ಸಾಹಿತ್ಯರಚನೆ ಪ್ರಾಮಾಣಿಕವಾಗಿದ್ದಾಗ ಸಮಾಜಕ್ಕೆ ಒಳಿತು: ಡಾ. ವಸಂತಕುಮಾರ ಪೆರ್ಲ

Upayuktha
0


ಮಂಗಳೂರು: ನವೋದಯ ಕಾಲಘಟ್ಟದ ವರೆಗೂ ಸಾಹಿತ್ಯರಚನೆ ಎಂಬುದು ಹೃದಯದಿಂದ ಹುಟ್ಟಿ ಪ್ರಾಮಾಣಿಕವಾಗಿ ರೂಪುಗೊಳ್ಳುತ್ತಿತ್ತು. ಅನಂತರ ನಗರೀಕರಣ ಹೆಚ್ಚಾದಂತೆ ಮನುಷ್ಯನ ಮನಸ್ಸು ಕಲುಷಿತಗೊಳ್ಳುತ್ತ ಬಂತು ಹಾಗೂ ಸಾಹಿತ್ಯರಚನೆಯು ಬುದ್ಧಿಯ ಸೊತ್ತಾಯಿತು. ಹಾಗಾಗಿ ಸಾಹಿತಿ ಮುಂದೆ ಸಾಹಿತ್ಯ ಹಿಂದೆ ಎಂಬ ಸ್ಥಿತಿ ನಿರ್ಮಾಣವಾಯಿತು. ಆದರೆ ಇವುಗಳನ್ನೆಲ್ಲ ಮೀರಿ ಸಾಹಿತ್ಯ ರಚನೆಯು ಪ್ರಾಮಾಣಿಕವಾಗಿರಬೇಕು ಎಂದು ಕವಿ ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.  


ಮಂಗಳೂರಿನ ಹಿರಿಯ ನ್ಯಾಯವಾದಿ ಕೆ. ಎಂ. ಕೃಷ್ಣಭಟ್ಟರ 'ಇಂದ್ರಧನುಸ್' ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು. 


ಸಾಹಿತ್ಯಕ್ಕಿಂತ ಸಾಹಿತಿ ಮೆರವಣಿಗೆ ಹೊರಡುವುದು ಸಾಹಿತ್ಯದ ದೃಷ್ಟಿಯಿಂದ ಮತ್ತು ಸಮಾಜದ ಹಿತಚಿಂತನೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಸಮಾಜದ ಕ್ಷೇಮಚಿಂತನೆ ಮಾಡಬೇಕಾದ ಸಾಹಿತಿ ತನ್ನ ಸಾಹಿತ್ಯದ ಮೂಲಕ ಮಾತಾಡಬೇಕೇ ಹೊರತು ವೇದಿಕೆಯ ಮೇಲಿನ ಮಾತುಗಳ ಮೂಲಕ ಅಲ್ಲ ಎಂದು ಡಾ. ಪೆರ್ಲ ಅವರು ಹೇಳಿದರು.


ಕೆ.ಎಂ. ಕೃಷ್ಣ ಭಟ್ಟರ ಲಲಿತ ಪ್ರಬಂಧಗಳು ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುತ್ತವೆ. ಅವರ ಬರವಣಿಗೆಯಲ್ಲಿ ಆಪ್ತತೆಯಿದೆ. ಭಾಷಾ ಶುದ್ಧಿ ಮತ್ತು ಶೈಲಿಯ ಸೌಂದರ್ಯ ಅವರ ಬರವಣಿಗೆಯ ವಿಶೇಷತೆ ಎಂದರು. 


ಹಿರಿಯ ನ್ಯಾಯವಾದಿಗಳಾದ ಎಂ.ವಿ. ಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಡ್ವೋಕೇಟ್ ಆಗಿರುವ ಕೆ.ಎಂ. ಕೃಷ್ಣಭಟ್ಟರು ಬರವಣಿಗೆಯಲ್ಲೂ ತನ್ನ ನ್ಯಾಯಪಕ್ಷಪಾತಿತನವನ್ನು ತೋರಿಸಿದ್ದಾರೆ. ಅವರ ವಿಶಿಷ್ಟ ಮನೋಭಾವ ಪ್ರತಿಯೊಂದು ಪ್ರಬಂಧದ ಹಿನ್ನೆಲೆಯಲ್ಲಿ ಕಂಡು ಬರುತ್ತದೆ. ಸಮಾಜವನ್ನು ತಿದ್ದುವ ಆಶಯ ಇವುಗಳ ಹಿಂದೆ ಕಾಣಿಸುತ್ತದೆ ಎಂದು ಅವರು ಹೇಳಿದರು. 


ಕೃತಿಕಾರರಾದ ಕೆ.ಎಂ. ಕೃಷ್ಣ ಭಟ್ಟರು ಮಾತಾಡುತ್ತ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು ನ್ಯಾಯವಾದಿಗಳ ಸಾಮಾಜಿಕ ಜವಾಬ್ದಾರಿಯಾಗಿದೆ. ಚಿಕ್ಕಂದಿನಿಂದಲೇ ರೂಢಿಸಿಕೊಂಡ ಸಾಹಿತ್ಯದ ಹವ್ಯಾಸವು ಬರವಣಿಗೆಗೆ ಪ್ರೇರೇಪಿಸಿತು. ನೈಜ ಘಟನೆ ಮತ್ತು ಸ್ವಂತ ಅನುಭವಗಳನ್ನು ಬರವಣಿಗೆಗೆ ಬಳಸುತ್ತಿದ್ದೇನೆ ಎಂದು ಹೇಳಿದರು. 


ಲೇಖಕರಾದ ಅನಂತಸುಬ್ರಹ್ಮಣ್ಯ ಶರ್ಮ ಕಾರ್ಯಕ್ರಮ ನಿರೂಪಿಸಿದರಲ್ಲದೆ ಸ್ವಾಗತಿಸಿ ವಂದನಾರ್ಪಣೆಗೈದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top