ಯಲಹಂಕ, ಬೆಂಗಳೂರು: ‘ವಿದ್ಯುತ್ ವಾಹನಗಳ ತಯಾರಿಕೆಯಲ್ಲಿ ನಮ್ಮ ದೇಶ ಇನ್ನೂ ಸ್ವಾವಲಂಬಿಯಾಗಿಲ್ಲ. ಬ್ಯಾಟರಿ ತಯಾರಿಕೆಯಲ್ಲಿ ನಾವು ಇನ್ನೂ ದೊಡ್ಡ ಪ್ರಮಾಣದಲ್ಲಿ ಲಿಥಿಯಮ್ ಹಾಗೂ ಕೊಬಾಲ್ಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದು ನಿಜಕ್ಕೂ ಗಮನಾರ್ಹ ಕೊರತೆ. ಅದರಿಂದ ನಮ್ಮ ಯುವ ತಂತ್ರಜ್ಞರು ಸ್ಥಳೀಯ ಕಚ್ಛಾ ಪದಾರ್ಥಗಳಿಂದ ಅಗತ್ಯ ವಸ್ತುಗಳನ್ನು ನಮ್ಮ ನೆಲದಲ್ಲಿಯೇ ಉತ್ಪಾದಿಸುವತ್ತ ಗಮನ ಹರಿಸಿ ಅನ್ವೇಷಣೆಗಳಲ್ಲಿ ತೊಡಗಬೇಕು. ಅಲ್ಲದೆ ಬಳಸಿದ ವಸ್ತುಗಳನ್ನು ಬಿಸಾಡದೆ ಅವುಗಳ ಸಮರ್ಥ ಪುನರ್ಬಳಕೆಗೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು. ಏಕೆಂದರೆ ಭಾರತದ ಅಭಿವೃದ್ಧಿಯ ಭವಿಷ್ಯ ಇದರಲ್ಲಿದೆ ಎಂದು ಡೆಸಿಬಲ್ ಲ್ಯಾಬ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂರಜ್ ಎಸ್.ಡಿ ಅವರು ನುಡಿದರು.
ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗ ಹಾಗೂ ಪವರ್ ಇಂಜಿನಿಯರಿಂಗ್ ಸೆಂಟರ್‌ನ ಸಹಯೋಗದಿಂದ ಆಯೋಜಿಸಿದ್ದ ವಿದ್ಯುತ್ ವಾಹನ ತಂತ್ರಜ್ಞಾನ ಕುರಿತ ‘ಶಕ್ತ್ಇವಾಹ್-3.0’, 5-ದಿನಗಳ ಕಾರ್ಯಾಗಾರದ ಮೂರನೇ ಅವತರಣಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
'ಪರಿಸರವನ್ನು ಸಂರಕ್ಷಿಸಿಕೊಳ್ಳಲು ಮತ್ತು ಸಾರಿಗೆ ವೆಚ್ಚವನ್ನು ತಗ್ಗಿಸಲು ಈ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ವಿಶ್ವದ ಗಮನ ಸೆಳೆಯಲು ಈ ಪ್ರಕ್ರಿಯೆ ಅನಿವಾರ್ಯವಾಗಿದೆ. ವಿದ್ಯುತ್ ವಾಹನಗಳ ತಯಾರಿಕಾ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ನೆರವು ಕೂಡ ಬೃಹತ್ ಪ್ರಮಾಣದಲ್ಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.
ವಿದ್ಯುತ್ ವಾಹನ ತಂತ್ರಜ್ಞಾನದ ಕ್ಷೇತ್ರದಲ್ಲಿ ನೂತನ ಅನ್ವೇಷಣೆಗಳಿಗೆ ಸೂಕ್ತ ಸಂಶೋಧನಾ ವಾತಾವರಣ ಕಲ್ಪಿಸಲು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಪ್ರತಿವರ್ಷ ‘ಶಕ್ತ್ಇವಾಹ್’ ಕಾರ್ಯಾಗಾರವನ್ನು ಆಯೋಜಿಸುತ್ತಿದೆ.
‘ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಳಗೊಂಡಾಗ ವಿದ್ಯುಚ್ಛಕ್ತಿಯ ಬೇಡಿಕೆ ಅಗಾಧ ಪ್ರಮಾಣದಲ್ಲಿರುತ್ತದೆ. ಅದರಿಂದ ಸರ್ಕಾರ ಈಗಿನಿಂದಲೇ ನೈಸರ್ಗಿಕ ಮೂಲಗಳಿಂದ ‘ನವೀಕರಿಸಬಹುದಾದ ಇಂಧನ’ದ ಉತ್ಪಾದನೆಯ ಜತೆಗೆ ವಿದ್ಯುತ್ ಅನ್ನು ಹಿಡಿದಿಡುವ ಪವರ್‌ಗ್ರಿಡ್‌ಗಳ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು’ ಎಂದು ಅವರು ನುಡಿದರು.
ನಂತರದಲ್ಲಿ ನಡೆದ ಅತ್ಯಂತ ಫಲಪ್ರದ ವಿಚಾರಗೋಷ್ಠಿಯ ನೇತೃತ್ವ ವಹಿಸಿದ್ದವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ ಉಪಾಧ್ಯಕ್ಷ ಡಾ. ಸಂದೀಪ್ ಶಾಸ್ತ್ರಿ. ಹರ್ಮನ್ ಅಟೊಮೊಟಿವ್‌ನ ಉಪಾಧ್ಯಕ್ಷ ಡಾ. ಅನೀಶ್ ಚೆರಿಯನ್; ಆಲ್‌ಸ್ಟಾಮ್ ಸಂಸ್ಥೆಯ ಶೈಕ್ಷಣಿಕ ನಿರ್ವಾಹಕ ಡಾ. ಸಂಜೀವ್ ಕೆ. ನಾಯಕ್; ವಿಶನ್ ಆಸ್ಟ್ರಾ ಇವಿ ಅಕಾಡೆಮಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ನಿಖಿಲ್ ಜೈನ್ ಹಾಗೂ ಲಕ್ಸ್ ಇವಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಕೇಶ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ತಜ್ಞ ಕೈಗಾರಿಕೋದ್ಯಮಿಗಳು.
ಗೋಷ್ಠಿಯಲ್ಲಿ, ಇ-ವಾಹನಗಳ ಸುರಕ್ಷತೆ, ದರಗಳ ಇಳಿಕೆ ಹಾಗೂ ದೋಷಮುಕ್ತ ಚಲನೆಗಳಿಗೆ ಅಗತ್ಯವಿರುವ ಕ್ರಮಗಳು ಹಾಗೂ ನವನವೀನ ಅನ್ವೇಷಣೆಗಳನ್ನು ಕುರಿತಂತೆ ಸುಧೀರ್ಘವಾದ ವಿಚಾರವಿನಿಮಯ ನಡೆಯಿತು. ಕೈಗಾರಿಕೆಗಳ ಉದ್ಯಮಿಗಳು, ಸಂಶೋಧಕರು, ಶಿಕ್ಷಕರು ಹಾಗೂ ತಂತ್ರಜ್ಞಾನದ ವಿದ್ಯಾರ್ಥಿಗಳು ವಿಚಾರವಿನಿಮಯದಲ್ಲಿ ಪಾಲ್ಗೊಂಡು ಮಾರ್ಗೋಪಾಯಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.
ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಾಗೂ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಗೌರವ ಪ್ರಾಧ್ಯಾಪಕ ಡಾ. ಡಿ. ವಿವೇಕಾನಂದ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಎನ್. ಸಮನ್ವಿತ ‘ಶಕ್ತ್ಇವಾಹ್’ ಕಾರ್ಯಾಗಾರದ ಧ್ಯೇಯವನ್ನು ಸಭಿಕರಿಗೆ ವಿವರವಾಗಿ ನಿವೇದಿಸಿದರು.
ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದ ಸಂಸ್ಥೆಯ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅವರು 2047ರ ಹೊತ್ತಿಗೆ ಭಾರತ ಬಲಾಢ್ಯ ದೇಶವಾಗಬೇಕಾದರೆ ವಿದ್ಯುತ್ ವಾಹನಗಳ ತಂತ್ರಜ್ಞಾನದಲ್ಲಿ ಗುರುತರ ಅನ್ವೇಷಣೆಗಳು ನಿರಂತರವಾಗಿ ಜರುಗಬೇಕು ಎಂದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

