ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿಯ ಅಧಿಕಾರಿಗಳ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧಿಯಾ, ಕರ್ನಾಟಕ ಘಟಕವು ಹಲವು ವರ್ಷಗಳಿಂದ ಮಾಡುತ್ತಿರುವ ನಿಸ್ವಾರ್ಥ ಸೇವೆಗೆ ಅಗತ್ಯ ಬೆಂಬಲ ಹಾಗೂ ಮೆಚ್ಚುಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈ ರೀತಿಯ ನಿರ್ಲಕ್ಷ್ಯದ ನಡುವೆ ನಾನು ನನ್ನ ಸೇವೆಯನ್ನು ಹೇಗೆ ಮುಂದುವರಿಸಲಿ ಅಥವಾ ನನ್ನ ಸಹೋದ್ಯೋಗಿಗಳನ್ನು ಹೇಗೆ ಪ್ರೇರೇಪಿಸಲಿ ಎಂಬುದು ನನ್ನನ್ನು ಪ್ರಶ್ನೆಯಾಗಿ ಕಾಡುತ್ತಿದೆ ಎಂದರು.
ಅವರು ಭಾನುವಾರ ಮೂಡಬಿದಿರೆಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕನ್ನಡಭವನದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಷ್ಟ್ರೀಯ ಪ್ರಧಾನ ಕಚೇರಿ, ಕರ್ನಾಟಕ ರಾಜ್ಯ ಘಟಕ, ದಕ್ಷಿಣ ಕನ್ನಡ ಘಟಕ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ರಾಷ್ಟ್ರ ಮಟ್ಟದ ‘ಮೆಸೆಂಜರ್ ಆಫ್ ಪೀಸ್ ಸ್ಟಾರ್ ಅವಾರ್ಡ್ 2023’ ಹಾಗೂ ರಾಷ್ಟ್ರಪತಿ ಪುರಸ್ಕಾರ -2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅಮೂಲ್ಯ ಸೇವೆ
ರಾಜ್ಯ ಘಟಕದ ಪ್ರಮುಖ ಸಾಧನೆಗಳನ್ನು ವಿವರಿಸಿದ ಅವರು, ಮೂಡಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದಲ್ಲಿ ನಡೆದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ 90 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾದ ಸನ್ನಿವೇಶವನ್ನು ನೆನಪಿಸಿಕೊಂಡರು.
ಕೋವಿಡ್-19 ಸಮಯದಲ್ಲಿ ಕರ್ನಾಟಕ ಘಟಕವು ಒಂದು ಕೋಟಿ ಮಾಸ್ಕ್ ಗಳನ್ನು ವಿತರಿಸಿತ್ತು. ಅಲ್ಲದೆ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಮಲೆ ಮಹದೇಶ್ವರ, ಹಾಸನಾಂಬಾ, ಸಿದ್ಧೇಶ್ವರ ಸ್ವಾಮಿ ಜಾತ್ರೆ ಹಾಗೂ ಉಡುಪಿ ಪರ್ಯಾಯದ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದನ್ನು ಉಲ್ಲೇಖಿಸಿದರು. ಡಾ. ಎಂಮೋಹನ್‌ರ ಮುಂದಾಳತ್ವದಲ್ಲಿ ಮೂಡುಬಿದಿರೆ ಹಾಗೂ ಗುರುಪುರದಂತಹ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಸುಸಜ್ಜಿತ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಭವನ ಮೂಡಿಬಂದಿದೆ. ಇಂತಹ ಅತ್ಯಮೂಲ್ಯ ಕೊಡುಗೆಗಳಿದ್ದರೂ, ರಾಷ್ಟ್ರೀಯ ಕಚೇರಿಯಿಂದ ಯಾವುದೇ ಪ್ರಶಂಸೆ ದೊರಕುತ್ತಿಲ್ಲ. ಇಂತಹ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಉತ್ಸಾಹ ಕುಂಠಿತವಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯಕ್ಕೆ ಹೆಚ್ಚು ನಷ್ಟ
ರಾಷ್ಟ್ರಪತಿ ಪ್ರಶಸ್ತಿ ಪರೀಕ್ಷೆ ಕಳೆದ ಕೆಲವು ವರ್ಷಗಳಿಂದ ನಡೆಯದಿರುವುದನ್ನು ಅವರು ಖಂಡಿಸಿದರು. ಈ ಪ್ರಶಸ್ತಿ ವಿಶೇಷವಾಗಿ ವೃತ್ತಿಪರ ಕೋರ್ಸಗಳಾದ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿತ್ತು. ಇದರಿಂದಾಗಿ ಕರ್ನಾಟಕ ರಾಜ್ಯಕ್ಕೆ ಹೆಚ್ಚು ನಷ್ಟವಾಗಿದೆ ಎಂದರು.
ಸನಾತನ ಧರ್ಮದ ಸಾರವೇ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಸಿದ್ಧಾಂತ
ಸ್ಕೌಟಿಂಗ್‌ಗಿಂತ ಉತ್ತಮ ಸಿದ್ಧಾಂತ ಮತ್ತೊಂದಿಲ್ಲ. ಯುವಜನತೆ ಈ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ವೇದ, ಪುರಾಣ ಮತ್ತು ಸನಾತನ ಧರ್ಮದ ಸಾರವೇ ಸ್ಕೌಟ್ಸ್ ಮತ್ತು ಗೈಡ್ಸ್ ನ ಸೇವಾ ಸಿದ್ಧಾಂತ ಎಂದರು.
ಅಂತರರಾಷ್ಟ್ರೀಯ ಆಯುಕ್ತ (ಸ್ಕೌಟ್ಸ್) ಮಧುಸೂಧನ ಅವಲ ಮಾತನಾಡಿ, ಸ್ಕೌಟ್ ಹಾಗೂ ಗೈಡ್ ನಾಯಕನಾದವನು ಯಾವುದನ್ನಾದರೂ ಸಾಧಿಸಬಹುದು, ಆದರೆ ಎಲ್ಲರೂ ಸ್ಕೌಟ್ ಹಾಗೂ ಗೈಡ್ ನಾಯಕನಾಗಲೂ ಸಾಧ್ಯವಿಲ್ಲ. ಸ್ಕೌಟಿಂಗ್ ಮತ್ತು ಗೈಡಿಂಗ್ ಸಮುದ್ರದ ತೀರದಂದೆ — ಅದು ಒಳ್ಳೆಯದಾಗಲಿ ಕೆಟ್ಟದಾಗಲಿ ಎಲ್ಲವನ್ನೂ ಸ್ಪರ್ಶಿಸುತ್ತದೆ. ಅನುಭವವೇ ನಮ್ಮ ಶಿಕ್ಷಕ. ಸ್ಕೌಟ್ಸ್ ಹಾಗೂ ಗೈಡ್ಸ್ ವಿನಮ್ರತೆ, ಪ್ರಾಮಾಣಿಕತೆ, ನಿಷ್ಠೆ ಮತ್ತು ವಿಶ್ವಾಸಾರ್ಹತೆಯ ಗುಣಗಳಿಂದ ವಿಶಿಷ್ಟತೆಯನ್ನು ಪಡೆಯಲು ಸಾಧ್ಯ ಎಂದರು.
ಅರಮನೆ ಕಟ್ಟುವ ಹುಮ್ಮಸ್ಸಿನಲ್ಲಿ ತೊಡಗಿದ್ದೇವೆ
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನವದೆಹಲಿಯ ಮಾಜಿ ನಿರ್ದೇಶಕ ಕೃಷ್ಣಸ್ವಾಮಿ ಮಾತನಾಡಿ ನಮ್ಮ ಅಗತ್ಯ 200 ಗ್ರಾಂ ಅಟ್ಟಾ(ಆಹಾರ) ಇದ್ದರೂ ನಾವು ಅರಮನೆ ಕಟ್ಟುವ ಹುಮ್ಮಸ್ಸಿನಲ್ಲಿ ತೊಡಗಿದ್ದೇವೆ. ಇದರಿಂದ ಪ್ರಯೋಜನವಿಲ್ಲ. ಶಾಂತಿ ಸಂಪತ್ತಿನಿಂದಲ್ಲ, ಮೌಲ್ಯ ಹಾಗೂ ಸೇವೆಯಿಂದ ನಿರ್ಮಾಣವಾಗುತ್ತದೆ ಎಂದರು.
ಪ್ರಶಸ್ತಿ ಪ್ರದಾನ
ದೇಶದಾದ್ಯಂತ ರಾಷ್ಟ್ರಪತಿ ಪ್ರಶಸ್ತಿಗೆ (2016) ಆಯ್ಕೆಯಾದ 48 ಜನರಲ್ಲಿ 30 ಮಂದಿ ಹಾಗೂ ಮೆಸೆಂಜರ್ ಆಫ್ ಪೀಸ್ ಸ್ಟಾರ್ ಪ್ರಶಸ್ತಿಗೆ (2023) ಆಯ್ಕೆಯಾದ 48 ಜನರಲ್ಲಿ 21 ಜನರು ಈ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರಭಾಕರ ಭಟ್, ಅನಲೆಂದ್ರ ಶರ್ಮಾ, ಶ್ರೀನಿವಾಸ್ ಕಿಣಿ, ಪ್ರಥಿಮ್ ಕುಮಾರ್, ವಿಮಲಾ ರಂಗಯ್ಯ, ಫೆಲ್ಸಿ ಫೆರ್ನಾಂಡಿಸ್, ಮೋಹಿನಿ ರಾಮಚಂದ್ರನ್, ಸುಫಲಾ, ಭರತ್‌ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರೋವರ್ ಲೀಡರ್ ಅಭಿನೇಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.png)
