ಇಂದು ನನ್ನ ಬಳಿ ಒಬ್ಬಳು ಹೆಂಗಸು ಗರ್ಭಿಣಿ ಪರೀಕ್ಷೆಗೆ ಬಂದಳು, ಮದುವೆ ಆಗಿ ನಾಕು ತಿಂಗಳು, ಎರಡು ತಿಂಗಳು ಗರ್ಭಿಣಿ ಎಂದಳು. ನಾನು ಅವಳ ಎಲ್ಲಾ ಮಾಹಿತಿ ತಿಳಿದುಕೊಂಡು ನನ್ನ ಒಪಿಡಿ ಕಾಗದದ ಮೇಲೆ ಬರೆದು ಅವಳನ್ನು ಪರೀಕ್ಷೆಗೆ ಮಲಗಿಸಿದೆ.
ಪರೀಕ್ಷೆ ಮಾಡಲು ಹೊಟ್ಟೆ ಸುಮಾರು 8 ತಿಂಗಳ ಗರ್ಭಿಣಿಯಷ್ಟು ದೊಡ್ಡದಿತ್ತು, ನಮ್ಮಲ್ಲಿ ಬಹಳಷ್ಟು ಮಹಿಳೆಯರು ಮದುವೆಗೆ ಮುಂಚೆ ಗರ್ಭಧರಿಸಿ ನಂತರ ಮದುವೆ ಮಾಡಿಕೊಂಡು ಪರೀಕ್ಷೆಗೆ ಬರುತ್ತಾರೆ. ಹಾಗಾಗಿ ಆಶ್ಚರ್ಯ ಎನಿಸಲಿಲ್ಲ. ನಾನು ಹಾಗೇ ಯೋಚಿಸಿ ಮತ್ತೊಮ್ಮೆ ಅವಳನ್ನು ಪ್ರಶ್ನಿಸಿದೆ. ಅವಳು ಇಲ್ಲ ಹಾಗೇನಿಲ್ಲ ಎಂದು ಖಡಾಖಂಡಿತವಾಗಿ ನನ್ನ ಅನುಮಾನ ತಿರಸ್ಕರಿಸಿದಳು. ನಾನು ಮತ್ತೆ ಮುಟ್ಟಿ ಪರೀಕ್ಷಿಸಿದೆ, ಹೊಟ್ಟೆ ದೊಡ್ಡದು, ಆದರೆ ಮಗು ಇದ್ದ ಗರ್ಭಿಣಿ ಹೊಟ್ಟೆ ರೀತಿ ಅನಿಸದೆ ಏನೋ ಗೆಡ್ಡೆ ಎಂಬ ಭಾವ, ನಾನು ಮತ್ತೆ ಮತ್ತೆ ಪರಿಶೀಲಿಸಿ ಮಗು ಹೃದಯ ಬಡಿತ ಸಿಗಬಹುದಾ ಎಲ್ಲಾ ನೋಡಿ ಅವಳನ್ನು ಪ್ರಶ್ನಿಸುತ್ತಾ ತಲೆಕೆಡಿಸಿಕೊಂಡು ಏನಿರಬಹುದು ಪರಿಶೀಲಿಸಿದೆ. ಅದು ಮಗು ಎನಿಸಲಿಲ್ಲ, ಗೆಡ್ಡೆ ಎನಿಸಿತು, ಆದರೆ ಈ ವಯಸ್ಸಿಗೆ ಇಷ್ಟು ದೊಡ್ಡ ಗೆಡ್ಡೆ, ಹೊಟ್ಟೆಯಲ್ಲಿ ಇಷ್ಟು ಗೆಡ್ಡೆ ಇದ್ದರೂ ಇತ್ತೀಚಿಗೆ ಮದುವೆ ಗರ್ಭಧಾರಣೆ ತಲೆಯಲ್ಲಿ ಸಾವಿರ ಪ್ರಶ್ನೆಗಳು, ಆದರೆ ಅದು ಮಗುವಂತೂ ಅಲ್ಲ, ಗೆಡ್ಡೆ ಇದೆ ಬಹುಶಃ (fibroid) ಗರ್ಭಕೋಶದ ಗೆಡ್ಡೆ ಎಂದು ಎಣಿಸಿ ಯಾವುದಕ್ಕೂ ಒಂದು ಸ್ಕ್ಯಾನ್ ಮಾಡಿಸಿ ಆ ಗೆಡ್ಡೆ ಏನು ತಿಳಿದ ಮೇಲೆ ಗರ್ಭಿಣಿ ಪರೀಕ್ಷೆ ಮುಂದುವರಿಸೋಣ ಎಂದು ಸ್ಕ್ಯಾನಿಂಗ್‌ಗೆ ಬರೆದು ಕೊಟ್ಟೆ.
ಒಂದು ಇಪ್ಪತ್ತು ನಿಮಿಷ ನಂತರ ಗಂಡ ಹೆಂಡತಿ ನನ್ನ ಬಳಿ ಮತ್ತೆ ಬಂದರು. ಇಂದು ನಮ್ಮ ಆಸ್ಪತ್ರೆ ಎದುರು ಸ್ಕ್ಯಾನಿಂಗ್ ಸೆಂಟರ್ ಬಂದ್ ಇತ್ತು. ಬೆಳಿಗ್ಗೆ ಇಂದ ರೋಗಿಗಳು ಆ ವಿಷಯ ಹೇಳುತ್ತಲೇ ಇದ್ದರು, ಇವರು ಮೇಡಂ, ಸ್ಕ್ಯಾನಿಂಗ್ ತೆಗೆದಿಲ್ಲ, ನಾವು ಮೊನ್ನೆ ಕೆ ವಿ ಜೆ ಮೆಡಿಕಲ್ ಕಾಲೇಜ್ ನಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದೆವು, ಅದು ನಡೆಯುತ್ತಾ ಎಂದರು. ನಾನು ಖಂಡಿತಾ, ಕೊಡಿ ಎಂದು ನೋಡಿದರೆ ಅಲ್ಲಿ ಆಶ್ಚರ್ಯ, ಅವರು ಎರಡು ದಿನದ ಮುಂಚೆ ಅಲ್ಲಿ ಪರೀಕ್ಷೆಗೆ ಹೋಗಿದ್ದಾರೆ, fibroid ಗೆಡ್ಡೆ ಇರುವುದು, ಖಾತರಿ ಆಗಿದೆ. ಅಲ್ಲಿನ ವೈದ್ಯರು ಚಿತ್ರ ಸಮೇತ ಅವರ ಸಮಸ್ಯೆ ಕಾಗದದ ಮೇಲೆ ಬಿಡಿಸಿ ಇವರಿಗೆ ತಿಳಿಸಿ ಚಿಕಿತ್ಸೆ ಆಯ್ಕೆಗಳನ್ನು ಹೇಳಿದ್ದಾರೆ. ಇವರು ಅವರು ಹೇಳಿದ್ದು ಸರಿಯೋ ತಪ್ಪೋ ಇನ್ನೊಮ್ಮೆ ನನ್ನಲ್ಲಿ ಪರೀಕ್ಷಿಸಲು ಬಂದಿದ್ದಾರೆ. ಇಬ್ಬರು ವೈದ್ಯರ ಸಲಹೆ ಕೇಳುವುದು ತಪ್ಪಲ್ಲ ಆದರೆ ಗೆಡ್ಡೆ ಇರುವ ವಿಚಾರವೇ ಗೊತ್ತಿಲ್ಲದಂತೆ ಮೊದಲ ಬಾರಿ ನಾನು ಅದನ್ನು ಅವರಿಗೆ ತಿಳಿಸಿದಂತೆ ವರ್ತನೆ ಮಾಡಿ ನಾಟಕ ಮಾಡಿಕೊಂಡು ನನ್ನ ಅಭಿಪ್ರಾಯ ಕೇಳುತ್ತಿರುವುದು ನನಗೆ ವೈದ್ಯ ರೋಗಿ ಸಂಬಂಧ ಹಾಗೂ ನಂಬಿಕೆಯನ್ನು ಪ್ರಶ್ನೆಗೀಡು ಮಾಡಿತು. ಮೇಡಂ , ಅವರು ಹೇಳಿದ್ದರು, ನಿಮ್ಮಲ್ಲಿ ಒಮ್ಮೆ ಚೆಕ್ ಮಾಡೋಕೆ ಬಂದೆವು ಅಂದರು.
ನನಗೆ ಕೋಪ ನೆತ್ತಿಗೇರಿತು. ಸರಿ, ಹಳೇ ರಿಪೋರ್ಟ್ ವಿಷಯ ಮುಚ್ಚಿಟ್ಟು ಚೆಕ್ ಮಾಡುವುದು ಏನನ್ನ? ನನ್ನ ಸಾಮರ್ಥ್ಯವನ್ನ? ಹಳೆಯ ವೈದ್ಯರ ನಿರ್ಣಯವನ್ನು? ಹೀಗೆ ರಿಪೋರ್ಟ್ ಇದೆ, ನಿಮ್ಮ ಸಲಹೆ ಏನು ಎಂದು ಕೇಳಿದ್ದರೆ ಅದಕ್ಕೊಂದು ಅರ್ಥ ಇರುತ್ತದೆ, ಆದರೆ ಹೊಸ ರೋಗಿಯಂತೆ ವರ್ತಿಸಿ ಇನ್ನೊಬ್ಬ ವೈದ್ಯರ ಅಭಿಪ್ರಾಯ ಪ್ರಶ್ನೆ ಮಾಡುವುದು ನಮ್ಮ ವೃತ್ತಿಗೆ ಅವರು ಮಾಡಿದ ಅವಮಾನವೇ ಸರಿ.
ಬಹುಶಃ ಈ ರೀತಿ ಬಹಳ ಘಟನೆ ನಮ್ಮ ಎಲ್ಲಾ ಸಹೋದ್ಯೋಗಿಗಳ ಅನುಭವಕ್ಕೂ ಬಂದಿರುತ್ತದೆ. ಊರು ತುಂಬ ಡಾಕ್ಟರ್ ಆಗಿದ್ದಾರೆ, ಒಂದು ಖಾಯಿಲೆಗೆ ಹತ್ತು ಜನರ ಬಳಿ ಹೋಗುವ ಈ ರೋಗಿಗಳು ಒಬ್ಬರನ್ನು ಎಂದಿಗೂ ನಂಬಲ್ಲ, ಎಲ್ಲದಕ್ಕೂ ಸೆಕೆಂಡ್ ಒಪೀನಿಯನ್, ದಿನಕ್ಕೆ ಹತ್ತು ಮೆಸೇಜ್ ಗಳು ಬೇರೆ ವೈದ್ಯರ ಚೀಟಿ ನಾವು ಸರಿ ತಪ್ಪು ನೋಡಿ ಹೇಳಿ ಖಾತರಿ ಮಾಡಲಿ ಎಂದು ನಮ್ಮ ಬಂಧು ಬಳಗ ಸ್ನೇಹಿತ ವರ್ಗವೂ ನಮ್ಮನ್ನು ಸಂಪರ್ಕಿಸುವುದು ನಮ್ಮ ದಿನಚರಿಯ ಭಾಗ. ಗೂಗಲ್ ಚಾಟ್ ಜಿ ಪಿ ಟಿ ಇನ್ನೊಂದು ಸೆಕೆಂಡ್ ಒಪೀನಿಯನ್ ತಂತ್ರ. ವೈದ್ಯರಲ್ಲಿ ದೇವರ ಕಾಣುತ್ತಿದ್ದ ಜನ ವೈದ್ಯರನ್ನು ಒರೆಗೆ ಹಚ್ಚಿ ಅನುಮಾನಿಸಿ ಅನುಮಾನಿಸುತ್ತಿರುವುದು, ಈ ರೋಗಿ ವೈದ್ಯ ಬಾಂಧವ್ಯದ ಕೊಂಡಿಯನ್ನು ಕಳಚುತ್ತಿರುವುದು ವಿಪರ್ಯಾಸ.
ನನ್ನ ಪ್ರಕಾರ ರೋಗಿ ವೈದ್ಯ ತಾಯಿ ಮಕ್ಕಳ ಸಂಬಂಧವಾಗಿರಬೇಕು, ಹೇಗೆ ಮಕ್ಕಳು ತಾಯಿಯನ್ನು ಅನುಮಾನಿಸುವುದಿಲ್ಲವೋ ಹಾಗೆ..ಹಾಗೆಯೇ ವೈದ್ಯರು ಸಹ ಇರಬೇಕು. ಹೇಗೆ ತಾಯಿ ಮಕ್ಕಳಿಗೆ ಕೆಡುಕು ಮಾಡುವುದಿಲ್ಲವೋ ಹಾಗೆ ಅವರ ರಕ್ಷೆ ಇವರ ಕರ್ತವ್ಯ ಎಂಬಂತೆ ಸಾಗಬೇಕು. ಆಗ ಈ ಮೆಡಿಕೋ ಲೀಗಲ್ ಅಲಿಗೇಷನ್ ಹಾವಳಿ ಮುಚ್ಚಿ ಮತ್ತೆ ವೈದ್ಯ ರೋಗಿಯ ಬೆಸುಗೆ ಗಟ್ಟಿಯಾಗುತ್ತದೆ. ವೈದ್ಯರು ರೋಗಿಗಳಿಗೆ ವ್ಯಾಪಾರ ಅಸ್ತ್ರವಾಗದೆ ವೈದ್ಯರಾಗಿ ಉಳಿಯುತ್ತಾರೆ.
- ಡಾ ಶಾಲಿನಿ ವಿ ಎಲ್
ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ
ಸುಳ್ಯ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ