ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗ ಮತ್ತು ನಗರದ ಕೊಡಿಯಾಲ್ ಬೈಲಿನಲ್ಲಿರುವ ಬೆಸೆಂಟ್ ಮಹಿಳಾ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಅಬ್ಬಕ್ಕ@500 ಪ್ರೇರಣಾದಾಯಿ ಉಪನ್ಯಾಸ ಸರಣಿಯ ಎಸಳು-84ನ್ನು ನ.7ರ ಶುಕ್ರವಾರದಂದು ಯೋಜಿಸಲಾಗಿದೆ.
ಮಂಗಳೂರಿನ ಉಳ್ಳಾಲ ಪ್ರದೇಶವನ್ನು ರಾಜಧಾನಿಯಾಗಿರಿಸಿ ತುಳು ನಾಡನ್ನು ನಿರಂತರ 40 ವರ್ಷಗಳ ಕಾಲ ಪೋರ್ಚುಗೀಸರ ಉಪಟಳದ ವಿರುದ್ಧ ಸೆಣಸಾಡಿ ಸದೆಬಡಿದ ವೀರ ರಾಣಿ ಅಬ್ಬಕ್ಕನ ಸ್ಮರಣೀಯ ಹುಟ್ಟು ಮತ್ತು ಪ್ರೇರಣಾದಾಯಿ ಬದುಕು 200 ವರ್ಷಗಳನ್ನು(1525-2025) ಪೂರೈಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ, ಮಂಗಳೂರು ವಿಭಾಗವು ಶೈಕ್ಷಣಿಕ ವರ್ಷ 2025 ನ್ನು “ಅಬ್ಬಕ್ಕ @ 500” ಎಂಬ ಪ್ರೇರಣಾದಾಯಿ 100 ಉಪನ್ಯಾಸ ಸರಣಿಯನ್ನು ಯೋಜಿಸಿದ್ದು ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯದ ಅಧೀನದಲ್ಲಿರುವ 83 ಕಾಲೇಜುಗಳಲ್ಲಿ ವೀರ ರಾಣಿ ಅಬ್ಬಕ್ಕನ ಬಗೆಗಿನ ಉಪನ್ಯಾಸ ಸರಣಿಗಳು ಪೂರ್ಣಗೊಂಡಿವೆ.
ಇದೀಗ ಮಹಿಳಾ ಕಾಲೇಜಿನಲ್ಲಿ ಆಯೋಜನೆಗೊಳ್ಳುತ್ತಿರುವ 84ನೇ ಎಸಳು ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪ್ರೇರಣೆ ನೀಡಲಿದೆ. ಈ ಸಮಾರಂಭವನ್ನು ವಿಧಾನ ಪರಿಷತ್ತಿನ ಶಾಸಕರಾದ ಎಸ್ ಎಲ್ ಭೋಜೇಗೌಡರು ಉದ್ಘಾಟಿಸಲಿದ್ದಾರೆ. ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಬಿ.ಕೆ ಕುಮಾರ್ “ಅಬ್ಬಕ್ಕ @ 500” ಪ್ರೇರಣಾದಾಯಿ ಸಂಪನ್ಮೂಲ ಬಾಷಣವನ್ನು ನೀಡಲಿದ್ದು ಬೆಸೆಂಟ್ WNES ಅಧ್ಯಕ್ಷ ಅಣ್ಣಪ್ಪ ನಾಯಕ್ ಇವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಕಾರ್ಯಕ್ರಮವು ಬೆಸೆಂಟ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಪೂರ್ವಾಹ್ನ 11.00 ಘಂಟೆಗೆ ಸರಿಯಾಗಿ ನೆರವೇರಲಿದ್ದು ಆಸಕ್ತರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕಾರ್ಯಕ್ರಮ ಸಂಯೋಜಕರು ಹಾಗೂ ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


