ವೈಜ್ಞಾನಿಕ ಸಂಶೋಧನೆಗಳು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರಲಿ: ಡಾ.ಸತೀಶ್ಚಂದ್ರ ಎಸ್

Upayuktha
0



ಉಜಿರೆ : ರಸಾಯನಶಾಸ್ತ್ರವೂ ಸೇರಿದಂತೆ ವಿವಿಧ ಜ್ಞಾನಶಿಸ್ತು ವಲಯಗಳು ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಕೇಂದ್ರ ಆಶಯವಾಗಿಸಿಕೊಂಡು ಸಂಶೋಧನಾತ್ಮಕ ಹೆಜ್ಜೆಗಳನ್ನಿರಿಸಬೇಕು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು 'ಇನೋವೇಷನ್ಸ್ ಇನ್ ಕೆಮಿಸ್ಟ್ರಿ: ಮೆಟೀರಿಯಲ್ಸ್ ಆ್ಯಂಡ್ ಮೆಡಿಸಿನ್ಸ್ ಫಾರ್ ಸಸ್ಟೇನೇಬಲ್ ಸೊಸೈಟಿ'  ಶೀರ್ಷಿಕೆಯಡಿ ಹಮ್ಮಿಕೊಂಡ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.


ಅಕ್ಯಾಡೆಮಿಕ್ ವಲಯದ ಸಂಶೋಧನೆಯು ಐದು ಪ್ರಧಾನ ಅಂಶಗಳನ್ನು ಒಳಗೊಳ್ಳಬೇಕು. ಜನತೆ, ಅಭ್ಯುದಯ, ಸಹಭಾಗಿತ್ವ, ಶಾಂತಿ ಮತ್ತು ಭೂಮಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಅನ್ವೇಷಣೆಗಳನ್ನು ನಡೆಯಬೇಕು. ವೈಜ್ಞಾನಿಕತೆ ಮತ್ತು ತಾಂತ್ರಿಕತೆಯ ಅಸ್ತಿತ್ವವನ್ನು ಸುಸ್ಥಿರತೆಯೊಂದಿಗೆ ಸಮೀಕರಿಸಬೇಕು. ಆ ಮೂಲಕ ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಬೇಕು. ಈ ಹಿನ್ನೆಲೆಯಲ್ಲಿ ರಸಾಯನಶಾಸ್ತ್ರ ವಲಯದ ಸಂಶೋಧನೆಗಳು ಮುನ್ನಡೆಯಬೇಕು ಎಂದರು.


ಮನುಷ್ಯರು ಭೂಮಿಯ ಮಾಲೀಕರಲ್ಲ. ಭೂಮಿಯ ಮೂಲಕ ಸಿಗುತ್ತಿರುವ ಪ್ರಯೋಜನಗಳ ಫಲಾನುಭವಿಗಳು. ಭೂಮಿಯನ್ನು ಸಂರಕ್ಷಿಸುವ ಜವಾಬ್ದಾರಿ ಮನುಕುಲದ ಮೇಲಿದೆ. ಇದನ್ನು ಅರ್ಥೈಸಿಕೊಂಡು ವಿವಿಧ ಕ್ಷೇತ್ರಗಳ ಸಂಶೋಧನಾತ್ಮಕ ಅಸ್ಮಿತೆ ಪ್ರಖರಗೊಳ್ಳಬೇಕು ಎಂದು ಹೇಳಿದರು.


ಸುಸ್ಥಿರ ಪರಿಕಲ್ಪನೆಯು ಜನರ ಅಭ್ಯುದಯವನ್ನು ಸಹಭಾಗಿತ್ವದ ಆಲೋಚನಾಕ್ರಮದ ಆಧಾರದಲ್ಲಿ ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಜನಸಮುದಾಯಗಳ ಒಳಗೊಳ್ಳುವಿಕೆಯ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ವಲಯದಲ್ಲಿ ಸಮುದಾಯಗಳ ನಡುವಿನ ಸೌಹಾರ್ದತೆ, ಪ್ರಾದೇಶಿಕವಾಗಿ ನೆಲೆಸುವ ಶಾಂತಿಯ ಆಯಾಮಗಳ ಮೂಲಕ ಅಭಿವೃದ್ಧಿಯ ಹೆಜ್ಜೆಗಳನ್ನು ಸುಸ್ಥಿರಗೊಳಿಸಬೇಕು. ಹಾಗಾದಾಗ ಮಾತ್ರ ಭೂಮಿಯನ್ನು ಸಂರಕ್ಷಿಸಿಕೊಳ್ಳುವುದು ಸಾಧ್ಯ ಎಂದರು.


ಜರ್ಮನಿಯ ಇನ್ಸ್ಟಿಟ್ಯೂಟ್ ಆಫ್ ಸಾಲಿಡ್ ಸ್ಟೇಟ್ ಫಿಸಿಕ್ಸ್ ಲಿಬ್ನೆಜ್‌ನ ಸಂಶೋಧಕ ಉಲ್ರಿಚ್ ಕೆ ರೊಝಲರ್ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪಾಶ್ಚಾತ್ಯ ದೇಶಗಳಲ್ಲಿ ಸಂಶೋಧನಾ ಸ್ವಾತಂತ್ರ್ಯ ಅಪಾಯದಲ್ಲಿದೆ. ಅಮೆರಿಕಾ ಸೇರಿದಂತೆ ಯುರೋಪಿಯನ್ ರಾಷ್ಟ್ರ ಗಳಲ್ಲಿ ಸಂಶೋಧನಾ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ. ವ್ಯಾಪಕ  ಸ್ವಾತಂತ್ರ್ಯದ ಅವಕಾಶಗಳನ್ನು ಉಳಿಸಿಕೊಂಡು ರಸಾಯನಶಾಸ್ತ್ರವೂ ಸೇರಿದಂತೆ ವಿವಿಧ ವೈಜ್ಞಾನಿಕ ಸಂಶೋಧನೆಗಳನ್ನು ಸಮಗ್ರಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ವಿಶ್ವನಾಥ ಪಿ ಮಾತನಾಡಿದರು. ದೈನಂದಿನ ಬದುಕಿನ ಆದ್ಯತೆಗಳು ಮತ್ತು ವೈಜ್ಞಾನಿಕ ತಾಂತ್ರಿಕ ಅನ್ವೇಷಣೆಗಳು ಪರಸ್ಪರ ಪೂರಕ ಅಂತರ್‌ಸಂಬಂಧ ಹೊಂದಿವೆ. ವೈದ್ಯಕೀಯ, ಸಂವಹನ ಸೇರಿದಂತೆ ದೈನಂದಿನ ಬದುಕಿನ ಎಲ್ಲಾ ವಲಯಗಳಿಗೂ ಬೇಕಾಗುವ ರೀತಿಯಲ್ಲಿ ರಸಾಯನಶಾಸ್ತ್ರದ ಸಂಶೋಧನೆಗಳು ಪೂರಕವಾಗಿವೆ. ಈ ಸಂಶೋಧನೆಯ ಸ್ವರೂಪವನ್ನು ಸುಸ್ಥಿರತೆಗೆ ಪಕ್ಕಾಗಿಸುವ ಪ್ರಧಾನ ಆಶಯದೊಂದಿಗೆ ಚರ್ಚೆಗಳು ನಡೆಯಬೇಕಾಗಿದೆ ಎಂದರು. 

 

ಮಂಗಳೂರು ವಿಶ್ವವಿದ್ಯಾಲಯದ ರಸಾಯನಶಾಸ್ತ್ರ  ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಶಿವರಾಮ ಹೊಳ್ಳ, ತಮಿಳುನಾಡಿನ ಕರೈಕುಡಿಯ ಸೆಂಟ್ರಲ್ ಎಲೆಕ್ಟ್ರೋಕಮಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ನ ನಿರ್ದೇಶಕ ಡಾ.ರಮೇಶ್ ಕೆ, ಗೋವಾದ ಸಿಂಜೆಂಟಾ ಬಯೋಸೈನ್ಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಭಾನು ಮಂಜುನಾಥ್ ನಾರಾಯಣ್ ಉಪಸ್ಥಿತರಿದ್ದರು. 


ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕಿ ಹಾಗೂ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಡಾ.ನಫೀಸತ್ ಪಿ ನಿರೂಪಿಸಿದರು. ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ, ಸಹ ಪ್ರಾಧ್ಯಾಪಕಿ ಡಾ. ಶಶಿಪ್ರಭಾ ವಂದಿಸಿದರು. 


 

ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top