ಅಪರೂಪಕೊಮ್ಮೆ ಬರೆಯಬೇಕೆನಿಸಿದಾಗ ವಾಸ್ತವಿಕತೆಯ, ಪ್ರಚಲಿತ ವಿದ್ಯಮಾನಗಳ ಎಷ್ಟೋ ಸಂಗತಿಗಳು ಕಣ್ಣೆದುರು ಇದ್ದರೂ ಯಾಕೋ ಬರೆಯಬೇಕೆನಿಸುವುದೇ ಇಲ್ಲ. ಪೆನ್ನು ಹಿಡಿದಾಗ ನೆನಪಿನ ಪುಟಗಳೇ ತೆರೆಯುತ್ತವೆ. ಮಧ್ಯ ವಯಸ್ಸಿಗರ ಮನಃಸ್ಥಿತಿ ಈಗ ಹೇಗಿದೆಯೆಂದರೆ ಹಳತನ್ನು ಬಿಡಲಾಗದು, ಹೊಸತನ್ನು ಒಪ್ಪಿಕೊಳ್ಳಲಾಗದು. ಕಾಲಕ್ಕೆ ತಕ್ಕಂತ ಬದಲಾವಣೆ ಸಹಜ. ಒಪ್ಪಿಕೊಳ್ಳಲೇಬೇಕು. ಈಗ ಎಲ್ಲವೂ ಅತಿರೇಕ. ಎಲ್ಲವನ್ನೂ ನೋಡುತ್ತಾ, ಕೇಳುತ್ತಾ ನಮಗೆ ಖುಷಿಯಾಗಿರುವಂತ ಬದುಕನ್ನು ಹೊಂದಿಸಿಕೊಳ್ಳುವ ಜಾಣ್ಮೆ ಬೇಕು. ಯಾವುದಕ್ಕೂ ಉಪದೇಶ, ಸಲಹೆ ನಡೆಯದು. ಬದಲಿಸಲೂ ಆಗದು. ಹೀಗಾಗಿ ಸಾಗಿ ಬಂದ ಕಾಲದ ಸಮೃದ್ಧಿಯ ನೆನಪುಗಳೇ ಸಮಾಧಾನ.
ನವರಾತ್ರಿ ನಂತರದ ಭೂಮಿ ಹುಣ್ಣಿಮೆಯ ದಿನಗಳು ಒಂಥರಾ ಹಿತಕರ. ಮಳೆಯ ಅಬ್ಬರದಿಂದ ಬೇಸತ್ತ ಮನಕ್ಕೆ ಸ್ವಚ್ಛ ಹವಾಮಾನ, ತಿಳಿಗಾಳಿ ಮೈ ಮನಕ್ಕೆ ಸುಖವೆನಿಸುವ ದಿನಗಳು. ಭೂಮಿ ಹುಣ್ಣಿಮೆ ಮತ್ತು ಗಂಗಾಷ್ಠಮಿ ನನ್ನ ಇಷ್ಟದ ಹಬ್ಬಗಳು. ಭೂಮಿ, ನೀರಿಲ್ಲದೇ ಜಗತ್ತಿಲ್ಲ. ಪೂಜನೀಯ ಹಬ್ಬಗಳು.ನಮ್ಮನ್ನು ಸಲಹುವ ಅವುಗಳ ಸ್ಮರಣೆ ಇರಲೇಬೇಕು. ಎಂದೂ ಮರೆಯದ ನೆನಪುಗಳನ್ನು ನಾನು ಈ ಹಬ್ಬಗಳಲ್ಲಿ ಕಂಡಿರುವೆ. ಭೂಮಿ ಹುಣ್ಣಿಮೆಯಂದು ಭೂ ಪೂಜೆಗಾಗಿ ಮಾಡುವ ಕಡುಬು ಮರೆಯಲಾದೀತೆ.
ಅವತ್ತು ಅಪ್ಪಯ್ಯನ ಮನೆಯಲ್ಲಿ ಬೆಳಿಗ್ಗೆನೇ ಪೂಜೆಯ ಸಂಭ್ರಮ. ಪ್ರತಿ ವರ್ಷ ಅಪ್ಪಯ್ಯ ಬೇಗ ಪೂಜೆ ಮುಗಿಸಿ ಬೆಳ್ಳೇಕೇರಿಗೆ ವೈದಿಕಕ್ಕೆ ಹೋಗುತ್ತಿದ್ದ. ಅವನು ಬೆಳ್ಳೇಕೇರಿ ಗೆ ಹೋಗಿ ಬರುವದರೊಳಗೆ ನಾನು ನನ್ನ ತಂಗಿಯರು ಪೇಟೆಗೆ ಹೋಗಿ ಸಿನಿಮಾ ನೋಡಿ ಬರುವ ಪ್ಲಾನ್ ತಯಾರಾಗುತ್ತಿತ್ತು. ಆಗೆಲ್ಲಾ ಪೇಟೆಗೆ ಹೋಗಲು, ಸಿನಿಮಾ ನೋಡಲು ಒಪ್ಪಿಗೆ ಸಿಗುತ್ತಿರಲಿಲ್ಲ. ಅಮ್ಮ ನಮಗೆ ಬೇಗ ಊಟ ಹಾಕಿ ಇದ್ದ ಬಿದ್ದ ಚಿಲ್ಲರೆ ದುಡ್ಡನ್ನೆಲ್ಲಾ ಸೇರಿಸಿ ಕಳಿಸುತ್ತಿದ್ದರು. ಹೊಸ ಲಂಗ, ಪಲ್ಕ ಜೊತೆಗೆ ಜೋಡಿ ಜಡೆ ಜಮುನೆಯರಾಗಿ ದಂಡೆ ಮುಡಿದು, ಕೆಂಪು ಬಸ್ಸು ಕಾದು ಹೋಗುವದೆಂದರೆ ಮಹಾ ಖುಷಿ. ದೂರದಿಂದಲೇ ಬಸ್ಸ ಸಪ್ಪಳ ಕೇಳಿ ತಪ್ಪಿ ಹೋಗುವ ಭಯದಿಂದ ಓಡೋಡಿ ಹೋಗುವ ಧಾವಂತ. ಸಿನಿಮಾ ಯಾವುದೇ ಇರಲಿ, ಹೇಗೇ ಇರಲಿ ಒಟ್ಟಿನಲ್ಲಿ ಭೂಮಿ ಹುಣ್ಣಿಮೆ ದಿನ ಅಪ್ಪಯ್ಯನಿಗೆ ಗೊತ್ತಾಗದ ಹಾಗೇ ಪೇಟೆಗೆ ಹೋಗಿ ಸಿನಿಮಾ ನೋಡುವದು ನಮ್ಮ ಗುರಿ. ಆ ಸಂತೋಷ ತುಂಬಾ ದಿನಗಳವರೆಗೂ ನಮ್ಮ ಮನಸ್ಸಿನಲ್ಲಿರುತ್ತಿತ್ತು. ಇಂದಿಗೂ ಭೂಮಿ ಹುಣ್ಣಿಮೆ ಬಂದಾಗ ಅಪ್ಪಯಯ್ಯನ ಭೂಮಿ ಪೂಜೆ, ಗೋವೆಕಾಯಿಯ ಕಡಬು, ಅಮ್ಮನ ಸಹಾಯದಿಂದ ಪೇಟೆಗೆ ಹೋಗಿ ಸಿನಿಮಾ ನೋಡಿದ ನೆನಪು ನುಗ್ಗಿ ಬರುತ್ತದೆ.
ಇನ್ನು ನಂತರದಲ್ಲಿ ಬರುವ ಗಂಗಾಷ್ಠಮಿ ಹಬ್ಬ. ಜಲವಿಲ್ಲದೇ ನಾವಿಲ್ಲ. ಶ್ರೇಷ್ಠವಾದ ಹಬ್ಬ. ನಸುಕಿನಲ್ಲೇ ಗಂಗೆ ತುಂಬುವ ಸಂಭ್ರಮ. ಜವಟೆ ಬಾರಿಸಲು ನಮ್ಮನ್ನು ಎಬ್ಬಿಸುವ ಕಷ್ಟ. ಹಳ್ಳಿಕಡೆ ಈ ಸಮಯದಲ್ಲಿ ಎಲ್ಲರ ಮನೆಗಿಂತ ತಮ್ಮನೆಯಲ್ಲಿ ಬೇಗ ಹಬ್ಬದ ಆಚರಣೆಯಾಗಬೆಂಕೆಂಬ ಪೈಪೋಟಿ ಇರುತ್ತದೆ. ಹಬ್ಬದ ತಯಾರಿಯಲ್ಲಿ ತಡವಾದರೂ ಸುಮ್ಮನೆ ಜವಟೆ ಬಾರಿಸಿ ಹಾಡಿನ ಸೊಲ್ಲು ಹೇಳಿ ತಾವು ಹಿಂದೆ ಬಿದ್ದಿಲ್ಲ ಎಂಬುದನ್ನು ರುಜುವಾತು ಪಡಿಸುತ್ತಾರೆ. ಆ ಕಾಲದಲ್ಲಿ ಗೆಂಟಿಗೆ ಹೂ ಬಿಡುವ ಸಮಯ. ಮನೆಯ ಹಿತ್ತಲಲ್ಲಿ, ಅಡಿಕೆ ತೋಟದಲ್ಲಿ ಬಣ್ಣ ಬಣ್ಣದ ಗೆಂಟಿಗೆ ಹೂಗಳು. ಅಪ್ಪಯ್ಯನ ಮನೆ ಅಶ್ವಥ ಮರದ ಕಟ್ಟೆಯ ಒಂದು ಬದಿಯಲ್ಲಿ ಗಂಧದ ಬಣ್ಣದ ಗೆಂಟಿಗೆ ಗಿಡವಿದ್ದು ತುಂಬಾ ಹೂ ಬಿಡುತಿತ್ತು ಮುಂಚಿನ ದಿನವೇ ಅಮ್ಮ ಮೊಗ್ಗೆ ಕೊಯಿದು ದಂಡೆ ಕಟ್ಟಿ ಗಂಗೆಯ ಕಲಶಕ್ಕೆ ಏರಿಸುತ್ತಿದ್ದರು. ಮರುದಿನ ಆ ದಂಡೆ ಯನಗೆ ಯನಗೆ ಎನ್ನುವ ಜಟಾಪಟಿ ಇರುತ್ತಿತ್ತು.ಮೊದಲು ಬಾವಿಗೆ ಪೂಜೆ, ನಂತರದಲ್ಲಿ ದೇವರ ಮನೆಯಲ್ಲಿ ಗಂಗೆಯ ಸ್ಥಾಪನೆ. ಅಮ್ಮನ ರಾಗದ ಹಾಡು "ಬಂದಳು ಗಂಗಾ ದೇವಿ, ಬಂದಳು ಭಾಗೀರಥಿ ದೇವಿ, ಬಂದಳು ಬಂದಳು ತುಂಗಭದ್ರೆಯು ಯಮುನೆಯೊಳು.. "ಇಷ್ಟು ಚೆಂದದ ಹಾಡನ್ನು ಆಸ್ವಾದಿಸುವ ತಿಳುವಳಿಕೆಯು ಇರುತ್ತಿರಲಿಲ್ಲ. ಗಂಗಾಷ್ಠಮಿ ನಮಗೆ ಇಷ್ಟವಾಗಲು ದೊಡ್ಡ ಕಾರಣ ಪೂಜೆಯ ನಂತರ ನೈವೇದ್ಯಕ್ಕೆ ಇಟ್ಟ ತುಪ್ಪ ಸಕ್ಕರೆ ತಿನ್ನಲು. ಹರಳು ಹರಳಾದ ತುಪ್ಪದ ಜೊತೆ ಸಕ್ಕರೆ ಹಂಚಿಕೊಂಡು ತುಸುವೆ ತಿಂದರೂ ರುಚಿಯಾಗಿರುತ್ತಿತ್ತು. ಆ ಆಸೆಗಾಗಿ ನಿದ್ದೆಗಣ್ಣಿನಲ್ಲೂ ಏಳುತ್ತಿದ್ದೆವು. ಇದೇ ಅನುಭವ ಬಲಿವೇಂದ್ರನ ಹಬ್ಬದಲ್ಲಿ ಕೂಡಾ.ಅದೇ ಬೆಳಗಿನ ಜಾವ, ಅದೇ ಜವಟೆ, ನಿದ್ದೆಗಣ್ಣು ಮತ್ತೆ ಅದೇ ರಾಗದ ಬಲಿವೇಂದ್ರ ಬಂದ ಹಾಡು "ಬಲಿಯು ಬಂದನು ಸಂಭ್ರಮದಿ, ಇಳೆಗಾಗಿಯೇ ತಾ ಮುದದಿ, ನಳಿನನಾಭನ ದಯೆಯಿಂದಲಿ ಅತಿ ಹರುಷದಲಿ "ಮತ್ತೆ ಸಕ್ಕರೆ ತುಪ್ಪದ ಮೆಲ್ಲುವಿಕೆ. ಇವೆಲ್ಲ ಸಂಗತಿಗಳಿಂದ ಹಬ್ಬದ ನೆನಪು ಎಂದೂ ಮಾಸದಂತಿವೆ.
ದೀಪಾವಳಿಯನ್ನು ನಾವು ದೊಡ್ಡಬ್ಬ ಅಂತ ಕರೆಯುವದಿದೆ. ಹಬ್ಬದ ಎರಡು ದಿನ ಮುಂಚೆ ಅಣ್ಣ ಅತ್ತಿಗೆ ಫೋನ್ ಮಾಡಿ ನಮ್ಮನೆಗೆ ಬಂದು ಬಿಡು ಅಂತ ಕರೆದಾಗ ಕೂಡಲೇ ಒಪ್ಪಿದೆ. ಗೋಪೂಜೆಗೆಂದು ಮಾಡುವ ಸೌತೆಕಾಯಿಯ ಅರಿಶಿಣದ ತೆಳ್ಳೇವು ನೆನಪಾಗುತ್ತಿತ್ತು. ಆರೋಗ್ಯಕರವಾದ, ಪ್ರಕೃತಿದತ್ತವಾದ ವ್ಯಂಜನಗಳಾದ ಅರಿಶಿಣ, ತೆಂಗಿನಕಾಯಿ ಹೋಳು, ಕೆಸುವಿನ ಬೀಳು, ತೊಂಡೆಕಾಯಿ ಹೀಗೇ ಇವುಗಳನ್ನು ಶಾಸ್ತ್ರ ಪ್ರಕಾರ ತುಸುವೆ ಬಳಸಿ ಮಾಡುವ ಆ ದಿನದ ಅಕ್ಕಿ ಸೌತೆಕಾಯಿ ತೆಳ್ಳೇವಿಗೆ ಅದೆಂತ ರುಚಿ ಅಂದರೆ ಬೇರೆ ದಿನ ಅದೇ ಹದದಲ್ಲಿ ಮಾಡಿದರೂ ಆ ರುಚಿ ಬಾರದು.ಆ ಸಮಯ ಸೌತೆಕಾಯಿ ಸೀಜನ್ ಇರುವದರಿಂದ ತಾಜಾ ಸೌತೆಕಾಯಿ ತೆಳ್ಳೇವಿನ ರುಚಿಗೆ ಇನ್ನಷ್ಟು ಮೆರಗು. ತುಪ್ಪ, ಚಟ್ನಿ ಜೊತೆಗೆ ಬೆಲ್ಲದಲ್ಲಿ ಬಿಸಿ ಮಾಡಿದ ಕಾಯಿ ತುರಿ. ಆ ದಿನದ ವಿಶೇಷ ಸ್ವಾದವನ್ನು ಎಲ್ಲರೂ ಖುಷಿಯಿಂದ ಸವಿಯುತ್ತಾರೆ. ಒಟ್ಟಿನಲ್ಲಿ ದೊಡ್ಡಬ್ಬದ ಅರಿಶಿಣ ತೆಳ್ಳೇವು ಮರೆಯಲಾಗದ ಬುತ್ತಿ.
ಕಾರ್ತಿಕ ಮಾರ್ಗಶಿರ ಮಾಸಗಳಲ್ಲಿ ಎಲ್ಲೆಲ್ಲೂ ದೀಪೋತ್ಸವಗಳ ಸಡಗರ. ತವರಿನ ಕಾರ್ತಿಕ ಮರೆಯಲಾದೀತೆ.. ಡೊಳ್ಳು, ಕೋಲಾಟ, ಯಕ್ಷಗಾನದ ರಂಗು ಜೋರಾಗಿರುತ್ತಿತ್ತು. ಬಣ್ಣ ಬಣ್ಣದ ಅಂಗಡಿಗಳು, ನನ್ನ ಪ್ರೀತಿಯ ಹಣತೆಯ ದೀಪಗಳ ಮೆರಗು. ಇಲ್ಲಿ ಎಲ್ಲದಕ್ಕಿಂತ ಕುತೂಹಲ ಮಂಗಳಾರತಿಯ ನಂತರ ನೀಡುವ ಪನಿವಾರ ಏನಿರಬಹುದು, ಯಾವ ಕಾಳಿನ ಉಸುಳಿ ಮಾಡಿರಬಹುದು, ಆ ಸಮಯಕ್ಕಾಗಿ ಕಾಯುತ್ತಿದ್ದೆವು. ತುಂಬಾ ಜನ ಸೇರುತ್ತಿದ್ದರಿಂದ ಪನಿವಾರ ಸಿಗದೇ ನಿರಾಸೆ ಆಗಿದ್ದು ಇದೆ. ಮತ್ತೆ ಬೆಳಿಗ್ಗೆ ದೇವಸ್ಥಾನದ ಅಂಗಳಕ್ಕೆ ಓಡುತ್ತಿದ್ದೆವು, ಬಲೂನು, ಚಿಲ್ಲರೆ ಮತ್ತೇನಾದರೂ ಸಿಗಬಹುದು ಎಂಬಾಸೆಗೆ. ಕಾರ್ತಿಕಕ್ಕೆ ಮಾಡುವ ಪನಿವಾರ, ಕೊಸುಂಬರಿ ಆಸೆಗೆ ದೀಪೋತ್ಸವಕ್ಕೆ ಹೋಗುವ ಭಾವ ಇಂದಿಗೂ ಹಾಗೇ ಇದೆ.
"ಈಗ ವರ್ತಮಾನದ ಜಗತ್ತಿಗೆ ಎಂದೂ ಇಲ್ಲದ ಒಂದು ನಾಗಾಲೋಟ ಬಂದು ಬಿಟ್ಟಿದೆ. ಆಲೋಚಿಸುವುದಕ್ಕೆ ಸಮಯವೂ ಇಲ್ಲ, ಮನಸ್ಸು ಇಲ್ಲ.
ನಮ್ಮ ಬದುಕು ಮಧುರ ನೆನಪುಗಳಿಂದ ತುಂಬಿರಬೇಕೆಂದರೆ ನಾವು ಪ್ರತಿಯೊಂದು ಕ್ಷಣವನ್ನೂ ಜೀವಂತಿಕೆಯಿಂದ ಪರಿಪೂರ್ಣ ವೆನಿಸುವ ರೀತಿಯಲ್ಲಿ ಬದುಕಬೇಕು. ನಾವು ಇಂದು ಏನನ್ನು ಮಾಡುತ್ತೇವೆಯೋ ಅದು ನಾಳೆಯ ನೆನಪಾಗುತ್ತದೆ. ಆದ್ದರಿಂದ ಮಧುರ ನೆನಪುಗಳನ್ನು ಸೃಷ್ಟಿಸಿಕೊಳ್ಳೋಣ.
- ತಾರಾ ಹೆಗಡೆ ಸಿರಸಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







