ಮಕ್ಕಳ ಮೊಬೈಲ್‌ನ ಸಹವಾಸ ಬಿಡಿಸುವುದು ಹೇಗೆ?

Upayuktha
0


ಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು ಇಂದು ನಿನ್ನೆಯ ಮಕ್ಕಳ ಹವ್ಯಾಸವಲ್ಲ. ದುಬಾರಿ ಬೆಲೆಯ ಗ್ರಾಮ ಫೋನ್‌ಗಳು ಮೊಟ್ಟ ಮೊದಲಿಗೆ ಚಾಲ್ತಿಯಲ್ಲಿ ಬಂದವು. ಕಹಳೆಯಾಕಾರದ ಗ್ರಾಮ ಫೋನ್ ನ ಮೇಲೆ ತಟ್ಟೆಯ ಆಕಾರದ ಹಾಡಿನ ಪ್ಲೇಟುಗಳನ್ನು ಇರಿಸಿ ಅದರ ಮೇಲೆ ವಿದ್ಯುತ್ತಿನ ಕನೆಕ್ಷನ್ ಹೊಂದಿರುವ ಕಡ್ಡಿಯನ್ನು ಇಟ್ಟೊಡನೆ ಸುಮಧುರವಾದ ಗೀತೆಗಳು ಮೊಳಗುತ್ತಿದ್ದವು. ಈ ಮೊದಲೇ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಧ್ವನಿ ಮುದ್ರಿಸಲ್ಪಟ್ಟ ಗೀತೆಗಳು ಗ್ರಾಮ ಫೋನ್ ತಟ್ಟೆಗಳ ಮೂಲಕ ನಮ್ಮ ಶ್ರವಣೇಂದ್ರಿಯಗಳಿಗೆ ಅಮೃತ ಸುಧೆಯನ್ನು ಉಣಿಸುತ್ತಿದ್ದವು. ಸುಮಾರು ಶತಮಾನಗಳ ಇತಿಹಾಸ ಇವಕ್ಕಿದೆ. 


ನಂತರ ಬಂದದ್ದು ರೇಡಿಯೋ. ಈ ಹಿಂದೆ ರೇಡಿಯೋ ತರಂಗಗಳ ಮೂಲಕ ಆಕಾಶವಾಣಿಯಲ್ಲಿ ನಮ್ಮ ಹಿರಿಯರು ಹಾಡು, ವಾರ್ತೆಗಳು, ಪ್ರದೇಶ ಸಮಾಚಾರ, ಹವಾಮಾನ ಮುನ್ಸೂಚನೆ, ಕೃಷಿ ಸಂಬಂಧಿತ ಸಲಹೆ ಸೂಚನೆಗಳು, ನಾಟಕ ಮಕ್ಕಳ ಕಾರ್ಯಕ್ರಮಗಳು, ಮನರಂಜನೆ ಮುಂತಾದ  ಕಾರ್ಯಕ್ರಮ ಗಳನ್ನು ಕೇಳುತ್ತಿದ್ದರು. ಮತ್ತೆ ಕೆಲವು ಹಣ ಸಂದಾಯ ಮಾಡಿ ಕೇಳುವಂತಹ ರೇಡಿಯೋ ಕಾರ್ಯಕ್ರಮಗಳು ಕೂಡ ಇದ್ದವು.


ಆಮೇಲೆ ಬಂದದ್ದು ಫೋನ್ಗಳು. ಮೊದಮೊದಲು ಕೇವಲ ಪೋಸ್ಟ್ ಆಫೀಸ್ನಲ್ಲಿ, ಉಳ್ಳವರ ಮನೆಗಳಲ್ಲಿ ಮಾತ್ರ ಇರುತ್ತಿದ್ದ ಫೋನ್‌ಗಳು ತಮ್ಮ ಕರ್ಕಶ ಧ್ವನಿಯಿಂದ ಕರೆ ಮಾಡಿದ ಸೂಚನೆಯನ್ನು ನೀಡಿದರೆ ನಂತರ ವಿವಿಧ ರೀತಿಯ ರಿಂಗ್ ಟೋನ್‌ಗಳು ಬಂದವು. ಕಾರ್ಡಲೆಸ್ ಫೋನುಗಳ ನಂತರ ಈಗ  ಆಂಡ್ರಾಯ್ಡ್ ಮೊಬೈಲ್‌ಗಳದ್ದೇ ಕಾರು ಬಾರು. ಚಿಕ್ಕ ಮಕ್ಕಳಿಂದ ಹಿಡಿದು ಮುಪ್ಪಿನ ಮುದುಕರವರೆಗೆ ಎಲ್ಲರ ಕೈಯಲ್ಲೂ ಮೊಬೈಲ್ ರಾರಾಜಿಸುತ್ತಿದೆ.


ನಿರ್ಜೀವ ವಸ್ತುಗಳಾದ ವಾಚುಗಳು ಗಡಿಯಾರಗಳು, ರೇಡಿಯೋ, ಗ್ರಾಮ ಫೋನ್ ಮುಂತಾದ ವಸ್ತುಗಳು ನಮ್ಮಲ್ಲಿ ಸದಾ ಆಕರ್ಷಣೆಯನ್ನು ಹುಟ್ಟಿಸುತ್ತಿದ್ದವು. ಯಂತ್ರದ ತಂತ್ರಜ್ಞಾನವನ್ನು ಅರಿಯುವ ಮುಂಚೆಯೇ ನಾವು ಅವುಗಳ ಆಕರ್ಷಕ ವಿನ್ಯಾಸ, ಬಣ್ಣ ಮತ್ತು ಮೆರುಗುಗಳಿಗೆ ಮಾರುಹೋಗುತ್ತಿದ್ದೆವು.


ಗ್ರಾಮ ಫೋನ್, ರೇಡಿಯೋ, ಫೋನು, ಟಿವಿ, ಬಣ್ಣದ ಟಿವಿ, ವಿಸಿಆರ್, ವಿಸಿಡಿ ಹೀಗೆ ಹಂತ ಹಂತವಾಗಿ ನಾವು ವಿವಿಧ ಬಗೆಯ ಗ್ಯಾಜೆಟ್‌ಗಳ ಜೊತೆ ನಮ್ಮ ಸಂಬಂಧವನ್ನು ಉಳಿಸಿ ಬೆಳೆಸಿಕೊಂಡು ಹೋದೆವು. ಇದೀಗ ಓಟಿಟಿಗಳ ಯುಗ. ಹತ್ತು ಹಲವರು ಚಾನೆಲ್‌ಗಳು ಸಾಮಾಜಿಕ ಜಾಲತಾಣಗಳು ನಮ್ಮನ್ನು ದಿನದ 24 ಗಂಟೆಯೂ ರಂಜಿಸಲು ಇವೆ. ಹಿರಿಯರೇ ಇವುಗಳ ಆಕರ್ಷಣೆಗೆ ಒಳಗಾಗಿದ್ದಾರೆ ಎಂದರೆ ಮಕ್ಕಳ ಪಾಡೇನು? 


ಮಕ್ಕಳೂ ಅಷ್ಟೇ.... ಮೊಬೈಲ್ ಕುರಿತ ಮಕ್ಕಳ ಆಕರ್ಷಣೆ ಹೇಳತೀರದು. ಶಾಲೆಗೆ ಹೋಗುವ ಕೊನೆಯ ಘಳಿಗೆಯವರೆಗೂ ಮೊಬೈಲನ್ನು ಬಳಸುವ ಮಕ್ಕಳು ಶಾಲೆಯಿಂದ ಬಂದೊಡನೆ ತಂದೆ ತಾಯಿಗಳ ಕೈಕಾಲು ಬಿದ್ದಾದರೂ ಮೊಬೈಲ್ ಪಡೆದು ಅದನ್ನು ಬಳಸುತ್ತಾರೆ.


ಮೊಬೈಲ್ನ ಕುರಿತಾದ ಮಕ್ಕಳ ಈ ಆಕರ್ಷಣೆ ಒಂದು ಹಂತದವರೆಗೆ ಪರವಾಗಿಲ್ಲ ಎಂದೆನಿಸಿದರೂ "ಅತಿಯಾದರೆ ಅಮೃತವೂ ವಿಷ" ಎಂಬ ಮಾತಿನಂತೆ ಮಕ್ಕಳು ತಮ್ಮ ಜೀವನದ ಅತಿ ಮುಖ್ಯವಾದ ವಿದ್ಯಾರ್ಥಿ ಜೀವನದ ಶೈಕ್ಷಣಿಕ ವಿಷಯಗಳತ್ತ ನಿರ್ಲಕ್ಷ ತೋರುತ್ತಿದ್ದಾರೆ ಇದು ಅಪಾಯಕ್ಕೆ ದಾರಿ.


ಎರಡು ಗುಂಡು ಸೂಜಿಗಳನ್ನು ವಿರುದ್ಧ ದಿಕ್ಕಿನಲ್ಲಿ ಇಟ್ಟು ನಡುವೆ ಒಂದು ಆಯಸ್ಕಾಂತವನ್ನು ಇಟ್ಟಾಗ ಆ ಆಯಸ್ಕಾಂತದ ಮ್ಯಾಗ್ನೆಟಿಕ್ ಶಕ್ತಿಯು ಹೆಚ್ಚಿರುವ ಕಡೆ, ಗುಂಡುಸೂಜಿಯು ಬಂದು ಅದಕ್ಕೆ ಅಂಟಿಕೊಳ್ಳುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ನಾವು ಗಮನಿಸುತ್ತೇವೆ. ಪ್ರಸ್ತುತ ಮಕ್ಕಳ ಬದುಕಿನಲ್ಲಿ ಮೊಬೈಲ್ ಒಂದು ಮ್ಯಾಗ್ನೆಟಿಕ್ ಶಕ್ತಿಯ ಕೇಂದ್ರದಂತೆ ಭಾಸವಾಗುತ್ತಿದ್ದು ಮಕ್ಕಳು ಹೆಚ್ಚಾಗಿ ಮೊಬೈಲನೆಡೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳಲ್ಲಿ ಸೃಜನಶೀಲತೆಯ ಕೊರತೆ. ಇಂದಿನ ಪಾಲಕರು ತಮ್ಮ ಮಕ್ಕಳ ಕುರಿತು ಅತಿಯಾದ ಕಾಳಜಿ ತೋರುತ್ತಿದ್ದಾರೆ ಮಕ್ಕಳು ಕೇವಲ ಓದು ಬರಹಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕವಾಗಿ ಮುಂದುವರೆಯಲಿ, ಒಳ್ಳೆಯ ಉದ್ಯೋಗ, ಸ್ಥಾನಮಾನಗಳನ್ನು ಪಡೆಯಲಿ ಎಂಬ ಆಶಯವನ್ನು ಹೊಂದಿರುವ ಪಾಲಕರು ತಮ್ಮ ಮಕ್ಕಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ, ಆಟೋಟಗಳಲ್ಲಿ ತೊಡಗಿಸದೆ ಇರುವುದು ಕೂಡ ಮಕ್ಕಳು ಮೊಬೈಲಿನೆಡೆ ಆಕರ್ಷಿತರಾಗಲು ಒಂದು ಕಾರಣವಾಗಿದೆ.


ಸದಾ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಮಕ್ಕಳು ಒಂದೆಡೆ ಕುಳಿತುಕೊಳ್ಳಲು ಮೊಬೈಲ್ ಕಾರಣವಾಗಿದೆ, ಸದಾ ಮನೆಯ ತುಂಬಾ ಓಡಾಡುತ್ತಾ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ಮಕ್ಕಳು ಆರೋಗ್ಯಪೂರ್ಣವಾದ ಹವ್ಯಾಸಗಳನ್ನು ಹೊಂದಿರುವ ಮಕ್ಕಳು ಮೊಬೈಲ್ ನ ಚಟಕ್ಕೆ ಬೀಳುವುದು ಕಡಿಮೆ.


ಕೇವಲ ಒಂದು ತಲೆಮಾರಿನ ಹಿಂದೆ ನಮ್ಮ ಪಾಲಕರು ನಮಗೆ ಅತಿಯಾದ ಶಿಸ್ತು ಕ್ರಮವನ್ನು ತೆಗೆದುಕೊಳ್ಳದೆ ಆಟೋಟಗಳಲ್ಲಿ, ಹೊಲ ಮನೆಯ ದೈಹಿಕ ಶ್ರಮದ ಕೆಲಸಗಳಲ್ಲಿ ಮತ್ತು ಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ಕಡ್ಡಾಯವಾಗಿ ತೊಡಗಿಸಿಕೊಳ್ಳುವಂತೆ ನಮಗೆ ತರಬೇತಿ ನೀಡುತ್ತಿದ್ದರು. ಇದರ ಪರಿಣಾಮವಾಗಿ ನಮಗೆ ಕೆಲಸ ಕಾರ್ಯಗಳಲ್ಲಿ ಒಂದು ರೀತಿಯ ಶಿಸ್ತು ಮೈಗೂಡಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿನ ಮಕ್ಕಳು ಮನೆಯ ಯಾವ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು, ಇರುವ ಒಬ್ಬಿಬ್ಬರು ಮಕ್ಕಳು ತಮ್ಮ ಕೆಲಸಗಳಿಗಾಗಿ ಪಾಲಕರನ್ನು ಅವಲಂಬಿಸುವುದು ನಡೆದುಕೊಂಡು ಬರುತ್ತಿದೆ.


ಮಕ್ಕಳಿಗೆ ಶಿಕ್ಷಕರು ವಿವಿಧ ರೀತಿಯ ಕಲಿಕಾ ಚಟುವಟಿಕೆಗಳನ್ನು ನೀಡುವ ಮೂಲಕ ಅವರನ್ನು ಕ್ರಿಯಾಶೀಲವಾದ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಈ ಚಟುವಟಿಕೆಗಳು ಮಕ್ಕಳ ಬೆಳವಣಿಗೆಗೆ ಅನುಕೂಲಕರವಾದಂತಹ ಹತ್ತು ಹಲವು ಕಲಿಕೆಗಳನ್ನು ಹೊಂದಿದ್ದು ಮಕ್ಕಳ ಆಸಕ್ತಿಯನ್ನು ಗುರುತಿಸಲು ಮತ್ತು ಅವುಗಳನ್ನು ನಿರಂತರವಾಗಿ ಮಾಡಲು ಪ್ರೇರೇಪಣೆ ನೀಡುತ್ತವೆ. ಶಾಲೆಗಳಲ್ಲಿ ನೀಡುವ ನಿರಂತರ ಕಲಿಕಾ ಚಟುವಟಿಕೆಗಳು ಮಕ್ಕಳ ಮನೋದೈಹಿಕ ಬೆಳವಣಿಗೆಗೆ ಕಾರಣವಾಗುತ್ತವೆ. ಈ ರೀತಿ ಕಲಿಯುವ ಮಕ್ಕಳು ಈ ಹಿಂದೆ ಶಾಲೆಯಲ್ಲಿ ಕಲಿಯುವಾಗ ಮಾಡುತ್ತಿದ್ದ ಬಹುತೇಕ ತಪ್ಪುಗಳನ್ನು ಪುನರಾವರ್ತಿಸುತ್ತಿಲ್ಲ ಎಂಬುದು ಸಂತಸದ ವಿಷಯ. ಸುಬೋಧ ಕಲಿಕಾ ಕೇಂದ್ರಗಳಲ್ಲಿ ಅವರು ತಮ್ಮೆಲ್ಲ ತಪ್ಪುಗಳನ್ನು ಸುಧಾರಿಸಿಕೊಂಡು ವೈವಿಧ್ಯಮಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


ಕ್ರಿಯಾಶೀಲ ಚಟುವಟಿಕೆಗಳು ಕಲಿಕೆಗೆ ದಾರಿ ಮತ್ತು ಕಲಿಕೆಗೆ ದಾರಿಯಾಗುವ ಮೂಲಕ ಉತ್ತಮ ಅಂಕಗಳನ್ನು ಗಳಿಸುವುದು ಸಾಧ್ಯ ಮತ್ತು ಚಟುವಟಿಕೆಗಳು ಮನಸ್ಸಿನ ಭಯ, ಆತಂಕಗಳನ್ನು ಹೋಗಲಾಡಿಸಿ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅವರಲ್ಲಿ ಉತ್ಸಾಹ ಸ್ಫೂರ್ತಿಯನ್ನು ತುಂಬುತ್ತವೆ.


ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಅನುಭವವನ್ನು ಗಳಿಸುವ ಮಕ್ಕಳು ಶೈಕ್ಷಣಿಕವಾಗಿ ಜಾಣರಾಗುತ್ತಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮಂಚೂಣಿಯಲ್ಲಿ ಇರುತ್ತಾರೆ. ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಕ್ರಿಯಾಶೀಲತೆಯ ಲಾಭವನ್ನು ಪಡೆಯುವ ಅವರು ಉತ್ತಮವಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯ ಮಕ್ಕಳು ಮಾಡುವ ಚಟುವಟಿಕೆಗಳು ಅವರ ಉತ್ತಮ ಭವಿಷ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ.


ಸಾಮಾನ್ಯ ಮಕ್ಕಳು ಮಾತ್ರವಲ್ಲದೆ ಮಂದಮತಿಯನ್ನು ಹೊಂದಿರುವ ಮಕ್ಕಳನ್ನು ಕೂಡ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಅವರನ್ನು ಬದುಕಿನ ಎಲ್ಲ ಮಗ್ಗುಲುಗಳಿಗೆ ಪರಿಚಯಿಸಬಹುದು. ಕ್ರಿಯಾತ್ಮಕ ಚಟುವಟಿಕೆಗಳು ಮಕ್ಕಳನ್ನು ಸತ್ವ ಭರಿತರನ್ನಾಗಿಸುತ್ತವೆ.


ಸೃಜನಶೀಲ ಚಟುವಟಿಕೆಗಳು ಮಕ್ಕಳನ್ನು ಒತ್ತಡ ಮತ್ತು ಆತಂಕದಿಂದ ಮುಕ್ತರನ್ನಾಗಿಸಿ ಕ್ರಿಯಾಶೀಲರನ್ನಾಗಿಸುತ್ತದೆ ಮಕ್ಕಳು ಉತ್ತಮ ನಿರ್ಣಯಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಹೊಂದುತ್ತಾರೆ ಜೊತೆಗೆ ಮಕ್ಕಳು ಹೊಂದಾಣಿಕೆಯ ಮನೋಭಾವವನ್ನು, ಸಮಯ ಪ್ರಜ್ಞೆಯನ್ನು ಮತ್ತು ನಿರ್ವಹಣಾ ಸಾಮರ್ಥ್ಯವನ್ನು ತೋರುತ್ತಾರೆ.


ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು. ಮಕ್ಕಳ ಪಾಲಿಗೆ ಪಾಲಕರು, ಅಜ್ಜ ಅಜ್ಜಿಯರು ಆಯಸ್ಕಾಂತವಾಗಬೇಕು, ಮಕ್ಕಳ ಮಾನಸಿಕ ಬೆಳವಣಿಗೆಗೆ ಮತ್ತು ಮೌಲ್ಯಯುತ ಜೀವನಕ್ಕೆ ಅತ್ಯವಶ್ಯಕವಾದ ಕಥೆ,ಕವನಗಳನ್ನು ಹೇಳುವ, ಮಹಾಪುರುಷರ ಚರಿತ್ರೆಗಳನ್ನು ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಕಥೆಗಳನ್ನು ಹೇಳುವ ಮೂಲಕ, ಹಾಡುಗಳನ್ನು ಕಲಿಸುವ ನಿಟ್ಟಿನಲ್ಲಿ ಪಾಲಕರು ಕಾರ್ಯನಿರ್ವಹಿಸಬೇಕು. ಪಾಲಕರೇ ಮೊಬೈಲ್ ಹಿಡಿದು ಕುಳಿತರೆ ಮಕ್ಕಳು ಮೊಬೈಲ್ ಹಿಡಿಯದೆ ಮತ್ತಿನ್ನೇನು ಮಾಡಿಯಾರು? ಮಕ್ಕಳಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಪಾಲಕರು ಮಾಡಲೇಬೇಕು.


ಇನ್ನು ಶಾಲೆಗಳಲ್ಲಿ ದೈಹಿಕ ಶಿಕ್ಷಕರು ತಮ್ಮ ತರಗತಿಯನ್ನು ಉಳಿದ ಭಾಷಾ ವಿಷಯಗಳ ಶಿಕ್ಷಕರಿಗೆ ಬಿಟ್ಟುಕೊಡದೆ ತಾವೇ ತೆಗೆದುಕೊಂಡು ಮಕ್ಕಳಿಗೆ ವಿವಿಧ ರೀತಿಯ ಆಟೋಟಗಳಲ್ಲಿ ತೊಡಗಿಸಿಕೊಳ್ಳುವಂತೆ ತರಬೇತಿ ನೀಡಬೇಕು. ಆಟೋಟಗಳ ಮೂಲಕ ಮಕ್ಕಳ ಪಂಚೇಂದ್ರಿಯಗಳು ಮತ್ತು ಕೈಕಾಲುಗಳು ಸರಳವಾಗಿ ಕಾರ್ಯನಿರ್ವಹಿಸುತ್ತವೆ. ಮಕ್ಕಳ ಮೆದುಳಿನ ಶಕ್ತಿ ಮತ್ತು ದೈಹಿಕ ಚಾಲನಾ ಶಕ್ತಿ ಜಾಗೃತಗೊಳ್ಳುತ್ತದೆ. ಮಕ್ಕಳ ಕಲಿಕೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಈ ಎಲ್ಲ ವಿಷಯಗಳು ಸಹಕಾರಿ ಆಗುತ್ತವೆ.... ಮೊಬೈಲ್ ನ ಚಟ ತಂತಾನೇ ಹಿಂದೆ ಬೀಳುತ್ತದೆ.


ಇದಕ್ಕೆ ಪೂರಕವಾಗಿ ಒಂದು ಕಥೆ ನೆನಪಿಗೆ ಬರುತ್ತದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆ ಹಾಗೂ ಆಕೆಯ ಮಗಳು ಕೈಯಲ್ಲಿ ಪುಸ್ತಕ ಹಿಡಿದು ಕುಳಿತಿದ್ದರು. ಇದನ್ನು ಬಹಳ ಹೊತ್ತಿನವರೆಗೆ ಓರ್ವ ವ್ಯಕ್ತಿ ಗಮನಿಸಿದರು. ಸ್ವಲ್ಪ ಸಮಯದ ನಂತರ ಪುಸ್ತಕವನ್ನು ಬದಿಗಿಟ್ಟು ತಲೆ ಎತ್ತಿದ ಮಹಿಳೆಗೆ ಈ ವಿಷಯವಾಗಿ ಅಭಿನಂದಿಸಿ ಪುಸ್ತಕ ಓದಲು ಮಗಳಿಗೆ ಕಲಿಸಿದ ತಾಯಿಯನ್ನು ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.


ಕೂಡಲೇ ತಾಯಿ ನಿಮ್ಮ ಮಕ್ಕಳು ನಿಮ್ಮ ಮಾತನ್ನು ಆಲಿಸುವುದಿಲ್ಲ. ಬದಲಾಗಿ ನಿಮ್ಮ ಪ್ರತಿ ಸಣ್ಣ ನಡೆಯನ್ನು ನೋಡಿ ಅದರಂತೆ ತಾವು ಕೂಡ ನಡೆಯುತ್ತಾರೆ. ನಿಮ್ಮ ಮಕ್ಕಳು ಏನಾಗಬೇಕೆಂದು ನೀವು ಬಯಸುವಿರೋ ಹಾಗೆಯೇ ನಿಮ್ಮ ನಡೆ, ನುಡಿಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದಳು... ಮಕ್ಕಳ ನಡವಳಿಕೆಯ ಗುಟ್ಟು ಈಗ ಗೊತ್ತಾಯಿತಲ್ಲವೇ ಸ್ನೇಹಿತರೇ?


- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ


Post a Comment

0 Comments
Post a Comment (0)
To Top