ಮೈಸೂರು: ಗೀತಾಭಾಷ್ಯ ಜ್ಞಾನಸತ್ರ ಸಪ್ತಾಹಕ್ಕೆ ವಿಧ್ಯುಕ್ತ ಚಾಲನೆ

Upayuktha
0


ಮೈಸೂರು: ಭಗವದ್ ಗೀತೆಯ ಸಂದೇಶವನ್ನು ಪಾಲಿಸಿದರೆ ಮಾತ್ರ ಸನಾತನ ಧರ್ಮ ಮತ್ತು ಸಂಸ್ಕೃತಿ ಉಳಿಯುತ್ತದೆ ಎಂದು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ, ಮಹಾ ಮಹೋಪಾಧ್ಯಾಯ ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ನುಡಿದರು.


ನಗರದ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಜ್ಞಾನಸತ್ರ ‘ಗೀತಾಭಾಷ್ಯ ಒಂದು ವಿಶೇಷ ಚಿಂತನ’ ಸಪ್ತಾಹ ಕಾರ್ಯಕ್ರಮಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ನೀಡಿ ಉಪನ್ಯಾಸ ನೀಡಿದರು.


ಆಧುನಿಕ ಕಾಲಘಟ್ಟದಲ್ಲಿ ಹಲವಾರು ತಾಂತ್ರಿಕ, ವೈಜ್ಞಾನಿಕ ಮತ್ತು ಆರ್ಥಿಕ ವಿಕಾಸವನ್ನು ನಾವು ಕಾಣುತ್ತಿದ್ದೇವೆ. ದೇಶದ ಉದ್ದಗಲಕ್ಕೂ ನಡೆಯುತ್ತಿರುವ ನೂರೆಂಟು ಸಂಶೋಧನೆಗಳು ಪ್ರಗತಿ ಸೂಚಕವಾಗಿವೆ. ಐ ಟಿ ಪಾರ್ಕು, ಏರ್ ಪೋರ್ಟ್‌ಗಳು, ಐಐಟಿ, ಐಐಎಂ, ಮತ್ತು ಆರ್ಥಿಕ ಸಂಸ್ಥೆಗಳು ಸಮೃದ್ಧವಾಗಿ ಬೆಳೆಯುತ್ತಿವೆ. ಈ ನಡುವೆ ಮಾನವನು ಒಂದು ಯಂತ್ರವಾಗಿಬಿಟ್ಟಿದ್ದಾನೆ ಎಂದು ಅವರು ವಿಷಾದಿಸಿದರು. ಆಧುನಿಕತೆ ಹೆಚ್ಚಾದಂತೆಲ್ಲ ಮಾನವೀಯತೆ ಕಡಿಮೆಯಾಗುತ್ತಿದೆ. ಪ್ರೀತಿ, ವಿಶ್ವಾಸ, ಅಭಿಮಾನ, ಪರೋಪಕಾರ, ದೀನರ ಸೇವೆ ಗುರುಗಳ ಮೇಲಿನ ಭಕ್ತಿ, ತಂದೆ- ತಾಯಿ ಮೇಲಿನ ವಾತ್ಸಲ್ಯ ಕ್ಷೀಣವಾಗುತ್ತಿದೆ. ನಾವು ಧರ್ಮ ಮತ್ತು ಅಧ್ಯಾತ್ಮದ ಅರಿವುಗಳಿಂದ ದೂರ ಇರುವುದೇ ಇದಕ್ಕೆ ಕಾರಣ. ಈ ಸಂದರ್ಭದಲ್ಲಿ ಕೃಷ್ಣನು ಬೋಧಿಸಿದ ಗೀತೆಯು ಲೋಕಕ್ಕೆ ಮಾರ್ಗದರ್ಶಿ ಆಗಬೇಕು ಎಂದು ಎಂದು ಡಾ. ವಿದ್ಯಾಸಿಂಹಾಚಾರ್ಯ ಆಶಿಸಿದರು.


ಸಂಬಂಧಗಳು ಗಟ್ಟಿಯಾಗಲಿ:

ಮಾನವ ಇಂದು ಬೇರೆ ಬೇರೆ ಗ್ರಹಗಳಿಗೆ ಹೋಗುತ್ತಿದ್ದಾನೆ. ಆಕಾಶದಲ್ಲೇ ಮನೆ ನಿರ್ಮಿಸುವ ತಂತ್ರಜ್ಞಾನ ಕೆಲವೇ ದಿನದಲ್ಲಿ ಬರಲಿದೆ. ಆದರೆ ಇದೇ ಸಂದರ್ಭ ಭಯೋತ್ಪಾದನೆ, ಹಿಂಸೆ, ಅತ್ಯಾಚಾರ, ಅಕ್ರಮ ಸಂಬಂಧದ ಸಂಖ್ಯೆ ಮಿತಿ ಮೀರುತ್ತಿದೆ. ದೊಡ್ಡ ಕುಟುಂಬದಲ್ಲಿ ದೊಡ್ಡ ಬಿರುಕು ಬಂದಿದೆ. ಪತಿ-ಪತ್ನಿಯ ಸಂಬಂಧವೇ ಪಾವಿತ್ರತೆ ಕಳೆದುಕೊಳ್ಳುತ್ತಿದೆ. ಇಂತಹ ಅನರ್ಥಗಳನ್ನು ತಡೆಯಲು ನಮಗೆ ಒಂದು ಬಲವಾದ ನೀತಿ ಬೇಕು. ಅದು ದೊರಕುವುದು ಕೇವಲ ಸನಾತನ ಧರ್ಮದ ಸಂದೇಶದಿಂದ ಮಾತ್ರ. ಅದಕ್ಕಾಗಿ ಜ್ಞಾನ ಸತ್ರಗಳು ಹೆಚ್ಚಾಗಬೇಕು ಎಂದು ಡಾ. ವಿದ್ಯಾಸಿಂಹಾಚಾರ್ಯ ಪ್ರತಿಪಾದಿಸಿದರು.


ಧರ್ಮ ಮತ್ತು ಅಧ್ಯಾತ್ಮ ನಮ್ಮ ಬದುಕನ್ನು ರೂಪಿಸಬಲ್ಲ ಬಹುದೊಡ್ಡ ಶಕ್ತಿಗಳು. ವಿಜ್ಞಾನ ಬೆಳೆದಂತೆ ಅಧ್ಯಾತ್ಮ ಜ್ಞಾನವೂ ವಿಸ್ತಾರಗೊಳ್ಳಬೇಕು. ಈ ದಿಸೆಯಲ್ಲಿ ನಮ್ಮ ವೇದ ಮತ್ತು ಶಾಸ್ತ್ರಗಳು ಜೀವನ ವಿಕಾಸಕ್ಕೆ ಪೂರಕವಾಗಬೇಕು ಎಂದರು. ಪಂಡಿತರಾದ ಬಾದರಾಯಣಾಚಾರ್ಯ, ವ್ಯಾಸತೀರ್ಥಾಚಾರ್ಯ, ಹೇಮಂತ ಆಚಾರ್ಯ ಗುಡಿ, ಆದ್ಯ ಗೋವಿಂದಾಚಾರ್ಯ, ಭಾವಬೋಧ ಆಚಾರ್ಯ ಇತರರು ಇದ್ದರು.


ನಿತ್ಯ ಪ್ರವಚನ:

ನವೆಂಬರ್ 1ರ ವರೆಗೆ ನಿತ್ಯವೂ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ಬೆಳಗ್ಗೆ 7.30ರಿಂದ 9 ರ ವರೆಗೆ ‘ಗೀತಾಭಾಷ್ಯ’ -ಚಿಂತನ, ಸಂಜೆ 6ಕ್ಕೆ ಅಗ್ರಹಾರದ ಉತ್ತರಾದಿ ಮಠದಲ್ಲಿ ಶ್ರೀಮದ್ ಭಾಗವತ’- ಒಂದು ವಿಶಿಷ್ಟ ದೃಷ್ಟಿ- ಕುರಿತು ವಿದ್ಯಾಸಿಂಹಾಚಾರ್ಯರ ವಿಶೇಷ ಪ್ರವಚನ ನಡೆಯಲಿದ್ದು, ಆಸಕ್ತರು ಭಾಗವಹಿಸಲು ಆಯೋಜಕರು ಕೋರಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top