ನವೆಂಬರ್ 10- 'ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ'
ನವೆಂಬರ್ 10- ವಿಶ್ವ ರೋಗ ನಿರೋಧಕ ದಿನ!!
ನಿನ್ನೆ ಬೆಳಗ್ಗೆ ಗೂಗಲ್‌ನಲ್ಲಿ ದಿನದ (ನವೆಂಬರ್ 10) ವಿಶೇಷತೆ ಏನು ಅಂತ ಸರ್ಚ್ ಕೊಟ್ಟಾಗ, ನವಂಬರ್ 10 ನ್ನು ಎರಡು ವಿಶೇಷ ದಿನಗಳಾಗಿ ಆಚರಿಸುವ ವಿಚಾರಗಳನ್ನು ಮೊಬೈಲ್ ಸ್ಕ್ರೀನ್ ಮೇಲೆ ತೆರೆದಿಟ್ಟಿತು.
1) "ನವೆಂಬರ್ 10 ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ"
ಸಮಾಜದಲ್ಲಿ ವಿಜ್ಞಾನದ ಪಾತ್ರವನ್ನು ಮತ್ತು ಶಾಂತಿಯುತ ಹಾಗೂ ಸುಸ್ಥಿರ ಸಮಾಜವನ್ನು ಬೆಳೆಸುವಲ್ಲಿ ಅದರ ಕೊಡುಗೆಯನ್ನು ಸಾರ್ವಜನಿಕರಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.
2) "ನವಂಬರ್ 10 ವಿಶ್ವ ರೋಗನಿರೋಧಕ ದಿನ"
ಲಸಿಕೆಗಳು ಮಾರಣಾಂತಿಕ ಕಾಯಿಲೆಗಳಿಂದ ಜನರನ್ನು ಮತ್ತು ಸಮುದಾಯಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಜಾಗತಿಕವಾಗಿ ನೆನಪಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಇದರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದು ಹಂಚಿಕೊಳ್ಳೋಣ ಅಂತ ಈ ಎರಡೂ ಪ್ಯಾರಗ್ರಾಫ್‌ನ್ನು ಕಾಪಿ ಮಾಡಿ, ಮೊಬೈಲ್ ನೋಟ್‌ನಲ್ಲಿ ಪೇಸ್ಟ್ ಮಾಡಿ ಇಟ್ಕೊಂಡಿದ್ದೆ.
ರಾತ್ರಿ ಟಿಪ್ಪಣಿ ಬರೆಯುವಾಗ, ಮೊಬೈಲ್‌ನಲ್ಲಿ ಒಂದರ ಮೇಲೆ ಒಂದರಂತೆ ದೆಹಲಿ ಬಾಂಬ್ ಬ್ಲಾಸ್ಟಿನ ನೋಟಿಫಿಕೇಷನ್ ಬರಲು ಶುರುವಾಯ್ತು!
ನವೆಂಬರ್ 10 ರ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ ವಿಶೇಷಕ್ಕೆ ವಿಧಿಯೇ ವ್ಯಂಗ್ಯವಾಗಿ, ವಿಕಟದಿಂದ ಅಣಕಿಸುವಂತೆ, ದೆಹಲಿಯಲ್ಲಿ ವಿಜ್ಞಾನದ ಆವಿಷ್ಕಾರದಿಂದಲೇ ಶಾಂತಿಯನ್ನು ಕದಡಿಸುವ ಕೃತ್ಯಕ್ಕೆ ದುಷ್ಕರ್ಮಿಗಳ ಮನಸ್ಸಿಗೆ ಪ್ರಚೋದನೆ ನೀಡಿದೆ!
ನವೆಂಬರ್ 10 ವಿಶ್ವ ರೋಗ ನಿರೋಧಕ ದಿನ ಎಂಬುದಕ್ಕೆ, ಅದೇ ವಿಧಿ ಅಣಕಿಸಿದ್ದು ಭಯೋತ್ಪಾದನೆಯ ರೋಗ ಉಲ್ಬಣಿಸುವಂತೆ ಮಾಡಿ!
ಗುಣಿಗುಣಿಸಿ ತಿಣುಕುತ್ತ ಹೆಣಗಾಡಿ ಫಲವೇನು ।
ಗಣನೆಗೆಟುಕದದೊಂದಚಿಂತ್ಯವೆತ್ತಲೊ ತಾನ್ ।
ಅಣಗಿರ್ದು ನಿನ್ನೆಲ್ಲ ಗಣಿತಗಳನಣಕಿಪುದು
ದಣಿಯದಾ ವಿಧಿ ವಿಕಟ- ಮಂಕುತಿಮ್ಮ
ನಾವು ಯಾವುದಾದರು ವಿಚಾರಗಳಿಗೆ ಲೆಕ್ಕಾಚಾರವನ್ನು ಹಾಕುತ್ತಾ ಯೋಚಿಸುತ್ತಿದ್ದರೆ, ನಮ್ಮ ಲೆಕ್ಕಾಚಾರಕ್ಕೆ ಎಟುಕದ ಮತ್ತು ನಮ್ಮ ಯೋಚನೆಯ ಪರಿಧಿಗೆ ನಿಲುಕದ ಒಂದು ಶಕ್ತಿ ವಿಧಿ ರೂಪದಲ್ಲಿ, ತನ್ನ ಪ್ರಭಾವವನ್ನು ಬೀರಿ ಸಾಮಾನ್ಯರ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿಸಿ, ವಿಕಟ ಅಟ್ಟಹಾಸದಿಂದ ಅಣಕಿಸುತ್ತಿರುತ್ತದೆ ಅಂತ ಡಿವಿಜಿ ಬರೆದಿಟ್ಟಿದ್ದಾರೆ.
ಯಾರು ಲೆಕ್ಕ ಹಾಕಿದ್ರು? ದೇಶ ದೇಹದ ಹೃದಯ ಭಾಗದಂತಿರುವ ದೆಹಲಿಯಲ್ಲಿ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ ಎಂಬ ದಿನದಲ್ಲೇ ಶಾಂತಿ ಕದಡುವ ಘಟನೆ ನೆಡೆಯುವಂತಾಗುತ್ತದೆ ಎಂದು? ವಿಶ್ವ ರೋಗ ನಿರೋಧಕ ದಿನದಂದೇ ಭಯೋತ್ಪಾದನೆಯ ರೋಗ ಉಲ್ಬಣಿಸುತ್ತದೆ ಎಂದು?
ದೆಹಲಿಯ ಸ್ಪೋಟಕ ಸುದ್ಧಿ ಬಿತ್ತರವಾಗುವಾಗಲೇ ಜಮ್ಮು ಕಾಶ್ಮೀರದಲ್ಲಿ 8 ಜನ ಉಗ್ರರನ್ನು ಬಂಧಿಸಿ, 2900kg ಸ್ಪೋಟಕವನ್ನು ವಶಪಡಿಸಿಕೊಂಡಿದ್ದಾರಂತೆ. ಆ ಅಷ್ಟ ದಿಗ್ಗಜರಲ್ಲಿ ನಾಲ್ಕು ದುಷ್ಟ ಚತುಷ್ಟಯರು ವೈದ್ಯರಂತೆ ಅನ್ನುವ ಸುದ್ದಿ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ ದ ಮತ್ತೊಂದು ವ್ಯಂಗ್ಯ ವಿಶೇಷ!!
ಇನ್ನೊಂದು ಕಡೆ, ಮತ್ತೊಂದು ಮೂವರು ಉಗ್ರಗಾಮಿಗಳನ್ನು ಬಂಧಿಸಲಾಗಿತ್ತು. ಆ ಉಗ್ರಗಾಮಿಗಳಿಂದ ರಿಸಿನ್ ಎಂಬ ಭಯಾನಕ ವಿಷವನ್ನು ವಶಪಡಿಸಿಕೊಂಡಿದ್ದರಂತೆ. ಈ ರಿಸಿನ್ ವಿಷವನ್ನು ಸಣ್ಣ ಪ್ರಮಾಣದಲ್ಲೂ ಉಸಿರಾಡಿದರೆ, ಸೇವಿಸಿದರೆ ಅಥವಾ ಯಾವುದೇ ರೀತಿಯಲ್ಲಾದರೂ ದೇಹಕ್ಕೆ ಸೇರಿದರೆ ಹೆಚ್ಚು ವಿಷಕಾರಿಯಾಗಿರುತ್ತದೆಯಂತೆ. ಈ ವಿಷ ಪದಾರ್ಥ ದೇಹಕ್ಕೆ ಸೇರಿದರೆ ತೀವ್ರ ಅಂಗಾಂಗಗಳು ವೈಫಲ್ಯಗೊಂಡು ಮನುಷ್ಯರು ಸಾವನ್ನಪ್ಪುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ವೈದ್ಯಲೋಕದಲ್ಲಿ ಯಾವುದೇ ಔಷಧಿ ಇಲ್ಲ. ಈ ಸುದ್ಧಿ ಕೂಡ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ ಎಂದು ಹೇಳುವ ನವಂಬರ್ 10 ರಂದು ಪ್ರಕಟವಾಗಿದೆ! ವಿಶ್ವ ರೋಗ ನಿರೋಧಕ ದಿನಕ್ಕೆ ರಿಸಿನ್ ಎಂಬ ಸಾಮೂಹಿಕ ಸಾವನ್ನು ತರಬಹುದಾದ ಲಸಿಕೆ ಉತ್ಪಾದನೆ!
ಇದೇ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ ದಂದೇ ಸ್ಪೋಟಗೊಂಡ ಮತ್ತೂ ಒಂದು ಸುದ್ಧಿ ಅಂದರೆ, ಕಾರಾಗ್ರಹದಲ್ಲಿ ಉಗ್ರಗಾಮಿ ಅಪರಾಧಿಗಳಿಗೆ ನಿಷೇಧಿತ ಮೊಬೈಲ್, ಟಿವಿ, ಮದ್ಯ, ಸಿಗರೇಟು, ಗಾಂಜ, ನಾನ್ವೆಜ್ ಊಟದ ರಾಜಾತಿಥ್ಯ ಕೊಡಲಾಗುತ್ತಿದೆ ಎಂಬುದು!
ದೇಶದ ಅನೇಕ ರಾಜ್ಯಗಳ, ಅನೇಕ ನಗರಗಳಲ್ಲಿ ಹವಾಮಾನ ಎಚ್ಚರಿಕೆ ಮಾದರಿಯಲ್ಲಿ, ಉಗ್ರ ಕೃತ್ಯ ಮತ್ತೆ ಸಂಭವಿಸದಂತೆ ಹೈ ಅಲರ್ಟ್ ಘೋಷಣೆ ಆಗಿದೆ!
ವಿಧಿ ವಿಪರೀತ, ವಿಧಿಯಾಘಾತ, ವಿಧಿವಿಲಾಸವೆನೆ ಇದೇನಹಾ?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



