಡಿಸಿ, ಪ್ರಭಾತ್ ಸಂಸ್ಥೆ ವಿದೇಶದಲ್ಲೂ ಖ್ಯಾತಿ ಪಡೆಯಿತು. 5000 ನಾಟಕಗಳ ಪ್ರದರ್ಶನ ಮಾಡಿಸಿ, ದೇಶ, ವಿದೇಶ ಗಳಲ್ಲಿ ಹೆಸರಾಯಿತು. ಗೋಪಿನಾಥದಾಸರು ಗೌರವ ಡಾಕ್ಟರೇಟ್ ಪಡೆದ ಪ್ರಥಮ ಹರಿಕಥಾ ವಿದ್ವಾಂಸರು ಎಂದೆನಿಸಿದರು.


ಅನೇಕ ಕಡೆ  ಸಾಮಾಜಿಕ ಸಹಾಯಾರ್ಥ ಪ್ರದರ್ಶನ ಮಾಡಿಸಿ, ಅಶಕ್ತರಿಗೆ ನೆರವಾದರು. ಬಡಜನರ ಕಷ್ಟಕ್ಕೆ ಸಹಾಯ ಮಾಡಿದರು. ಗೋಪಿನಾಥದಾಸರು ಪ್ರಸಿದ್ಧ ಕಲಾವಿದರ ಜೊತೆಗೆ ಕಾರ್ಯ ನಿರ್ವಹಿಸಿದರು. ಕಲಾವಿದರಾದ ವೀಣಾ ಬಾಲಚಂದರ್ ಚಿಟ್ಟಿಬಾಬು, ಬಾಲಮುರಳೀಕೃಷ್ಣ, ಕೆ ಜೆ ಏಸುದಾಸ್ ಮುಂತಾದವರ ಜೊತೆಗೆ ಕೆಲಸ ಮಾಡಿದರು.


ಈ ಮಹಾನ್ ತಪಸ್ವಿ ತಮ್ಮ ಜೀವನವನ್ನು ಸಂಗೀತ, ನಾಟಕಗಳಿಗೆ, ಹರಿಕಥೆಗಳಿಗೆ ಅವಿರತವಾಗಿ ದುಡಿದು, 1982ರಲ್ಲಿ ಹರಿಪಾದ ಸೇರಿದರು.


Post a Comment

0 Comments
Post a Comment (0)
To Top