ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಬರವಣಿಗೆ ಕಾರ್ಯಾಗಾರ
ಉಜಿರೆ: ಸಮೂಹ ಮಾಧ್ಯಮ ವೃತ್ತಿಪರರು ಸೂರ್ಯನಂತೆ ಬೆಳಕು ಹರಡುವವರಾಗಬೇಕು. ಎಲ್ಲೆಡೆ ಸಮಾನವಾಗಿ ಕಿರಣಗಳನ್ನು ಹಂಚುವ ಸೂರ್ಯನಂತೆ, ಸಮಾಜಕ್ಕೆ ಸತ್ಯ ಮತ್ತು ಸಕಾರಾತ್ಮಕತೆಯ ದಾರಿತೋರಿಸಬೇಕು ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಅಭಿಪ್ರಾಯಪಟ್ಟರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಮಾಧ್ಯಮಗಳ ಮನರಂಜನಾ ಕಾರ್ಯಕ್ರಮಗಳಿಗಾಗಿ ಕಥೆ, ಚಿತ್ರಕಥೆ ಬರೆಯುವ ಕ್ರಮ ರೂಢಿಸುವ ಉದ್ದೇಶದಿಂದ ‘ಬಿಹೈಂಡ್ ದಿ ಸೀನ್: ರೈಟಿಂಗ್ ಇನ ಎಂಟರ್‍ಟೇನ್ಮೆಂಟ್ ಮೀಡಿಯಾ’ ಶೀರ್ಷಿಕೆಯಡಿ ಏರ್ಪಡಿಸಿದ್ದ ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪತ್ರಕರ್ತರು ಕೇವಲ ಮಾಹಿತಿ ನೀಡುವುದಲ್ಲದೆ, ಸಮಾಜಕ್ಕೆ ಸಕಾರಾತ್ಮಕತೆಯ ಮಾರ್ಗವನ್ನು ತೋರಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅತೀ ವೇಗದಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳೂ ತಮ್ಮನ್ನು ಬದಲಾಯಿಸಿಕೊಳ್ಳಬೇಕು, ಇಲ್ಲವಾದರೆ ಹಿಂದೆ ಉಳಿದು ಬಿಡುವ ಪರಿಸ್ಥಿತಿ ಅನಿವಾರ್ಯವಾಗುತ್ತದೆ ಎಂದರು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆಗೆ ಸಂವಹನ ಕಲೆಯೂ ಅಗತ್ಯವಾಗಿದ್ದು, ಈ ಕೌಶಲ್ಯಗಳು ವಿದ್ಯಾರ್ಥಿಗಳ ಭವಿಷ್ಯಕಟ್ಟುವಲ್ಲಿ ಮಹತ್ವಪೂರ್ಣವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರಾದ ಡಾ.ಭಾಸ್ಕರ ಹೆಗಡೆ ಮಾತನಾಡಿದರು. ಕಳೆದ ಹಲವು ವರ್ಷಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಿಸಿಕೊಂಡು ಮನರಂಜನಾ ಮಾಧ್ಯಮೋದ್ಯಮ ವಲಯದಲ್ಲಿ ಅಗ್ರಗಣ್ಯ ಮನ್ನಣೆ ಪಡೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ತಮ್ಮ ಪ್ರತಿಭೆ ಮತ್ತು ಕೌಶಲ್ಯಪೂರ್ಣ ಕಾರ್ಯನಿರ್ವಹಣೆಯ ಮೂಲಕ ಎಸ್.ಡಿ.ಎಂ ಕಾಲೇಜಿನ ಹಿರಿಮೆಯನ್ನೂ ಹೆಚ್ಚಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಝೀಕನ್ನಡ ವಾಹಿನಿಯ ಕಾರ್ಯನಿರ್ವಾಹಕ ನಿರ್ಮಾಪಕ ಸ್ಕಂದ ಅಗುಂಬೆ ಮಾತನಾಡಿದರು. ಅವಕಾಶಗಳು ಬಂದಾಗ ವಂಚಿತರಾಗದೆ, ಅವುಗಳನ್ನು ಸಕಾಲಿಕವಾಗಿ ಬಳಸಿಕೊಳ್ಳುವ ನೈಪುಣ್ಯತೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು ಎಂದರು. ಈ ವಿಭಾಗ ವಿದ್ಯಾರ್ಥಿಗಳ ಸಣ್ಣ ಪ್ರಯತ್ನವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಅವರನ್ನು ಪ್ರೋತ್ಸಾಹಿಸುತ್ತದೆ. ಕಾಲೇಜು ಜೀವನದಲ್ಲಿ ಮನರಂಜನೆಯ ಜೊತೆಗೆ ಕನಸಿನ ಕಡೆಗೆ ಪ್ರಯತ್ನವೂ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದ ಝೀ ಕನ್ನಡ ವಾಹಿನಿಯ ಕಾರ್ಯನಿರ್ವಹಕ ನಿರ್ಮಾಪಕ ಗಣಪತಿ ದಿವಾಣ ಮಾತನಾಡಿದರು. ಅವಕಾಶಗಳು ಹಲವಾರು ಇವೆ. ಅವುಗಳನ್ನು ಬಳಸಿಕೊಳ್ಳುವುದನ್ನು ವಿದ್ಯಾರ್ಥಿಗಳು ಕಲಿಯಬೇಕು. ಯಾವುದೇ ಕೆಲಸವಾದರೂ ತೃಪ್ತಿಯಿಂದ ಮಾಡಬೇಕು ಎಂದರು. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ ಉಪಸ್ಥಿತರಿದ್ದರು. ಸುದೀಕ್ಷಾ ಕಾರ್ಯಕ್ರಮವನ್ನು ನಿರೂಪಿಸಿದರು. ತೇಜಸ್ವಿನಿ ಸ್ವಾಗತಿಸಿದರು. ಶ್ರಾವ್ಯ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




