ಮಂಗಳೂರು: 27 ವರ್ಷಗಳ ಶ್ರೀ ಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ ದಾಖಲೆ ಮಾಡಿರುವ ಅಪೂರ್ವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಅವರಿಗೆ "ಕದ್ರಿ ವಿಷ್ಣು ಪ್ರಶಸ್ತಿ-2025" ನೀಡಿ ಗೌರವಿಸಲಾಯಿತು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಕಳೆದ 9 ವರ್ಷಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗವು ಕೊಡಮಾಡುವ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನಿಸಿದರು.
ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅವರ ಅಧ್ಯಕ್ಷತೆವಹಿಸಿ ದ್ದರು. ಖ್ಯಾತ ವೈದ್ಯ ಡಾ. ಜಯಶಂಕರ್ ಮಾರ್ಲ, ಲೀಲಾಕ್ಷ ಬಿ. ಕರ್ಕೇರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸಿ.ಎಸ್. ಭಂಡಾರಿ, ರವೀಂದ್ರನಾಥ್ ಶೆಟ್ಟಿ, ರವೀಂದ್ರ ಶೇಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಯಶೀಲ ಅಡ್ಯoತಾಯ, ಮೂಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಶೆಟ್ಟಿ ಪರಾರಿ ಗುತ್ತು ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡರು.
ಅಭಿನಂದನಾ ಭಾಷಣ ಮಾಡಿದ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅವರು "ರವಿಶಂಕರ್ ಅವರು, ಹಾಸ್ಯ ರತ್ನ ನಯನ ಕುಮಾರ್, ಉಂಡೆಮನೆ ಶ್ರೀ ಕೃಷ್ಣ ಭಟ್ ಅವರಿಂದ ಯಕ್ಷ ಶಿಕ್ಷಣ ಪಡೆದು ಕಟೀಲು ಮೇಳಕ್ಕೆ ಸೇರಿದ ಮೂರು ವರ್ಷದಲ್ಲೇ ಪ್ರಧಾನ ಹಾಸ್ಯಗಾರರಾಗಿ ಮುನ್ನಡೆದವರು. ಯಕ್ಷಗಾನ ಪ್ರಸಂಗ ದೃಶ್ಯಾವಳಿ, ವಾಚಿಕ ಸಮಾರಾಧನೆ, ಯಕ್ಷ ಪಾತ್ರ ದೀಪಿಕಾ, ಪ್ರಸಂಗ ವಾಚಿಕ, ಯಕ್ಷಗಾನ ಪ್ರಸಂಗ ಗಳಲ್ಲಿ ನಾರದ, ರಂಗ ನಡೆಗೊಂದು ಕೈಪಿಡಿ ಮೊದಲಾದ ಅನುಭವ ಜನ್ಯ ಅಪೂರ್ವ ಸಾಹಿತ್ಯ ಕೃತಿ ಗಳನ್ನು ಯಕ್ಷ ರಂಗಕ್ಕೆ ನೀಡಿದ ಯಕ್ಷ ಸಾಹಿತಿ, ಸಂಪಾದಕ, ತಾಳಮದ್ದಳೆ ಅರ್ಥಧಾರಿ, ಸಂಪನ್ಮೂಲ ವ್ಯಕ್ತಿ" ಎಂದು ಶ್ಲಾಘಿಸಿದರು.
ಕದ್ರಿ ವಿಷ್ಣು ಸಂಸ್ಮರಣೆ
ಇಚ್ಲಂಪಾಡಿ, ಕೂಡ್ಲು, ಕೊರಕೋಡು, ಅಡೂರು, ಕುಂಡಾವು, ಕದ್ರಿ, ಧರ್ಮಸ್ಥಳ, ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರೆದಿದ್ದ ಮೇರು ಕಲಾವಿದ ಕದ್ರಿ ವಿಷ್ಣು. ಕಟೀಲು ಮೇಳದ ತಿರುಗಾಟದಿಂದ ನಿವೃತ್ತಿ ಪಡೆಯುವ ಸಂದರ್ಭದಲ್ಲಿ ಕದ್ರಿ ದೇವಸ್ಥಾನದಲ್ಲಿ ಐದು ದಶಕಗಳ ಪೂರ್ವದಲ್ಲಿ ನಡೆದಿದ್ದ ಅದ್ದೂರಿಯ "ಕದ್ರಿ ವಿಷ್ಣು ಸನ್ಮಾನ" ಕಾರ್ಯಕ್ರಮದ ಮೆಲುಕಿನೊಂದಿಗೆ ಸಂಸ್ಮರಣೆ ನಡೆಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ






