ಇನ್ನೂ ಶೈಶವಾವಸ್ಥೆಯಲ್ಲಿದೆ ನಮ್ಮ ಡಯಾಗ್ನಾಸ್ಟಿಕ್ಸ್ ಕ್ಷೇತ್ರ

Upayuktha
0


ವಿಶೇಷ ವರದಿ: ರಾಮಚಂದ್ರ ಮುಳಿಯಾಲ


ಬೆಂಗಳೂರು: ಫಾರ್ಮಾ ಕ್ಷೇತ್ರ ಬೆಳೆದ ರೀತಿ ಡಯಾಗ್ನಾಸ್ಟಿಕ್ಸ್ ಹಾಗೂ ಮೆಡ್‌ಟೆಕ್ ಬೆಳೆದಿಲ್ಲ. ಇದಿನ್ನೂ ಉದಯೋನ್ಮುಖ ಹಂತದಲ್ಲೇ ಇದೆ. ಇದರ ಬಲವರ್ಧನೆ, ವೇಗವರ್ಧನೆ ಕಾರ್ಯ ಆಗಬೇಕು. ಈ ಕ್ಷೇತ್ರದಲ್ಲಿರುವ ಅಂತರಗಳನ್ನು ಗುರುತಿಸಿ ನೀಗಿಸಬೇಕಿದೆ ಎಂದು ಉದ್ಯಮದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.


ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಿಟ್‌ನ ಎರಡನೇ ದಿನವಾದ ನ.19 ರಂದು “ಡಯಾಗ್ನಾಸ್ಟಿಕ್ ಮತ್ತು ಮೆಡ್‌ಟೆಕ್ ಕ್ಷೇತ್ರದ ಬೆಳವಣಿಗೆ” ಕುರಿತ ಸಂವಾದದಲ್ಲಿ ಈ ಒಕ್ಕೊರಲ ಮಾತು ಕೇಳಿಬಂತು.


ಫಾರ್ಮಾದಂತೆ ಮೆಡಿಟೆಕ್ ಹಾಗೂ ಡಯಾಗ್ನಾಸ್ಟಿಕ್ಸ್ ಸ್ವತಂತ್ರ ಕ್ಷೇತ್ರವಲ್ಲ. ಇಲ್ಲಿ ಬಹು ಬೇಡಿಕೆಗಳ ಸಂಯೋಜನೆ ಮುಖ್ಯ. ಆಗಷ್ಟೇ ಪೂರೈಕೆ ಸಾಧ್ಯ. ಈ ಅಂತರವನ್ನು ನಾವು ಸರಿಪಡಿಸಬೇಕು. ಪ್ರಸ್ತುತ ಭಾರತದಲ್ಲಿ ಈ ಕ್ಷೇತ್ರಕ್ಕೆ ಗ್ರೋಥ್ ಕ್ಯಾಪಿಟಲ್‌ನ ಅಗತ್ಯವಿಲ್ಲ, ಸ್ಟಾರ್ಟಪ್ ಬಂಡವಾಳವನ್ನು ಪ್ರಶಸ್ತಗೊಳಿಸುವ ಕಾರ್ಯವಾಗಬೇಕಿದೆ ಎಂದು ರೆಮಿಡಿಯೋ ಇನ್ನೊವೇಟಿವ್ ಸೊಲ್ಯೂಶನ್ಸ್‌ ಸಂಸ್ಥೆಯ ಸಿಇಒ ಡಾ.ಆನಂದ್ ಶಿವರಾಮನ್ ಅಭಿಪ್ರಾಯಪಟ್ಟರು.


ಕ್ಷೇತ್ರದ ಸವಾಲುಗಳನ್ನು ಪಟ್ಟಿ ಮಾಡಿದ ಬಿಗ್‌ಟೆಕ್ ಸಂಸ್ಥೆಯ ಸಹಸಂಸ್ಥಾಪಕರಾದ ಡಾ.ಚಂದ್ರಶೇಖರನ್ ನಾಯರ್, ತಂತ್ರಜ್ಞಾನ ಹೊಸ ಆವಿಷ್ಕಾರವನ್ನು ಉತ್ಪನ್ನವಾಗಿ ಮಾರುಕಟ್ಟೆಗಿಳಿಸುವಲ್ಲಿ ಅಂತರವಿದೆ. ಸಹಯೋಗದ ಕೊರತೆಯಿದೆ ಎಂದರು. ಆರೋಗ್ಯ ವ್ಯವಸ್ಥೆಗಳು ಡಯಾಗ್ನಾಸ್ಟಿಕ್ಸ್ ಉತ್ಪನ್ನಗಳನ್ನು ಅಳವಡಿಸಿಕೊಳ್ಳುವುದು ನಿಧಾನವಾಗುತ್ತಿದೆ. ಅದಕ್ಕೆ ಮಾನ್ಯತೆ ದೊರಕುತ್ತಿಲ್ಲ. ನಿಯಂತ್ರಕ ಸಂಸ್ಥೆಗಳೂ ವೇಗವಾಗಿ ಕಾರ್ಯನಿರ್ವಹಿತ್ತಿಲ್ಲ, ಇದರ ಜತೆಗೆ ಫಂಡಿಂಗ್ ಕೊರತೆಯೂ ಇದೆ ಎಂದು ಹೇಳಿದರು.


ಶೈಕ್ಷಣಿಕ ಸಂಸ್ಥೆಗಳೂ ಸಕ್ರಿಯವಾಗಬೇಕು. ತಮ್ಮ ಸಂಸ್ಥೆಯೊಳಗಿನ ಹೊಸ ಆವಿಷ್ಕಾರಗಳನ್ನು ಉದ್ಯಮಕ್ಕೆ ಹಾಗೂ ಜನರಿಗೆ ತೆರೆದಿಡುವ ನಿಟ್ಟಿನಲ್ಲಿ ಆಲೋಚಿಸಬೇಕು ಎಂದು ಐಐಟಿ ಬಾಂಬೆಯ ದೇಬ್‌ಜಾನಿ ಪೌಲ್ ಹೇಳಿದರು.


ವೈದ್ಯರೊಂದಿಗೆ ಡಯಾಗ್ನಾಸ್ಟಿಕ್ಸ್ ಉದ್ಯಮ ನಿಕಟ ಸಂಪರ್ಕ ಹೊಂದಿರಬೇಕು. ಆಗ ಕ್ಷೇತ್ರದ ಅಗತ್ಯಗಳ ಮನವರಿಕೆ ಸಾಧ್ಯವಿದೆ. ಮೆಡ್‌ಟೆಕ್ ಕ್ಷೇತ್ರಕ್ಕೆ ಸಣ್ಣ ಹೂಡಿಕೆಗಳು ದೊರಕುತ್ತಿವೆ. ಆದರೆ ದೊಡ್ಡ ಹೂಡಿಕೆದಾರರನ್ನು ಸೆಳೆಯಲು ಕಷ್ಟವಾಗುತ್ತಿದೆ ಎಂದು ಸಿರಿಜೆನ್ ಮೆಡಿಪ್ರೊಡಕ್ಟ್ಸ್‌ನ ಸಂಸ್ಥಾಪಕರಾದ ಡಾ.ಅನೂಯಾ ನಿಸಲ್ ಅವರು ಹೇಳಿದರು.


ಬಿಗ್‌ಟೆಕ್ ಸಂಸ್ಥೆಯ ಡಾ. ಸತ್ಯಪ್ರಕಾಶ್ ದಾಸ್ ಅವರು ಸಂವಾದವನ್ನು ನಿರ್ವಹಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Advt Slider:
To Top