ಕನ್ನಡ ನಾಡು ಕೇವಲ ನಮಗೆ ಅನ್ನ, ಆಶ್ರಯ ನೀಡಿರುವ ಭೂಮಿ ಮಾತ್ರವಲ್ಲ. ಅದೊಂದು ಭಾವನಾತ್ಮಕ ಸಂಬಂಧ. ಆ ಸಂಬಂಧದಲ್ಲಿ ಈ ನೆಲದ ಕುರಿತಾದ ಪ್ರೀತಿ, ವಿಶ್ವಾಸ, ಭಕ್ತಿ ಭಾವಗಳು ಮಿಳಿತಗೊಂಡಿದೆ. ಇಂತಹ ಪ್ರೀತಿಯನ್ನು ಭಕ್ತಿ ಭಾವವನ್ನು ಈ ಮಣ್ಣಿನ ಕುರಿತ ಅಭಿಮಾನವನ್ನು ವ್ಯಕ್ತಪಡಿಸುವಲ್ಲಿ ಪತ್ರಿಕೆಗಳು, ಕವಿಗಳು, ಸಾಹಿತಿಗಳು, ಇತಿಹಾಸಕಾರರು ಸದಾ ಮಂಚೂಣಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳು ಕೂಡ ಹಿಂದೆ ಬೀಳದೆ ತಮ್ಮದೇ ಆದ ರೀತಿಯಲ್ಲಿ ಕಾಣಿಕೆಯನ್ನು ಸಲ್ಲಿಸಿದ್ದಾರೆ.
ಅಂತಹ ಕೆಲ ಕನ್ನಡ ಚಿತ್ರಗೀತೆಗಳನ್ನು ನಾನಿಲ್ಲಿ ಮೆಲುಕು ಹಾಕುತ್ತಿರುವೆ.
ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು ಕರ್ನಾಟವಿದುವೆ ಶಿಲ್ಪಕಲೆಯ ಬೀಡಿದು.... ಎಂಬ ಗೀತೆಯನ್ನು ಆರ್.ಎನ್. ಜಯಗೋಪಾಲ್ ಅವರು ರಚಿಸಿದ್ದು ವಿಜಯನಗರದ ಇತಿಹಾಸವನ್ನು ಹಂಪೆಯ ವೈಭವವನ್ನು ವರ್ಣಿಸುವ ಈ ಹಾಡಿನಲ್ಲಿ ಕನ್ನಡ ನಾಡಿನ ನೆಲ, ಜಲದ ಕುರಿತಾದ ಅಭಿಮಾನಪೂರ್ವಕ ನುಡಿಗಳಿವೆ.
ಉತ್ತರ ಕರ್ನಾಟಕದ ಗಂಡು ಮೆಟ್ಟಿನ ನಾಡು ಎಂದೇ ಹೆಸರಾದ ಹುಬ್ಬಳ್ಳಿಯಲ್ಲಿ ಚಿತ್ರೀಕರಣವಾದ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು" ಎಂಬ ಹಂಸಲೇಖ ಅವರ ಸಾಹಿತ್ಯ ಗೀತೆ ಕನ್ನಡದ ಮತ್ತೊಂದು ನಾಡಗೀತೆಯಂತೆ ಪ್ರಸಿದ್ಧವಾಗಿದೆ. ಇದಕ್ಕೆ ಕಾರಣ ಕನ್ನಡದ ಕಣ್ಮಣಿ ವರ ನಟ ಡಾ.ರಾಜ ಕುಮಾರ್ ಅವರ ಚಲನಚಿತ್ರದಲ್ಲಿ ಈ ಹಾಡನ್ನು ಬಳಸಿದ್ದು.
"ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂದು ಬರೆದ ರಾಷ್ಟ್ರಕವಿ ಕುವೆಂಪು ಅವರ ಕವನವನ್ನು ಡಾ. ರಾಜ್ ಹಾಡಿದ್ದು ನಮಗೆ ಕನ್ನಡ ಸುಧಾಮೃತದ ಸವಿಯನ್ನು ಉಣಬಡಿಸುತ್ತದೆ.
ಕನ್ನಡದ ಪ್ರಖ್ಯಾತ ಚಲನಚಿತ್ರ ಸಾಹಿತಿ ಚಿ. ಉದಯಶಂಕರ್ ಅವರು ಬರೆದ "ನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದಗುಡಿ" ಎಂಬ ಗೀತೆ ಕನ್ನಡ ನಾಡಿನ ಪ್ರಾಕೃತಿಕ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿರಿಮೆಗಳನ್ನು ಅನಾವರಣಗೊಳಿಸುತ್ತದೆ. ಈ ಹಾಡನ್ನು ಕೇಳಿದಾಗ ಮನಸ್ಸು ಅಭಿಮಾನದಿಂದ ತುಂಬಿ ಬರುತ್ತದೆ.
ಚಲನಚಿತ್ರ ಸಾಹಿತಿ ಆರ್. ಎನ್. ಜಯ ಗೋಪಾಲ್ ಅವರು ಬರೆದ ಖ್ಯಾತ ಗಾಯಕ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಒಡ ಮೂಡಿದ "ಕನ್ನಡ ನಾಡಿನ ಜೀವನದಿ ಕಾವೇರಿ"ಯನ್ನು ಕುರಿತು, ಮತ್ತು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಬಹು ಪ್ರಖ್ಯಾತ ಚಿತ್ರ ನಾಗರಹಾವಿನಲ್ಲಿ ಕನ್ನಡದ ವೀರಭಂತೆ ಒನಕೆ ಓಬವ್ವನ ಕುರಿತ ಗೀತೆಯನ್ನು ಚಿರಂಜೀವಿ ಉದಯ ಶಂಕರ್ ಅವರು ಬರೆದಿದ್ದು, ಖ್ಯಾತ ಗಾಯಕ ಪಿ.ಬಿ. ಶ್ರೀನಿವಾಸ್ ಅವರ ಕಂಠಸಿರಿಯಲ್ಲಿ ಮೂಡಿ ಬಂದ "ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾಡಿನ ಚರಿತೆಯ ನಾನು ಹಾಡುವೆ" ಎಂಬ ಗೀತೆಗಳಿಗೆ ಅಭಿನಯಿಸಿದ ಡಾ. ವಿಷ್ಣುವರ್ಧನ್ ಅವರ ಚಲನಚಿತ್ರಗಳ ಹಾಡುಗಳು ದೇಹದ ನರ ನಾಡಿಗಳಲ್ಲಿ ಕನ್ನಡ ತಾಯಿಯ ಕುರಿತು ಅಭಿಮಾನವನ್ನು ಹೊತ್ತು ಮೆರೆಯುತ್ತವೆ. ಕಣ್ಣ ಮುಂದೆ ಕನ್ನಡ ನಾಡಿನ ವೈಭವದ ದೃಶ್ಯಾವಳಿಗಳನ್ನು ತಂದು ನಿಲ್ಲಿಸುತ್ತವೆ.
ಕನ್ನಡದ ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರು ಬರೆದು ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ ದೇವ ಚಿತ್ರದ ಇನ್ನೊಂದು ಗೀತೆ "ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿ ಇರುವೆ ಮಣ್ಣಾದರೆ ನಾನು ಕೋಲಾರದ ಮಣ್ಣಲ್ಲಿ ಬೆರೆವೆ" ಎಂದು ಕನ್ನಡ ನಾಡಿನಲ್ಲಿ ಒಂದಾಗುವ ಆಶಯವನ್ನು ಹೇಳುತ್ತಿದ್ದರೆ ನರ ನಾಡಿಗಳಲ್ಲಿ ಮಿಂಚಿನ ಸಂಚಾರವಾಗುತ್ತದೆ. ನಮ್ಮ ಕನ್ನಡ ನಾಡಿನ ನೆಲ ಜಲ ಭಾಷೆಗಳಲ್ಲಿ ಒಂದಾಗುವ ಆಶಯವನ್ನು ವ್ಯಕ್ತಪಡಿಸುತ್ತದೆ.
ಖ್ಯಾತ ಚಲನಚಿತ್ರ ಸಾಹಿತಿ ಹಂಸಲೇಖ ಅವರು ಬರೆದ ಕನ್ನಡ....ಕನ್ನಡ...ರೋಮಾಂಚನವೀ ಕನ್ನಡ..... ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ " ಎಂಬ ಸೋಲಿಲ್ಲದ ಸರದಾರ ಚಿತ್ರದಲ್ಲಿ ಹೃದಯವಂತ ಎಂದು ಹೆಸರಾದ ಅಂಬರೀಶರ ನಟನೆಯ ಹಾಡು ಇಂದಿಗೂ ಧ್ವನಿವರ್ಧಕಗಳಲ್ಲಿ ಮೊಳಗುತ್ತಾ ಕನ್ನಡದ ಜನರಿಗೆ ಎಚ್ಚರಿಕೆಯನ್ನು ನೀಡುತ್ತದೆ. ಕನ್ನಡ ಭಾಷೆಗೆ ನಾವು ಕೊಡಬಹುದಾದ ಗೌರವ ಅಭಿಮಾನ ಮತ್ತು ಪ್ರೀತಿಯ ಕುರಿತು ನಮಗೆ ಅರಿವು ಮೂಡಿಸುತ್ತದೆ.
ಆರ್.ಎನ್. ಜಯ ಗೋಪಾಲ್ ಅವರು ಬರೆದ ತಿರುಗುಬಾಣ ಚಿತ್ರದ "ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ, ಎಲ್ಗೆ ಇರಲಿ ಹೇಗೆ ಇರಲಿ ಕನ್ನಡವೇ ನಮ್ಮ ಉಸಿರಲ್ಲಿ" ಎಂದು ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಹಾಡನ್ನು ಕೇಳಿದರೆ ಮನಸ್ಸು ಉಲ್ಲಾಸದಿಂದ ತುಂಬಿ ತುಳುಕುತ್ತದೆ. ಕನ್ನಡ ಭಾಷೆಯ ಕುರಿತು ನಮಗಿರಬೇಕಾದ ಜವಾಬ್ದಾರಿ ಮತ್ತು ಕರ್ತವ್ಯಪರತೆಯನ್ನು ಸೂಚಿಸುತ್ತದೆ.
ಕನ್ನಡದ ಖ್ಯಾತ ನಿರ್ಮಾಪಕ, ನಿರ್ದೇಶಕ, ನಟರೂ ಆದ ದ್ವಾರಕೀಶ್ ಅವರು ನಿರ್ಮಿಸಿದ ಶ್ರುತಿ ಚಲನಚಿತ್ರದಲ್ಲಿ
ಚಿ ಉದಯಶಂಕರ್ ಅವರು ಬರೆದ "ಕನ್ನಡ ತಾಯಿಯ ಮಕ್ಕಳು ನಾವೆಲ್ಲ ಒಂದೇ ಎಂದೂ" ಎಂದು ನಟ ಸುನಿಲ್ ಅಭಿನಯಕ್ಕೆ ಪ್ರೇಕ್ಷಕರು ಹುಚ್ಚೆದ್ದು ಸಂತಸ ಪಟ್ಟರು. ಕನ್ನಡ ತಾಯಿಯ ಮಕ್ಕಳನ್ನು ಎಲ್ಲಾ ರೀತಿಯ ಅಂತರಗಳಿದ್ದಾಗಲೂ ಕೂಡ ಒಂದೇ ಎಂದು ಸಾರುವ ಈ ಗೀತೆ ಹೊಸ ತಲೆಮಾರಿನ ಯುವಕರಲ್ಲಿ ಬಹು ದಿನಗಳ ಕಾಲ ರೋಮಾಂಚನವನ್ನು ಮೂಡಿಸಿದ್ದು ಸುಳ್ಳಲ್ಲ.
ಹಂಸಲೇಖ ಅವರು ಬರೆದ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ "ಕರುನಾಡ ತಾಯಿ ಸದಾ ಚಿನ್ಮಯಿ ಈ ಪುಣ್ಯ ಭೂಮಿ ನಮ್ಮ ದೇವಾಲಯ" ಎಂಬ ನಟ ರವಿಚಂದ್ರನ್ ಹಾಡು ಮನಸ್ಸಿಗೆ ಮುದ ನೀಡುತ್ತದೆ. ರೋಮ ರೋಮಗಳು ನಿಂತರು ತಾಯೆ ಚೆಲುವ ಕನ್ನಡದೊಳೇನಿದು ಮಾಯೆ" ಎಂದು ಮಧ್ಯಮ ವೇಗದಲ್ಲಿ ಹಾಡಿದ ಈ ಹಾಡು ಪ್ರೇಕ್ಷಕರ ಧಮನಿಗಳಲ್ಲಿ ಹೊಸ ಉಲ್ಲಾಸ ತುಂಬುವುದನ್ನು ಸಂಚಾರವನ್ನು ನಾವು ಕಾಣಬಹುದು.
ಚಿ.ಉದಯಶಂಕರ್ ಅವರು ರಚಿಸಿ ವರನಟ ರಾಜಕುಮಾರ್ ಅವರ ಕಂಠಸಿರಿಯಲ್ಲಿ ಮೂಡಿಬಂದ "ಜೇನಿನ ಹೊಳೆಯೋ ಹಾಲಿಯ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ ವಾಣಿಯ ವೀಣೆಯ ಸ್ವರ ಮಾಧುರ್ಯದ ಸುಮಧುರ ಸುಂದರ ನುಡಿಯೋ" ಗೀತೆ ತನ್ನ ಮಾಧುರ್ಯದಿಂದಲೇ ಎಲ್ಲರ ಗಮನ ಸೆಳೆದಿತ್ತು.
ಹಂಸಲೇಖ ಅವರ "ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ ದೇವರಿವಳು ನಮ್ಮ ಕಾಪಾಡೋ ಭೂಮಿ ಇವಳು" ಎಂಬ ಹಾಡು ಇಂದಿಗೂ ಕೂಡ ಸಾರ್ವಜನಿಕ ಸಮಾರಂಭಗಳಲ್ಲಿ ಪ್ರದರ್ಶಿಸಲು ಕಾರಣ ಆ ಹಾಡಿನಲ್ಲಿರುವ ಜೋಶ್ ಎಂದರೆ ತಪ್ಪಿಲ್ಲ.
ತಮ್ಮದೇ ನಿರ್ಮಾಣದ ಮಲ್ಲ ಚಲನಚಿತ್ರದಲ್ಲಿ "ಕರುನಾಡೆ ಕೈಚಾಚಿದೆ ನೋಡಿ ಹಸಿರುಗಳೆ ಅ ತೋರಣ ನೋಡೆ.... ಬೀಸೋ ಗಾಳಿ ಚಾಮರ ಬೀಸಿದೆ" ಎಂದು ರವಿಚಂದ್ರನ್ ತಾವೇ ಬರೆದು ಹಾಡಿ ಅಭಿನಯಿಸಿದ ಗೀತೆಯನ್ನು ಕೇಳುತ್ತಿದ್ದರೆ ಮನಸ್ಸು ತಂತಾನೆ ಪ್ರಕೃತಿಯಲ್ಲಿ ಲೀನವಾಗುತ್ತದೆ.
ಒಂದು ಸಿನಿಮಾ ಕಥೆ ಚಲನಚಿತ್ರದ ಚಿ ಉದಯಶಂಕರ್ ರಚಿಸಿ ಡಾಕ್ಟರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡಿದ "ಕನ್ನಡ ಹೊನ್ನುಡಿ ದೇವಿಯನ್ನು ನಾ ಪೂಜಿಸುವೆ ಆರಾಧಿಸುವೆ.. ಕನ್ನಡ ಡಿಂಡಿಮ ಬಾರಿಸುವೆ" ಎಂದು ಅನಂತನಾಗ ಭಕ್ತಿ ಭಾವದಿಂದ ಅಭಿನಯಿಸಿದರೆ ಎಲ್ಲಾ ಸಾಹಿತಿಗಳು, ಅವರ ಕೃತಿಗಳು ಕಣ್ಣ ಮುಂದೆ ಮೆರವಣಿಗೆ ಹೊರಡುತ್ತಾ ಮನಸ್ಸು ಕನ್ನಡ ಪ್ರೇಮದ ಭಕ್ತಿ ಭಾವದಲ್ಲಿ ತೇಲಿ ಹೋಗುತ್ತದೆ.
ವಿ ಮನೋಹರ್ ಅವರು ಬರೆದು ಡಾ. ರಾಜಕುಮಾರ್ ಹಾಡಿದ ಸಮರ ಚಲನಚಿತ್ರದ ಡಾ. ಶಿವರಾಜಕುಮಾರ್ ಅಭಿನಯದ "ಕನ್ನಡದ ಮಾತು ಚೆನ್ನ, ಕನ್ನಡದ ನೆಲ ಚೆನ್ನ ಕನ್ನಡಿಗರ ಮನಸು ಚಿನ್ನ" ಎಂಬ ಹಾಡು ಇಂದಿಗೂ ಮಕ್ಕಳ ಶಾಲೆಯ ನೃತ್ಯ ಪ್ರದರ್ಶನಗಳಲ್ಲಿ ಪ್ರದರ್ಶಿಸಲ್ಪಡುವ ನೃತ್ಯ ಗೀತೆಯಾಗಿದೆ.
ಕನ್ನಡ ಸಾಹಿತ್ಯಕ್ಕೆ ಕನ್ನಡ ನಾಡು ನುಡಿ ಜಲ ನೆಲ ಭಾಷೆಯ ಕುರಿತು ಪ್ರೀತಿಯ ಅಭಿಮಾನ ಭಕ್ತ ಹಾಗೂ ನಮ್ಮ ಜವಾಬ್ದಾರಿಗಳನ್ನು ನೂರಾರು ಸಾವಿರಾರು ಗೀತೆಗಳು ಕನ್ನಡ ಚಲನಚಿತ್ರ ಸಾಹಿತಿಗಳು ರಚಿಸಿದ್ದಾರೆ. ಈ ಎಲ್ಲ ಗೀತೆಗಳು ಕನ್ನಡಿಗರಿಗೆ ಆಗಾಗ ಎಚ್ಚರಿಸುತ್ತಲೂ ಇವೆ. ಕನ್ನಡದ ಪ್ರತಿಯೊಬ್ಬರ ಕಿವಿಗೂ ತಲುಪುವ, ಕೇಳಲ್ಪಡುವ, ಹಾಡಲ್ಪಡುವ ಚಲನಚಿತ್ರ ಗೀತೆಗಳು ಇವುಗಳಾದರೂ ಕೂಡ ಕನ್ನಡ ಸಾಹಿತ್ಯದಲ್ಲಿ ಚಲನಚಿತ್ರ ಗೀತೆಗಳ ಸಾಹಿತ್ಯಕ್ಕೆ ಮಾನ್ಯತೆ ಇಲ್ಲ ಎಂಬುದು ವಿಷಾದದ ಸಂಗತಿ.
ಕನ್ನಡದ ಖ್ಯಾತ ಸಾಹಿತಿಗಳ ಎಲ್ಲ ಕವನಗಳು ಹಾಡಲ್ಪಟ್ಟಿಲ್ಲ. ಬರೆದದ್ದೆಲ್ಲವೂ ಕವಿತೆಯಾಗುವುದಿಲ್ಲ ನಿಜ ಆದರೆ ಬರೆದ ಕವಿತೆಯೊಂದು ತನ್ನ ಭಾಷೆಯ ಸೊಗಡನ್ನು ಉಳಿಸಿಕೊಂಡು ಸಾಹಿತ್ಯ, ಸಂಗೀತದ ಮೂಲಕ ನಮ್ಮನ್ನು ಸೆಳೆದು ನಮ್ಮ ಬಾಯಲ್ಲಿ ಗುನುಗುನಿಸುವಂತೆ, ನಮ್ಮ ದೇಹದ ನರನಾಡಿಗಳಲ್ಲಿ ಮಿಂಚಿನ ಸಂಚಾರಗೈಯುವಂತೆ ಮಾಡುವ ಶಕ್ತಿ ಚಲನಚಿತ್ರದ ಹಾಡುಗಳಲ್ಲಿ ಇದೆ. ಪುರಸ್ಕರಿಸದೆ ಹೋದರೂ ತಿರಸ್ಕರಿಸಲು ಸಾಧ್ಯವಿಲ್ಲದ ಕಾರಣ ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕು.
ಏನಂತೀರಾ ಸ್ನೇಹಿತರೆ?
- ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


