ನಮ್ಮ ಮೆಟ್ರೋ ಸಹಾಯದಿಂದ ಕೇವಲ 25 ನಿಮಿಷಗಳಲ್ಲಿ ದಾನಿಯ ಹೃದಯ ಸಾಗಣೆ
ಬೆಂಗಳೂರು: ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದವರೆಗೆ ನಮ್ಮ ಮೆಟ್ರೋ ಮೂಲಕ ತ್ವರಿತವಾಗಿ ದಾನಿಯ ಹೃದಯ ಸಾಗಣೆಯನ್ನು ಮಾಡಿ ಯಶಸ್ವಿಯಾಗಿ ಹಾರ್ಟ್ ಟ್ರಾನ್ಸ್ ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದ ಮತ್ತೊಂದು ಅಪರೂಪದ ಘಟನೆ ನಾರಾಯಣ ಹೆಲ್ತ್ ಸಿಟಿಯಲ್ಲಿ ಜರುಗಿದೆ. ಉತ್ತಮ ಮೂಲಸೌಕರ್ಯ ವ್ಯವಸ್ಥೆಯ ನೆರವಿನಿಂದ ತ್ವರಿತವಾಗಿ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಬಹುದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆಯಾಗಿದೆ.
ತ್ವರಿತವಾಗಿ ದಾನಿಯ ಹೃದಯವನ್ನು ಸಾಗಿಸಲು ನಮ್ಮ ಮೆಟ್ರೋ ಬಳಸಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಟ್ರಾನ್ಸ್ ಪ್ಲಾಂಟ್ ತಂಡವು ಸಂಜೆ 7:32ಕ್ಕೆ ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಪ್ರಯಾಣ ಆರಂಭಿಸಿ 7:55 ನಿಮಿಷಕ್ಕೆ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ ತಲುಪಿತು. ಈ ಮೂಲಕ ಸಂಜೆಯ ಟ್ರಾಫಿಕ್ ಅನ್ನು ತಪ್ಪಿಸಿ ಸುಮಾರು 20 ಕಿ.ಮೀ. ದೂರದ ಈ ಪ್ರಯಾಣವನ್ನು ಕೇವಲ 25 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು. ಅದರಿಂದ ವೇಗವಾಗಿ ಮತ್ತು ಸುರಕ್ಷಿತವಾಗಿ ಅಂಗಾಂಶವನ್ನು ಸೂಕ್ತ ಸಮಯದೊಳಗೇ ಆಸ್ಪತ್ರೆಗೆ ತಲುಪಿಸಲಾಯಿತು.
ದಾನಿಯ ಹೃದಯವನ್ನು ವೈದ್ಯಕೀಯ ತಂಡದ ಉಸ್ತುವಾರಿಯೊಂದಿಗೆ ಸಾಗಿಸಲಾಯಿತು ಮತ್ತು ನಾರಾಯಣ ಹೆಲ್ತ್ ಸಿಟಿಗೆ ಯಾವುದೇ ಅಡೆತಡೆಯಿಲ್ಲದೇ ಸುರಕ್ಷಿತವಾಗಿ ತಲುಪಿಸಲಾಯಿತು. ಈ ಮೂಲಕ ತ್ವರಿತವಾಗಿ ಹಾರ್ಟ್ ಟ್ರಾನ್ಸ್ ಪ್ಲಾಂಟ್ ನಡೆಯುವಂತೆ ನೋಡಿಕೊಳ್ಳಲಾಯಿತು. ಟ್ರಾನ್ಸ್ ಪ್ಲಾಂಟ್‌ನಲ್ಲಿ ಅಂಗಾಂಶದ ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಶಸ್ತ್ರಚಿಕಿತ್ಸೆಯ ಯಶಸ್ಸನ್ನು ನಿರ್ಧರಿಸಲು ಸಮಯ ಬಹಳ ಮಹತ್ವಪೂರ್ಣವಾಗಿರುತ್ತದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಈ ವಿಶೇಷ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದು, ಕಾರ್ಯಾಚರಣೆ ಹಾಗೂ ಭದ್ರತಾ ತಂಡಗಳು ತ್ವರಿತ ಮತ್ತು ಸುಗಮ ಸಂಚಾರಕ್ಕೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟವು. ತುರ್ತು ವೈದ್ಯಕೀಯ ಸೇವೆಯಲ್ಲಿ ಮೆಟ್ರೋ ರೈಲು ವ್ಯವಸ್ಥೆಯು ಎಷ್ಟು ಮಹತ್ವದ ಸೇವೆ ಒದಗಿಸಬಹುದು ಎಂಬುದಕ್ಕೆ ಈ ಪ್ರಕರಣವು ಮತ್ತೊಂದು ಉತ್ತಮ ನಿದರ್ಶನವಾಗಿದೆ.
ಪೂರ್ಣ ಸಹಕಾರ ನೀಡಿರುವುದಕ್ಕೆ ಮತ್ತು ತ್ವರಿತ ಕ್ರಮ ಕೈಗೊಂಡಿರುವುದಕ್ಕೆ ಬಿಎಂಆರ್‌ಸಿಎಲ್ ಗೆ ನಾರಾಯಣ ಹೆಲ್ತ್ ಸಂಸ್ಥೆಯು ಕೃತಜ್ಞತೆಗಳನ್ನು ಸಲ್ಲಿಸಿದೆ.
ಅಂಗದಾನ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡ ದಾನಿಯ ಕುಟುಂಬಕ್ಕೂ ಆಸ್ಪತ್ರೆಯು ಕೃತಜ್ಞತೆಗಳನ್ನು ಅರ್ಪಿಸಿದೆ. ತಮ್ಮ ದುಃಖದ ಕ್ಷಣದಲ್ಲಿಯೂ ಮತ್ತೊಬ್ಬ ವ್ಯಕ್ತಿಗೆ ಹೊಸ ಜೀವನ ನೀಡಿದ ಈ ಅಂಗದಾನ ನಿಜಕ್ಕೂ ಮಹತ್ವದ್ದಾಗಿದೆ ಮತ್ತು ಅಂಗದಾನದ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಯಶಸ್ವಿಯಾಗಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







