ಗೀತೆಯೆಂಬ ಜ್ಞಾನಸಾಗರದೊಳಗೊಂದು ಇಣುಕು ನೋಟ: ಭಾಗ-4

Upayuktha
0


 

ಗೀತೆಯ ಹೆಗ್ಗಳಿಕೆಯಾದರೂ ಏನು?

ಭಗವದ್ಗೀತೆಯನ್ನು ಓದಬೇಕೆಂದು ಯಾವ ಪುಸ್ತಕವನ್ನು ತೆಗೆದುಕೊಂಡರೂ ಅದರಲ್ಲಿ ಕಾಣಬರುವುದು, ಪೀಠಿಕೆಯಾಗಿ ಬರುವ ಧ್ಯಾನ ಶ್ಲೋಕಗಳು. ಈ ಶ್ಲೋಕಗಳು ಎಷ್ಟು ಪ್ರಚಲಿತವಾಗಿ, ಗೀತೆಯ ಅವಿಭಾಜ್ಯ ಅಂಗವಾಗಿವೆಯೆಂದರೆ ಅವು ಮಹಾಭಾರತದ ಮೂಲ ಗ್ರಂಥದಲ್ಲಿನ ಭಾಗದಂತೆ ಗೋಚರವಾಗುತ್ತವೆ. ಅವುಗಳ ಪಠಣ ಮಾಡದೆ ಗೀತೆಯನ್ನು ಓದಲಾರಂಭಿಸುವುದು ಸಂಕಲ್ಪ ಮಾಡದ ಪೂಜೆಯಂತೆ ನಿರರ್ಥಕವಾಗುತ್ತದೆ. ಈ ಶ್ಲೋಕಗಳು ಮಹಾಭಾರತದ ಭಾಗವಾಗಿರದೆ ಪ್ರಸಿದ್ಧ ಅದ್ವೈತಿ, ಗೀತಾ ಮಹಾ ಭಾಷ್ಯಕಾರ ಮಧುಸೂದನ ಸರಸ್ವತಿಯವರ ಕೊಡುಗೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರದು.


ಶತಮಾನದ ಅಗ್ರಗಣ್ಯ ವೇದಾಂತಿಯವರು ಶ್ರೀ ಭಗವದ್ಗೀತೆಗೆ ಬರೆದ ಭಾಷ್ಯವೆ 'ಗೂಡಾರ್ಥ ದೀಪಿಕೆ'. ಈ ಶ್ಲೋಕಗಳು ಪ್ರಾರ್ಥನಾ ಪದ್ಯಗಳಾಗಿದ್ದು ಗೀತಾಚಾರ್ಯನಿಗೆ, ವ್ಯಾಸರಿಗೆ, ಗೀತೆಗೆ ಮತ್ತು ಸರಸ್ವತಿ ರೂಪಿ ಮಹಾಭಾರತಕ್ಕೆ ವಂದನೆ ಸಲ್ಲಿಸಿ ಮುಂದುವರಿಯಬೇಕೆಂದು ಹೇಳುತ್ತವೆ. ಗೀತಾ ಪಠಣದಲ್ಲಿ ಅದನ್ನು ಅರ್ಥೈಸುವುದರಲ್ಲಿ ವಿಘ್ನಗಳು ಬರಬಾರದೆಂಬುದೆ ಅವುಗಳ ಆಶಯ. 


ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ 

 ಸ್ವಯಂ 

 ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ 

 ಮಹಾಭಾರತಮ್|

 ಅಸ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಂ 

 ಅಂಬ ತ್ವಾಮನುಸಂದಧಾಮಿ ಭಗವದ್‌ಗೀತೇ 

 ಭವದ್ವೇಷಿಣೀಮ್||


ಸ್ವಯಂ ನಾರಾಯಣನಿಂದಲೆ ಅರ್ಜುನನಿಗೆ ಉಪದೇಶಿಸಲ್ಪಟ್ಟು ಮಹರ್ಷಿ ವೇದವ್ಯಾಸರು ಸುರಿಸುವ ಮಹಾಭಾರತದಲ್ಲಿ ನಿರೂಪಿಸಿರುವ ಅದ್ವೈತ ಸುಧೆಯನ್ನು ಸುರಿಸುವ ಹದಿನೆಂಟು ಅಧ್ಯಾಯಗಳ ಭವವೆಂಬ ಮಿಥ್ಯೆಯ ಶತ್ರುವಾದ ಸರಸ್ವತಿಯೇ ಅಕ್ಷರ ರೂಪಿಯಲ್ಲಿ ಗೀತೆ ಎಂದು ಪ್ರಕಟವಾಗಿರುವ ನಿನಗೆ ನಮನ. ನನ್ನ ಜ್ಞಾನ ದಾಹವನ್ನು ತಣಿಸುವ ಮಾತೆಗೆ ನಮನ. 

 

 ಏಕಂ ಶಾಸ್ತ್ರ ದೇವಕಿಪುತ್ರಗೀತಂ 

 ಏಕೋ ದೇವೋ ದೇವಕೀ ಪುತ್ರ ಏವ |

 ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ 

 ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ||


 ಶ್ರೀಕೃಷ್ಣನ ನಾಮಕ್ಕಿಂತ ಬೇರೆ ನಾಮವಿಲ್ಲ. ಅವನಿಗಿಂತ ಬೇರೆ ದೇವರಿಲ್ಲ. ಭಗವದ್ಗೀತೆಗಿಂತ ಮಿಗಿಲಾದ ಶಾಸ್ತçವಿಲ. ಅವನ ಕೃಪೆಯೊಂದಿದ್ದರೆ- 

 ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ 

 ಗಿರೀಮ್ |

 ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್ ||


ಮೂಕನು ವಾಚಾಳಿಯಾಗುತ್ತಾನೆ. ಹೆಳವನು ಪರ್ವತವನುನ ಏರುತ್ತಾನೆ. 


ಗೀತೆಗೆ ಭಾಷ್ಯ ಬರೆಯುವ ತತ್ತ್ವಜ್ಞಾನಿಗಳ್ಯಾರಿದ್ದಾರೆ. ಗೀತೆಯಲ್ಲಿ ದ್ವೈತವಿದೆಯೇ, ಅದ್ವೈತವಿದೆಯೇ ಅಥವಾ ವಿಶಿಷ್ಟಾದ್ವೈತವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಮಹರ್ಷಿ ಅರವಿಂದರು ಹೇಳುತ್ತಾರೆ:


''ಗೀತೆಯ ವಿಚಾರಧಾರೆ ಶುದ್ಧ ಅದ್ವೈತವಲ್ಲ. ಅದರ ಪ್ರಣಾಳಿಕೆ ಮಾಯವಾದವಲ್ಲ. ಸನಾತನ ಪರಾ ಪ್ರಕೃತಿ ಈಶ್ವರನಲ್ಲಿ ನೆಲೆಸಿದೆಯೆಂದು ಒತ್ತಿ ಹೇಳಿದ್ದರೂ ಅದರ ವಿಚಾರ ವೇದಿಕೆ ವಿಶಿಷ್ಟಾದ್ವೈತವಲ್ಲ. ಪುರುಷ-ಪ್ರಕೃತಿಯರ ವ್ಯವಹಾರವೇ ಪ್ರಕಟಿತ ವಿಶ್ವವೆಂದೂ ವಿವೇಚಿಸಿದ್ದರೂ ಅದರ ವಿಚಾರ ಸಾಂಖ್ಯಕ್ಕೆ ಹೊಂದುವಂತಹುದಲ್ಲ. ಗೀತೆಯು ವಿಶಿಷ್ಟ ಭಿನ್ನ ಪಂಥಗಳ ವಾದ-ವಿವಾದದಲ್ಲಿ ಬಳಸಬಲ್ಲ ಅಸ್ತ್ರವಲ್ಲ. ಅಧ್ಯಾತ್ಮಿಕ ಸತ್ಯ-ಅನುಭೂತಿಗಳ ಅಖಂಡ ವಿಶ್ವವನ್ನು ತೆರೆದು ತೋರುವ ಬಾಗಿಲಾದ ಗೀತೆಯು ಆ ಬ್ರಹ್ಮಾಂಡದಲ್ಲಿರುವ ಎಲ್ಲ ಪ್ರದೇಶಗಳ ದರ್ಶನವನ್ನು ನಮಗೆ ಮೂಡಿಸುತ್ತದೆ. ಅದು ದರ್ಶನದ ನಕ್ಷೆಯನ್ನು ರೂಪಿಸುತ್ತದಲ್ಲದೆ, ನಮ್ಮ ದೃಷ್ಟಿ ಸಂಕುಚಿತವಾಗುವಂತೆ ಗೋಡೆ ಕಟ್ಟುವುದಿಲ್ಲ. ಬೇಲಿ ಹಾಕುವುದಿಲ್ಲ, ಬಿಡಿಯಾಗಿ ತುಂಡು-ತುಣುಕು ಮಾಡುವುದಿಲ್ಲ.''


''ಅಂದಮೇಲೆ, ಗೀತಾಭ್ಯಾಸದಲ್ಲಿ ನಮ್ಮ ನಿಲುವು ಅದರ ವಿಚಾರಧಾರೆಯ ಶಾಸ್ತ್ರೀಯ ಅಥವಾ ಪಾಂಡಿತ್ಯಪೂರ್ಣ ವಿಶ್ಲೇಷಣೆಯಾಗಬೇಕಿಲ್ಲ. ತತ್ವಶಾಸ್ತ್ರೀಯ ತರ್ಕ-ವಿತರ್ಕಗಳ ಇತಿಹಾಸದಲ್ಲಿ ಅದರ ಸ್ಥಾನವನ್ನು ನಿರ್ಣಯಿಸುವುದೂ ಅಲ್ಲ. ಇಲ್ಲವೆ 'ವಿಶ್ಲೇಷಣಾತ್ಮಕ' ತಾರ್ಕಿಕ ರೀತಿಯಲ್ಲಿ ಅದರ ವಿಚಾರಧಾರೆಯ ಪೃಥಕ್ಕರಣವನ್ನೂ ನಾವು ಮಾಡುವುದಿಲ್ಲ. ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ಒದಗಬಲ್ಲ ಸಹಾಯ ಬೆಳಕಿಗಾಗಿ ನಮ್ಮ ಗೀತಾನು ಸಂಧಾನ.''


ಗೀತೆಯ ಮಹಾತ್ಮೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಆಸಕ್ತಿಯಿಂದ, ನಿರ್ಲಿಪ್ತ ಮನೋಭಾವದಿಂದ ಓದಬೇಕು. ಅದು ಯಾವುದೇ ಪ್ರಾಂತಕ್ಕೆ, ಪಂಗಡಕ್ಕೆ, ಜನಾಂಗಕ್ಕೆ, ಭಾಷೆಗೆ, ಧರ್ಮಕ್ಕೆ, ಮತಕ್ಕೆ ಸೇರಿದ ಗ್ರಂಥವಲ್ಲ. ಒಂದು ತತ್ವದ ಪ್ರತಿಪಾದನೆಗಾಗಿಯಾಗಿಲಿ, ಒಂದು ಧರ್ಮದ ಹಿರಿಮೆಗಾಗಿಯಾಗಲಿ, ಒಂದು ದೇಶದ ಅಥವಾ ಜನಾಂಗದ ಒಳಿತಿಗಾಗಿಯಾಗಿ ಹೇಳಿದ ಅಥವಾ ವ್ಯಾಸರು ಮಹಾಭಾರತದಲ್ಲಿ ಬರೆದ ಪುಸ್ತಿಕೆ ಅದಲ್ಲ. ಸಂದಿಗ್ಧ ಸ್ಥಿತಿ-ಎಲ್ಲ ಮಾನವರ ಸಹಜ ಅನುಭವ. ಆ ಸ್ಥಿತಿ ಬದುಕಿನ ಯಾವುದೇ ಸಂದರ್ಭದಲ್ಲಾಗಲಿ, ವಯಸ್ಸಿನಲ್ಲಾಗಲಿ ಬರಬಹುದು. ಯಶಸ್ಸಿನ ಉನ್ನತ ಸಂದರ್ಭದಲ್ಲಿ ಖಿನ್ನತೆ ಬಂದ ಉದಾಹರಣೆಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಹಾಗೆಯೇ ಬದುಕಿನ ಅನೇಕ ಘಟ್ಟಗಳಲ್ಲಿ ದ್ವಂದ್ವ ಉಂಟಾಗಿ 'ಸರಿ ಯಾವುದು, ತಪ್ಪು ಯಾವುದು' ಎಂಬ ಪೀಕಲಾಟ ಶುರುವಾಗಿ ಧರ್ಮದ ಹಾದಿ ಗೋಚರಿಸದೆ ಅಂಧಕಾರ ಕವಿಯುತ್ತದೆ. ಆಗ ನೆರವಿಗೆ ಬರುವುದು, ಗೀತೆಯ ಮಹಾ ಸಂದೇಶ- 'ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಈ ದೀಪ'-ಎಂಬ ಕವಿವಾಣಿ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Advt Slider:
To Top