ದಾಂಪತ್ಯದಲ್ಲಿ ಒಡಕು..ಒಂದು ವಿಮರ್ಶೆ

Upayuktha
0


ಹಾನಗರದ ಮೂಲೆಯೊಂದರಲ್ಲಿ ವಾಸವಾಗಿದ್ದ ಆ ದಂಪತಿಗಳಲ್ಲಿ ಸಕಾರಣವಿಲ್ಲದೆ ಆಕೆ ಆತನನ್ನು ಬಿಟ್ಟು ಹೋದಳು. ಮೇಲ್ನೋಟಕ್ಕೆ ಎಲ್ಲವೂ ಸರಿ ಎನಿಸುವಂತೆ ಪ್ರತಿ ತಿಂಗಳು ಮನೆ ಬಾಡಿಗೆ, ದಿನಸಿ, ಕೆಲಸದವರ ಸಂಬಳ ಎಲ್ಲವೂ ಆಯಾ ಸಮಯಕ್ಕೆ ನಡೆದು ಹೋಗುತ್ತಿತ್ತು.


ದಂಪತಿಗಳಿಬ್ಬರೂ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು. ಆರಂಕಿಯ ಸಂಬಳ ಪಡೆಯುತ್ತಿದ್ದರು. ಮನೆಯಲ್ಲಿ ಅಡುಗೆ ಮತ್ತಿತರ ಕೆಲಸಕ್ಕೆ ಒಬ್ಬ ಹೆಣ್ಣು ಮಗಳು ಬಂದು ಹೋಗುತ್ತಿದ್ದಳು.


ಕೆಲವರು ತಿಂದದ್ದು ಅರಗಿಸಿಕೊಳ್ಳಲಾಗದೆ ಹೋದಳು ಎಂದು ಹೇಳಿದರೆ ಮತ್ತೆ ಕೆಲವರು ತಿನ್ನೋ ತಟ್ಟೆಯನ್ನು ಒದ್ದು ಹೋದಳು ಎಂದು ಹೇಳಿದರು. ತಿಳಿಯಾದ ನೀರಿನ ಕೆಳಗೆ ಬಗ್ಗಡ ಇರುತ್ತದೆ ಎಂಬುದನ್ನು ಅವರಾರೂ ಅರಿಯಲೇ ಇಲ್ಲ.


ಕೆಲವು ವಸ್ತುಗಳು ಮತ್ತು ವಿಷಯಗಳು ಮಾತಿಗಿಂತ ಮಿಗಿಲಾಗಿ, ಹಣಕ್ಕಿಂತ ಮೇಲಾಗಿ ಕ್ರಿಯೆಯನ್ನು ಅಪೇಕ್ಷಿಸುತ್ತವೆ. ಎಲ್ಲವೂ ಚೆನ್ನಾಗಿದೆ ಎಂಬುದರ ಹಿಂದೆ ಯಾವುದೂ ಸರಿ ಇಲ್ಲ ಎಂಬುದು ಅಡಗಿರುತ್ತದೆ.


ಯಾರಾದರೂ ನಮ್ಮನ್ನು ಭೇಟಿಯಾಗಲು ಬಂದಾಗ ಖುಷಿಯಾಗುತ್ತದೆ. ತುಂಬಿದ ಸಭಾಂಗಣಗಳಲ್ಲಿ, ರಸ್ತೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯ ಜನರ ಮಧ್ಯ ನಾವು ನಮಗೆ ಬೇಕಾದವರನ್ನು, ಪರಿಚಯ ಇರುವವರನ್ನು  ಅರಸುತ್ತೇವೆ. ಸಿಕ್ಕಾಗ ಅವರೊಂದಿಗೆ ಆತ್ಮೀಯತೆಯ ಮಾತನಾಡಿ ಜೊತೆಗೆ ಇರುತ್ತೇವೆ.ಅಂತದ್ದರಲ್ಲಿ ಸಂಗಾತಿ ಎನಿಸಿಕೊಂಡವರು ನಮ್ಮನ್ನು ನಿರ್ಲಕ್ಷಿಸಿದಾಗ, ನಮ್ಮ ಭಾವನೆಗಳಿಗೆ ಬೆಲೆ ಕೊಡದೆ ಹೋದಾಗ, ನಮ್ಮ ಗೈರು ಹಾಜರಿಯಲ್ಲಿ ಖಾಲಿತನವನ್ನು ಅನುಭವಿಸದೆ ಹೋದಾಗ ನಾವು ಇದ್ದೂ ಇಲ್ಲದ ಭಾವ ನಮ್ಮಲ್ಲಿ ಮೂಡುತ್ತದೆ.


ಏರ ಪೋರ್ಟ್ಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ ನಮಗಾಗಿ ಕಾಯುವವರು ಇದ್ದಾರೆ ಎಂಬ ಭಾವವೇ ನಮ್ಮಲ್ಲಿ ಆಪ್ತ ಭಾವವನ್ನು ಮೂಡಿಸುತ್ತದೆ. ಎಷ್ಟೋ ಬಾರಿ ಅವರಿಗೆ ಹಾಗೆ ಬಂದು ಕಾಯುವ ತೊಂದರೆ ತೆಗೆದುಕೊಳ್ಳಬೇಡ ಎಂದು ನಾವು ಹೇಳಿದರೂ ಕೂಡ ಒಳಮನಸ್ಸಿನಲ್ಲಿ ಅವರು ಹಾಗೆ ಬಂದು ನಮಗಾಗಿ ಕಾಯಲಿ ಎಂಬ ಅಪೇಕ್ಷೆ ಖಂಡಿತವಾಗಿಯೂ ಇರುತ್ತದೆ. ಅದೊಂದು ಪ್ರೀತಿಪೂರ್ವಕ ಆಸೆ ಅಷ್ಟೇ. ನಮಗಾಗಿ ಯಾರೋ ಕಾಯುತ್ತಾರೆ ಎಂಬ ಭಾವವೇ ಮನಸ್ಸಿಗೆ ಸಂತೃಪ್ತಿಯನ್ನು ನೀಡುತ್ತದೆ.


ಶಾಲೆ, ಕಾಲೇಜು, ನೌಕರಿ ಎಂದು ಕಾರ್ಯನಿಮಿತ್ತ ಹೊರಗೆ ಹೋಗಿರುವ ಮಕ್ಕಳು ಮನೆಗೆ ಬಂದಾಗ ತಾಯಿಯನ್ನು ಅರಸುವಂತೆ ತನ್ನ ಸಂಗಾತಿಯು ಕೂಡ ತನಗಾಗಿ ಕಾಯಲಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಲಿ ಎಂಬುದು ಎಲ್ಲರ ಆಶಯವಾಗಿರುತ್ತದೆ. ಮನೆಯಲ್ಲಿರುವ ಪುಟ್ಟ ಮಗುವನ್ನು, ನಾಯಿ ಬೆಕ್ಕುಗಳನ್ನು ಮುದ್ದಿಸುವ, ಕಾಳಜಿ ಮಾಡುವ ನಾವುಗಳು ನಮ್ಮ ಸಂಗಾತಿಯನ್ನು ಕಾಳಜಿ ಮಾಡುವಲ್ಲಿ ಸೋತು ಹೋಗುತ್ತೇವೆ.


ಶೇಕಡ ನೂರರಷ್ಟು ಹೆಣ್ಣುಮಕ್ಕಳಿಗೆ ತನ್ನ ಗಂಡನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ, ಆತನ ಹೊಟ್ಟೆ ನೆತ್ತಿಯನ್ನು ನೋಡುವ, ಬಟ್ಟೆ ಬರೆಗಳನ್ನು ಆಯಾ ಸಮಯಕ್ಕೆ ಸರಿಯಾಗಿ ಒದಗಿಸುವ ಮೂಲಕ ತಮ್ಮ ಪ್ರೀತಿಯನ್ನು ಕಾಳಜಿಯನ್ನು ವ್ಯಕ್ತಪಡಿಸುವ ಅವಕಾಶಗಳು ಇವೆ. ಅದೇ ರೀತಿ ಗಂಡಸರು ಕೂಡ ತಮ್ಮ ಪತ್ನಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಮೂಲಕ ಆಕೆಯ ಕಾಳಜಿ ಮಾಡಬಹುದು. ಅದೂ ಬೇಡದೆ ಹೋದರೆ ಮನೆಗೆ ಬರುವಾಗ  ಒಂದು ಮೊಳ ಮಲ್ಲಿಗೆ ಹೂವು ಇಲ್ಲವೇ ಒಂದಷ್ಟು ಸಿಹಿ, ಸಾಯಂಕಾಲ ಚಹಾದ ಜೊತೆಗೆ ಸೇವಿಸಲು ಒಂದಷ್ಟು ಕುರುಕಲು ತಿಂಡಿಗಳನ್ನು ತರಲಿ ಎಂಬ ಗುಪ್ತವಾದ ಆಶಯ ಆಕೆಯಲ್ಲಿ ಇರುವುದು ಸಹಜವೇ ಅಲ್ಲವೇ?


 ಕಚೇರಿಯ ಕೆಲಸದಿಂದ ದಣಿದು ಆತ ಮಾತ್ರ ಬಂದಿರುವುದಿಲ್ಲ.... ಆಕೆ ಕೂಡ ಮನೆಯ ಕೆಲಸದ ಒತ್ತಡ, ಮಕ್ಕಳ ಊಟ ತಿಂಡಿ, ಬಟ್ಟೆ ಬರೆ, ಹೋಂವರ್ಕ್ಗಳ ಜವಾಬ್ದಾರಿ ಹೊತ್ತು ದೈಹಿಕವಾಗಿ ದಣಿದಿರುತ್ತಾಳೆ.... ಆಫೀಸಿನಲ್ಲಿ ತುಂಬಾ ಕೆಲಸವಿತ್ತು ಒಂದರ ಹಿಂದೆ ಒಂದು ಮೀಟಿಂಗ್ಗಳನ್ನು ಅಟೆಂಡ್ ಮಾಡಿದೆ ಊಟಕ್ಕೂ ಪುರಸೊತ್ತಿರಲಿಲ್ಲ ಎಂದು ಆ ದಿನ ತಾನು ಮಾಡಿದ ಕೆಲಸ ಕಾರ್ಯಗಳನ್ನು ಹೇಳುವ ಪತಿ ಮನೆಯಲ್ಲಿ ತನ್ನ ಪತ್ನಿ ತಾನೇನು ಕೆಲಸ ಮಾಡಿದೆ ಎಂಬುದನ್ನು ಹೇಳಲು ಬಂದಾಗ ಅದನ್ನು ಸಾರಾಸಗಟಾಗಿ ತಳ್ಳಿ ಹಾಕಿದರೆ ಅದು ಆಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಅರಿವನ್ನು ಹೊಂದಿರಬೇಕಲ್ಲವೇ?


ಇಲ್ಲಾಗಿದ್ದು ಕೂಡ ಅದೇ? ಮನೆಯಿಂದಲೇ ಕೆಲಸ ಮಾಡುವ ಅನುಕೂಲವನ್ನು ಹೊಂದಿದ ಪತಿ ತಾನು ತನ್ನ ಕೆಲಸದಲ್ಲಿ ಹಾಗೂ ಮಧ್ಯದಲ್ಲಿ  ಕುಳಿತಲ್ಲೇ ಕುಳಿತು ಮೊಬೈಲ್ ನೋಡುತ್ತಾ ತನಗೆ ಬೇಕಾದ ವಸ್ತುಗಳನ್ನು ಪತ್ನಿಯಿಂದ ಕೇಳಿ ಪಡೆಯುತ್ತಾನೆ. ಆದರೆ ತನ್ನಿಂದ ಪತ್ನಿಗೆ ಏನಾದರೂ ಬೇಕೇ ಎಂಬ ಭಾವ ಕೊಂಚವೂ ಆತನನ್ನು ಕಾಡಿಲ್ಲ.


ಮನೆ ಕೆಲಸ, ಉದ್ಯೋಗ ಎರಡನ್ನೂ ಸಂಭಾಳಿಸುತ್ತಾ ಮಕ್ಕಳ ಎಲ್ಲ ಆಗುಹೋಗುಗಳನ್ನು ಗಮನಿಸುವ ಪತ್ನಿಗೆ ಬೇಕಾಗಿರುವುದು ಪತಿಯ ಒಂದು ಮೆಚ್ಚುಗೆಯ ಮಾತು, ಸಂತಸದ ಜೊತೆಗಾರಿಕೆ ಜವಾಬ್ದಾರಿಗಳ ಹಂಚಿಕೊಳ್ಳುವಿಕೆ ಹಾಗೂ ದಿನದ ಕೆಲ ಸಮಯವಾದರೂ ಒಬ್ಬರಿಗೊಬ್ಬರು ಜೊತೆಯಾಗಿ ಕಳೆಯುವ ಬಯಕೆ. ತನಗಾಗಿ ತನ್ನ ಪತಿ ತಾನು ಕೇಳದೆಯೇ ಸಹಾಯ ಮಾಡಲಿ ಎಂಬ ಆಶಯ ಸಹಜವಾಗಿಯೇ ಎಲ್ಲಾ ಹೆಣ್ಣು ಮಕ್ಕಳಂತೆ ಆಕೆಗೂ ಇತ್ತು. ಮಕ್ಕಳು ಹಾಸ್ಟೆಲ್ ಸೇರಿದ ಮೇಲೆ ಕೊಂಚ ವಿರಾಮ ದೊರೆತಿತ್ತಾದರೂ ಜೊತೆಯಾಗಿ ಬಾಳುತ್ತಿದ್ದರೇ ಹೊರತು ಅವರಿಬ್ಬರ ನಡುವೆ ಯಾವ ರೀತಿಯ ಮಾನಸಿಕ ಬಂಧಗಳು ಏರ್ಪಡುವುದು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇತ್ತು.

 

ಆಕೆ ಅದೆಷ್ಟೇ ಪ್ರಯತ್ನಿಸಿದರೂ ಆತ ತನ್ನ ಲ್ಯಾಪ್ಟಾಪ್, ಮೊಬೈಲ್ ಪ್ರಪಂಚದಿಂದ ಹೊರಗೆ ಬರುತ್ತಿರಲಿಲ್ಲ. ಊಟಕ್ಕೆ ಕುಳಿತಾಗಲೂ ಕೂಡ ಮೊಬೈಲ್ ನಲ್ಲಿ ವಿಡಿಯೋಗಳನ್ನು ನೋಡುತ್ತಾ ತನ್ನಷ್ಟಕ್ಕೆ ತಾನು ನಗುತ್ತಿದ್ದ ಆತ ಪಕ್ಕದಲ್ಲಿ ಹೆಂಡತಿ ಕುಳಿತಿದ್ದಾಳೆ ಆಕೆಯೊಂದಿಗೆ ಒಂದೆರಡು ಮಾತನಾಡಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಕಳೆದುಕೊಂಡಿದ್ದ.


ಊಟವಾದ ನಂತರ ಬಾಲ್ಯದ ಸ್ನೇಹಿತರೊಂದಿಗೆ ಫೋನಿನಲ್ಲಿ ಲಘು ಹರಟೆ, ವಿಡಿಯೋ ಕಾಲ್ಗಳಲ್ಲಿ ಕಳೆಯುತ್ತಿದ್ದ. ಭಾನುವಾರಗಳಲ್ಲಿ ಎಲ್ಲಾದರೂ ಹೊರಗೆ ಹೋಗೋಣ ಎಂದು ಆಕೆ ಕೇಳುವ ಮುನ್ನವೇ ಸ್ನೇಹಿತರೊಂದಿಗೆ ಸ್ಥಳ ನಿಗದಿ ಮಾಡಿಕೊಂಡು ಶುಕ್ರವಾರ ರಾತ್ರಿಯೆ ಆತ ಹೊರಟು ಹೋಗುತ್ತಿದ್ದ.


ಆಕೆ ಯಥಾ ಪ್ರಕಾರ ಆ ಎರಡು ದಿನ ಮನೆಯ ಅಳಿದುಳಿದ ಸ್ವಚ್ಛತೆಗಳು ಖಾಲಿಯಾದ ಸಾಮಾನುಗಳನ್ನು ಮಾಲಿನಿಂದ ತಂದು ಡಬ್ಬಗಳನ್ನು ತುಂಬಿಸುವ, ತರಕಾರಿ ಖರೀದಿಸುವ, ತಾಜಾ ಹಣ್ಣುಗಳನ್ನು ಆರಿಸಿ ತರುವ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರಲ್ಲಿ ಆಕೆಯ ವೀಕೆಂಡ್ ಮುಗಿಯುತ್ತಿತ್ತು.


ಅಂತೂ ಇಂತೂ ಎರಡು ಮೂರು ವರ್ಷಗಳ ಕಾಲ ಹೀಗೆಯೇ ನಡೆದು ಅದೊಂದು ದಿನ ತನ್ನ ತಾಯಿಗೆ ಹುಷಾರಿಲ್ಲ ಎಂದು ತವರಿಗೆ ಹೋಗಿ ಒಂದೆರಡು ದಿನ ಇದ್ದು ಮರಳಿ ಬಂದ ಆಕೆ ರೈಲ್ವೇ ಸ್ಟೇಷನ್ ನಿಂದ ಮನೆಗೆ ಮರಳುವ ಹೊತ್ತಿಗೆ ಸುಮಾರು 2 ಗಂಟೆ ಕಳೆದಿತ್ತು. ಮನೆಯ ಬಾಗಿಲು ತೆರೆದು ಒಳಬಂದ ಆಕೆಗೆ ಮನೆಯಲ್ಲಿ ಲ್ಯಾಪ್ಟಾಪ್ ಮುಂದೆ ಕುಳಿತಿದ್ದ ಪತಿ ಈಕೆ ಬಂದದ್ದನ್ನು ನೋಡಿ ಓ! ಈಗ ಬಂದೆಯಾ ಎಂದು ಕೇಳಿ, ಉತ್ತರಕ್ಕೂ ಕಾಯದೆ  ತನ್ನ ಪಾಡಿಗೆ ತಾನು ಮತ್ತೆ ತನ್ನ ಪ್ರಪಂಚದಲ್ಲಿ ಮುಳುಗಿ ಹೋದ.

 

ಊರಿಗೆ ಹೋಗಿದ್ದ ಆಕೆ ತಾಯಿಯ ಅನಾರೋಗ್ಯವನ್ನು ಕಂಡು ದುಗುಡದಿಂದಲೇ ಮರಳಿದ್ದು ಪತಿಯ ಸಾಂತ್ವನವನ್ನು ಬಯಸಿದ್ದಳು.... ಅದಕ್ಕೆ ವ್ಯತಿರಿಕ್ತವಾಗಿ ಪತಿ ತನ್ನ ಇರುವನ್ನೇ ಮರೆತು ತಾನು ಬರುತ್ತಿರುವುದು ಗೊತ್ತಿದ್ದರೂ ಕೂಡ ತನ್ನನ್ನು ಕರೆಯಲು ಕೂಡ ಬಾರದೆ ಮನೆಯಲ್ಲಿಯೇ ಇದ್ದು ತನ್ನದೇ ಪ್ರಪಂಚದಲ್ಲಿ ಮುಳುಗಿ ಹೋಗಿದ್ದನ್ನು ಕಂಡು ಜಿಗುಪ್ಸೆ ಪಟ್ಟುಕೊಂಡಳು.

 

ಒಂದೆರಡು ದಿನ ನಿಧಾನವಾಗಿ ಯೋಚಿಸಿದ ಹಾಗೆ ಅಂತಿಮವಾಗಿ ತನ್ನ ಗಂಡನಿಗೆ ತಾನು ಕೇವಲ ಆತನ ಅವಶ್ಯಕತೆಗಳನ್ನು ಪೂರೈಸುವ ಓರ್ವ ಕೆಲಸಗಾತಿಯಾಗಿ ಮಾತ್ರ ಬೇಕು.... ಸಂಗಾತಿಯಾಗಿ ಅಲ್ಲ. ಇಲ್ಲಿಯವರೆಗೂ ಆತ ಆಕೆಯೊಂದಿಗೆ ಹೃದಯಪೂರ್ವಕವಾಗಿ, ಜೊತೆಯಾಗಿ ಮಾತನಾಡಿದ್ದೇ ಇಲ್ಲ. ಅವರಿಬ್ಬರೂ ಒಂದೇ ಸೂರಿನಡಿ ಜೀವಿಸುತ್ತಿದ್ದಾರೆ ನಿಜ ಆದರೆ ಅವರಿಬ್ಬರ ಆತ್ಮಗಳಿಗೆ ಅಲ್ಲಿ ನೆಲೆ ಇಲ್ಲ, ಆಕೆಯ ಪ್ರೀತಿಗೆ ಬೆಲೆ ಇಲ್ಲ. ಪ್ರೀತಿ ಹಿಂತಿರುಗಿ ನೋಡಲು ಕೂಡ ಸಾಧ್ಯವಿಲ್ಲದ ಏಕಮುಖ ಪ್ರವಾಹ ನಿಜ... ಅಂತೆಯೇ ಆಕೆ ಕೂಡ ಆತನ ಬದುಕಿನಿಂದ ಹೊರಟು ಹೋದಳು. 


ಪ್ರೀತಿ ಕೇವಲ ಪಡೆಯುವುದಲ್ಲ, ಕೊಡುವುದು ಕೂಡ. ಕೊಟ್ಟು ಪಡೆಯಲು ಪ್ರೀತಿಯೇನು ವ್ಯವಹಾರವೇ? ಎಂದು ಪ್ರಾಪಂಚಿಕರು ಹಂಗಿಸಬಹುದು ಚಿಂತೆ ಇಲ್ಲ.... ಎಲ್ಲವನ್ನು ಕೊಟ್ಟು ಏನೂ ಪಡೆಯದೆ ಇರುವುದರ ನೋವು ಗೊತ್ತಿಲ್ಲದ ಲೋಕದ ಜನರ ಹಂಗು ಬೇಕಿಲ್ಲ.

ಪ್ರೀತಿಗೆ ಯಾವುದೇ ರೀತಿಯ ಟರ್ಮ್ಸ್ ಅಂಡ್ ಕಂಡೀಶನ್ಗಳು ಇರುವುದಿಲ್ಲ ಎಂಬುದು ಎಷ್ಟು ನಿಜವೋ ಅಷ್ಟೇ ನಿಜವಾದದ್ದು ಪ್ರೀತಿ ಎಂಬ ಅಗ್ನಿಷ್ಟಿಕೆಯ 

ಬೆಚ್ಚನೆಯ ವಾತಾವರಣ ಬೇಕೆಂದರೆ ನಿರಂತರವಾಗಿ ನಮ್ಮ ಅಹಮಿಕೆಯ ಕಟ್ಟಿಗೆಗಳನ್ನು ಸುಡಬೇಕು.


ಮನೆಯಲ್ಲಿ ದಿನಬಳಕೆಯ ವಸ್ತುಗಳು ಖಾಲಿಯಾದರೆ ಅವುಗಳನ್ನು ಮತ್ತೆ ತಂದು ಪೂರೈಸುವ ಹಾಗೆ ವೈವಾಹಿಕ ಬಂಧನದಲ್ಲಿ ಉಂಟಾಗುವ ನೀರಸತೆ, ಜಡತೆಗಳನ್ನು ಕೊಡವಲು ಪ್ರೀತಿಯ ಸಿಂಚನ ಬೇಕೇ ಬೇಕು. ನೀ ನನಗೆ ಇದ್ದರೆ ನಾನು ನಿನಗೆ ಎಂಬ ಭಾವವನ್ನು ತೊರೆದು.... ನಾವಿಬ್ಬರೂ ಒಬ್ಬರಿಗೊಬ್ಬರು  ಎಂಬ ಭಾವ ಸ್ಫುರಿಸಬೇಕು.


ಜೀವಗಳು ಭಾವಗೀತೆ ಹಾಡಲು ತನು ಒಂದಾದರೆ ಸಾಲದು ಮನ ಕೂಡ ಒಂದಾಗಲೇಬೇಕು.

ಸದಾ ಕೊಟ್ಟು ಪಡೆಯುವ, ಪಡೆದು ಕೊಡುವ, ಹಳತಾದರೂ ಚಿರನೂತನವಾದ ಭಾವದೀಪ್ತಿ ನಿಮ್ಮದಾಗಿರಲಿ, ನಿಮ್ಮ ಬಾಳು ಬೆಳಗಲಿ ಎಂದು ಆಶಿಸುವ 


-ವೀಣಾ ಹೇಮಂತಗೌಡ ಪಾಟೀಲ್ ಮುಂಡರಗಿ ಗದಗ್ 



  ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Advt Slider:
To Top