ಉಮೇಶ್ ಕುಂದರ್‌– ಅಂತರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು

Upayuktha
0

ಕ್ರೀಡೆ, ಯಶಸ್ವೀ ವೃತ್ತಿ ಜೀವನದೊಂದಿಗೆ ಸಮಾಜಮುಖಿ




ಬೆಂಗಳೂರು: ಬಾಲ್ಯದಲ್ಲಿ ಒಂದು ಕಹಿ ಘಟನೆ. ಬಾರಕೂರು ಹೊಸ್ಕರೆ ತಂದೆಯ ಮನೆಯಲ್ಲಿ ಆಟ ಆಡುವ ಹೊತ್ತಿಗೆ ಎಡವಿ ತನ್ನ ಎಡ ಕೈ ಮೂಳೆ ಮುರಿತ. ಅದೂ ಸರಿ ಹೋಗಿ ಮತ್ತೆ ಮಂದಾರ್ತಿ ಶಾಲೆಯಲ್ಲಿ 4 ನೇ ತರಗತಿ ‌ಇರುವಾಗ ಉಮೇಶ್, ಆಟ ಆಡುತ್ತಾ ಅದೇ ಕೈಗೆ ಮತ್ತೆ ಪೆಟ್ಟಾಗಿ ತನ್ನ ಅದೇ ಕೈಯನ್ನು ಕಳೆದುಕೊಳ್ಳುತ್ತಾರೆ. ಬೆಳೆಯುತ್ತಿದ್ದಂತೇ ತನ್ನ ಅಂಗ ವೈಕಲ್ಯ ತನ್ನ ಬೆಳವಣಿಗೆಗೆ ಶಾಪ ಎಂಬುದು ತಿಳಿದರೂ, ಧೃತಿಗೆಡದೆ ಮನೆ ಮಂದಿ ಹಾಗೂ ಕುಟಂಬಸ್ಥರ ಹಾಗೂ ಸಮಾಜದ ಬೆಂಬಲದೊಂದಿಗೆ ತನಗರಿವಿಲ್ಲದೆಯೇ ಸಮಾಜದಲ್ಲಿ ಬೆಳೆದು ಉತ್ತಮ ನಾಗರಿಕರಾಗುವ ಕನಸು ಕಂಡು ಯಶಸ್ವಿಯಾದವರು ಉಮೇಶ್ ಕುಂದರ್.


ವಿಶೇಷ ಚೇತನರು ಸಮಾಜಕ್ಕೆ ಹೊರೆಯಲ್ಲ, ಅವರೂ ಸಮಾಜದ ಕಣ್ಣುಗಳು, ಕಿವಿಗಳು ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಕೆಲವರಂತೂ ರಾಜ್ಯ, ರಾಷ್ಟ್ರದ ಹೆಮ್ಮೆ ಎನಿಸುವವರೂ ಇದ್ದಾರೆ. ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಉಮೇಶ್ ಕುಂದರ್.


ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮಂದಾರ್ತಿಯ ಹೆಗ್ಗುಂಜಿ ಗ್ರಾಮದವರಾದ ಉಮೇಶ್ ಕುಂದರ್ ಬಿ.ಕಾಂ ಪದವೀಧರರು. ಇವರ ಪ್ರಾಥಮಿಕ ಮತ್ತು  ‌ಪ್ರೌಢ ವಿದ್ಯಾಭ್ಯಾಸ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ವಿದ್ಯಾ ಸಂಸ್ಥೆ ಯಲ್ಲಿ ನಡೆಯಿತು. ಹಾಗೂ ಪದವಿ ಪೂರ್ವ ಶಿಕ್ಷಣ ವನ್ನು ಬಾರಕೂರು ಜೂನಿಯರ್‌ ಕಾಲೇಜಿನಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ಪ್ರತಿಷ್ಟಿತ ಭಂಡಾರ್ಕಸ್ ಕಾಲೇಜು ಕುಂದಾಪುರದಲ್ಲಿ ಮುಗಿಸಿ ಉದ್ಯೋಗ ಅರಸಿ ಬೆಂಗಳೂರು ಬಂದವರು ಇಂದು ತನ್ನ ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.



1994–2009ರವರೆಗೆ ವಿಶೇಷ ಚೇತನರಿಗಾಗಿ ನಡೆದ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 25 ಚಿನ್ನ, 9 ಬೆಳ್ಳಿ, 4 ಕಂಚಿನ ಪದಕಗಳನ್ನು ಗಳಿಸಿದ್ದಾರೆ.


1999ರಲ್ಲಿ ಬ್ಯಾಂಕಾಕ್‌ನಲ್ಲಿ ವಿಶೇಷ ಚೇತನರಿಗಾಗಿ ನಡೆದ ಏಷ್ಯನ್ ಪೆಸಿಫಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದ ಇವರು, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಗೌರವಕ್ಕೆ ಪಾತ್ರರಾಗಿದ್ದರು. 2024ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ವಿಶ್ವ ವಿಕಲಚೇತನ ದಿನಾಚರಣೆಯಂದು ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಶಸ್ತಿ ಪ್ರದಾನ ಮಾಡಿದ್ದರು.


ಬೆಂಗಳೂರು ಮೊಗವೀರ ಸಂಘದ ಬಿಲ್ಡಿಂಗ್ ಕಮಿಟಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಉಮೇಶ್ ಕುಂದರ್ ಅವರು ಇನ್ನೂ ಹಲವು ಬಗೆಯಲ್ಲಿ ಸಮಾಜ ಸೇವೆ, ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡೆ ಎಂಬುದು ಅವರಿಗೆ ರಕ್ತಗತವಾಗಿರುವ ಹವ್ಯಾಸ, ಅಲ್ಲಿ ಅವರು ಮಾಡಿದ ಸಾಧನೆ ಒಂದು ಸುಂದರ ನೆನಪು.


ಬೆಂಗಳೂರಿನ ಮೊಗವೀರ ಸಂಘದಲ್ಲಿ ಎರಡು ದಶಕಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಉಮೇಶ್ ಕುಂದರ್‌, ಸಂಘದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈಚೆಗೆಷ್ಟೇ ಅವರ ಪುತ್ರಿ ಕು. ನಿಶಾಲಿ ಕುಂದರ್ ರಾಷ್ಟ್ರಮಟ್ಟದಲ್ಲಿ ‘ಪ್ರೈಡ್‌ ಆಫ್ ಇಂಡಿಯಾ’ ಪ್ರಶಸ್ತಿ ಪಡೆಯುವ ಮೂಲಕ ತಂದೆಯ ಕೀರ್ತಿಯ ಮುಕುಟಕ್ಕೆ ಗರಿ ತೊಡಿಸಿದ್ದಾರೆ.



ಉದ್ಯೋಗದಾತ

ಬೆಂಗಳೂರಿನಲ್ಲಿ ಶ್ರೀನಿಧಿ ಕಾರ್ಪೊರೇಷನ್ ಹಣಕಾಸು ಸಂಸ್ಥೆಯನ್ನು ಮುನ್ನಡೆಸುತ್ತಿರುವ ಇವರು  ಮೈಸೂರು ಜಿಲ್ಲೆ ಕೆ.ಆರ್‌.ನಗರದಲ್ಲಿ  ಪಾರ್ಟಿಹಾಲ್‌, ಲಾಡ್ಜ್‌, ಫೈನ್‌ ಡೈನಿಂಗ್ ಹೊಂದಿರುವ  ಉಡುಪಿ ಪ್ಯಾಲೇಸ್‌ ರೆಸ್ಟೋರೆಂಟ್ ಸ್ಥಾಪಿಸಿ ನೂರಾರು ಜನಕ್ಕೆ ಉದ್ಯೋಗದಾತರಾಗಿದ್ದಾರೆ ಉಮೇಶ್ ಕುಂದರ್‌. ವಿಶೇಷ ಚೇತನರತ್ತ ಕನಿಕರ ಇರಲಿ, ಅದಕ್ಕಿಂತಲೂ ಮಿಗಿಲಾಗಿ ಅವರಿಗೆ ಅವಕಾಶ ಕಲ್ಪಿಸಿಕೊಡಿ ಎಂಬುದು ಉಮೇಶ್ ಕುಂದರ್ ಅವರ ಚಿಂತನೆ.


ಭವಿಷ್ಯದ ಕನಸುಗಳು

‍ವಿಕಲಚೇತನರಿಗೆ ಪ್ರೇರಣೆ ನೀಡುವ ಸಂಸ್ಥೆಯೊಂದನ್ನು ಉಡುಪಿಯಲ್ಲಿ ಸ್ಥಾಪಿಸುವ ಕನಸನ್ನು ಉಮೇಶ್ ಕುಂದರ್ ಹೊಂದಿದ್ದಾರೆ. ಅಂತಹ ಸಂಸ್ಥೆ ಹೇಗಿರಬೇಕು, ಏನು ಮಾಡಿದರೆ ವಿಶೇಷ ಚೇತನರಿಗೆ ಅನುಕೂಲ ಆಗುತ್ತದೆ ಎಂಬುದರ ಕುರಿತಂತೆ ಆಳವಾದ ಚಿಂತನೆ, ಅಧ್ಯಯನ ನಡೆಸುತ್ತಿದ್ದು, ಹಲವು ಅನುಭವಿಗಳ ಸಲಹೆ ಪಡೆಯುವ ಹಂತದಲ್ಲಿದ್ದಾರೆ.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top