ಕೆಲವು ತಿಂಗಳ ಹಿಂದೆ ಸಾಹಿತಿ ಮತ್ತು ಪುಸ್ತಕ ಪ್ರಿಯರ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ಆಗುತ್ತಿತ್ತು. ತಮಗೆ ಮನ್ನಣೆ ಸಿಗಲಿಲ್ಲ ಎಂದು ನೊಂದು ಬೇಸರದಿಂದ ತಮಗೆ ಬಂದಿದ್ದ ಪ್ರಶಸ್ತಿಪತ್ರ, ಫಲಕಗಳನ್ನು ಸುಟ್ಟರು ಎಂದು ಸುದ್ದಿ ಬಂದಿತ್ತು.
ಅದನ್ನು ಅಲ್ಲಿಗೇ ಮರೆತಿದ್ದೆ. ಈಗ ಕೆಲವು ದಿನಗಳ ಹಿಂದೆ ಅವರ ಸಂದರ್ಶನ ಯುಟ್ಯೂಬ್ ನ ಒಂದು ಮಾಧ್ಯಮದಲ್ಲಿ ಬರಲು ಶುರು ಆಯಿತು. ಅವರಿಗೆ ಸರಕಾರದಿಂದ ಮನ್ನಣೆ, ಪ್ರಶಸ್ತಿ, ಧನಸಹಾಯ ಸಿಗಲಿಲ್ಲ ಎಂಬ ನೋವಿದೆ. ಅವರ ಸಂದರ್ಶನಗಳನ್ನು ನೋಡಿದ ಮೇಲೆ ನಿಜ. ಇವರು ಸಾಹಿತ್ಯ ಪ್ರೇಮಿ. ಪುಸ್ತಕ ಪ್ರೇಮಿ. ಆದರೆ ಇವರು ತಮ್ಮ ನುಡಿಯಲ್ಲಿ ಹಿರಿಯ ಸಾಹಿತಿಗಳು- ಮಾಸ್ತಿ, ಬೇಂದ್ರೆ, ಅಡಿಗ, ಹಾ. ಮಾ. ನಾಯಕ ಇನ್ನೂ ಹಲವು ಸಾಹಿತಿಗಳ ವಿಚಾರದಲ್ಲಿ ಅವರ ಸಾಹಿತ್ಯದ ಚರ್ಚೆ, ವಿಮರ್ಶೆ ಗಿಂತಲೂ ಅವರ ತೇಜೋವಧೆ ಮಾಡಿದ್ದಾರೆ. ಕುವೆಂಪು ಒಬ್ಬರನ್ನು ಬಿಟ್ಟು ಉಳಿದವರು ಎಲ್ಲರೂ ಈ ಜ್ಞಾನಿ, ಪ್ರಖಂಡ ಪಂಡಿತರ ಹರಿತವಾದ, ವೈಚಾರಿಕತೆ ಇಲ್ಲದ ಮಾತುಗಳಿಗೆ ತುತ್ತಾಗಿದ್ದಾರೆ. ಇವರಿಗೆ ಉತ್ತರ ಕೊಡಲು ಅವರುಗಳು ಇಂದಿಲ್ಲ. ಇದ್ದರೂ ಅವರು ಸ್ಪಂದಿಸುತ್ತಿರಲಿಲ್ಲ. ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ದುಡಿದವರು. ಆಧಾರ ಸ್ತಂಭಗಳು. ಇವರ ಮನಸ್ಸಿಗೆ ನೋವಾಗಿದೆ. ಒಪ್ಪುವೆ. ಇಷ್ಟೊಂದು ಪುಸ್ತಕಗಳನ್ನು ಓದಿರುವ ಇವರ ಜ್ಞಾನಕ್ಕೆ ಪೊರೆ ಕವಿದಿದೆಯೇ? ಇವರೂ ಒಬ್ಬ ಸಾಹಿತಿ. ತಮ್ಮ ಸೃಜನಶೀಲತೆಗೆ ಅಡಿಪಾಯ ಹಾಕಿಕೊಟ್ಟಿರುವ ಆ ದಿಗ್ಗಜರನ್ನು, ಪಂಡಿತರನ್ನು ಹೀಗೆ ಅವಮಾನಿಸಬಹುದೆ? ಆಗುವ ಅವಮಾನ ಅವರಿಗಲ್ಲ. ಇವರಿಗೆ. ತಾವು ಕಾಲೂರಿ ನಿಂತಿರುವ ಸಾಹಿತ್ಯ ಮಂಚದ ಬುನಾದಿಯನ್ನೆ ಅಲುಗಾಡಿಸಿದರೆ ಕುಸಿದು ಬೀಳುವವರು ಇವರೆ. ಆ ಮಾಧ್ಯಮದವರಿಗೆ ಏನೇನೂ ಆಗುವುದಿಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ.
ನನ್ನ ಬಾಲ್ಯದಲ್ಲಿ ನಾನು ನೋಡಿದ ಹಿರಿಯ ಸಾಹಿತಿಗಳು ನೆನಪಿಗೆ ಬಂದರು. ಹಿರಿಯರು ಎಂದರೆ ವಯಸ್ಸಿನಲ್ಲಿ ಮಾತ್ರವಲ್ಲ. ನಡೆಯಲ್ಲೂ, ನುಡಿಯಲ್ಲೂ ಹೃದಯ ಶ್ರಿಮಂತಿಕೆಯಲ್ಲೂ ಕೂಡ.
ನಮ್ಮ ಮನೆಗೆ ಶ್ರೀಮಾನ್ ಬೇಂದ್ರೆಯವರು ಬಂದಾಗ ಪುಟ್ಟ ರೂಮಿನಲ್ಲಿ, ವರಾಂಡದಲ್ಲಿ ಜನ ತುಂಬಿರುತ್ತಿದ್ದರು. ಬೆಳಗಿನ ಜಾವದವರೆಗೂ ಕಾವ್ಯ ವಾಚನ, ಚರ್ಚೆ ನಡೆಯುತ್ತಿತ್ತು. ಎಲ್ಲರೂ ನೆಲದ ಮೇಲೆ ಕೂತುಕೊಳ್ಳುತ್ತಿದ್ದರು. ಬೇಂದ್ರೆಯವರ ಹೆಸರು ಸಾಹಿತ್ಯ ಲೋಕದಲ್ಲಿ ಚಿರಪರಿಚಿತ. ಅಹಂಭಾವದ ಅಭಾವವಿತ್ತು ಅವರಲ್ಲಿ.
ಒಮ್ಮೆ ಶ್ರೀಯುತ ವಿ.ಕೃ. ಗೋಕಾಕ್ ಅವರು ಬೆಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿ ವಿಶ್ವವಿದ್ಯಾಲಯದ ಪದವಿ ಸ್ವೀಕಾರ ಮಾಡಿದ ಕೆಲವೇ ದಿನದಲ್ಲಿ ಅವರ ಪರಿವಾರದೊಡನೆ ಮನೆಗೆ ಬಂದಿದ್ದರು. 'ವೈನೀ' ಎಂದು ನಮ್ಮ ತಾಯಿಯನ್ನು ಕರೆಯುತ್ತಾ ಚಾಪೆಯ ಮೇಲೆ ಕುಳಿತು ಮನೆಯವರೆಲ್ಲಾ ಧಾರಾಳವಾಗಿ ಮಾತನಾಡಿದ್ದು ಕಣ್ಣಿಗೆ ಕಟ್ಟಿದೆ. ಎಂತಹ ನಿಗರ್ವಿ ಆ ಹೆಸರಾಂತ ಕವಿ.
ಡಿ.ವಿ.ಜಿ, ಮಾಸ್ತಿಯವರಾಗಲಿ, ರಾಜರತ್ನಂ ಆಗಲಿ, ಕಟ್ಟೀಮನಿಯವರಾಗಲಿ, ಟಿ.ಪಿ. ಕೈಲಾಸಂ, ರಾ.ಶಿ. ಆಗಲಿ ಇನ್ನೂ ಅನೇಕ ಸಾಹಿತಿಗಳು ಬಹಳ ಸರಳ ವ್ಯಕ್ತಿತ್ವವುಳ್ಳವರು. ಅವರ ದರ್ಶನಭಾಗ್ಯ ನಮಗೆ ಲಭಿಸಿದೆ.
ಇದೆಲ್ಲಾ ನೆನೆದಾಗ ಆ ಹಿರಿಯ ಜೀವಿಗಳೂ ಎಷ್ಟು ನಿಗರ್ವಿಗಳು ಎಂದು ಅನ್ನಿಸುತ್ತೆ. ಇಂತಹ ಎಷ್ಟೋ ಜನ ಸಹೃದಯರು, ಸರಳ ವ್ಯಕ್ತಿತ್ವದ ವ್ಯಕ್ತಿಗಳು ಇದಾರೆ. ಅವರನ್ನು ಏಕೆ ಆದರ್ಶವಾಗಿ ತೆಗೆದುಕೊಳ್ಳುವುದಿಲ್ಲ. ಇವರೆಲ್ಲರೂ ಪ್ರಶಸ್ತಿಗಳಿಗಾಗಿ ಬರೆದವರಲ್ಲ. ಪ್ರಶಸ್ತಿಗಳು ಬಂತೆಂದು ತಮ್ಮ ವ್ಯಕ್ತಿತ್ವವನ್ನು ಕುಂಠಿತಗೊಳಿಸಿಕೊಂಡಿಲ್ಲ. ಬೇರೆಯವರಿಗೆ ಬಂತೆಂದು ಕರುಬಲಿಲ್ಲ. ಜನಪ್ರಿಯತೆಗಾಗಿ ಬರೆದವರಲ್ಲ. ಕಾಂಚಾಣದ ಹಿಂದೆ ಹೋದವರಲ್ಲ. ಜನಪ್ರಿಯತೆ ಬಂತೆಂದು ಹಿಗ್ಗಿ ಹೋದವರಲ್ಲ. ಸಾಹಿತ್ಯ ಅವರ ಕಣ ಕಣದಲ್ಲೂ ತುಂಬಿತ್ತು. ಅವರ ಬರಹವನ್ನು ಅನುಕರಿಸುತ್ತೇವೆ. ಆಸ್ವಾದಿಸುತ್ತೇವೆ. ಆದರೆ ಆವರ ವೈಯಕ್ತಿಕ ಜೀವನವಲ್ಲ. ಇವರು ಯಾರೂ ಅವರನ್ನು ಸೆಲಿಬ್ರೆಟಿ ಎಂದುಕೊಂಡಿಲ್ಲ. ಸಮಾಜದ ಒಳಿತು ಅವರ ಸಾಹಿತ್ಯದಲ್ಲಿ ತುಂಬಿತ್ತು.
They took everything with sense and sensibility.
ನಮ್ಮ ಪಕ್ಕದ ಮನೆಯ 9ನೆ ಕ್ಲಾಸಿನ ಮಗುವಿಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಬಗ್ಗೆ ಹತ್ತು ಪೇಜಿನ ಲೇಖನ ಬರೆಯಲು ಹೇಳಿದ್ದರು. ಅವಳ ಕನ್ನಡ ಪಠ್ಯ ಪುಸ್ತಕದಲ್ಲಿ ಎರಡು ಪೇಜಿಗಿಂತ ಕಡಿಮೆ ಇತ್ತು. ನಾನು ಅವಳಿಗೆ ಸಿ.ಕೃ. ಬರೆದಿರುವ ವ್ಯಕ್ತಿ ಚಿತ್ರಣಗಳು ಕುಲದೀಪಕರು ನಲ್ಲಿ ರಾಧಾಕೃಷ್ಣನ್ ಬಗ್ಗೆ ಬರೆದಿರುವುದನ್ನು ಓದಲು ಹೇಳಿದೆ. ಅದು ಓದಿ "ಅಜ್ಜಿ ತಾತ (ನಮ್ಮ ತಂದೆ) ಎಷ್ಟು ಸಿಂಪಲ್ ಆಗಿ ಬರೆದಿದಾರೆ. ಈಸೀಯಾಗಿ ಅರ್ಥ ಆಗುತ್ತೆ ಎಂದು ಹೇಳಿದಳು. ಇದಕ್ಕಿಂತ ಬೇರೆ ಪ್ರಶಸ್ತಿ ಬೇಕೇ ಸಾಹಿತಿಗೆ?
ಇಂದಿನ ಎಲ್ಲಾ ರಂಗದಲ್ಲೂ ಜನಪ್ರಿಯತೆ ಮುಖ್ಯವಾದ ಗುರಿ ಆಗಿದೆ. ಹಿಂಬಾಲಕರು ಎಷ್ಟೆಂಬುದು ಮುಖ್ಯವಾಗಿದೆ. ಈ ಹಿಂಬಾಲಕರು ಇಂದು ನಮ್ಮ ಹಿಂದೆ. ನಾಳೆ ಇನ್ನೋರ್ವರ ಹಿಂದೆ. ರುಚಿ, ಆಭಿರುಚಿಯಲ್ಲಿ ಮಾರ್ಪಾಡು ಸಹಜ. ನಾನು ಶ್ರೇಷ್ಟ, ನನ್ನ ಸ್ವಂತ ಕೃಷಿಯಿಂದಲೇ ನಾನು ಮೇಲೆ ಬಂದೆ ಎಂದು ನೀವು ಬೀಗಿದಾಗ ಹಿಂದೆ ಒಮ್ಮೆ ತಿರುಗಿ ನೋಡಿ. ನಿಮ್ಮ ಕೃಷಿಗೆ ನೀರೆರದು, ಪ್ರೋತ್ಸಾಹಿಸಿದ ಸಾಮಾನ್ಯ ಓದುಗರನ್ನು ಮರೆಯಲು ಸಾಧ್ಯವೇ?
ತಾಯಿ, ತಂದೆಯ ಸ್ನೇಹ ಹಸ್ತವಿಲ್ಲದಿದ್ದರೆ ಮಕ್ಕಳು ಹಂತಹಂತವಾಗಿ ನಡೆ, ನುಡಿ, ಗುರಿ, ಯಶಸ್ಸು ಕಾಣ ಸಾಧ್ಯವಿಲ್ಲ ಎನ್ನುವುದು ಮರೆಯಲಾದೀತೇ?
ಅರೆ ಬರೆ ಜ್ಞಾನ ಸಂಪಾದನೆಯೇ ಅಹಂಭಾವಕ್ಕೆ ಕಾರಣ. ಅಹಂಭಾವದಿಂದ ನಷ್ಟವೇ ಜಾಸ್ತಿ. ಹತ್ತಿರದವರು ದೂರವಾಗುವರು. ಹಿತೈಷಿಗಳು ಕಡಿಮೆ. ಸುತ್ತಲೂ ಹೊಗಳುವವರು ಜಾಸ್ತಿ ಸೇರುವರು. ನಿಮ್ಮ ಕೋಟೆ ಭದ್ರವಾಗಿರುವುದಿಲ್ಲ.
ಯಾವ ಪ್ರಶಸ್ತಿಯೂ ಪುರಸ್ಕಾರಗಳು ಕಳೆದುಕೊಂಡ ಅಮೂಲ್ಯರಾದ ಹಿತೈಷಿಗಳನ್ನೂ, ವ್ಯಕ್ತಿಗಳನ್ನು ಪುನಃ ನಮ್ಮ ಬಳಿಗೆ ಕರೆ ತರುವುದಿಲ್ಲ. ಈಗಂತೂ ಸಂಘಗಳು ಮೂಲೆ ಮೂಲೆಗೆ ಇದೆ. ಪ್ರಶಸ್ತಿಗಳು ಧಾರಾಳವಾಗಿ ಹಂಚುತ್ತಾರೆ. ಅಂದು ಹಾಡಿ ಹೊಗಳುವರಲ್ಲಿ ಎಷ್ಟು ಜನ ನಿಜವಾದ ಸಾಹಿತ್ಯದ ಉಪಾಸಕರು. ಹಿಂದಿನವರ ಸಾಹಿತ್ಯ ಓದಿದ ಮೇಲೆಯೆ ಅಲ್ಲವೇ ಸ್ಪೂರ್ತಿ ಬಂದದ್ದು. ಯಾವುದೇ ರಂಗದಲ್ಲಿ ಆಗಲಿ ನಮ್ಮ ಸೃಜನಶೀಲತೆಗೆ ಮಾರ್ಗದರ್ಶನ ಆಗಿದ್ದವರನ್ನು ಕಡೆಗಣ್ಣಿನಿಂದ ನೋಡಬಾರದು.
ರಾಮಾಯಣದಲ್ಲಿ ಕೈಕೇಯಿ, ಮಂಥರೆ, ರಾವಣ ಮುಖ್ಯ. ಆ ಪಾತ್ರಗಳಿಲ್ಲದಿದ್ದರೆ ವಾಲ್ಮೀಕಿಯ ರಾಮಾಯಣ ಇರುತ್ತಿರಲಿಲ್ಲ. ಆ ದೇವಾದಿದೇವ- ಕರ್ತೃ, ರಾಮ, ಸೀತೆಯರು ಕರ್ಮಧಾರಿಗಳು. ವಾಗ್ದೇವಿಯ ಅನುಗ್ರಹ- ವಾಲ್ಮೀಕಿ ಕ್ರಿಯಾಶೀಲ ಆದದ್ದು. ರಾಮಾಯಣ, ಮಹಾಭಾರತದ ಪಾತ್ರಗಳ ಆಧಾರವಾಗಿ ಇಂದು ಊರ್ಮಿಳೆ, ಅಹಲ್ಯಾ, ಭಾನುಮತಿ, ದ್ರೌಪದಿ, ಹಿಡಿಂಬಿ, ಕುಂತಿ, ಕರ್ಣ, ಚಿತ್ರಾಂಗದ ಪಾತ್ರಗಳು ಲೇಖಕರ ಕಥಾವಸ್ತು ಆಗಿ ಹೊರಹೊಮ್ಮಿದೆ. ವಾಲ್ಮೀಕಿ ಮತ್ತು ವ್ಯಾಸರ ಕಥಾನಕ ಅದೆಷ್ಟು ಜನ ಸಾಹಿತಿಗಳಿಗೆ ಪ್ರೇರಣೆ ಆಗಿದೆ. ಅವರವರ ಅನಿಸಿಕೆಯಂತೆ ಆ ಪಾತ್ರಗಳ ಚಿತ್ರಣ ಬರೆದಿದ್ದಾರೆ. ವಿಮರ್ಶೆ, ಟೀಕೆ, ಟಿಪ್ಪಣಿ ಬರಬೇಕು. ಇರಬೇಕು. ಆದರೆ ಒಬ್ಬರ ವ್ಯಕ್ತಿತ್ವದ ಬಗ್ಗೆ ಕಟುನಿಂದನೆ ಸಲ್ಲದು. ಅಂತಹವರ ವ್ಯಕ್ತಿತ್ವ ಮಾದರಿ ಆಗಲಾರದು.
- ಸಂಧ್ಯಾ ಸಿದ್ದವನಹಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






