ಉಡುಪಿ: ಪ್ರತಿಯೊಂದು ಮಗುವಿನಲ್ಲೂ ಒಂದಲ್ಲಾ ಒಂದು ರೀತಿಯ ಪ್ರತಿಭೆ ಅಡಕವಾಗಿರುತ್ತದೆ. ಪೋಷಕರು ಹಾಗೂ ಗುರು-ಹಿರಿಯರು ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಮಾರ್ಗದರ್ಶನ ನೀಡಿ ಸೂಕ್ತ ವೇದಿಕೆ ಕಲ್ಪಿಸಿದ್ದಲ್ಲಿ ಪ್ರತಿಭೆ ಅನಾವರಣಕ್ಕೆ ದಾರಿದೀಪವಾಗಲಿದೆ ಎಂದು ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು.
ಅವರು ಮಂಗಳವಾರ ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ರಾಜ್ಯ ಬಾಲಭವನ ಸೊಸೈಟಿ (ರಿ) ಬೆಂಗಳೂರು, ಜಿಲ್ಲಾ ಬಾಲಭವನ ಸಮಿತಿ ಉಡುಪಿ, ಶಾಲಾ ಶಿಕ್ಷಣ ಇಲಾಖೆ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ ಹಾಗೂ ಮಕ್ಕಳಿಗೆ ಆಯೋಜಿಸಲಾದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ. ವಿದ್ಯಾರ್ಥಿಗಳು ಗುರು-ಹಿರಿಯರು, ಪೋಷಕರನ್ನು ಗೌರವ ಮನೋಭಾವದಿಂದ ಕಾಣಬೇಕು. ಸುಶಿಕ್ಷಿತರಾಗಿ ಸತ್ಪ್ರಜೆಗಳಾಗಿ ಬಾಳಬೇಕು ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದ ಅವರು, ಸ್ಪರ್ಧಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.
ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಮೇಧಾವಿಗಳ ಬಗ್ಗೆ ಬಾಲ್ಯದಿಂದಲೇ ತಿಳಿಸಿದ್ದಲ್ಲಿ ಅವರುಗಳಲ್ಲಿ ದೇಶಪ್ರೇಮದ ಬಗ್ಗೆ ಆಸಕ್ತಿ ಮೂಡುತ್ತದೆ. ಸಮಾಜವನ್ನು ಒಟ್ಟುಗೂಡಿಸುವ, ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡುವ ಶಕ್ತಿ ಮಕ್ಕಳಲ್ಲಿದೆ ಎಂದ ಅವರು, ಮಕ್ಕಳಿಗೆ ಏರ್ಪಡಿಸುವ ಇಂತಹ ಕಾರ್ಯಕ್ರಮಗಳು ಅವರುಗಳಲ್ಲಿ ಅಡಗಿರುವ ಕಲಾ ಪ್ರೋತ್ಸಾಹಕ್ಕೆ ಕಾರಣವಾಗುತ್ತದೆ. ಪಠ್ಯ, ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಸ್ಥಳಗಳ ಬಗ್ಗೆ ಅರಿವಿರುವಂತೆ ನೋಡಿಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ ಮಾತನಾಡಿ, ಮ್ಕಕಳು ತಮ್ಮಲ್ಲಿರುವ ಪ್ರತಿಭೆಗಳ ಮೂಲಕ ಸಾಧನೆ ಮಾಡಿ, ಕಲೆ, ಸಂಸ್ಕøತಿ, ಸಂಪ್ರದಾಯ ಉಳಿಸುವುದರೊಂದಿಗೆ ಸಾಂಸ್ಕøತಿಕ ರಾಯಭಾರಿಗಳಾಗಿ ಹೊರಹೊಮ್ಮಬೇಕು ಎಂದರು.
ಇದೇ ಸಂದರ್ಭದಲ್ಲಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ 5-18 ವರ್ಷದ 8 ಮಕ್ಕಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ 9 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಪ್ರದರ್ಶನ ಕಲೆಗಳಾದ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ ಮತ್ತು ಏಕಪಾತ್ರಾಭಿನಯ, ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಸೃಜನಾತ್ಮಕ ಕಲೆ - ಚಿತ್ರಕಲೆ, ಕರಕುಶಲ, ಜೇಡಿಮಣ್ಣಿನ ಕಲೆ ಹಾಗೂ ಸೃಜನಾತ್ಮಕ ಬರವಣಿಗೆ - ಕಥೆ, ಪ್ರಬಂಧ, ಕವನ ಬರೆಯುವ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿಜಯ ನಾರಾಯಣ ನಾಯಕ್, ವಿದ್ಯಾರ್ಥಿಗಳು, ಪೋಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ದೀಪಾ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




