ಸ್ವಾತಂತ್ರ್ಯ ನಂತರ ಹಂಚಿಹೋಗಿದ್ದ ರಾಜ್ಯಗಳನ್ನು ನಿರ್ಭೀತ ವ್ಯಕ್ತಿತ್ವದಿಂದ ಒಗ್ಗೂಡಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲರು - ಸಂಸದ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಸ್ವಾತಂತ್ರ್ಯಾ ನಂತರ ರಾಜಪ್ರಭುತ್ವಗಳಲ್ಲಿ ಹರಿದು ಹಂಚಿಹೋಗಿದ್ದ ರಾಜ್ಯಗಳನ್ನು ತಮ್ಮ ಧೀಮಂತ ಮತ್ತು ನಿರ್ಭೀತ ವ್ಯಕ್ತಿತ್ವದಿಂದ ಒಗ್ಗೂಡಿಸಿ ಭಾರತದ ಉಕ್ಕಿನ ಮನುಷ್ಯ ಎಂದು ಹೆಸರುವಾಸಿಯಾದರು ಸರ್ದಾರ್ ವಲ್ಲಭಭಾಯಿ ಪಟೇಲರು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತ ಸರಕಾರ, ಜಿಲ್ಲಾಡಳಿತ ಮತ್ತು ಮೈ ಭಾರತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲೆ ಮತ್ತು ಎನ್.ಎಸ್.ಎಸ್., ಎನ್.ಸಿಸಿ, ರೇಂಜ್ ರೋವರ್ಸ್ ಸಂಯುಕ್ತ ಆಶ್ರಯದಲ್ಲಿ ಸರ್ದಾರ್ ವಲ್ಲಭಬಾಯಿ ಪಠೇಲರ 150 ನೇ ಜನ್ಮ ದಿನೋತ್ಸವದ ಪ್ರಯುಕ್ತ ಉಡುಪಿ ಬೋರ್ಡ್ ಹೈಸ್ಕೂಲ್ ನಿಂದ ಆರಂಭಗೊಂಡ ಉಡುಪಿ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಹಾಗೂ ಏಕತಾ ನಡಿಗೆಗೆ ಚಾಲನೆ ನೀಡಿ, ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರ್ದಾರ್ ವಲ್ಲಭಬಾಯಿ ಪಟೇಲರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಕಾಶ್ಮೀರವೂ ಸೇರಿದಂತೆ ದೇಶದ ಪ್ರತಿ ಗಲ್ಲಿಗಳಲ್ಲಿಯೂ ಭಾರತದ ತ್ರಿವರ್ಣ ಧ್ವಜ ಹಾರಾಡಬೇಕೆಂಬುದು ಸರ್ದಾರ್ ವಲ್ಲಭಭಾಯಿ ಪಟೇಲರ ಕನಸಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶದ ಅಖಂಡತೆಯನ್ನು ಎತ್ತಿ ಹಿಡಿದಿದ್ದು ಪಟೇಲರು ಕಂಡ ಕನಸನ್ನು ನನಸಾಗಿಸಿದೆ ಎಂದ ಅವರು, ಜಾತಿ, ವರ್ಗ, ಭಾಷೆಯ ಬೇಧ ಮರೆತು ದೇಶದ ಏಕತೆ, ಸಮಗ್ರತೆ ಮತ್ತು ಅಭಿವೃದ್ದಿಗೆ ಮಾರ್ಗದರ್ಶನ ತೋರಿದ ಸರ್ದಾರ್ ವಲ್ಲಭ ಭಾಯಿ ಪಟೇಲರ ನೆನಪಿಗಾಗಿ ಪ್ರತಿವರ್ಷವೂ ಏಕತೆಗಾಗಿ ಓಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದೇಶದ ಪ್ರಪ್ರಥಮ ಉಪ ಪ್ರಧಾನಿಯಾಗಿ ಹಾಗೂ ಗೃಹ ಮಂತ್ರಿಯಾಗಿ ಸರ್ದಾರ್ ವಲ್ಲಭಬಾಯಿ ಪಟೇಲರು ದೇಶವನ್ನು ಒಗ್ಗೂಡಿಸಲು ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ಫಲವಾಗಿ ಇಂದು ಭಾರತವು ಅಖಂಡವಾಗಿದೆ. ಇಂದಿಗೂ ಅದು ಪ್ರಸ್ತುತ ಎಂದರು.
ಅಪರ ಜಿಲ್ಲಾಧಿಕಾರಿ ಅಭೀದ್ ಗದ್ಯಾಳ್ ರಾಷ್ಟ್ರೀಯ ಐಕ್ಯತೆ ಹಾಗೂ ಸಮಗ್ರತೆಯ ಪ್ರತಿಜ್ಞಾ ವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಹಾಗೂ ಗುರ್ಮೆ ಸುರೇಶ್ ಶೆಟ್ಟಿ, ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರ್, ಬಿಜೆಪಿ ಮಂಗಳೂರು ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಕಾಲೇಜು ವಿದ್ಯಾರ್ಥಿಗಳು, ಎನ್.ಎಸ್.ಎಸ್, ಎನ್.ಸಿ.ಸಿ, ರೇಂಜರ್ಸ್, ರೋವರ್ಸ್ ಘಟಕದ ಸ್ವಯಂಸೇವಕರು ಭಾಗವಹಿಸಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೆಶಕ ಡಾ. ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸರ್ದಾರ್ ವಲ್ಲಭಬಾಯಿ ಪಟೇಲರ 150 ನೇ ಜನ್ಮ ದಿನೋತ್ಸವದ ಪ್ರಯುಕ್ತ ಆಯೋಜಿಸಲಾದ ಜಿಲ್ಲಾ ಮಟ್ಟದ ಆತ್ಮನಿರ್ಭರ ಭಾರತ ಹಾಗೂ ಏಕತಾ ನಡಿಗೆಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಉಡುಪಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಚಾಲನೆ ನೀಡಿದರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಅಜ್ಜರಕಾಡಿನ ಹುತಾತ್ಮ ಸ್ಮರಣೆ ಭವನದಲ್ಲಿ ಸಮಾರೋಪಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




