ಉಜಿರೆ: ಪ್ರಸಕ್ತ ಶೈಕ್ಷಣಿಕ ಅವಧಿಯ ಅಧ್ಯಯನ ನಿರತರೂ ಸೇರಿದಂತೆ ಹಿಂದಿನ ವರ್ಷಗಳಲ್ಲಿ ವ್ಯಾಸಂಗ ಪೂರೈಸಿದ ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಒಟ್ಟು 21 ವಿದ್ಯಾರ್ಥಿಗಳು ಕರ್ನಾಟಕ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ (ಕೆಸೆಟ್) ಉತ್ತೀರ್ಣಗೊಂಡಿದ್ದಾರೆ.
ಓದುತ್ತಿರುವ ಅವಧಿಯಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣಗೊಂಡು ಸಾಧನೆಗೈದವರು ರಸಾಯನಶಾಸ್ತ್ರದ ವಿದ್ಯಾರ್ಥಿಗಳು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಂ.ಎಸ್ಸಿ ರಸಾಯನಶಾಸ್ತ್ರದ ವ್ಯಾಸಂಗ ಪೂರೈಸುತ್ತಿರುವ ಜಿಶ್ಮಿತಾ ಕುಮಾರಿ, ಸಾಜೀದಾ ಭಾನು, ಮಮತಾ ಎಸ್.ನಾಯಕ್, ರಾಘವೇಂದ್ರ ಸಿ.ಎಸ್ ಹಾಗೂ ಎಂ.ಎಸ್ಸಿ ಸಾವಯವ ರಸಾಯನಶಾಸ್ತ್ರ ಅಧ್ಯಯನ ನಿರತ ತೇಜಸ್, ಫರ್‍ಹಾನ ಪರ್ವೀನ್ ಮತ್ತು ಸುಷ್ಮಾ ರಾಯ್ಕರ್ ತೇರ್ಗಡೆಯಾದವರು. ಹಾಗೆಯೇ ಎಂ.ಎಸ್ಸಿ ಸಾವಯವ ರಸಾಯನಶಾಸ್ತ್ರ ವ್ಯಾಸಂಗ ಪೂರೈಸಿದ ಈಡನ್ ಸಿಂಚನಾ ಡಿಸೋಜಾ (2021-23), ಖುಷಿ ಆರ್ ಗೌಡ (2024-25) ಉತ್ತೀರ್ಣರಾಗಿದ್ದಾರೆ.
ಪ್ರಸಕ್ತ ವರ್ಷ ಮೂರನೇ ಸೆಮಿಸ್ಟರ್ ಅಧ್ಯಯನನಿರತ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅರ್ಚನಾ ಎಸ್ ರಾಜ್ಯದಲ್ಲಿಯೇ ಅಗ್ರಪಂಕ್ತಿಯ ಮೂರನೇ ಮನ್ನಣೆಯೊಂದಿಗೆ ಉತ್ತೀರ್ಣರಾಗಿದ್ದಾರೆ. ಇದೇ ವಿಭಾಗದಲ್ಲಿ ಕಳೆದ ವರ್ಷ ಅಧ್ಯಯನ ಪೂರೈಸಿದ ನೈದಿಲೆ ಶೇಷೇಗೌಡ, ಶಶಿಕುಮಾರ್ ಎನ್ ಉತ್ತೀರ್ಣಗೊಂಡಿದ್ದಾರೆ.
ಎಂ.ಎಸ್ಸಿ ಭೌತಶಾಸ್ತ್ರದ ಮೂರನೇ ಸೆಮಿಸ್ಟರ್ ಅಧ್ಯಯನನಿರತ ಅರ್ಪಿತಾ ಎಂ.ಬಿಜು, ಹಿಂದಿನ ವರ್ಷಗಳಲ್ಲಿ ಸ್ನಾತಕೋತ್ತರ ಪದವೀಧರರಾದ ಇಂಗ್ಲಿಷ್ ವಿಭಾಗದ ಅನು (2020-22ರ ಬ್ಯಾಚ್) ಹರ್ಷಿನಿ ಸಿಂಗ್ ಪಿ ಮತ್ತು ನಿರೀಕ್ಷಾ (2023-25ರ ಬ್ಯಾಚ್), ವಾಣಿಜ್ಯಶಾಸ್ತ್ರ ವಿಭಾಗದ ಲೋಹಿತ್‍ಕುಮಾರ್ ಜೈನ್ (2018-20), ವೈಷ್ಣವಿ ಕೆ.ಆರ್ (2023-25), ಅಭಿಷೇಕ್ (ಪ್ರಸಕ್ತ 2024-26), ಮನಃಶಾಸ್ತ್ರ ವಿಭಾಗದ ಅನುಪಮಾ (2023-25) ಮತ್ತು ಇದೇ ವಿಭಾಗದಲ್ಲಿ ಸದ್ಯ ಅಧ್ಯಯನನಿರತರಾಗಿರುವ ಸುಷ್ಮಿತಾ ಜಾಧವ್ (ಪ್ರಸಕ್ತ 2024-26) ತೇರ್ಗಡೆಯಾಗಿದ್ದಾರೆ.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ, ವಿದ್ಯಾರ್ಥಿಗಳ ಈ ಸಾಧನೆ ಬೋಧನಾ ವಲಯ ಪ್ರವೇಶಿಸಲಿಚ್ಛಿಸುವವರಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಸೌಮ್ಯ ಬಿ.ಪಿ. ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ ಪರಿಶ್ರಮ, ಅಧ್ಯಾಪಕರ ನಿಷ್ಠೆ ಹಾಗೂ ಎಸ್.ಡಿ.ಎಂ ಕಾಲೇಜಿನ ಪ್ರೇರಣಾದಾಯಕ ವಾತಾವರಣ ಈ ಸಾಧನೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಅಕ್ಯಾಡೆಮಿಕ್ ಮತ್ತು ವೃತ್ತಿಪರ ಭವಿಷ್ಯಕ್ಕೆ ಪೂರಕವಾಗುವಂತಹ ಸೌಲಭ್ಯಗಳು ಎಸ್.ಡಿ.ಎಂ ಕಾಲೇಜಿನಲ್ಲಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲುವ ಸಕಾಲಿಕ ಮಾರ್ಗದರ್ಶನವನ್ನೂ ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳ ಸಾಧನೆಯು ಕಾಲೇಜಿನ ಹೆಮ್ಮೆಯ ಭಾವವನ್ನೂ ಹೆಚ್ಚಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




