ಸ್ನಾನ ಮಾಡಿದ ಬಳಿಕ ನಿಮ್ಮ ಹೊಳಪು ಕಡಿಮೆ ಆಗುತ್ತಿದೆಯೇ?

Upayuktha
0



- ಡಾ. ಲೋಗೇಶ್ವರಿ ಜೆ,

ಎಂಬಿಬಿಎಸ್; ಎಂಡಿ (ಡರ್ಮಟಾಲಜಿ)


ಗೀಗ ಮಹಾನಗರಗಳಲ್ಲೂ ಸಣ್ಣ ಪಟ್ಟಣಗಳಲ್ಲೂ ಜೀವನ ಸಾಗಿಸುವುದು ಕಷ್ಟವಾಗಿಬಿಟ್ಟಿದೆ. ಹಣ ಗಳಿಸುವುದು ಮಾತ್ರವೇ ಕಷ್ಟವಲ್ಲ, ಅದರ ಜೊತೆಗೆ ದಿನನಿತ್ಯದ ಸಣ್ಣ ಸಣ್ಣ ವಿಷಯಗಳಲ್ಲಿಯೂ ಸಾಕಷ್ಟು ತೊಂದರೆ ಎದುರಿಸಬೇಕಿದೆ. ಅದರಲ್ಲಿ ಅತ್ಯಂತ ಪ್ರಮುಖ ತೊಂದರೆ ನೀರಿನ ಗುಣಮಟ್ಟ. ನಗರಗಳ ನೀರು ದಿನೇ ದಿನೇ ಕಲುಷಿತಗೊಳ್ಳುತ್ತಿದೆ. ಕಠಿಣವಾಗುತ್ತಿದೆ. ಇದು ನಿಮ್ಮ ಚರ್ಮ ಮತ್ತು ಕೂದಲಿಗೆ ಒಳ್ಳೆಯ ಸುದ್ದಿಯೇನಲ್ಲ. ಇದೇ ಕಾರಣದಿಂದಲೇ ದೊಡ್ಡ ದೊಡ್ಡ ಮಾಲ್‌ಗಳಲ್ಲಿಯೂ ಬ್ಯೂಟಿ ಸ್ಟೋರ್‌ಗಳಲ್ಲಿಯೂ ಎಷ್ಟೇ ಒಳ್ಳೆಯ ಉತ್ಪನ್ನಗಳು ಸಿಕ್ಕರ ನಗರದ ಜನರಿಗೆ ಒಣ ಚರ್ಮ, ತುರಿಕೆ, ಜಡ್ಡು ಗಟ್ಟಿದ ಮತ್ತು ನಿರ್ಜೀವ ಕೂದಲಿನ ಸಮಸ್ಯೆ ಕಾಡುತ್ತಿದೆ. ದಿನಂಪ್ರತಿ ಇಂತಹ ದೂರುಗಳನ್ನು ಯಾರಾದರೂ ಹೇಳಿಯೇ ಹೇಳುತ್ತಾರೆ.


ಅದಕ್ಕೆ ಕಾರಣವೇನಾಗಿರಬಹುದು? ಈ ಪ್ರಶ್ನೆಗೆ ಉತ್ತರವಾಗಿ ನೀವು ಸ್ನಾನಕ್ಕೆ ಬಳಸುವ ನೀರೇ ನಿಮ್ಮ ಚರ್ಮ ಮತ್ತು ಕೂದಲನ್ನು ಮೆಲ್ಲಗೆ ಹಾಳುಮಾಡುತ್ತಿದೆ ಎಂದು ತಿಳಿದರೆ ಎಷ್ಟು ಬೇಸರವಾಗಬಹುದು ಅಲ್ಲವೇ? ಜಡ್ಡುಗಟ್ಟಿದ ಕೂದಲು, ಏನೋ ತುರಿಕೆ, ಯಾವಾಗಲೂ ಒಣಗಿರುವ ಚರ್ಮ - ಇದೆಲ್ಲಕ್ಕೂ ಮೂಲ ಕಾರಣ ನಗರದ ನೀರು. ಅದರಲ್ಲೂ ಜಾಸ್ತಿ ಖನಿಜಗಳು ಕರಗಿರುವ, ಅಂದರೆ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಸೇರಿರುವ ಕಠಿಣ ನೀರು.


ಬೋರ್‌ವೆಲ್‌ ನೀರೇ ಆಗಲಿ, ಮುನ್ಸಿಪಾಲಿಟಿ ನೀರೇ ಆಗಲಿ- ಈ ಮೂಲದಿಂದ ಸಿಗುವ ಕಠಿಣ ನೀರು ಚರ್ಮಕ್ಕೆ ನಿಜವಾದ ಬಹುದೊಡ್ಡ ತೊಂದರೆ. ನಿಮ್ಮ ಟ್ಯಾಪ್‌ನಲ್ಲಿ ಬರುವ ನೀರಿನಲ್ಲಿ ಏನಿದೆ ಮತ್ತು ಅದು ಚರ್ಮ, ಕೂದಲಿಗೆ ಏನೆಲ್ಲ ಹಾನಿ ಮಾಡುತ್ತದೆ ಎಂಬುದನ್ನು ಇಲ್ಲಿ ಸರಳವಾಗಿ ತಿಳಿಯೋಣ.


ಸಮಸ್ಯೆ: ನೀರೇ ನಿಮ್ಮ ವಿರುದ್ಧ ನಿಂತಾಗ

ಈ ಸಮಸ್ಯೆಯ ಮೂಲ ಇರುವುದು ಗಟ್ಟಿ ನೀರಿನಲ್ಲಿರುವ ಖನಿಜಗಳು ಮತ್ತು ಸಾಬೂನು ಒಟ್ಟಿಗೆ ಸೇರಿ ಉಂಟುಮಾಡುವ ಪ್ರತಿಕ್ರಿಯೆಯಲ್ಲಿ. ಸಾಬೂನು ಸಂಪೂರ್ಣ ತೊಳೆದು ಹೋಗದೇ, ಗಟ್ಟಿ ನೀರಿನೊಂದಿಗೆ ಸೇರಿ ಒಂದು ಜಿಗುಟಾದ ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯೇ ಚರ್ಮ ಮತ್ತು ಕೂದಲಿನ ಬಹುತೇಕ ಸಮಸ್ಯೆಗಳ ಮೂಲ ಕಾರಣ.


● ಒಣ ಚರ್ಮ ಮತ್ತು ತುರಿಕೆ ಮೊದಲು ಕಾಣಿಸಿಕೊಳ್ಳುತ್ತವೆ. ಈ ಜಿಗುಟು ಸ್ಥಿತಿ ಚರ್ಮದ ನೈಸರ್ಗಿಕ ರಕ್ಷಾಕವಚವನ್ನು ಹಾಳುಮಾಡಿ ನೈಸರ್ಗಿಕ ಎಣ್ಣೆಯನ್ನು ಕಿತ್ತುಕೊಳ್ಳುತ್ತದೆ. ಆಗ ಚರ್ಮ ಬಿಗಿಯಾಗಿ, ಜಡ್ಡಾಗಿ, ಆಗಾಗ ತುರಿಕೆಯಾಗುತ್ತದೆ.

● ಎಕ್ಸಿಮಾ ಅಥವಾ ಸೋರಿಯಾಸಿಸ್ ನಂತಹ ಸೂಕ್ಷ್ಮ ಸಮಸ್ಯೆ ಇರುವವರಿಗೆ ಕಠಿಣ ನೀರು ಒಂದು ದೊಡ್ಡ ತೊಂದರೆ. ಅದರಿಂದ ಚರ್ಮದ ಕೆಂಪು ಜಾಸ್ತಿಯಾಗಿ ಉರಿಯೂತ ತೀವ್ರವಾಗುತ್ತದೆ.


● ವಯಸ್ಸಾಗುವ ಮೊದಲೇ ವಯಸ್ಸಾದಂತೆ ಕಾಣಿಸುವುದು ಚರ್ಮದ ಮೇಲೆ ಉಂಟಾಗಬಹುದಾದ ಅತ್ಯಂತ ಕೆಟ್ಟ ಪರಿಣಾಮವಾಗಿದೆ. ಈ ಸ್ಥಿತಿಯಲ್ಲಿ ಚಿಕ್ಕ ಗೆರೆಗಳು, ಕಪ್ಪು ಚುಕ್ಕೆಗಳು, ಕಣ್ಣ ಸುತ್ತ ಗೆರೆಗಳು, ಗಲ್ಲ ಮತ್ತು ಕತ್ತಿನಲ್ಲಿ ಸಡಿಲತನ ಇವೆಲ್ಲವೂ ನಿರೀಕ್ಷೆಗಿಂತ ಬೇಗ ಕಾಣಿಸಿಕೊಳ್ಳಬಹುದು. ಈ ಸ್ಥಿತಿಯಿಂದ ಮತ್ತೆ ಮೊದಲಿನ ಸ್ಥಿತಿಗೆ ಬರುವುದಕ್ಕೆ ತುಂಬಾ ಸಮಯ ಬೇಕಾಗುತ್ತದೆ.


● ಕೂದಲು ಉದುರುವಿಕೆಯ ಚಕ್ರ ಮುಂಚೆಯೇ ಶುರುವಾಗುತ್ತದೆ. ಏಕೆಂದರೆ ಕಠಿಣ ನೀರು ಕೂದಲಿನ ಮೂಲಗಳನ್ನೂ ತಲೆಯ ಚರ್ಮವನ್ನೂ ಹಾಳುಮಾಡುತ್ತದೆ. ಶಾಂಪೂ ಸಂಪೂರ್ಣ ತೊಳೆಯದೇ ಖನಿಜಗಳು ಕೂದಲಿನ ಸುತ್ತಲೂ ಮತ್ತು ತಲೆಯಲ್ಲಿ ಜಮಾವಣೆಯಾಗುತ್ತವೆ. ಇದು ಬೇರನ್ನು ದುರ್ಬಲಗೊಳಿಸಿ ಕೂದಲಿನ ಆರೋಗ್ಯಕರ ಬೆಳವಣಿಗೆ ತಡೆಯುತ್ತದೆ, ಕೂದಲು ಉದುರತೊಡಗುತ್ತದೆ. ಸ್ನಾನದ ಸಂತೋಷವೇ ಹೋಗುತ್ತದೆ.


ಸಮಸ್ಯೆ ತಡೆಗಟ್ಟುವ ಮತ್ತು ಸರಿಪಡಿಸುವ ಪ್ರಾಯೋಗಿಕ ಹಂತಗಳು 

ಇಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಸಾಬೂನು ಅಥವಾ ಡಿಟರ್ಜೆಂಟ್ ಬಳಸದೇ ಇರಲಾಗದು, ನೀರನ್ನೂ ಬದಲಾಯಿಸಲಾಗದು. ಆದರೆ ಇತರ ಕೆಲವು ಸರಳ ಉಪಾಯಗಳಿಂದ ಚರ್ಮ ಮತ್ತು ಕೂದಲನ್ನು ರಕ್ಷಿಸಬಹುದು. ಗಟ್ಟಿ ನೀರಿನ ಕೆಟ್ಟ ಪರಿಣಾಮ ತಡೆಯಲು ನೀರಿನ ಗುಣಮಟ್ಟ, ತೊಳೆಯುವ ವಿಧಾನ ಮತ್ತು ತೇವಾಂಶ ಮರುಪೂರಣ- ಈ ಮೂರು ಅಂಶಗಳ ಮೇಲೆ ಗಮನ ಹರಿಸಬೇಕು.


ಸಮಸ್ಯೆ ತಡೆಗಟ್ಟುವಿಕೆಯ ಕ್ರಮಗಳು

ಶವರ್ ಫಿಲ್ಟರ್ ಖರೀದಿಸಿ: ನಗರದವರಿಗೆ ಅತ್ಯಂತ ಸುಲಭ ಮತ್ತು ಅಗ್ಗದ ಪರಿಹಾರ. ಉತ್ತಮ ಗುಣಮಟ್ಟದ ಒಳ್ಳೆಯ ಶವರ್ ಫಿಲ್ಟರ್ ಕೆಡಿಎಫ್ ಅಥವಾ ವಿಟಮಿನ್ ಸಿ ಬಳಸಿಕೊಂಡು ಕ್ಲೋರೀನ್ ಅಂಶವನ್ನು ತಗ್ಗಿಸಿ ಖನಿಜಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಆದರೆ ನಿಮ್ಮ ನಲ್ಲಿಯ ನೀರಿನ ಗಟ್ಟಿತನಕ್ಕೆ ಅನುಗುಣವಾಗಿ ಇದರ ಕಾರ್ಟ್ರಿಜ್ ಅನ್ನು 3-6 ತಿಂಗಳಿಗೊಮ್ಮೆ ಬದಲಾಯಿಸಲು ಮರೆಯದಿರಿ!


ಆರ್ ಓ ರಿನ್ಸ್ ಟ್ರಿಕ್: ಸ್ನಾನ ಮಾಡುವಾಗ ಕೊನೆಯ ಸಲ ತಲೆ, ಮೈ ತೊಳೆಯುವುದಕ್ಕೆ ಆರ್ ಓ ನೀರು ಬಳಸುವುದು ತಕ್ಷಣದ ಮತ್ತು ಅಗ್ಗದ ಉಪಾಯ. ಬಾತ್‌ರೂಮ್‌ನಲ್ಲಿ ಒಂದು ಜಗ್ ಆರ್ ಓ ಅಥವಾ ಶುದ್ಧ ನೀರು ಇಟ್ಟುಕೊಂಡು ಮುಖ ಮತ್ತು ಕೂದಲನ್ನು ಕೊನೆಯ ಹಂತದಲ್ಲಿ ತೊಳೆಯಿರಿ. ಅದರಿಂದ ಸಾಬೂನಿನ ಜಿಗುಟು ಉಳಿಯುವುದು ತಪ್ಪುತ್ತದೆ.


ಸರಿಯಾದ ತೊಳೆಯುವ ವಿಧಾನ 

ಕಠಿಣ ನೀರು ಉಳಿಸುವ ಸಾಬೂನು ಜಿಗುಟು ಮತ್ತು ಖನಿಜ ಸಂಗ್ರಹವಾಗುವಿಕೆಯನ್ನು ಸಂಪೂರ್ಣವಾಗು ತೆಗೆಯುವುದು ಮೊದಲ ಹೆಜ್ಜೆ. 

ಸಾಬೂನು-ರಹಿತ ಕ್ಲೆನ್ಸರ್‌ ಗಳನ್ನು ಬಳಸಿ: ಹಾರ್ಷ್ ಮತ್ತು ಹೆಚ್ಚು ಪಿಎಚ್ ಇರುವ ಬಾರ್ ಸಾಬೂನು ಬಿಟ್ಟು ಬಿಡಿ. ಅವು ಗಟ್ಟಿ ನೀರಿನೊಂದಿಗೆ ಹೆಚ್ಚು ಜಿಗುಟು ಉಂಟುಮಾಡುತ್ತವೆ. ಬದಲಿಗೆ ಪಿಎಚ್ ಸಮತೋಲಿತ ಜೆಲ್, ನೈಸರ್ಗಿಕ ಸಾಬೂನು ಅಥವಾ ಸಿಂಡೆಟ್ ಬಾರ್ (ಸಿಂಥೆಟಿಕ್ ಡಿಟರ್ಜೆಂಟ್) ಬಳಸಿ, ಅವೆಲ್ಲವೂ ಚರ್ಮಕ್ಕೆ ಮೃದುವಾಗಿರುತ್ತವೆ.


ಎಸಿವಿ ರಿನ್ಸ್: ಇದು ಸರಳ ಮತ್ತು ನೈಸರ್ಗಿಕ ಪರಿಹಾರವಾಗಿದೆ. ಶಾಂಪೂ ಬಳಸಿದ ನಂತರ ಒಂದೆರಡು ಚಮಚ ಆಪಲ್ ಸೈಡರ್ ವಿನೆಗರ್ (ಎಸಿವಿ) ಅನ್ನು ಒಂದು ಕಪ್ ಶುದ್ಧ ನೀರಿನಲ್ಲಿ ಬೆರೆಸಿ ಕೊನೆಯ ಸಲ ತೊಳೆಯಲು ಬಳಸಿ. ಆಗ ಆಗಿರಬಹುದಾದ ಖನಿಜ ಸಂಗ್ರಹ ಕರಗುತ್ತದೆ ಮತ್ತು ತಲೆಯ ನೈಸರ್ಗಿಕ ಆಮ್ಲತೆ ಮರಳಿ ಬರುತ್ತದೆ. 


ತಕ್ಷಣ ಸರಿಪಡಿಸಿಕೊಳ್ಳ ಬಯಸುವವರಿಗೆ ಎರಡು ಸಲಹೆ 

ಚರ್ಮಕ್ಕೆ: ಕಠಿಣ ನೀರು ಚರ್ಮ ಮತ್ತು ಕೂದಲಿನ ನೈಸರ್ಗಿಕ ರಕ್ಷಾಕವಚವನ್ನು ಹಾಳುಮಾಡುವುದರಿಂದ ಸ್ನಾನದ ನಂತರ ಆರೈಕೆ ಅತ್ಯಗತ್ಯ. ನಗರದಲ್ಲಿ ವಾಸಿಸುವವರು ಇದನ್ನು ದಿನಂಪ್ರತಿ ರೂಢಿ ಮಾಡಿಕೊಳ್ಳಲೇಬೇಕು. ಚರ್ಮಕ್ಕೆ ಬೇಕಾದ್ದು ಸ್ವಲ್ಪ ಪ್ರೀತಿ ಮತ್ತು ಗಮನ. ಈ ವಿಚಾರದಲ್ಲಿ 3 ನಿಮಿಷದ ನಿಯಮ ಬಹಳ ಪ್ರಸಿದ್ಧ. ಸ್ನಾನ ಮುಗಿಸಿ 3 ನಿಮಿಷದೊಳಗೆ (ಚರ್ಮ ಇನ್ನೂ ಸ್ವಲ್ಪ ಒದ್ದೆಯಿರುವಾಗ) ಒಳ್ಳೆಯ ದಪ್ಪ ಮಾಯಿಶ್ಚರೈಸರ್ ಹಚ್ಚಿ. ನಿಗದಿತ ಸಮಯದಲ್ಲಿ ಮಾಡಿದರೆ ತೇವಾಂಶ ಹಾಗೇ ಉಳಿಯುತ್ತದೆ. ಸೆರಾಮೈಡ್ ಮತ್ತು ಹಯಾಲುರಾನಿಕ್ ಆಸಿಡ್ ಇರುವ ಉತ್ಪನ್ನಗಳು ಚರ್ಮದ ಹಾಳಾದ ರಕ್ಷಾಕವಚವನ್ನು ಸರಿಪಡಿಸುತ್ತವೆ.


ಕೂದಲಿಗೆ: ಕಠಿಣ ನೀರು ತಿಂಗಳುಗಟ್ಟಲೆ ಬಳಸಿದರೆ ಕೂದಲು ಒಣಗುತ್ತದೆ. ವಾರಕ್ಕೊಮ್ಮೆ ಡೀಪ್ ಕಂಡಿಷನಿಂಗ್ ಮಾಡಿ. ಒಳ್ಳೆಯ ದಪ್ಪ ಹೇರ್ ಮಾಸ್ಕ್ ಬಳಸಿ, ಅದು ಕಠಿಣ ನೀರು ಕಿತ್ತುಕೊಂಡಿರುವ ತೇವಾಂಶವನ್ನು ಮರಳಿ ತುಂಬುತ್ತದೆ. ಶಾಂಪೂ ಹಾಕುವ 30 ನಿಮಿಷ ಮೊದಲು ತೆಂಗಿನೆಣ್ಣೆ ಅಥವಾ ಆರ್ಗನ್ ಎಣ್ಣೆಯನ್ನು ಕೂದಲು ಮತ್ತು ತಲೆಗೆ ಹಚ್ಚಿ. ಇದು ರಕ್ಷಾಕವಚದಂತೆ ಕೆಲಸ ಮಾಡಿ ಖನಿಜಗಳು ಒಳಗೆ ಹೋಗುವುದನ್ನು ಮತ್ತು ಕೂದಲು ಒಣಗುವುದನ್ನು ತಡೆಯುತ್ತದೆ. ಸ್ನಾನದ ನಂತರ ಒದ್ದೆ ಕೂದಲಿಗೆ ಲೀವ್-ಇನ್ ಸೀರಮ್ ಹಚ್ಚಿ, ಆದರೆ ತಲೆಯ ಚರ್ಮದ ಮೇಲೆ ಬೀಳದಂತೆ ನೋಡಿಕೊಳ್ಳಿ.


ನಗರದಲ್ಲಿನ ಕಠಿಣ ನೀರಿನ ಸಮಸ್ಯೆ ಅನೇಕರ ಪಾಲಿಗೆ ಕಹಿ ಸತ್ಯವಾಗಿ ಉಳಿದಿದೆ. ಹಾಗಂತ ಕಠಿಣ ನೀರಿಗಾಗಿ ನಿಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯ ಹಾಳು ಮಾಡಿಕೊಳ್ಳಬೇಕಿಲ್ಲ. ಮೇಲೆ ಹೇಳಿದ ಸರಳ ಉಪಾಯಗಳನ್ನು ಅಳವಡಿಸಿಕೊಂಡರೆ ಚರ್ಮ, ಕೂದಲಿನ ಹಾನಿ ತಡೆದು ನಿಮ್ಮ ನೈಸರ್ಗಿಕ ಹೊಳಪು ಮರಳಿ ಬರುತ್ತದೆ. ತಡೆಗಟ್ಟುವಿಕೆ ಯಾವಾಗಲೂ ಚಿಕಿತ್ಸೆಗಿಂತ ಉತ್ತಮ. ಆದ್ದರಿಂದ ಸಮಸ್ಯೆ ದೊಡ್ಡದಾಗುವ ಮೊದಲೇ ಶುರು ಮಾಡಿ. ಒಣ ಚರ್ಮ ಮತ್ತು ಉದುರುವ ಕೂದಲಿಗೆ ಖಾಯಂ ವಿದಾಯ ಹೇಳಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top