ಅಬ್ಬ ಎಂಥಾ ಸೆಕೆ, ಅಯ್ಯೋ ಎಂಥಾ ಮಳೆ ಎಂಬ ಕಾಲ ಮುಗಿದು ಅಬ್ಬಬ್ಬಾ 'ಚ್ ಚ್ ಚಳಿ 'ಎಂದು ನಡುಗಿಸಲು ವರ್ಷದ ಕೊನೆಯಲ್ಲಿ ಶುರುವಾಗುವ ಚಳಿಗಾಲ ನೋಡ ನೋಡುತ್ತಿದಂತೆ ಬಂದೇ ಬಿಟ್ಟಿದೆ.
ಇನ್ನೇನು ಹೆಣ್ಣು ಮಕ್ಕಳೆಲ್ಲಾ ಲೋಶನ್, ಕ್ರೀಮ್ ಅಂತ ಶುರು ಮಾಡಿಬಿಡುತ್ತಾರೆ , ಅದರಲ್ಲಿ ಕೆಲವರಂತೂ ತೆಂಗಿನ ಎಣ್ಣೆಯಲ್ಲಿಯೇ ತ್ವಚೆಯ ಆರೈಕೆ ಮುಗಿಸಿಬಿಡುತ್ತಾರೆ ಅದು ಬೇರೆ ವಿಚಾರ,
ಹೌದು, ಚಳಿಗಾಲ ಎಂದೊಡನೆ ನಮಗೆ ಮೊದಲು ನೆನಪಾಗುವುದು ತ್ವಚೆಯ ರಕ್ಷಣೆಯ ಬಗ್ಗೆ ಹೀಗಾಗಿ ಕೆಲವರು ಚಳಿಯನ್ನು ಬೈಯುವುದು ಸಹ ಇದೆ, ಆದರೆ ನಾವು ಮನುಷ್ಯರು ಎಷ್ಟೇ ಅದರು ಸ್ವಾರ್ಥಿಗಳು ಯಾವಾಗಲೂ ನಮ್ಮ ಬಗ್ಗೆ ಮಾತ್ರ ಯೋಚಿಸುತ್ತೇವೆ ಯಾಕೆಂದರೆ ಕಾಲಗಳೆಲ್ಲ ಪ್ರಕೃತಿಯ ಭಾಗ ಚಳಿಗಾಲವೂ ಅಷ್ಟೇ, ಚಳಿಗಾಲವೆಂದರೆ ಪ್ರಕೃತಿಗೆ ಅಚ್ಚು ಮೆಚ್ಚು ಯಾಕೆಂದರೆ ಮಳೆಗಾಲದಲ್ಲಿ ರಭಸದ ಗಾಳಿ ಮಳೆಗೆ ಮರಗಿಡಗಳು ಕೊಚ್ಚಿ ಹೋಗಬಹುದು ಮತ್ತು ಬೇಸಿಗೆಕಾಲದಲ್ಲಿ ಒಣಗಿ ಕಟ್ಟಿಗೆಯಾಗಬಹುದು ಆದರೆ ಚಳಿಗಾಲ ಹಾಗಲ್ಲ ಬಾಡಿದ ಮರ-ಗಿಡಗಳು ಹೊಸ ಚಿಗುರು ಪಡೆಯುತ್ತವೆ. ಪ್ರಾಣಿ ಪಕ್ಷಿಗಳಿಗೆ ನವ ಚೈತನ್ಯ ತುಂಬಿರುತ್ತದೆ ಇದೇ ಕಾರಣಕ್ಕೆ ಚಳಿಗಾಲ ಪ್ರಕೃತಿಯ ಪ್ರೀತಿಗೆ ಕಾರಣವಾಗಿದೆ
ಕಾಲಕಾಲಕ್ಕೆ ಮನುಷ್ಯರ ಆಹಾರ ಕ್ರಮ ಬದಲಾಗುತ್ತಾ ಹೋಗುತ್ತದೆ ಅದರಲ್ಲೂ ಚಳಿಗಾಲದಲ್ಲಿನ ಆಹಾರ ಕ್ರಮವು ಸ್ವಲ್ಪ ವಿಶೇಷವೇ , ಎಳ್ಳು ಬೆಲ್ಲ, ಹುರಿದ ಕಡಲೆ ,ಕೊಬ್ಬರಿ ಮಿಠಾಯಿ ಇವೆಲ್ಲ ಹೆಚ್ಚು ತಿನ್ನಲ್ಪಡುವ ತಿನಿಸಿಗಳು. ಈ ಆಹಾರಗಳೆಲ್ಲ ದೇಹದಲ್ಲಿಯೇ ತೇವಾಂಶ ಪೋಷಕಾಂಶವನ್ನು ಸರಿದೂಗಿಸಲು ಸಹಕರಿಸುತ್ತವೆ . ಇನ್ನು ಸಿಟಿಗಳಲ್ಲೆಲ್ಲ ಇದನ್ನು ತಿನ್ನಲು ಇಷ್ಟ ಪಡದೆ ಸೂಪ್ ,ರಸಂ ಮೊದಲಾದವುಗಳನ್ನು ಚಳಿಗಾಲ ದಲ್ಲಿ ಸವಿಯುತ್ತಾರೆ
ಇನ್ನು ಚಳಿಗಾಲ ಎಂದಾಗ ನನಗೆ ನೆನಪಾಗುವುದೇ ಒಂದು ವಿಷಯ. ಅದೇ, ಸ್ವಲ್ಪ ಕಟ್ಟಿಗೆ ರಾಶಿ ಹಾಕಿ ಬೆಂಕಿ ಹಚ್ಚಿ ಸುತ್ತ ಕೂತು ಹರಟೆ ಹೊಡೆಯುವುದು. ಹೌದು, ನಾನು ಹೇಳುತ್ತಿರುವುದು ಫೈರ್ ಕ್ಯಾಂಪಿಂಗ್ ಬಗ್ಗೆ ಎಷ್ಟು ಮೋಜಾಗಿರುತ್ತದೆ ಅಲ್ವಾ ಚಳಿಗಾಲ , ಈಗೀಗ ಅದೆಲ್ಲಾ ಪ್ಯಾಷನ್ ಆಗಿ ಹೋಗಿದೆ.. ಸಿಕ್ಕಲ್ಲಿ ಹೋಗಿ ಬೆಂಕಿ ಹಾಕಿ ಕಾಡ್ಗಿಚ್ಚಿಗೆ ಕಾರಣವಾಗುವ ಸಾಧ್ಯತೆಯೂ ಹೆಚ್ಚು.. ಅದರಿಂದ ಫೈರ್ ಕ್ಯಾಂಪಿಂಗ್ ಎಷ್ಟು ಮೋಜೂ ಅಷ್ಟೇ ಅಪಾಯಕಾರಿಯೂ ಹೌದು
ಇನ್ನೊಂದು ವಿಶೇಷವೆಂದರೆ ಚಳಿಗಾಲದಲ್ಲಿ ಬೆಳಗ್ಗೆ ಎದ್ದು ಸುತ್ತಮುತ್ತ ನೋಡಿದರೆ ಮಂಜು ಕವಿದು ಕಣ್ಣನ್ನೇ ಮಂಜಾಗಿಸುತ್ತದೆ ಆಹಾ ಹಳ್ಳಿಗಳಲ್ಲಂತೂ ಆ ಮಂಜಿನ ಸೊಬಗನ್ನು ನೋಡುವುದೇ ಒಂದು ಚೆಂದ.
ಚಳಿಗಾಲವನ್ನು ಪ್ರೀತಿಸದೆ ಇರಲು ಕಾರಣಗಳು ಕಡಿಮೆ ಇದ್ದರೂ ಪ್ರಕೃತಿಯನ್ನು ಪ್ರೀತಿಸುವವರು ಚಳಿಗಾಲವನ್ನು ಸಹ ಕಾರಣ ಹುಡುಕದೆ ಇಷ್ಟಪಡುತ್ತಾರೆ.
-ಹರ್ಷಿತ ಶಿಶಿಲ
ಪತ್ರಿಕೋದ್ಯಮ ವಿಭಾಗ ಎಸ್ ಡಿ ಎಂ ಸಿ ಉಜಿರೆ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ





