ಡಿ.14: ದ.ಕ- ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ, ಸಮಾವೇಶ

Upayuktha
0

ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಬೆಳೆಗಾರರ ಒಕ್ಕೂಟ






ಪುತ್ತೂರು: ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳೇ ಮೊದಲಾದ ಹಲವಾರು ಪ್ರದೇಶಗಳಲ್ಲಿ ಕೃಷಿಕರು ಪರಂಪರಾನುಗತವಾಗಿ ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜತೆಗೆ ಉಪಬೆಳೆಗಳಾಗಿ ಬಾಳೆ ಕೃಷಿ, ತೆಂಗಿನ ಕೃಷಿ, ತರಕಾರಿ ಕೃಷಿ, ರಬ್ಬರ್ ಕೃಷಿಯೇ ಮೊದಲಾದ ಹಲವಾರು ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿಯಂತಹ ರೋಗಗಳಿಂದಾಗಿ ಕೃಷಿಕರು ಆತಂಕಕ್ಕೊಳಗಾಗುತ್ತಿದ್ದಾರೆ. ಪರ್ಯಾಯ ಬೆಳೆಗಳೆಡೆಗೂ ದೃಷ್ಟಿ ಹಾಯಿಸುತ್ತಿದ್ದಾರೆ. ಇವೆಲ್ಲದರ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆಯ ಜತೆಗೆ ಕಾಳುಮೆಣಸು ಹಾಗೂ ಕಾಫಿ ಬೆಳೆ ವ್ಯಾಪಕವಾಗಿ ವಿಸ್ತರಿಸಿಕೊಳ್ಳುತ್ತಿದೆ.


ಈ ಹಿನ್ನೆಲೆಯಲ್ಲಿ ಕಾಳುಮೆಣಸು ಹಾಗೂ ಕಾಫಿಬೆಳೆಯಲ್ಲಿ ತೊಡಗಿಕೊಂಡ, ಸದ್ಯೋಭವಿಷ್ಯದಲ್ಲಿ ಆ ಬಗೆಗೆ ಚಿಂತನೆ ನಡೆಸಲಿರುವವರನ್ನು ಮುಖ್ಯವಾಗಿ ಲಕ್ಷö್ಯ ಇರಿಸಿಕೊಂಡು ಪುತ್ತೂರಿನ ಸುಭದ್ರಾ ಕಲ್ಯಾಣ ಮಂಟಪದಲ್ಲಿ ಆಗಸ್ಟ್ 10, 2025ರಂದು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಬೆಳೆಗಾರರ ಒಕ್ಕೂಟದ ವತಿಯಿಂದ ಒಂದು ದಿನದ ಕಾಳುಮೆಣಸು ಹಾಗೂ ಕಾಫಿ ಬೆಳೆಯ ಬಗೆಗಿನ ಮಾಹಿತಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕೃಷಿಕರು ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡಿರುತ್ತಾರೆ ಮಾತ್ರವಲ್ಲದೆ ಆಗಾಗ ಇಂತಹ ಸಮಾವೇಶಗಳನ್ನು ನಡೆಸಿ ಅಡಿಕೆ ರೋಗ ಹತೋಟಿ, ಕಾಳುಮೆಣಸು, ಕಾಫಿ ಬೆಳೆಗಳ ಕುರಿತಾದ ಸಮಗ್ರ ಮಾರ್ಗದರ್ಶನ ಒದಗಿಸಿಕೊಡುವಂತೆ ಒತ್ತಡ ತಂದಿರುತ್ತಾರೆ.


ಈ ಕಾರಣದಿಂದ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಹಾಗೂ ಸಮಾವೇಶವೊಂದನ್ನು 14.12.2025ನೇ ಭಾನುವಾರ ಪುತ್ತೂರಿನ ಸುಭದ್ರಾ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಹರ್ಷೇಂದ್ರ ಕುಮಾರ್ ಧರ್ಮಸ್ಥಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ.ವೇಣುಗೋಪಾಲ್ ಅವರು ಸಮಗ್ರ ಕಾಳುಮೆಣಸು ಕೊಯ್ಲು ಮಾಡುವ ವಿಧಾನ, ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನದ ಬಗೆಗೆ ವಿಷಯ ಮಂಡನೆ ನಡೆಸಿಕೊಡಲಿದ್ದಾರೆ. ಸೆವೆನ್ ಬೀನ್ ಟೀಮ್‌ನ ಮುಖ್ಯಸ್ಥರಾದ ಡಾ.ಎಚ್.ಎಸ್. ಧರ್ಮರಾಜ್ ಸಕಲೇಶಪುರ ಅವರು ಕಾಫಿ ಕೊಯ್ಲು ಮಾಡುವ ವಿಧಾನ ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನದ ಬಗೆಗೆ ಸಮಗ್ರ ಮಾಹಿತಿ ನೀಡುವರು. ಧೂಪದ ಗಿಡಗಳಲ್ಲಿ ಕಾಳುಮೆಣಸು ಬೆಳೆಯುತ್ತಿರುವ ಯುವ ಕೃಷಿಕ ಅನಂತ ರಾಮಕೃಷ್ಣ ಭಟ್ ಪಳ್ಳತ್ತಡ್ಕ ಅವರು ಧೂಪದ ಗಿಡಗಳ ನಾಟಿ ಹಾಗೂ ಇದರಲ್ಲಿ ಕಾಳುಮೆಣಸು ಗಿಡಗಳನ್ನು ಬೆಳೆಸುವುದು ಹಾಗೂ ನಿರ್ವಹಣೆ ಬಗೆಗೆ ಸಮಗ್ರ ಮಾಹಿತಿ ಒದಗಿಸಿಕೊಡಲಿದ್ದಾರೆ. ಇಂದೋರ್‌ನ ಶ್ರೀ ಸಿದ್ಧಿ ಅಗ್ರಿ ಕಂಪೆನಿ ಪ್ರೆöÊವೇಟ್ ಲಿಮಿಟೆಡ್‌ನ ಮುಖ್ಯಸ್ಥರಾದ ಪೆರುವೊಡಿ ನಾರಾಯಣ ಭಟ್ ಅವರು ಅಡಿಕೆ ಎಲೆಚುಕ್ಕಿ ರೋಗ ಹತೋಟಿ ಮತ್ತು ನಿರ್ಮೂಲನೆ ಬಗೆಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.


ಕಾಸರಗೋಡಿನ ಸಿಪಿಸಿಆರ್‌ಐ ವಿಜ್ಞಾನಿ ಡಾ.ರವಿ ಭಟ್, ಕ್ಯಾಂಪ್ಕೋ ನಿರ್ದೇಶಕರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಹಿರಿಯ ಪ್ರಗತಿಪರ ಕೃಷಿಕಪಡಾರು ತಿರುಮಲೇಶ್ವರ ಭಟ್ ದೇಲಂಪಾಡಿ, ಕಾಳುಮೆಣಸು ಕಸಿಕಟ್ಟಿ ಬೆಳೆಸಿದ ಅನುಭವಿ ಕೃಷಿಕೆ ಸುಜಾತಾ ರಮೇಶ್ ಅತಿಥಿಗಳಾಗಿ ಭಾಗವಹಿಸುವರು.


ಕಾರ್ಯಕ್ರಮದಲ್ಲಿ ಕಾಫಿ ಹಾಗೂ ಕಾಳುಮೆಣಸು ಕೃಷಿಯಲ್ಲಿ ಅಪಾರ ಸಾಧನೆ ಮಾಡಿರುವ ವೈ.ಎನ್.ಕೃಷ್ಣೇಗೌಡ, ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ.ವೇಣುಗೋಪಾಲ್ ಹಾಗೂ ಧೂಪದ ಗಿಡಗಳಲ್ಲಿ ಕಾಳುಮೆಣಸು ಬೆಳೆಯುತ್ತಿರುವ ಯುವ ಕೃಷಿಕ ಅನಂತರಾಮಕೃಷ್ಣ ಭಟ್ ದಂಪತಿಗಳನ್ನು ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ.

ಗಿಡಗಳ ಪ್ರದರ್ಶನ ಹಾಗೂ ಮಾರಾಟ: ಕಾರ್ಯಕ್ರಮದಲ್ಲಿ ವೈವಿಧ್ಯಮಯ ಮಾವಿನ ಗಿಡಗಳು, ಹಲಸಿನ ಗಿಡಗಳು, ರಾಮ ಫಲ, ಸೀತಾಫಲ, ಚಿಕ್ಕು, ದಾಳಿಂಬೆ, ಜಾಯಿಕಾಯಿ, ಮ್ಯಾಂಗೋಸ್ಟಿನ್, ಕಿತ್ತಳೆ, ಲಿಂಬೆ, ನೇರಳೆ, ಮೂಸುಂಬಿಯೇ ಮೊದಲಾದ ಹತ್ತು ಹಲವು ಬಗೆಯ ಗಿಡಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಜತೆಗೆ ಹಲವು ಬಗೆಯ ಗೊಬ್ಬರ ತಯಾರಿಕಾ ಸಂಸ್ಥೆಗಳ ಮಳಿಗೆ, ಕಾಳುಮೆಣಸು ಕೊಯ್ಯುವುದಕ್ಕೆ ಏರುವ ಏಣಿ, ಕಾಳುಮೆಣಸು ಬಿಡಿಸುವ ಯಂತ್ರ, ಶುದ್ಧೀಕರಿಸುವ ಯಂತ್ರಗಳ ಮಳಿಗೆ, ಅಡಿಕೆ ಕೊಯ್ಲು ಹಾಗೂ ಔಷಧ ಸಿಂಪಡಣೆಗಾಗಿ ರೂಪಿಸಲಾಗಿರುವ ಹೈಟೆಕ್ ದೋಟಿ ಹಾಗೂ ಎಲೆಚುಕ್ಕಿ ರೋಗಕ್ಕೆ ಕಂಡುಹಿಡಿಯಲಾದ ಔಷಧದ ಮಳಿಗೆ, ಆಯುರ್ವೇದ ಮಳಿಗೆ, ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆ, ಮಂಗಗಳ ಹಾವಳಿ ತಡೆಗಟ್ಟುವ ಸಲಕರಣೆಯ ಮಳಿಗೆ, ಹನಿನೀರಾವರಿ ವ್ಯವಸ್ಥೆಯ ಮಳಿಗೆ, ಬ್ಯಾಂಕ್‌ಗಳ ಮಳಿಗೆ, ಸಾವಯವ ಐಸ್‌ಕ್ರೀಂ ಮಳಿಗೆಯೇ ಮೊದಲಾದ ಆಹಾರ ಮಳಿಗೆಗಳೂ ಇರಲಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top