ಬಳ್ಳಾರಿ: ಭಾರತೀಯ ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ 2024-25 ನೆಯ ಆರ್ಥಿಕ ವರ್ಷದ ವಿವಿಧ ಅಭಿಯಾನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಂಚೆ ವಿಭಾಗಗಳಿಗೆ ಮತ್ತು ಸಿಬ್ಬಂದಿಗಳಿಗೆ ಶುಕ್ರವಾರ ದಿನಾಂಕ 21ನೇ ನವೆಂಬರ್ 2025ರಂದು ಕಾರವಾರ ಜಿಲ್ಲೆಯ ಗೋಕರ್ಣದಲ್ಲಿ ಕರ್ನಾಟಕ ವೃತ್ತ ಮತ್ತು ವಲಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಳ್ಳಾರಿ ಅಂಚೆ ವಿಭಾಗವು ಕರ್ನಾಟಕ ವೃತ್ತ ಮಟ್ಟದಲ್ಲಿ ಅಂಚೆ ಜೀವ ವಿಮಾ ಯೋಜನೆಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಹಾಗೆಯೇ ಉತ್ತರ ಕರ್ನಾಟಕ ವಲಯ ಮಟ್ಟದಲ್ಲಿ ಅಂಚೆ ಜೀವ ವಿಮಾ ಯೋಜನೆಯ ವಿಭಾಗದಲ್ಲಿ ಒಟ್ಟು 14 ಪ್ರಶಸ್ತಿಗಳು, ಉಳಿತಾಯ ಯೋಜನೆಗಳ ವಿಭಾಗದಲ್ಲಿ ಒಟ್ಟು 13 ಪ್ರಶಸ್ತಿಗಳು ಮತ್ತು ಬಿ.ಡಿ. (ಬಿಸಿನೆಸ್ ಡೆವಲಪ್ಮೆಂಟ್) ಹಾಗೂ ಇತರೆ ವಿಭಾಗಗಳಲ್ಲಿ ಒಟ್ಟು ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು.
ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪಿ.ಚಿದಾನಂದ ಕೂಡ್ಲಿಗಿ ಉಪ ವಿಭಾಗದ ನಿರೀಕ್ಷಕ ಶಶಿಕುಮಾರ್ ಹಿರೇಮಠ್, ಬಳ್ಳಾರಿ ಪ್ರಧಾನ ಅಂಚೆಪಾಲಕ ಎ.ಜೆ.ಭೀಮಸೇನ, ಹೊಸಪೇಟೆ ಅಂಚೆಪಾಲಕ ಎಂ.ರಾಮರಾವ್, ಕೂಡ್ಲಿಗಿ ಅಂಚೆಪಾಲಕ ಕೆ ವೆಂಕಟೇಶ್, ವಿಮಾ ಅಭಿವೃದ್ಧಿ ಅಧಿಕಾರಿ ಮಾರುತಿ ಉಪ್ಪಾರಟ್ಟಿ, ಹನಸಿ ಶಾಖಾ ಅಂಚೆಪಾಲಕ ಮೋಹಿದೀನ್, ನಿಡಗುರ್ತಿ ಶಾಖಾ ಅಂಚೆ ಪಾಲಕ ದಾದಾಪೀರ್, ಊರಮ್ಮ ಟೆಂಪಲ್ ಶಾಖಾ ಅಂಚೆ ಪಾಲಕಿ ವಿ ಜಲಜಾಕ್ಷಿ ಹಾಗೂ ವಿಮಾ ಯೋಜನೆಯ ನೇರ ಪ್ರತಿನಿಧಿ ಮಲ್ಲೇಶ್ ಕೊಟ್ಟೂರು ಇವರುಗಳು ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಉತ್ತರ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ ಕಾಕುಮಾನು ಮತ್ತು ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರಾ ರವರು ಪ್ರಶಸ್ತಿಗಳನ್ನು ವಿತರಿಸಿದರು. ಉತ್ತರ ಕರ್ನಾಟಕ ವಲಯದ ಎಲ್ಲಾ ಅಂಚೆ ವಿಭಾಗಗಳ ಅಂಚೆ ಅಧಿಕ್ಷಕರು. ಸುಮಾರು 200ಕ್ಕೂ ಹೆಚ್ಚಿನ ಪ್ರಶಸ್ತಿ ವಿಜೇತರು ಈ ಅದ್ದೂರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಶಸ್ತಿಗಳನ್ನು ಸ್ವೀಕರಿಸಿ ಮಾತನಾಡಿದ ಬಳ್ಳಾರಿ ವಿಭಾಗದ ಅಧೀಕ್ಷಕರು ಪಿ.ಚಿದಾನಂದ ಈ ಎಲ್ಲಾ ಪ್ರಶಸ್ತಿಗಳನ್ನು ಬಳ್ಳಾರಿ ಅಂಚೆ ವಿಭಾಗದ ಸಮಸ್ತ ಸಿಬ್ಬಂದಿಗಳಿಗೆ ಅರ್ಪಿಸ ಲಾಗುವುದೆಂದು ತಿಳಿಸಿದರು ಹಾಗೆಯೇ ಕಳೆದ ಆರ್ಥಿಕ ವರ್ಷದಲ್ಲಿ ಅಂಚೆ ಇಲಾಖೆಯ ವಿವಿಧ ಯೋಜನೆಗಳನ್ನು ಸಾಕಷ್ಟು ಜನರಿಗೆ ತಲುಪಿಸಿ ಹೆಚ್ಚಿನ ವ್ಯವಹಾರಗಳನ್ನು ಮಾಡಲಾಗಿತ್ತು. ಆದ್ದರಿಂದ ಈ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳು ಬರಲಿಕ್ಕೆ ಸಾಧ್ಯವಾಯಿತು ಎಂದರು.
ಬಳ್ಳಾರಿ ಅಂಚೆ ವಿಭಾಗ 33 ವಲಯ ಮಟ್ಟದ ಪ್ರಶಸ್ತಿಗಳನ್ನು ಸ್ವೀಕರಿಸಿರುವುದು ಅತ್ಯಂತ ಹೆಮ್ಮೆಯ ವಿಷಯ. ಏಕೆಂದರೆ ಉತ್ತರ ಕರ್ನಾಟಕ ವಲಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಬಳ್ಳಾರಿ ವಿಭಾಗದ ಪರವಾಗಿ ಸ್ವೀಕರಿಸಿರುವುದು ಬಹಳ ಹರ್ಷದಾಯಕವಾಗಿರುತ್ತದೆ. ಅದೇ ರೀತಿ ಈ ಆರ್ಥಿಕ ವರ್ಷದಲ್ಲಿಯೂ ಕೂಡ ನಮ್ಮ ಇಲಾಖೆಯ ವಿವಿಧ ಜನಪ್ರಿಯ ಜನಉಪಯೋಗಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ತಲುಪಿಸಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಇದರಿಂದ ಇಲಾಖೆಯ ಬಗ್ಗೆ ಇರುವ ನಂಬಿಕೆ ಹಾಗೂ ಒಳ್ಳೆಯ ಭಾವನೆ ಇನ್ನಷ್ಟು ಹೆಚ್ಚಿಗೆ ಆಗಲಿಕ್ಕೆ ಸಾಧ್ಯವಿದೆ ಎಂದು ತಿಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ




